ADVERTISEMENT

ಶಿರಸಿ: ಆರ್‌ಟಿಒ ಕಚೇರಿ ಬಳಕೆಗೆ ‘ಪೀಠೋಪಕರಣ’ ಕೊರತೆ

ಉದ್ಘಾಟನೆಯಾಗಿ 8 ತಿಂಗಳಾದರೂ ಬಳಸದ ಕಚೇರಿ

ರಾಜೇಂದ್ರ ಹೆಗಡೆ
Published 17 ಡಿಸೆಂಬರ್ 2025, 4:51 IST
Last Updated 17 ಡಿಸೆಂಬರ್ 2025, 4:51 IST
ಶಿರಸಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆರ್ಟಿಒ ಕಚೇರಿ 
ಶಿರಸಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆರ್ಟಿಒ ಕಚೇರಿ    

ಶಿರಸಿ: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಇಲ್ಲಿನ ಬಸವೇಶ್ವರನಗರದಲ್ಲಿ ನಿರ್ಮಿಸಲಾದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಕಟ್ಟಡ ಉದ್ಘಾಟನೆಗೊಂಡು 8 ತಿಂಗಳು ಕಳೆದರೂ ಪೀಠೋಪಕರಣ ಪೂರೈಕೆಯಾಗದ ಕಾರಣ ಬಾಡಿಗೆ ಕಟ್ಟಡದಲ್ಲಿಯೇ ಮುಂದುವರೆಯುತ್ತಿದೆ. ಬಳಕೆಯಿಲ್ಲದ ಕಾರಣ ಆವಾರದಲ್ಲಿ ಗಿಡಗಂಟಿಗಳು ಬೆಳೆದು ಹೊಸ ಕಟ್ಟಡ ಸೌಂದರ್ಯ ಕಳೆದುಕೊಳ್ಳುತ್ತಿದೆ.

ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ಸ್ವಂತ ಕಟ್ಟಡಬೇಕೆಂಬುದು ಶಿರಸಿ ಜನತೆಯ ಹಲವು ವರ್ಷದ ಬೇಡಿಕೆಯಾಗಿತ್ತು. 4 ವರ್ಷದ ಹಿಂದೆ ರಾಜ್ಯ ಸರ್ಕಾರ ಕಟ್ಟಡಕ್ಕೆ ಜಾಗ ಮಂಜೂರಿಗೊಳಿಸಿ ₹6 ಕೋಟಿ ಅನುದಾನ ನೀಡಿದ ಬಳಿಕ ಸ್ವಂತ ಕಟ್ಟಡ ನಿರ್ಮಾಣಗೊಂಡಿದೆ. ಹೈಟೆಕ್ ಮಾದರಿಯಲ್ಲಿ ನಿರ್ಮಿಸಲಾದ ಕಚೇರಿ ಕಟ್ಟಡದ ಉದ್ಘಾಟನೆ ಭಾಗ್ಯ ದೊರೆತರೂ, ಬಳಕೆಯಾಗುತ್ತಿಲ್ಲ. ಕಾಂಪೌಂಡ್‌ ಬಾಗಿಲು ಹಾಕಿ ಹಾಗೆಯೇ ಇಟ್ಟಿರುವುದರಿಂದ ಹೊಸ ಕಟ್ಟಡ ಆವಾರದಲ್ಲಿ ಗಿಡಗಂಟಿಗಳು ಬೆಳೆಯಲು ಪ್ರಾರಂಭಗೊಂಡಿದೆ.

‘ನಗರದ ಕೇಂದ್ರೀಯ ಬಸ್‌ ನಿಲ್ದಾಣ ಹಾಗೂ ಶಿರಸಿ ಪ್ರಾದೇಶಿಕ ಸಾರಿಗೆ ಇಲಾಖೆಯ ಕಟ್ಟಡಕ್ಕೆ ಪೀಠೋಪಕರಣ ಪೂರೈಕೆ ಮಾಡುವುದು ಕೆಎಸ್‌ಆರ್‌ಟಿಸಿ ಎಂಬುದಾಗಿ ನಡಾವಳಿಯಲ್ಲಿ ನಿರ್ಣಯ ಮಾಡಲಾಗಿತ್ತು. ಆದರೆ ಅವರ ಮೇಲೆ ಒತ್ತಡ ಹೇರಿದರೂ ಆರ್‌ಟಿಒ ಕಚೇರಿಗೆ ಪೀಠೋಪಕರಣ ಪೂರೈಕೆ ಮಾಡಲು ಮೀನಮೇಷ ಏಣಿಸುತ್ತಿದ್ದಾರೆ. ಎಷ್ಟೆ ಒತ್ತಡ ತಂದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ನಮಗೂ ಮೇಲಧಿಕಾರಿಗಳ ಒತ್ತಡವಿದೆ. ಅಲ್ಲದೇ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ’ ಎಂದು ಆರ್‌ಟಿಒ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

