ADVERTISEMENT

ತಿಂಗಳೊಳಗೆ ಒಳಮೀಸಲಾತಿ ಜಾರಿಯಾಗಲಿ: ಆಂಜನೇಯ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:47 IST
Last Updated 7 ಜೂನ್ 2025, 14:47 IST
ಎಚ್.ಆಂಜನೇಯ
ಎಚ್.ಆಂಜನೇಯ   

ಹೊಸಪೇಟೆ (ವಿಜಯನಗರ): ‘ಒಳಮೀಸಲಾತಿ ಜಾರಿಗೆ ಅಗತ್ಯವಾದ ಜಾತಿ ಸಮೀಕ್ಷೆ ಕೊನೆ ಹಂತಕ್ಕೆ ಬಂದಿದ್ದು, 15 ದಿನಗಳಲ್ಲಿ ಪೂರ್ಣಗೊಳ್ಳಬಹುದು. ಹೀಗಾಗಿ ಜೂನ್‌ ಅಂತ್ಯದೊಳಗೆ ಒಳಮೀಸಲಾತಿಯನ್ನು ಸರ್ಕಾರ ಜಾರಿಗೊಳಿಸಬೇಕು’ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಒತ್ತಾಯಿಸಿದರು.

‘ಬೆಂಗಳೂರು ನಗರ ಹೊರತುಪಡಿಸಿ ಉಳಿದೆಡೆ ಸಮೀಕ್ಷೆ ಮುಗಿಯುವ ಹಂತದಲ್ಲಿದೆ. ಬೆಂಗಳೂರಿನಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರ ಸಂಖ್ಯೆ ಕಡಿಮೆ ಇರುವುದಕ್ಕೆ ಸಮೀಕ್ಷೆ ಸ್ವಲ್ಪ ವಿಳಂಬವಾಗಿದೆ. ಎಲ್ಲವೂ ಪೂರ್ಣಗೊಳಿಸಿ, ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗವು ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಲಿಂಗಾಯತ ಸಮುದಾಯದ ಬೇಡ ಜಂಗಮರು, ನಕಲಿ ಜಾತಿ ಪ್ರಮಾಣಪತ್ರ ನೀಡಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿದ್ದಾರೆ. 1931ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಆಗಿದ್ದ ಪ್ರಮಾದ ಮುಂದುವರಿದಿದೆ. ಇನ್ಮುಂದೆ ಇದಕ್ಕೆ ಅವಕಾಶ ಇಲ್ಲ. ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡ ಜಂಗಮ ಜಾತಿಯನ್ನೇ ತೆಗೆದುಹಾಕಬೇಕು ಎಂಬುದು ನಮ್ಮ ಇನ್ನೊಂದು ಪ್ರಮುಖ ಬೇಡಿಕೆ. ಅದನ್ನು ಸರ್ಕಾರ ತಕ್ಷಣ ಈಡೇರಿಸಬೇಕು’ ಎಂದು ಅವರು ಹೇಳಿದರು.

ADVERTISEMENT

‘ಬೇಡ ಜಂಗಮರಿಗೆ ನಕಲಿ ಜಾತಿ ಪ್ರಮಾಣಪತ್ರ ನೀಡಿದ ತಹಶೀಲ್ದಾರ್‌ಗಳನ್ನು ಪತ್ತೆ ಮಾಡಿ, ಅವರನ್ನು ಜೈಲಿಗೆ ಕಳುಹಿಸಬೇಕು. ನಕಲಿ ಜಾತಿ ಪ್ರಮಾಣಪತ್ರ ಪಡೆದ ಎಲ್ಲರ ಮಾಹಿತಿ ಸಂಗ್ರಹವಾಗಬೇಕು. ಇದರ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತನಿಖೆಯಾಗಬೇಕು’ ಎಂದು ಅವರು ಆಗ್ರಹಿಸಿದರು.

‘ನೇಮಕಾತಿ ವಿಳಂಬವಾಗಬಾರದು’

'ಒಳಮೀಸಲಾತಿ ನಿರ್ಧರಿಸಿದ ಬಳಿಕವಷ್ಟೇ ವಿವಿಧ ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡಬೇಕು ಎಂಬ ನಮ್ಮ ಒತ್ತಾಯಕ್ಕೆ ಮಣಿದ ಸರ್ಕಾರ ಕಳೆದ ಅಕ್ಟೋಬರ್‌ನಿಂದೀಚೆಗೆ ಯಾವುದೇ ನೇಮಕಾತಿ ಮಾಡಿಲ್ಲ. ಬ್ಯಾಕ್‌ಲಾಗ್ ಸಹ  ಭರ್ತಿ ಮಾಡಿಲ್ಲ. ಎಂಟು ತಿಂಗಳ ಅವಧಿಯಲ್ಲಿ ನಮ್ಮ ಸಮುದಾಯ ಸಹಿತ ಇತರ ಸಮುದಾಯಗಳಲ್ಲಿ ಹಲವರು ವಯೋಮಿತಿ ಮೀರಿರುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರಿಗೂ ಎಂಟು ತಿಂಗಳ ವಿನಾಯಿತಿ ನೀಡಬೇಕು. ಒಳ ಮೀಸಲಾತಿಯನ್ನು ಈ ತಿಂಗಳೊಳಗೆ ಜಾರಿಗೆ ತಂದು ಮುಂದಿನ ತಿಂಗಳಿನಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು’ ಎಂದು ಮಾಜಿ ಸಚಿವ ಆಂಜನೇಯ ಕೋರಿದರು.

ಸಿಎಂ ಸಿದ್ದರಾಮಯ್ಯ ಎಸ್‌ಸಿ ನಾಯಕರಿಗಿಂತ ಹೆಚ್ಚು ಬದ್ಧತೆಯಿಂದ ಈ ಸಮುದಾಯಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರು ನಮ್ಮ ಪಾಲಿಗೆ ಅಂಬೇಡ್ಕರ್.
–ಎಚ್. ಆಂಜನೇಯ, ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.