ADVERTISEMENT

ಹಂಪಿ ಉತ್ಸವದಲ್ಲಿ ಸುಗ್ಗಿ ಸಂಭ್ರಮ, ಕೃಷಿ ವಸ್ತುಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 9:54 IST
Last Updated 13 ಫೆಬ್ರುವರಿ 2026, 9:54 IST
   

ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದ ಅಂಗವಾಗಿ ಮಾತಂಗ ಪರ್ವತ ಮೈದಾನದಲ್ಲಿ ಆಯೋಜಿಸಲಾದ ಸುಗ್ಗಿ ಸಂಭ್ರಮ, ಕೃಷಿ ವಸ್ತುಗಳ ಪ್ರದರ್ಶನ ನಾಡಿನ ರೈತರ ಬದುಕನ್ನು ಅನಾವರಣಗೊಳಿಸಿತು. ಪಾರಂಪರಿಕ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಸಂಯೋಗದೊಂದಿಗೆ ಸುಸ್ಥಿರ ಕೃಷಿ ಅಭಿವೃದ್ಧಿಯನ್ನು ಸಾಧ್ಯತೆಯನ್ನು ವಸ್ತುಪ್ರದರ್ಶನ ಸಾರುತ್ತಿದೆ.

ಸುಗ್ಗಿ ಸಂಭ್ರಮದಲ್ಲಿ ಸಂಕ್ರಾಂತಿ ಹಬ್ಬ, ರಾಶಿಪೂಜೆ, ಬೀಜಗಳ ಒಕ್ಕಣೆ ಮಾಡುವುದು, ಒಳಕಲ್ಲಿನಲ್ಲಿ ಧಾನ್ಯ ಬೀಸುತ್ತಾ ಜನಪದ ಗೀತೆ ಹಾಡುವ ಗ್ರಾಮೀಣ ಮಹಿಳೆಯರು, ಎತ್ತಿನ ಬಂಡಿ ಹಳ್ಳಿ ಸೊಗಡನ್ನು ಚಿತ್ರಣವನ್ನು ಬಿಂಬಿಸಲಾಗಿದೆ. ಇದವೆಲ್ಲವೂ ನೋಡುಗರ ಕಣ್ಣಿಗೆ ಹಬ್ಬವನ್ನೇ ಉಂಟುಮಾಡುತ್ತಿವೆ.

ಕೃಷಿ ವಸ್ತು ಪ್ರದರ್ಶನದಲ್ಲಿ ದೇಶಿ ಪಾರಂಪರಿಕ ಕೃಷಿ ಉತ್ಪನ್ನಗಳು ರೈತರ ಜೀವನ ತೆರೆದಿಡುತ್ತಿವೆ. ಕುಲಾಂತರಿ ಹಾಗೂ ವಿದೇಶಿ ಬೀಜಗಳ ನಡುವೆಯೂ ಜವಾರಿ ಹಾಗೂ ನಾಟಿ ಬೀಜ ಸಂಪತ್ತು, ಜೀವ ಹಾಗೂ ಸಸ್ಯ ವೈವಿಧ್ಯತೆ ಕಾಪಾಡುವ ಮಹತ್ವ ಸಾರುತ್ತಿವೆ.

ADVERTISEMENT

ಸಿರಿಧಾನ್ಯಗಳಲ್ಲಿ ಮೂಡಿಬಂದ ಗಣಪತಿ, ಕೆ.ಎಸ್.ಡಿ.ಎ ಲಾಂಛನ ಹಾಗೂ ನಂದಿ ಜನರನ್ನು ಸಳೆಯುತ್ತಿವೆ. ಇದರೊಂದಿಗೆ ಕೃಷಿಯಲ್ಲಿ ಡ್ರೋನ್‌ ಬಳಕೆ, ಟ್ರ್ಯಾಕ್ಟರ್, ಪಶುಪಾಲನೆಯೊಂದಿಗೆ ಸಮಗ್ರ ಕೃಷಿ ಪದ್ಧತಿ ಬಗ್ಗೆ ತಿಳಿಸುವ ಕೃಷಿ ಬ್ರಹ್ಮಾಂಡ, ರೇಷ್ಮೆ ಕೃಷಿ, ಸಿರಿಧಾನ್ಯಗಳ ಖಾದ್ಯಗಳ ಹಾಗೂ ಸಾವಯವ ಕೃಷಿ ಉತ್ಪನ್ನ ಮಾರಾಟ ಈ ಬಾರಿಯ ಕೃಷಿ ಪ್ರದರ್ಶನದಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತಿವೆ.

ಜಂಟಿ ಕೃಷಿ ನಿರ್ದೇಶಕ ಬಿ.ಟಿ.ಮಂಜುನಾಥ, ಉಪನಿರ್ದೇಶಕ ಡಾ.ನಯೀಂಪಾಷ, ಸಹಾಯಕ ನಿರ್ದೇಶಕ ಮನೋಜ್ ಗೌಡ, ಎಸ್.ಪಿ.ಪಾಟೀಲ್, ವಿ.ಸಿ.ಉಮೇಶ್ ಸೇರಿದಂತೆ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.

