ADVERTISEMENT

ಉಸಿರಾಟ ನಿಲ್ಲಿಸಿದ ‘ವೃಕ್ಷ ಮಾತೆ’

ಪರಿಸರ ಜ್ಞಾನವೂ ಅಪಾರ:ಮಕ್ಕಳಂತೆ ಸಸಿಗಳನ್ನು ಪೋಷಿಸಿದ್ದ ತುಳಸಿ ಗೌಡ

ಗಣಪತಿ ಹೆಗಡೆ
Published 17 ಡಿಸೆಂಬರ್ 2024, 4:31 IST
Last Updated 17 ಡಿಸೆಂಬರ್ 2024, 4:31 IST
2021ರಲ್ಲಿ ಆಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ‘ಪದ್ಮಶ್ರೀ ಪ್ರಶಸ್ತಿ’ ಸ್ವೀಕರಿಸಿದ್ದ ತುಳಸಿ ಗೌಡ
2021ರಲ್ಲಿ ಆಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ‘ಪದ್ಮಶ್ರೀ ಪ್ರಶಸ್ತಿ’ ಸ್ವೀಕರಿಸಿದ್ದ ತುಳಸಿ ಗೌಡ   

ಕಾರವಾರ: ‘ಗಿಡಾ ಬೆಳೆಸಿರೆ ಚೊಲೊ ಗಾಳಿ ನೆಳ್ಳು (ನೆರಳು) ಕೊಡೂದು, ಪ್ರಾಣಿ ಪಕ್ಷಿಗೂ ಅನುಕೂಲ ಆಗ್ತಿದು’ ಹೀಗೆನ್ನುತ್ತ ಪರಿಸರ ಪಾಠ ಬೋಧಿಸುತ್ತ, ಬೋಧಿಸುವುದಕ್ಕಿಂತ ಹೆಚ್ಚಾಗಿ ತಾನೇ ಪಾಲನೆ ಮಾಡುತ್ತ ಗಂಗಾವಳಿ ನದಿ ತಟದ ಹಸಿರು ಭೂಮಿಯನ್ನು ಮತ್ತಷ್ಟು ಹಿಗ್ಗುವಂತೆ ಮಾಡಿದ ಅಂಕೋಲಾ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಇನ್ನು ನೆನಪು ಮಾತ್ರ.

ಬದುಕಿನುದ್ದಕ್ಕೂ ಲಕ್ಷಾಂತರ ಸಸಿಗಳನ್ನು ನೆಟ್ಟು ಪೋಷಿಸಿದ ಅವರು ಉಸಿರು ಚೆಲ್ಲಿರಬಹುದು. ಆದರೆ, ತಾನು ಬೆಳೆಸಿದ ಗಿಡಮರಗಳು ಊರಿನ ಜನರಿಗೆ ಉಸಿರು ನೀಡುತ್ತಿವೆ ಎಂಬ ಸಮಾಧಾನದೊಂದಿಗೆ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡ ತುಳಸಿ ಅವರಿಗೆ ಇಬ್ಬರು ಮಕ್ಕಳನ್ನು ಪೋಷಿಸಲು ದುಡಿಮೆ ಅನಿವಾರ್ಯ ಆಗಿತ್ತು. ಆಗ ಗ್ರಾಮದಲ್ಲಿಯೇ ಇದ್ದ ಅರಣ್ಯ ಇಲಾಖೆಯ ನರ್ಸರಿ ಅವರ ದುಡಿಮೆಗೆ ನೆಲೆ ಒದಗಿಸಿತು.

ADVERTISEMENT

‘ಸಸಿಗಳನ್ನು ಆರೈಕೆ ಮಾಡುವುದರಲ್ಲಿ ಅವರು ತಾಯ್ತನ ತೋರುತ್ತಿದ್ದರು. ಸಸಿ ನೆಟ್ಟರೆ ಸಾಲದು, ಅದನ್ನು ಅಷ್ಟೇ ಸೂಕ್ಷ್ಮವಾಗಿ ಆರೈಕೆ ಮಾಡಬೇಕು ಎಂಬ ತುಳಸಜ್ಜಿ ಪಾಠ ಅಚ್ಚಳಿಯದೆ ನೆನಪಿರುತ್ತದೆ’ ಎಂದು ಮಾಸ್ತಿಕಟ್ಟಾ ಅರಣ್ಯ ವಲಯದಲ್ಲಿ ಕೆಲಸ ಮಾಡಿ, ನಿವೃತ್ತರಾದ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