‘ಶಿರಸಿ ಪ್ರಾದೇಶಿಕ ಸಾರಿಗೆ ಇಲಾಖೆಯು ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ವ್ಯಾಪ್ತಿಯನ್ನು ಹೊಂದಿದ್ದು, ಇಲಾಖೆಯ ವ್ಯಾಪ್ತಿ ವಿಶಾಲವಾಗಿರುವುದರಿಂದ ಚಾಲನಾ ಪರವಾನಗಿ, ವಾಹನ ನೋಂದಣಿ, ವಾಹನಗಳ ದಾಖಲೆಪತ್ರ ವರ್ಗಾವಣೆ, ವಾಹನಗಳ ಮರು ನೋಂದಣಿ ಇನ್ನಿತರ ಕಾರ್ಯಗಳಿಗಾಗಿ ಪ್ರತಿನಿತ್ಯ ನೂರಾರು ವಾಹನ ಚಾಲಕರು ಹಾಗೂ ಮಾಲಕರು ಕಚೇರಿಗೆ ಆಗಮಿಸುತ್ತಾರೆ. ಆದರೆ ಇಂದಿಗೂ ಹಳೆಯ ಕಟ್ಟಡದಲ್ಲಿಯೇ ಮುಂದುವರೆಯುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಮೇಲಧಿಕಾರಿಗಳು ಗಮನವಹಿಸಿ, ಸಮಸ್ಯೆಗೆ ಪರಿಹಾರ ಒದಗಿಸಿ, ಆದಷ್ಟು ಶೀಘ್ರವಾಗಿ ಆರಂಭಗೊಳ್ಳಲು ಕ್ರಮವಹಿಸಬೇಕು’ ಎಂದು ಸ್ಥಳಿಕರಾದ ಅಕ್ಷಯ ಶೇಟ್‌ ಆಗ್ರಹಿಸಿದರು.

ಎಂಟು ತಿಂಗಳ ಹಿಂದೆ ಉದ್ಘಾಟನೆ:  ‘ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಿದ್ದ ವೇಳೆ ಬಸವೇಶ್ವರ ನಗರದಲ್ಲಿ ಆರ್‌ಟಿಓ ಕಚೇರಿಗೆ ಸ್ವಂತ ಜಾಗ ಗುರುತಿಸಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿ ಕಾಮಗಾರಿ ನಡೆದರೂ 2025ರ ಮಾರ್ಚ್‌ 29ರಂದು ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟನೆಗೊಳಿಸಿ ಸಾರ್ವಜನಿಕ ಸೇವೆಗೆ ಹಸ್ತಾಂತರಿಸಿದ್ದರು. ಆದರೆ ಪೀಠೋಪಕರಣಗಳ ಅಳವಡಿಸದ ಕಾರಣ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಹೊಸ ಕಟ್ಟಡದಲ್ಲಿ ಕಚೇರಿ ಆರಂಭಕ್ಕೆ ಮೇಲಧಿಕಾರಿಗಳು ಕ್ರಮ ವಹಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

ಪೀಠೋಪಕರಣ ಅನುದಾನ ಒದಗಿಸದ ಕಾರಣ ಹಳೆಯ ಪೀಠೋಕರಣಗಳನ್ನೇ ಹೊಸ ಕಟ್ಟಡಕ್ಕೆ ಬಳಸಿಕೊಂಡು ಶೀಘ್ರವೇ  ಕಾರ್ಯಾರಂಭ ಮಾಡಲು ಚಿಂತನೆ ನಡೆಸಲಾಗಿದೆ.  
-ಮಲ್ಲಿಕಾರ್ಜುನ ಕೆ, ಪ್ರಾದೆಶಿಕ ಸಾರಿಗೆ ಅಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.