ADVERTISEMENT

ಉತ್ತರ ಕನ್ನಡ | ಹುಲಿ ಸಮೀಕ್ಷೆ: ಮೊದಲ ಹಂತ ಪೂರ್ಣ

ಮಾಂಸಾಹಾರಿ ಪ್ರಾಣಿಗಳ ಮಾಹಿತಿಗೆ ಕಾಡಿನಲ್ಲಿ ಅಲೆದಾಡಿದ ಅರಣ್ಯ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 7:27 IST
Last Updated 8 ಜನವರಿ 2026, 7:27 IST
ಯಲ್ಲಾಪುರ ಅರಣ್ಯ ವಿಭಾಗದ ಕಾಡಿನಲ್ಲಿ ಅರಣ್ಯ ಸಿಬ್ಬಂದಿ ಹುಲಿ, ಇತರ ಮಾಂಸಾಹಾರಿ ಪ್ರಾಣಿಗಳ ಜಾಡಿನ ಸಮೀಕ್ಷೆ ನಡೆಸಿದರು.
ಯಲ್ಲಾಪುರ ಅರಣ್ಯ ವಿಭಾಗದ ಕಾಡಿನಲ್ಲಿ ಅರಣ್ಯ ಸಿಬ್ಬಂದಿ ಹುಲಿ, ಇತರ ಮಾಂಸಾಹಾರಿ ಪ್ರಾಣಿಗಳ ಜಾಡಿನ ಸಮೀಕ್ಷೆ ನಡೆಸಿದರು.   

ಕಾರವಾರ: ಕಾಳಿ ಹುಲಿ ಸಂರಕ್ಷಿತಾರಣ್ಯ ಸೇರಿದಂತೆ ಕೆನರಾ ಅರಣ್ಯ ವೃತ್ತ ವ್ಯಾಪ್ತಿಯ ಎಲ್ಲ ಐದು ಅರಣ್ಯ ವಿಭಾಗಗಳಲ್ಲಿ ಹುಲಿ ಸಮೀಕ್ಷೆ ಕಾರ್ಯದ ಮೊದಲ ಹಂತ ಬುಧವಾರ ಮುಕ್ತಾಯಗೊಂಡಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ನೇತೃತ್ವದಲ್ಲಿ ನಡೆಸುತ್ತಿರುವ 6ನೇ ಹುಲಿ ಸಮೀಕ್ಷೆ ನಡೆದಿದೆ. ಈ ಬಾರಿ ಸರ್ಕಾರೇತರ ಸಂಸ್ಥೆಗಳ ಸ್ವಯಂ ಸೇವಕರ ನೆರವಿಲ್ಲದೆ ಅರಣ್ಯ ಇಲಾಖೆ ತನ್ನ ಸಿಬ್ಬಂದಿ ಜೊತೆ ಸಮೀಕ್ಷೆ ಕೈಗೊಂಡಿದೆ. ಮೂರು ಹಂತಗಳಲ್ಲಿ ನಡೆಸಲಾಗುವ ಸಮೀಕ್ಷೆಯ ಮೊದಲ ಹಂತ ಮುಕ್ತಾಯಕಂಡಿದೆ.

‘ಹುಲಿಗಳು ಹೆಚ್ಚಿರುವ ಕಾಳಿ ಹುಲಿ ಸಂರಕ್ಷಿತಾರಣ್ಯ ಸೇರಿದಂತೆ ಅದಕ್ಕೆ ಹೊಂದಿಕೊಂಡಿರುವ ಇತರ ಅರಣ್ಯ ಪ್ರದೇಶಗಳಲ್ಲಿಯೂ ಹುಲಿಯ ಓಡಾಟ, ಕುರುಹುಗಳ ಸಮೀಕ್ಷೆಯನ್ನು ಮೊದಲ ಹಂತದ ಪ್ರಕ್ರಿಯೆಯಲ್ಲಿ ನಡೆಸಲಾಗಿದೆ. ಕೇವಲ ಹುಲಿ ಮಾತ್ರವಲ್ಲದೆ ಚಿರತೆ, ಕಿರುಬ ಸೇರಿ ಮಾಂಸಾಹಾರ ಪ್ರಾಣಿಗಳ ಜಾಡಿನ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಹುಲಿ ಸಮೀಕ್ಷೆಯ ಮಾಹಿತಿ ಸಂಗ್ರಹಕ್ಕೆ ಎನ್‌ಟಿಸಿಎ ಮಾರ್ಗಸೂಚಿಯಂತೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಭಾರತೀಯ ವನ್ಯಜೀವಿ ಸಂಸ್ಥೆ ಅಭಿವೃದ್ಧಿಪಡಿಸಿದ ‘ಎಂ.ಸ್ಟ್ರೈಪ್ಸ್’ ಆ್ಯಂಡ್ರಾಯ್ಡ್ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಅಪ್ಲೋಡ್ ಮಾಡಲಾಗಿದೆ’ ಎಂದು ಕಾಳಿ ಹುಲಿ ಸಂರಕ್ಷಿತಾರಣ್ಯದ ಡಿಸಿಎಫ್ ನೀಲೇಶ್ ಶಿಂಧೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಹಂತದ ಸಮೀಕ್ಷೆ ವೇಳೆ ಮಾಂಸಾಹಾರಿ ಪ್ರಾಣಿಗಳ ಮಾಹಿತಿ ಕಲೆಹಾಕಿದ್ದೇವೆ. ಅವುಗಳ ಜೊತೆಗೆ ಹುಲಿಗಳ ಹೆಜ್ಜೆ ಗುರುತು, ಮರಗಳ ಮೇಲೆ ಮೂಡಿದ ಉಗುರುಗಳ ಗುರುತು ಸೇರಿದಂತೆ ಅದರ ಸಂಚಾರದ ಮಾಹಿತಿ ಸಂಗ್ರಹಿಸಿ, ಆ್ಯಪ್‌ನಲ್ಲಿ ದಾಖಲಿಸಲಾಗಿದೆ. ಇದಕ್ಕಾಗಿ ನಿತ್ಯವೂ ಸಿಬ್ಬಂದಿ ನಸುಕಿನ ಜಾವದಿಂದಲೇ ಕನಿಷ್ಠ 5 ಕಿ.ಮೀ ಸಂಚರಿಸಿ ಮಾಹಿತಿ ಕಲೆಹಾಕುತ್ತಿದ್ದರು’ ಎಂದು ವಿವರಿಸಿದರು.