‘17 ವರ್ಷಗಳ ಕಾಲ ಅರಣ್ಯ ಇಲಾಖೆಯಲ್ಲಿ ದಿನಗೂಲಿ ಆಧಾರದಲ್ಲಿ ಅವರು ದುಡಿದಿದ್ದರು. ಅವರ ಕಾರ್ಯವೈಖರಿ ಕಂಡು ಯಲ್ಲಪ್ಪ ರೆಡ್ಡಿ ಎಂಬ ಅಧಿಕಾರಿ ಅವರನ್ನು ಇಲಾಖೆಯಲ್ಲಿ ಕಾಯಂಗೊಳಿಸಿದರು. ನಿವೃತ್ತಿ ಬಳಿಕವೂ ಸಸಿಗಳನ್ನು ಪೋಷಿಸುವ ಕೆಲಸ ನಿಲ್ಲಿಸಲಿಲ್ಲ. ಕಾಡಿನ ಸಸಿಗಳ ಬಗ್ಗೆ ಅವರಿಗೆ ಅಪಾರ ಜ್ಞಾನ ಇತ್ತು. ಹೊನ್ನಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ರಸ್ತೆಯ ಅಂಚು, ಬೆಟ್ಟಗಳಲ್ಲಿ ಹಸಿರು ಚೆಲ್ಲುತ್ತ ನಿಂತ ಬಹುತೇಕ ಸಸಿಗಳು ತುಳಸಿ ಗೌಡರಿಂದ ಪೋಷಿಸಲ್ಪಟ್ಟವು’ ಎಂದು ಅವರು ಹೇಳುತ್ತಾರೆ.

‘ಹೊನ್ನಳ್ಳಿಯಲ್ಲಿ ಕುಡಿಯುವ ನೀರಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲು ಕಳೆದ ವರ್ಷ ಸರ್ವೆ ಕಾರ್ಯ ನಡೆಯಿತು. ಯೋಜನೆಗೆ ಹಲವು ಗಿಡಮರಗಳನ್ನು ಕಟಾವು ಮಾಡಲಾಯಿತು. ಇದರ ವಿರುದ್ಧ ಹೋರಾಟಕ್ಕೆ ತುಳಸಿ ಮುಂಚೂಣಿಯಲ್ಲಿದ್ದರು. ಪರಿಸರ ಹಾಳುಮಾಡಲು ಬಿಡೆವು ಎಂದು ಸರ್ವೆಗೆ ಬಂದಿದ್ದ ಅಧಿಕಾರಿಗಳನ್ನು ಹಿಮ್ಮೆಟ್ಟಿಸಲು ನೆರವಾದರು’ ಎಂದು ಭಾರತೀಯ ಕಿಸಾನ್ ಸಂಘದ ಶಿವರಾಮ ಗಾಂವಕರ್ ಹೇಳಿದರು.

ತಾನು ನೆಟ್ಟ ಸಸಿಗೆ ಪ್ರೀತಿಯಿಂದ ನೀರೆರೆಯುತ್ತಿರುವ ಅಂಕೋಲಾ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ

‘ಪದ್ಮಶ್ರೀ’ ಒಲಿದು ಬಂತು

‘ಫಲಾಪೇಕ್ಷೆ ಇಲ್ಲದೆ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದ ಅಜ್ಜಿ (ತುಳಸಿ ಗೌಡ) ಪ್ರಚಾರದ ಗೊಡವೆಗೆ ಎಂದೂ ಹೋಗಲಿಲ್ಲ. 2020ರ ಜ.24 ರಂದು ಸಂಜೆ ‘ಪದ್ಮಶ್ರೀ ಪ್ರಶಸ್ತಿ’ ಘೋಷಣೆಯಾದಾಗ ಅಭಿನಂದಿಸಲು ನೂರಾರು ಜನ ಮನೆಗೆ ಬಂದಿದ್ದರು. ಬಂದವರಿಗೆಲ್ಲ ಗಿಡ ನೆಡಿ ಎಂದೇ ಅಜ್ಜಿ ಹೇಳಿಕಳುಹಿಸುತ್ತಿದ್ದರು. ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಿದ್ದಾಗಲೂ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಭಾಷೆ ಬರದಿದ್ದರೂ ಕೈಸನ್ನೆಯ ಮೂಲಕ ತಾನು ಗಿಡ ನೆಟ್ಟಿದ್ದಾಗಿ ಹೇಳಿದ್ದರು’ ಎಂದು ಅಜ್ಜಿಯನ್ನು ನೆನಪಿಸಿಕೊಂಡು ಮೊಮ್ಮಗ ಶೇಖರ ಗೌಡ ಭಾವುಕರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.