ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ: ಬೋಧಕ ಹುದ್ದೆ ನೇಮಕ ಪ್ರಕ್ರಿಯೆಗೆ ಹಿನ್ನಡೆ

ನೇಮಕಾತಿ ವಿರುದ್ಧ ನ್ಯಾಯಾಲಯಕ್ಕೆ ಸಾಲು ಸಾಲು ಅರ್ಜಿ ಸಲ್ಲಿಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 12 ಡಿಸೆಂಬರ್ 2021, 4:02 IST
Last Updated 12 ಡಿಸೆಂಬರ್ 2021, 4:02 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): 17 ಬೋಧಕ ಹುದ್ದೆಗಳ ನೇಮಕಾತಿಗೆ ಮುಂದಾಗಿರುವ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ.

ಹುದ್ದೆಗಳ ಭರ್ತಿಯಲ್ಲಿ ಮೀಸಲಾತಿ ನಿಯಮ ಪಾಲಿಸಿಲ್ಲ ಎಂದು ವೈಶಾಲಿಬಾಯಿ, ಖಾನುಂ ಅಕ್ತರ್‌ ಎಂಬುವರು ಧಾರವಾಡ ಹೈಕೋರ್ಟ್‌ ಸಂಚಾರಿ ಪೀಠದ ಮೊರೆ ಹೋಗಿದ್ದಾರೆ. ಡಿ. 21ರಂದು ವಿಚಾರಣೆ ಕಾಯ್ದಿರಿಸಿರುವ ನ್ಯಾಯಾಲಯವು, ನೇಮಕ ಪ್ರಕ್ರಿಯೆ ನಡೆಸದಂತೆ ವಿಶ್ವವಿದ್ಯಾಲಯದ ಕುಲಸಚಿವರಿಗೆ ನಿರ್ದೇಶನ ನೀಡಿದೆ. ಇಷ್ಟೇ ಅಲ್ಲ, ಈ ಸಂಬಂಧ ಯಾವುದೇ ತೀರ್ಮಾನ ಕೈಗೊಳ್ಳದಂತೆಯೂ ಸೂಚಿಸಿದೆ.

2017–18ರಲ್ಲಿ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಚರಿತ್ರೆ ವಿಭಾಗದಲ್ಲಿ ಒಂದು ಹುದ್ದೆ 2ಬಿ ಮಹಿಳೆಗೆ ಮೀಸಲಿಡಲಾಗಿತ್ತು. ದೃಶ್ಯಕಲಾ ವಿಭಾಗದ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಿತ್ತು. 2015ರ ನಿಯಮದ ಪ್ರಕಾರ, ಹಾಲಿ ಅಧಿಸೂಚನೆಯಲ್ಲಿ ಈ ಹಿಂದೆ ತುಂಬದ ಹುದ್ದೆಗಳನ್ನು ಬ್ಯಾಕ್‌ಲಾಗ್‌ ಹುದ್ದೆಗಳೆಂದು ಪ್ರತ್ಯೇಕವಾಗಿ ತೋರಿಸಬೇಕಿತ್ತು. ಈ ಕುರಿತು ಅರ್ಜಿದಾರರಾದ ವೈಶಾಲಿಬಾಯಿ, ಖಾನುಂ ಅವರು ನ್ಯಾಯಾಲಯದ ಮೊರೆ ಹೋಗುವ ಮುಂಚೆ ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಅಧಿಸೂಚನೆಯಲ್ಲಿ ಮಹಿಳಾ ಮೀಸಲು ಕೂಡ ಪಾಲಿಸಿಲ್ಲ ಎಂದು ಗಮನಕ್ಕೆ ತಂದಿದ್ದರು. ‘ವಿಶ್ವವಿದ್ಯಾಲಯ ನಮ್ಮ ಅರ್ಜಿ ಪರಿಗಣಿಸಲಿಲ್ಲ. ಹಿಂಬರಹ ಕೂಡ ಕೊಡಲಿಲ್ಲ’ ಎಂದು ಅರ್ಜಿದಾರರು ದೂರಿದ್ದಾರೆ. ಹೀಗಾಗಿಯೇ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ADVERTISEMENT

ಇಷ್ಟೇ ಅಲ್ಲ, ನೇಮಕಾತಿ ರದ್ದುಗೊಳಿಸುವಂತೆ ಇದೇ ನ್ಯಾಯಾಲಯಕ್ಕೆ ಸಾಲು ಸಾಲು ಅರ್ಜಿಗಳು ಸಲ್ಲಿಕೆಯಾಗಿದ್ದು, ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ.

