ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದನ್ನು ಖಂಡಿಸಿ ನಗರದ ಗಾಂಧಿ ಚೌಕಿಯದಲ್ಲಿ ಗುರುವಾರ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.
ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದನ್ನು ಖಂಡಿಸಿ ನಗರದ ಗಾಂಧಿ ಚೌಕಿಯದಲ್ಲಿ ಗುರುವಾರ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಬೆಂಕಿ ಹಚ್ಚಿಆಕ್ರೋಶ ವ್ಯಕ್ತಪಡಿದರು.
ಉಚ್ಚಾಟನೆ ಮಾಡಿರುವ ಪಕ್ಷದ ವರಿಷ್ಠರ ಕ್ರಮವನ್ನು ಖಂಡಿಸಿ ಘೋಷಣೆ ಕೂಗಿದರು. ಬಳಕ ಗಾಂಧಿ ಚೌಕಿಯಲ್ಲಿ ಕೆಲ ಹೊತ್ತು ಮಾನವ ಸರಪಳಿ ನಿರ್ಮಿಸಿ, ರಸ್ತೆ ಸಂಚಾರ ಬಂದ್ ಮಾಡಿದರು.
ಪಂಚಮಸಾಲಿ ಸಮಾಜದ ಮುಖಂಡ ಎಂ.ಎಸ್.ರುದ್ರಗೌಡ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ ಎಂದೂ ಪಕ್ಷದ ವಿರುದ್ಧ ಮಾತನಾಡಿಲ್ಲ. ಪಕ್ಷದಲ್ಲಿರುವ ಕೆಲವರ ಹೊಂದಾಣಿಕೆ ರಾಜಕಾರಣ, ಭ್ರಷ್ಟಾಚಾರ, ಕುಟುಂಬ ರಾಜಕಾರಣ ವಿರೊಧಿಸಿದಕ್ಕೆ ಉಚ್ಚಾಟನೆ ಮಾಡಿರುವುದು ಸರಿಯಲ್ಲ ಎಂದರು.
ನೇರ ನಿಷ್ಠೂರ, ಪ್ರಖರ ಹಿಂದೂ ನಾಯಕನಿಗೆ ಬಿಜೆಪಿ ಮಾಡಿರುವ ಅನ್ಯಾಯ ಇದಾಗಿದೆ. ಇಡೀ ಹಿಂದು ಸಮಾಜಕ್ಕೆ ಮಾಡಿರುವ ಅಪಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯತ್ನಾಳ ಅವರನ್ನು ಉಚ್ಚಾಟನೆ ಮಾಡಿರುವುದಕ್ಕೆ ಅವರ ಲಕ್ಷಾಂತರ ಅಭಿಮಾನಿಗಳು ಬಿಜೆಪಿ ವರಿಷ್ಠರ ತಪ್ಪು ನಿರ್ಧಾರಕ್ಕೆ ನೊಂದಿದ್ದಾರೆ. ಕೆಲವೇ ದಿನಗಳಲ್ಲಿ ಪಕ್ಷ ತನ್ನ ತಪ್ಪು ನಿರ್ಧಾರಕ್ಕೆ ಪಶ್ಚಾತ್ತಾಪ ಅನುಭವಿಸುವುದು ನಿಶ್ಚಿತ. ಹೀಗಾಗಿ ಕೂಡಲೇ ತಮ್ಮ ನಿರ್ಧಾರ ಬದಲಿಸಬೇಕು ಎಂದು ಆಗ್ರಹಿಸಿದರು.
ಪಂಚಮಸಾಲಿ ಮುಖಂಡ ಬಿ.ಎಸ್.ಪಾಟೀಲ ನಾಗರಾಳಹುಲಿ ಮಾತನಾಡಿ, ಕುಟುಂಬ ರಾಜಕಾರಣ ಮುಕ್ತ, ಹಿಂದುತ್ವ ಸಿದ್ದಾಂತದ ಪಕ್ಷ ಎನ್ನುವ ಬಿಜೆಪಿ ಹೈಕಮಾಂಡ್ ಮತ್ಯಾಕೆ ಕುಟುಂಬದ ಹಿತ ಬೇಕೆನ್ನುವ ಅಪ್ಪ ಮಕ್ಕಳ ಷಡ್ಯಂತ್ರ, ಕುತಂತ್ರಕ್ಕೆ ಮಣಿದು ತಪ್ಪು ನಿರ್ಧಾರ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು.
ಕೇವಲ ಲಿಂಗಾಯತರು ಮಾತ್ರವಲ್ಲ, ಸಮಸ್ತ ಹಿಂದೂ ಸಮುದಾಯ ಯತ್ನಾಳರ ಹಿಂದಿದೆ. ಇದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ಲಿಂಗಾಯತ ಪಂಚಮಸಾಲಿಯದಲ್ಲ, ಹೈಕಮಾಮಡ್ ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ಪ್ರಾಣ ಹೋದರೂ ಪರವಾಗಿಲ್ಲ. ಯತ್ನಾಳ ಗೌಡರ ಜೊತೆಗೆ ನಿಂತು ನಮ್ಮ ಶಕ್ತಿ ಏನು ಎಂಬುವುದು ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಲಕ್ಷ್ಮೀ ಕನ್ನೋಳ್ಳಿ, ಎಲ್ಲ ಸಮುದಾಯಗಳ ಧ್ವನಿಯಾದ ನಮ್ಮ ನಾಯಕ ಬಸನಗೌಡರ ಉಚ್ಛಾಟನೆಯಿಂದ ಅತೀವ ನೋವಿನಿಂದ ನಾವೆಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದೇವೆ. ಇದು ಕೇವಲ ಒಬ್ಬ ನಾಯಕನಿಗೆ ಮಾಡಿರುವ ಅನ್ಯಾಯವಲ್ಲ. ಇಡೀ ಹಿಂದುಗಳಿಗೆ, ಉತ್ತರ ಕರ್ನಾಟಕಕ್ಕೆ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಪಂಚಮಸಾಲಿ ಸಮಾಜದ ಮುಖಂಡರಾದ ಅಶೋಕ ಗಂಗಣ್ಣವರ, ಡಾ.ಸಿ.ಎಸ್.ಸೋಲಾಪುರ, ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ, ಸಿದ್ದು ಹಂಜಿ, ಈಶ್ವರ ಸಾರವಾಡ, ಅಪ್ಪು ಜಿರಲಿ, ನಿಂಗನಗೌಡ ಸೋಲಾಪುರ, ಎಸ್.ಆರ್.ಬುಕ್ಕಣ್ಣಿ, ಸಂಗಮೇಶ ಬಬಲೇಶ್ವರ, ರವಿ ಪಾಟೀಲ, ಸಂತೋಷ ಪಾಟೀಲ, ಸಂತೋಷ ಮಂಜಣ್ಣಿ, ದಾನೇಶ ಅವಟಿ ಸೇರಿದಂತೆ ವಿವಿಧ ಸಂಘಟನೆಗಳು ನೂರಾರು ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.