‘ಜ.9ರಿಂದ ನಾಲ್ಕು ದಿನಗಳ ಕಾಲ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ, ಅವುಗಳ ಚಲನವಲನದ ಮಾಹಿತಿ ಕಲೆಹಾಕುವ ಎರಡನೇ ಹಂತದ ಸಮೀಕ್ಷೆನಡೆಯಲಿದೆ. ಈ ಸಮೀಕ್ಷೆ ವೇಳೆ ಅರಣ್ಯ ಸಿಬ್ಬಂದಿ ಕಾಡಿನಲ್ಲಿ ಕನಿಷ್ಠ 2 ಕಿ.ಮೀ ನೇರ ಮಾರ್ಗ ಗುರುತಿಸಿಕೊಂಡು ಅದರ ವ್ಯಾಪ್ತಿಯಲ್ಲಿ ಆಯಾ ದಿನದಲ್ಲಿ ಪ್ರಾಣಿಗಳ ಓಡಾಟದ ಮಾಹಿತಿ ಕಲೆಹಾಕಲಿದ್ದಾರೆ’ ಎಂದು ಯಲ್ಲಾಪುರ ಡಿಸಿಎಫ್ ಹರ್ಷ ಭಾನು ತಿಳಿಸಿದರು.

Quote - ಎನ್‌ಟಿಸಿಎ ನೀಡಿದ ನಿರ್ದೇಶನ ಆಧರಿಸಿ ಹುಲಿ ಸಮೀಕ್ಷೆ ನಡೆಸಲಾಗುತ್ತದೆ. ಮೇ ತಿಂಗಳಿನವರೆಗೂ ಸಮೀಕ್ಷೆ ಪ್ರಕ್ರಿಯೆ ನಡೆಯಲಿದೆ ನೀಲೇಶ್ ಶಿಂಧೆ ಕಾಳಿ ಹುಲಿ ಸಂರಕ್ಷಿತಾರಣ್ಯದ ಡಿಸಿಎಫ್

Cut-off box - 3ನೇ ಹಂತದಲ್ಲಿ ಕ್ಯಾಮೆರಾ ಟ್ರ್ಯಾಪ್ ‘ಜಿಲ್ಲೆಯಾದ್ಯಂತ ಅರಣ್ಯ ಪ್ರದೇಶದಲ್ಲಿ ಹುಲಿ ಸಮೀಕ್ಷೆ ಮತ್ತು ಅದಕ್ಕೆ ಪೂರಕವಾಗಿ ಉಳಿದ ಕಾಡುಪ್ರಾಣಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎರಡು ಹಂತದ ಬಳಿಕ ಮೂರನೆ ಹಂತದಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಇರಿಸಿ ಅದರ ಮೂಲಕ ಹುಲಿ ಇತರ ವನ್ಯಜೀವಿಗಳ ಚಲನವಲನ ದಾಖಲಿಸಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಇರಿಸಲಾಗುವುತ್ತದೆ. ಅವುಗಳ ದತ್ತಾಂಶಗಳು ಎನ್‌ಟಿಸಿಎಗೆ ಸಲ್ಲಿಕೆಯಾಗುತ್ತವೆ. ಎನ್‌ಟಿಸಿಎ ಸಮೀಕ್ಷೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡಲಿದೆ’ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.