ADVERTISEMENT

ಪೂಜೆ ಹೆಸರಲ್ಲಿ ದ್ರೋಹ | ನಕಲಿಸ್ವಾಮಿ ಸೇರಿದಂತೆ ಮೂವರ ಬಂಧನ: ₹35 ಲಕ್ಷ ವಶ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 13:56 IST
Last Updated 8 ಸೆಪ್ಟೆಂಬರ್ 2024, 13:56 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಹೊಸಪೇಟೆ (ವಿಜಯನಗರ): ಧಾರ್ಮಿಕ ಭಾವನೆ ತೋರಿಸಿ ಹಣ ದ್ವಿಗುಣ ಮಾಡುವುದಾಗಿ ನಂಬಿಸಿ ವಂಚಿಸಿದ ನಕಲಿ ಸ್ವಾಮಿ ಮತ್ತು ಇತರ ಇಬ್ಬರನ್ನು ಗ್ರಾಮಾಂತರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ ಹಾಗೂ ಅವರಿಂದ ₹35 ಲಕ್ಷ ವಶಪಡಿಸಿಕೊಂಡಿದ್ದಾರೆ.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್‌. ಅವರು ಇಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ್ದು, ರಾಜಾಸ್ಥಾನ ಮೂಲದ ಹಾಗೂ ಚಿತ್ರದುರ್ಗದಲ್ಲಿ ವಾಸ ಮಾಡುತ್ತಿದ್ದ ಜಿತೇಂದ್ರ ಸಿಂಗ್ (25), ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ತುಕ್ಯಾ ನಾಯ್ಕ (29) ಮತ್ತು ಶಂಕು ನಾಯ್ಕ (30) ಬಂಧಿತ ಆರೋಪಿಗಳು ಎಂದು ಮಾಹಿತಿ ನೀಡಿದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.’

ಘಟನೆಯ ವಿವರ

ಕಲ್ಲಹಳ್ಳಿಯ ಕುಮಾರ ನಾಯ್ಕ ಅವರಿಗೆ ಅದೇ ಗ್ರಾಮದ ತುಕ್ಯಾ ನಾಯ್ಕ ಹಾಗೂ ಶಂಕು ನಾಯ್ಕ ಅವರು ತಮಗೆ ಗೊತ್ತಿರುವ ರಾಜಾಸ್ಥಾನದ ಜಿತೇಂದ್ರ ಸಿಂಗ್ ಎನ್ನುವವರು ಪೂಜೆ ಮಾಡಿ ಹೆಚ್ಚಿನ ಹಣ ಮಾಡಿಕೊಡುತ್ತಾರೆಂದು ಹೇಳಿ ನಂಬಿಸಿ, ಸೆ.4ರಂದು ಜಿತೇಂದ್ರ ಸಿಂಗ್ ಅವರನ್ನು ಕರೆದುಕೊಂಡು ಬಂದು ಪರಿಚಯಿಸಿದ್ದರು.

ನಂತರ ₹7.5 ಲಕ್ಷ ಇಟ್ಟು ಪೂಜೆ ಮಾಡಿಸಿದರೆ ₹80 ಲಕ್ಷ ಮಾಡಿಕೊಡುವುದಾಗಿ ಹೇಳಿದ್ದಾರೆ. ನಕಲಿ ಸ್ವಾಮಿ ಹೇಳಿದಂತೆ ₹ 7.5ಲಕ್ಷ ಹೊಂದಿಸಿ, ಅಷ್ಟು ಹಣವನ್ನು ಇಟ್ಟು ಪೂಜೆ ಮಾಡಿ ಪೆಟ್ಟಿಗೆಯಲ್ಲಿ ಇಟ್ಟಂತೆ ಮಾಡಿದ್ದರು. ಪೆಟ್ಟಿಗೆಯನ್ನು 168+2 ದಿನದ ಬಳಿಕ ತೆರೆದು ನೋಡುವಂತೆ ತಿಳಿಸಿದ್ದರು ಎಂದು ಎಸ್‌ಪಿ ಮಾಹಿತಿ ನೀಡಿದರು.

ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್‌

‘ಸೆ.7ರಂದು ಅದೇ ಗ್ರಾಮ ರಾಜ ನಾಯ್ಕ ಎಂಬುವವರ ಮನೆಗೆ ತುಕ್ಯಾ ನಾಯ್ಕ ಹಾಗೂ ಶಂಕು ನಾಯ್ಕ ಅವರು ಜಿತೇಂದ್ರ ಸಿಂಗ್ ಅವರನ್ನು ಕರೆದುಕೊಂಡು ಬಂದು ಪೂಜೆ ಮಾಡಿಸಲು ಹೋದಾಗ ಜಿತೇಂದ್ರ ಸಿಂಗ್ ಅವರ ಪೂಜೆ ಸುಳ್ಳೆಂದು ಕುಮಾರ್‌ ನಾಯ್ಕ್ ಅವರಿಗೆ ತಿಳಿದು ಬಂದಿದೆ. ಕುಮಾರ ನಾಯ್ಕ್ ಅವರು ಮನೆಗೆ ಹೋಗಿ ಜಿತೇಂದ್ರ ಸಿಂಗ್ ಪೂಜೆ ಮಾಡಿಕೊಟ್ಟಿದ್ದ ಬಾಕ್ಸ್ ಅನ್ನು ಬಿಚ್ಚಿ ನೋಡುತ್ತಿದ್ದಂತೆ, ಅದರಲ್ಲಿ ಅಗರಬತ್ತಿ ಪ್ಯಾಕೆಟ್‍ಗಳು, ಉಸುಕಿನ ಚೀಲ ಹಾಗೂ 3 ಟವೆಲ್‍ಗಳು ಇದ್ದದ್ದು ಕಂಡು ಬಂದಿದೆ. ಬಳಿಕ ಅವರು ದೈವಿಕ ಭಾವನೆ ತೋರಿಸಿ, ನಂಬಿಕೆ ದ್ರೋಹ ಮಾಡಿದ್ದಾರೆಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ’ ಎಂದರು.

ದೂರು ದಾಖಲಿಸಿಕೊಂಡ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ಬಂಧಿತರಿಂದ ₹ 35,14,740 ನಗದು ಹಾಗೂ ನೋಟು ಎಣಿಸುವ ಯಂತ್ರವನ್ನು ವಶಪಡೆಸಿಕೊಳ್ಳಲಾಗಿದೆ’ ಎಂದರು.

ಎಎಸ್‌ಪಿ ಸಲೀಂ ಪಾಷಾ, ಡಿವೈಎಸ್‌ಪಿ ಟಿ.ಮಂಜುನಾಥ್‌ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಸಿಪಿಐ ಗುರುರಾಜ್‌ ಆರ್.ಕಟ್ಟಿಮನಿ, ‍ಪಿಎಸ್‌ಐಗಳಾದ ಎಚ್‌.ನಾಗರತ್ನ, ಜಯುಲಕ್ಷ್ಮಿ, ಸಿಬ್ಬಂದಿ ಕೀಮ್ಯಾ ನಾಯ್ಕ್‌, ಮೋತಿ ನಾಯ್ಕ್. ಆರ್‌.ವೆಂಕಟೇಶ, ಪರಮೇಶ್ವರಪ್ಪ, ಪಿ.ಮಂಜುನಾಥ ಮೇಟಿ, ವಿ.ರಾಘವೇಂದ್ರ, ಹೊನ್ನೂರಪ್ಪ, ಸಣ್ಣ ಗಾಳೆಪ್ಪ ಇತರರು ಈ ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.