ಮರಿಯಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿ ಸಮೀಪದ ಹಂಪಿನಕಟ್ಟಿ ಸರ್ಕಾರಿ ಪ್ರೌಢಶಾಲೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಶೇ 84ರಷ್ಟು ಫಲಿತಾಂಶದೊಂದಿಗೆ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿತು. ಆದರೆ, ಈ ಶಾಲೆಯಲ್ಲಿ ಮೂಲಸೌಲಭ್ಯಗಳೇ ಇಲ್ಲ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿ 10 ವರ್ಷಗಳಾಗಿವೆ. 17 ಕೊಠಡಿಗಳಿವೆ. 1 ರಿಂದ 8ನೇ ತರಗತಿಯವರೆಗೆ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. 9ನೇ ತರಗತಿಯಲ್ಲಿ 75 ವಿದ್ಯಾರ್ಥಿಗಳು ಮತ್ತು 10ನೇ ತರಗತಿಯಲ್ಲಿ 80 ವಿದ್ಯಾರ್ಥಿಗಳು ಇದ್ದಾರೆ.
ಪ್ರೌಢಶಾಲೆ ತರಗತಿಗಳಿಗೆಂದೇ ಮೂರು ಕೊಠಡಿಗಳನ್ನು ಮೀಸಲಿಡಲಾಗಿದೆ. ಒಂದು ತರಗತಿಯ ವಿದ್ಯಾರ್ಥಿಗಳು ಕೊಠಡಿಯ ನೆಲದ ಮೇಲೆ ಕೂತರೆ, ಇನ್ನೊಂದು ತರಗತಿಯವರು ಶಾಲೆ ಹೊರಗೆ ಜಗುಲಿ ಮತ್ತು ಬಯಲಲ್ಲಿ ಕೂರುತ್ತಾರೆ. ಶಿಕ್ಷಕರೂ ನೆಲದ ಮೇಲೆಯೇ ಕೂತುಕೊಂಡೇ ಪಾಠ ಹೇಳಬೇಕು.
ಇಸ್ಕಾನ್ ಬಿಸಿಯೂಟದ ವ್ಯವಸ್ಥೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರವಿದ್ದು, ಪ್ರೌಢಶಾಲೆ ವಿದ್ಯಾರ್ಥಿಗಳಿಗಿಲ್ಲ. ಪುಟ್ಟ ಕೊಠಡಿಯಲ್ಲೇ ಪಡಿತರ ದಾಸ್ತಾನಿನ ಜೊತೆಗೆ ಬಿಸಿಯೂಟ ತಯಾರಿಸಲಾಗುತ್ತದೆ. ಇರುವುದು ಎರಡೇ ಶೌಚಾಲಯ. ಅದರಲ್ಲೇ ಶಿಕ್ಷಕರು, ವಿದ್ಯಾರ್ಥಿನಿಯರು ಹೊಂದಾಣಿಕೆ ಮಾಡಿಕೊಳ್ಳಬೇಕು.
‘ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ಸಾಕಷ್ಟು ಬಾರಿ ತರಲಾಗಿದೆ. ಆದರೆ, ಪ್ರಯೋಜನವಾಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಬೆಸ್ತರ ಹನುಮಂತಪ್ಪ ಹಾಗೂ ಮಂಜುನಾಥ ತಿಳಿಸಿದರು.
10 ವರ್ಷದಿಂದ ಇರುವ ಗೋಳು ವಿದ್ಯಾರ್ಥಿಗಳಿಗೆ ಇಲ್ಲಿ ಕೊರತೆ ಇಲ್ಲ ಸಮಸ್ಯೆಗಳ ನಡುವೆಯೂ ಉತ್ತಮ ಸಾಧನೆ
ಅರ್ಧಕ್ಕೆ ನಿಂತ ಪ್ರೌಢಶಾಲೆಯ ಕಟ್ಟಡದ ಸಮಸ್ಯೆಯ ಬಗ್ಗೆ ಮಾಹಿತಿ ಇದ್ದು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದುಶೇಖರಪ್ಪ ಹೊರಪೇಟೆ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರೌಢಶಾಲೆ ವಿದ್ಯಾರ್ಥಿಗಳ ಸಮಸ್ಯೆ ತಿಳಿದು ನಾಲ್ಕು ವರ್ಷದ ಹಿಂದೆ ಭೂಮಿ ದಾನ ನೀಡಿದೆ. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಸದುದ್ದೇಶ ಈಡೇರಿಲ್ಲತಾಳೂರು ಅಮರೇಶಗೌಡ ಶಾಲೆಗೆ ಭೂಮಿ ದಾನ ನೀಡಿದ ಗ್ರಾಮಸ್ಥ
ದಾನ ಕೊಟ್ಟೂ ಪ್ರಯೋಜನವಿಲ್ಲ
‘ಪ್ರೌಢಶಾಲೆ ನಿರ್ಮಾಣಕ್ಕೆ ಜಾಗವಿರದ ಕಾರಣ ಗ್ರಾಮದ ತಾಳೂರು ಅಮರೇಶ್‍ಗೌಡ ದಂಪತಿ ನಾಲ್ಕು ವರ್ಷದ ಹಿಂದೆ ಒಂದು ಎಕರೆ ಭೂಮಿ ದಾನ ಮಾಡಿದರು. ಅದೇ ಸ್ಥಳದಲ್ಲಿ ಎರಡು ವರ್ಷದ ಹಿಂದೆ ₹31.50 ಲಕ್ಷ ವೆಚ್ಚದಲ್ಲಿ ಮಂಜೂರಾದ ಎರಡು ಕೊಠಡಿಗಳ ಕಾಮಗಾರಿ ಅರ್ಧಕ್ಕೇ ನಿಂತಿದೆ. ಇದನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಓಬಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.