ಮೀಸಲಾತಿ, ಮಹಿಳಾ ಮೀಸಲಾತಿ, ಲಿಖಿತ ಪರೀಕ್ಷೆಯನ್ನು ಪ್ರಶ್ನಿಸಿ ಎ. ಶಿವಮ್ಮ, ಪ್ರಕಾಶ್‌ ಹುಗ್ಗಿ, ಶಂಭುನಾಥ, ಪಂಪಾಪತಿ, ಸುಕನ್ಯಾ, ಸರೋಜ ಸಂತಿ, ಸಿದ್ದಾರ್ಥ, ಹನುಮಂತರಾಯ ಎಂಬುವರು ಕೋರ್ಟ್‌ ಕದ ತಟ್ಟಿದ್ದಾರೆ. ಇನ್ನು, ಟಿ. ತಿಮ್ಮಾರೆಡ್ಡಿ, ಶಂಕರಪ್ಪ ಬಡಿಗೇರ್‌ ಮತ್ತು ಬಸವರಾಜ ಲಿಂಗಪ್ಪ ಅವರು ಪ್ರತ್ಯೇಕ ಅರ್ಜಿ ಸಲ್ಲಿಸಿ, ನೇಮಕ ಪ್ರಕ್ರಿಯೆ ರದ್ದುಗೊಳಿಸಬೇಕೆಂದು ಕೋರಿದ್ದಾರೆ.

ವಿ.ವಿ. ತಪ್ಪು ಮಾಹಿತಿ ಕೊಟ್ಟಿತೇ?
ನೇಮಕಾತಿ ಸಂಬಂಧ ನ್ಯಾಯಾಲಯಕ್ಕೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಕೆಲವು ಅರ್ಜಿಗಳ ವಿಚಾರಣೆ ನ್ಯಾಯಾಲಯ ಕೈಗೆತ್ತಿಕೊಂಡಿದೆ. ಆದರೆ, ನ. 15ರಂದು ಸಮಾಜ ಕಲ್ಯಾಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವದಲ್ಲಿ ಇದರ ಬಗ್ಗೆ ಉಲ್ಲೇಖಿಸಿಲ್ಲ. ವಿಶ್ವವಿದ್ಯಾಲಯ ತಪ್ಪು ಮಾಹಿತಿ ಕೊಟ್ಟಿತೇ ಎಂಬ ಪ್ರಶ್ನೆ ಮೂಡಿದೆ.

‘ಬೋಧಕ ಹುದ್ದೆಗಳಿಗೆ 297 ಅರ್ಜಿಗಳು ಬಂದಿವೆ. ಬೇಗ ನೇಮಕ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಅರ್ಜಿದಾರರು ದಾವೆ ಹೂಡಬಹುದು. ಇದರಿಂದ ವಿಶ್ವವಿದ್ಯಾಲಯಕ್ಕೆ ಅನಗತ್ಯ ಮುಜುಗರ ಉಂಟಾಗಬಾರದು. ಪ್ರಸ್ತಾವಕ್ಕೆ ಅನುಮತಿ ಕೊಡಬೇಕು’ ಎಂದು ವಿ.ವಿ. ಕೋರಿದೆ.

ಸಿಬ್ಬಂದಿ ಮನವಿ ಪುರಸ್ಕರಿಸಿದ ಕೋರ್ಟ್‌
ಪ್ರೊಬೇಷನರಿ ಅವಧಿ ಘೋಷಿಸುವುದರ ಸಂಬಂಧ ಧಾರವಾಡ ಹೈಕೋರ್ಟ್‌ ಸಂಚಾರಿ ಪೀಠದ ಮೊರೆ ಹೋಗಿರುವ 8 ಬೋಧಕ, ನಾಲ್ಕು ಜನ ಬೋಧಕೇತರ ಸಿಬ್ಬಂದಿಯ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

‘ಸಿಬ್ಬಂದಿಗೆ ಯಾವುದೇ ರೀತಿಯ ತೊಂದರೆ ಕೊಡಬಾರದು’ ಎಂದು ನ್ಯಾಯಾಲಯವು ವಿಶ್ವವಿದ್ಯಾಲಯಕ್ಕೆ ಸೂಚಿಸಿ ವಿಚಾರಣೆ ಕಾಯ್ದಿರಿಸಿದೆ. 2017–18ರಲ್ಲಿ ನೇಮಕಗೊಂಡಿರುವ ವೆಂಕಟಗಿರಿ ದಳವಾಯಿ, ಅಮರೇಶ ಯತಗಲ್‌, ಶಾಂತಪ್ಪ, ಗೋವರ್ಧನ್‌, ಗೀತಮ್ಮ, ಯರ್ರಿಸ್ವಾಮಿ, ಗೋವಿಂದ್‌, ಮೋಹನ್‌ರಾವ್‌ ಪಾಂಚಾಳ, ಬೋಧಕೇತರ ಸಿಬ್ಬಂದಿ ಹರ್ಷವರ್ಧನ್‌, ಬೀರಪ್ಪ, ರಾಘವೇಂದ್ರ, ಮೇಘ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರೊಬೇಷನರಿ ಅವಧಿ ಪೂರ್ಣಗೊಂಡರೂ ಅದನ್ನು ಘೋಷಿಸಲು ವಿಶ್ವವಿದ್ಯಾಲಯ ವಿಳಂಬ ಮಾಡುತ್ತಿದೆ ಎನ್ನುವುದು ಅರ್ಜಿದಾರರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.