170ಕ್ಕೂ ಹೆಚ್ಚು ಜೋಡೆತ್ತುಗಳು ಭಾಗಿ

ನೇಗಿಲ ನೊಗದ ಭಾರ ಹೊತ್ತು, ಹೊಲದಲ್ಲಿ ನೇರ ಸಾಲಿನಲ್ಲಿ ರೈತನೊಂದಿಗೆ‌ ಹೆಜ್ಜೆ ಹಾಕುತ್ತಾ, ಬಿತ್ತನೆಗೆ ಭೂಮಿ ಹದಗೊಳಿಸುವ ಜೋಡೆತ್ತುಗಳು ಶುಕ್ರವಾರ ಹಂಪಿಯ ಕಡೆಗೆ ಮುಖಮಾಡಿದ್ದವು. ಮುಂಜಾನೆ 5 ಗಂಟೆಗೆ ಎದ್ದು ತಮ್ಮ ಎತ್ತುಗಳನ್ನು ಸಿಂಗರಿಸಿ ರೈತರು ಆಗಮಿಸಿದ್ದರು. ಹಂಪಿ ಉತ್ಸವದ ಜೋಡೆತ್ತುಗಳ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಜಿಲ್ಲಾಡಳಿತ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಕಮಲಾಪುರದ ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ (ಹವಾಮಾ) ಕಚೇರಿ ಹಿಂಭಾಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎತ್ತುಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.

ಕಲಮಾಪುರ, ಹೊಸಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ 170ಕ್ಕೂ ಅಧಿಕ ಜೋಡೆತ್ತುಗಳು ಉತ್ಸವದಲ್ಲಿ ಭಾಗವಹಿಸಿವೆ‌. ಹಳ್ಳಿಕಾರ್, ಮಲೆನಾಡ ಗಿಡ್ಡ, ಓಂಗೋಲ್, ಅಮೃತ್‍ಮಹಲ್, ಕಿಲಾರಿ ಜಾತಿ ವಿವಿಧ ದೇಶಿ ಹಾಗೂ ವಿದೇಶಿ ತಳಿಯ ಜೋಡೆತ್ತುಗಳು ತಮ್ಮ ಗಾಂಭೀರ್ಯದಿಂದ ನೋಡುಗರನ್ನು ಚಕಿತಗೊಳಿಸಿದವು.

ಬೀದರ್ ಪಶುವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಕೊಟ್ರೇಶ್ ಬಸವರಾಜ್ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪಶು ವೈದ್ಯರು ಜೋಡೆತ್ತುಗಳ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು. ಪ್ರದರ್ಶನದಲ್ಲಿ ಎತ್ತುಗಳ ಮೂಲತಳಿ, ದೇಹದಾರ್ಢ್ಯತೆ, ಚುರುಕುತನ, ಅವುಗಳ ಚಲನವಲನಗಳ, ಹೊಳೆಯುವ ಚರ್ಮ, ಕಣ್ಣು, ವಯಸ್ಸು, ಹಲ್ಲು ಸೇರಿದಂತೆ ರೈತರಿಂದ ಅವುಗಳ ಪೋಷಣೆ ಕ್ರಮವನ್ನು ಪರಿಗಣಿಸಿ ತೀರ್ಪುಗಾರರು ಬಹುಮಾನ ಘೋಷಿಸುವರು. ನಿವೃತ್ತ ಸಹಾಯಕ ನಿರ್ದೇಶಕ ಡಾ.ಬಸವರಾಜ ಬೆಣ್ಣಿ ರೈತರೊಂದಿಗೆ ಸಂವಾದ ನಡೆಸುವ ಮೂಲಕ ನಿರೂಪಣೆ ಕಾರ್ಯ ನಡೆಸಿದರು.

ಪಶುಪಾಲನೆ ಮತ್ತು ಪಶು ವೈದ್ಯ ಸೇವೆಗಳ ಇಲಾಖೆಯ ಉಪನಿರ್ದೇಶಕ ಡಾ.ಎಂ.ರವಿ, ಸಹಾಯ ನಿರ್ದೇಶಕರು ಡಾ.ಇಮ್ರಾನ್, ಡಾ.ಯುಗಂದರ್‌ ಮಾನ್ವಿ, ಡಾ.ಪ್ರಶಾಂತ್, ಡಾ.ಅಜಯ್ ಕುಮಾರ್, ಡಾ.ಸುರೇಶ್, ಡಾ.ರಾಘವೇಂದ್ರ, ಡಾ.ಮಲ್ಲಿಕಾರ್ಜುನ್, ಡಾ.ಚಂದ್ರನಾಯ್ಕ್, ,ಡಾ.ಶಿವಕುಮಾರ್,ಡಾ.ಲೋಹಿತ್, ಡಾ.ಸತೀಶ್, ಡಾ.ನೇಮಿನಾಯ್ಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.