ADVERTISEMENT

‘ಕೋಕಾ’ ಅಧ್ಯಯನಕ್ಕೆ ನೆರವಾದ ‘ಮೋಕಾ’

ಉದ್ಯಮಿ ಆರ್.ಎನ್.ನಾಯಕ ಹಂತಕರಿಗೆ ಶಿಕ್ಷೆಯಾಗಲು ಶ್ರಮಿಸಿದವರಿಗೆ ಐ.ಜಿ.ಪಿ ಪ್ರಶಂಸೆ

ಸದಾಶಿವ ಎಂ.ಎಸ್‌.
Published 5 ಏಪ್ರಿಲ್ 2022, 21:45 IST
Last Updated 5 ಏಪ್ರಿಲ್ 2022, 21:45 IST
2013ರ ಡಿಸೆಂಬರ್‌ನಲ್ಲಿ ಉದ್ಯಮಿ ಆರ್.ಎನ್.ನಾಯಕ ಕೊಲೆ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಡಾ.ಗಜಾನನ ನಾಯಕ   (ಸಂಗ್ರಹ ಚಿತ್ರ)
2013ರ ಡಿಸೆಂಬರ್‌ನಲ್ಲಿ ಉದ್ಯಮಿ ಆರ್.ಎನ್.ನಾಯಕ ಕೊಲೆ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಡಾ.ಗಜಾನನ ನಾಯಕ   (ಸಂಗ್ರಹ ಚಿತ್ರ)   

ಕಾರವಾರ: ‘ರಾಜ್ಯದ ಮೊದಲ ‘ಕೋಕಾ’ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಪ‍್ರಕರಣದಲ್ಲಿ ಪಾತಕಿ ಬನ್ನಂಜೆ ರಾಜ ಮತ್ತು ಎಂಟು ಮಂದಿಗೆ ಜೀವಾವಧಿ ಶಿಕ್ಷೆ ಜಾರಿಯಾಗಲು ಕಾಯ್ದೆಗಳ ಕೂಲಂಕಷ ಅಧ್ಯಯನ ನೆರವಾಯಿತು...’

ಹೀಗೆಂದು ‘ಪ್ರಜಾವಾಣಿ’ ಜೊತೆ ಮಾತಿಗಿಳಿದವರು ವಿಶೇಷ ಅಭಿಯೋಜಕ ಕೆ.ಶಿವಪ್ರಸಾದ್ ಆಳ್ವ. ಅಂಕೋಲಾದ ಉದ್ಯಮಿ ಆರ್.ಎನ್.ನಾಯಕ ಅವರ ಕೊಲೆ ಪ್ರಕರಣದಲ್ಲಿ ಅಪರಾಧಿಗಳ ಕೃತ್ಯ ಸಾಬೀತಾಗಲು, ನ್ಯಾಯಾಲಯದಲ್ಲಿ ಶಿವಪ್ರಸಾದ್ ಹಾಗೂ ಕೆ.ಜಿ.ಪುರಾಣಿಕಮಠ ಅವರ ಸಮರ್ಥ ವಾದ ಮಂಡನೆಯೂ ಪ್ರಮುಖ ಪಾತ್ರ ವಹಿಸಿದೆ.

‘ಕೋಕಾ’ ಅಡಿ ರಾಜ್ಯದಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಹಾಗಾಗಿ ಈ ಕಾಯ್ದೆಯಡಿ ತನಿಖೆ ನಡೆಸಲು ಮತ್ಯಾವುದೇ ಪ್ರಕರಣಗಳ ಹಿನ್ನೆಲೆಯ ಅನುಭವ ಪೊಲೀಸರಿಗೆ ಹಾಗೂ ಅಭಿಯೋಜಕರಿಗೆ ಇರಲಿಲ್ಲ. ಆಗ ‘ಮೋಕಾ’ (ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ನೆರವಿಗೆ ಬಂತು ಎಂದು ಶಿವಪ್ರಸಾದ್ ಆಳ್ವ ನೆನಪಿಸಿಕೊಳ್ಳುತ್ತಾರೆ.

ADVERTISEMENT

‘ಕೋಕಾ ಮತ್ತು ಮೋಕಾ ಕಾಯ್ದೆಗಳಲ್ಲಿ ಬಹುತೇಕ ಅಂಶಗಳು ಹೋಲಿಕೆಯಾಗುತ್ತವೆ. ನಮ್ಮಲ್ಲಿ 2000ನೇ ಇಸವಿಯಲ್ಲೇ ಕೋಕಾ ಜಾರಿಯಾಗಿದ್ದರೂ ಈ ಕಾಯ್ದೆಯಡಿ ಮೊದಲ ಪ್ರಕರಣವು 2013ರಲ್ಲಿ ದಾಖಲಾಯಿತು. ಮಹಾರಾಷ್ಟ್ರದಲ್ಲಿ ಮೋಕಾ ಕಾಯ್ದೆಯು 1999ರಲ್ಲಿ ಜಾರಿಯಾಗಿತ್ತು. ಅದಾದ ಬಳಿಕ ಆ ರಾಜ್ಯದಲ್ಲಿ ಹಲವು ಪ್ರಕರಣಗಳು ಕಾಯ್ದೆಯಡಿ ದಾಖಲಾಗಿ ನ್ಯಾಯಾಲಯಗಳಲ್ಲಿ ವಿಚಾರಣೆಗಳು ನಡೆಯುತ್ತಿದ್ದವು’ ಎಂದು ವಿವರಿಸಿದರು.

‘ನಮ್ಮ ತಂಡವು ಅಲ್ಲಿನ ಹಲವು ಪ್ರಕರಣಗಳನ್ನು ಅಧ್ಯಯನ ಮಾಡಿತು. ಅದರ ಆಧಾರದಲ್ಲಿ, ಆರ್.ಎನ್.ನಾಯಕ ಅವರ ಹಂತಕರಿಗೂ ಶಿಕ್ಷೆಯಾಗುವಂಥ ವಾದ ಮಂಡನೆಗೆ ಸಿದ್ಧತೆಗಳನ್ನು ಮಾಡಿಕೊಂಡೆವು. ಇದಕ್ಕಾಗಿ ನಾಸಿಕ್‌ನಲ್ಲಿ ನಮ್ಮ ತಂಡವು ಸುಮಾರು ಒಂದು ವಾರ ವಾಸ್ತವ್ಯ ಹೂಡಿತ್ತು. ಮಹಾರಾಷ್ಟ್ರದ ವಿವಿಧ ಪ್ರಕರಣಗಳನ್ನು ಗಮನವಿಟ್ಟು ಅಧ್ಯಯನ ಮಾಡಿ ನಾವು ಮಾಹಿತಿಗಳನ್ನು ಕಲೆ ಹಾಕಿದೆವು. ಅದರಂತೆಯೇ ಕೋಕಾ ಕಾಯ್ದೆಯಡಿ ನ್ಯಾಯಾಲಯದಲ್ಲಿ ವಾದಿಸಿ ಯಶಸ್ವಿಯಾದೆವು’ ಎಂದು ವಾದ ಮಂಡನೆಯ ಅನುಭವ ಹಂಚಿಕೊಂಡರು.

ಮರಣೋತ್ತರ ಪರೀಕ್ಷೆಯ ನೆನಪು:

2013 ಡಿ.21ರಂದು ನಡೆದ ಆರ್.ಎನ್.ನಾಯಕ ಹತ್ಯೆ ಪ್ರಕರಣದಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ನಿರ್ದೇಶಕ ಡಾ.ಗಜಾನನ ನಾಯಕ ನಡೆಸಿದ್ದರು. ಆಗ ಅವರು ಹುಬ್ಬಳ್ಳಿಯ ಕೆ.ಎಂ.ಸಿ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿದ್ದರು.

‘ಅಂದಿನ ಎಸ್.ಪಿ ಆರ್.ದಿಲೀಪ ಅವರ ಸೂಚನೆಯಂತೆ ನಾನು, ಕೃತ್ಯ ನಡೆದ ಮರುದಿನವೇ ಅಂಕೋಲಾಕ್ಕೆ ಬಂದಿದ್ದೆ. ಕೊಲೆಯಾಗಿದ್ದ ಆರ್.ಎನ್.ನಾಯಕ ಮತ್ತು ಎನ್‌ಕೌಂಟರ್ ಆಗಿದ್ದ ಅಪರಾಧಿ ವಿವೇಕ ಕುಮಾರ ಉಪಾಧ್ಯಾಯ ಅವರ ಮರಣೋತ್ತರ ಪರೀಕ್ಷೆ ಮಾಡಿದ್ದೆ. ಅಲ್ಲದೇ ಬೆಳಗಾವಿಯ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭ ಎರಡು ಬಾರಿ ಸಾಕ್ಷಿ ನುಡಿದಿದ್ದೆ’ ಎಂದರು.

ಆರ್.ಎನ್.ನಾಯಕ ಕೊಲೆ ವಿಚಾರಣೆಯು ‘ಕೋಕಾ’ ಕಾಯ್ದೆಯಡಿ ರಾಜ್ಯದಲ್ಲಿ ದಾಖಲಾಗಿರುವ ಬೇರೆ ಪ್ರಕರಣಗಳ ತನಿಖೆ ಪ್ರಕ್ರಿಯೆಗೂ ಮಾರ್ಗದರ್ಶನ ನೀಡುತ್ತದೆ.

– ಪ್ರತಾಪ್ ರೆಡ್ಡಿ, ಎ.ಡಿ.ಜಿ.ಪಿ ಕಾನೂನು ಮತ್ತು ಸುವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.