ADVERTISEMENT

ನಿಮ್ಮ ಪಾಲಿನ ಮೀಸಲಾತಿ ಜತೆಗೆ ತನ್ನಿ, ಹಂಚಿಕೊಳ್ಳೋಣ: ಕುರುಬರಿಗೆ ಉಗ್ರಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 11:15 IST
Last Updated 4 ನವೆಂಬರ್ 2025, 11:15 IST
ವಿ.ಎಸ್‌ ಉಗ್ರಪ್ಪ 
ವಿ.ಎಸ್‌ ಉಗ್ರಪ್ಪ    

ಹೊಸಪೇಟೆ (ವಿಜಯನಗರ): ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಕುರುಬ ಸಮುದಾಯವನ್ನು ಸೇರಿಸುವುದಕ್ಕೆ ನನ್ನ ವಿರೋಧವಿಲ್ಲ, ಆದರೆ ಹೆಚ್ಚುವರಿ ಮೀಸಲಾತಿಯನ್ನೂ ಜತೆಗೆ ತಂದರೆ ಹಂಚಿಕೊಂಡು ಬದುಕಬಹುದು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಹೊಸಪೇಟೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಮಂಗಳವಾರ ಇಲ್ಲಿ ಹಮ್ಮಿಕೊಂಡ ಮೀಸಲಾತಿ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ತಟ್ಟೆಗೆ ಕೈ ಹಾಕಬೇಡಿ ಎಂಬುದನ್ನು ನಾವೆಲ್ಲ ಸ್ಪಷ್ವವಾಗಿ ಹೇಳಿದ್ದೇವೆ, ಮುಖ್ಯಮಂತ್ರಿ ಅವರಿಗೂ ಇದರ ಮನವರಿಕೆ ಆಗಿದೆ, ಹೀಗಿದ್ದರೂ ಎಸ್‌ಟಿಗೆ ಸೇರಿಸಲೇಬೇಕು ಎಂದಾದರೆ ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲೇಬೇಕು’ ಎಂದರು.

ಕುರುಬ ಸಮುದಾಯ ಎಸ್‌ಟಿಗೆ ಒಳಪಡುತ್ತದೆಯೇ ಎಂಬುದರ ಬಗೆಗೆ ಮೊದಲಾಗಿ ಕುಲಶಾಸ್ತ್ರೀಯ ಅಧ್ಯಯನ ಆಗಬೇಕು. ಗೊಲ್ಲ, ಬಸ್ತರು ಮೊದಲಾದ ಸಮಯದಾಯಗಳಲ್ಲೂ ಇದೇ ರೀತಿಯ ಅಧ್ಯಯನ ಆಗಬೇಕು. ಅದರ ಹೊರತಾಗಿ ಈಗಿನ ಸ್ಥಿತಿಯಲ್ಲೇ ಎಸ್‌ಟಿಗೆ ಸೇರಿಸುವ ಪ್ರಯತ್ನ ಒಳ್ಳೆಯದಲ್ಲ. ಕುಲಶಾಸ್ತ್ರೀಯ ಅಧ್ಯಯನ ನಡೆದು ಎಲ್ಲ ಅರ್ಹರನ್ನೂ ಎಸ್‌ಟಿಗೆ ಸೇರಿಸಬಹುದು, ಆದರೆ ಅದೇ ಪ್ರಕಾರ ಮೀಸಲಾತಿ ಪ್ರಮಾಣವನ್ನೂ ಹೆಚ್ಚಿಸಬೇಕು ಎಂದರು.

ADVERTISEMENT

ಹಣ ವರ್ಗಾವಣೆ ಅಸಾಧ್ಯ: ‘ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಯಾವ ಕಾರಣಕ್ಕೂ ವರ್ಗಾವಣೆ ಮಾಡುವಂತಿಲ್ಲ ಎಂಬ ಸ್ಪಷ್ಟ ಸೂಚನೆ ಇದೆ. ಆ ಹಣದಲ್ಲಿ ಭ್ರಷ್ಟಾಚಾರ ಆದರೆ ಜೈಲು ಶಿಕ್ಷೆ ಸಹ ವಿಧಿಸಬಹುದಾಗಿದೆ. ಆದರೆ ದಲಿತ ಹಕ್ಕುಗಳ ಹೋರಾಟಗಾರರು ಎನ್ನಿಸಿಕೊಂಡವರು ಇದನ್ನು ಪ್ರಶ್ನಿಸುವುದೇ ಇಲ್ಲ’ ಎಂಧು ಅವರು ಕುಟುಕಿದರು.

ಉಗ್ರಪ್ಪ ನಿಲುವಿಗೆ ವಿರೋಧ: ಕೊನೆಯಲ್ಲಿ ಮಾತನಾಡಿದ ಸಮಾಜದ ಕಾರ್ಯದರ್ಶಿ ದೇವರಮನೆ ಶ್ರೀನಿವಾಸ್, ಉಗ್ರಪ್ಪ ಅವರು ಹೇಳಿದಂತೆ ಹೆಚ್ಚುವರಿ ಮೀಸಲಾತಿ ತಂದು ನಮ್ಮೊಂದಿಗೆ ಹಂಚಿಕೊಂಡು ಬಾಳ್ವೆ ನಡೆಸುವ ಸಲಹೆಗೆ ಹೊಸಪೇಟೆ ವಾಲ್ಮೀಕಿ ಸಮಾಜದ ವಿರೋಧ ಇದೆ. ಇದರಿಂದ ದೀರ್ಘಾವಧಿಯಲ್ಲಿ ಸಮುದಾಯಕ್ಕೆ ಬಹಳ ಅಪಾಯ ಇದೆ. ಹೀಗಾಗಿ ಎಸ್‌ಟಿ ಮೀಸಲಾತಿ ಪಟ್ಟಿಗೆ ಕುರುಬ ಸಮುದಾಯವನ್ನು ಸೇರಿಸಲೇಬಾರದು ಎಂಬುದೇ ನಮ್ಮ ನಿಲುವು ಎಂದರು.

ಮುಂದಿನ ದಿನಗಳಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಕಮಲಾಪುರಗಳಲ್ಲಿ ಎರಡು ವಿಚಾರ ಸಂಕಿರಣಗಳನ್ನು ಏರ್ಪಡಿಸಿ, ವಾಲ್ಮೀಕಿ ನಾಯಕ ಸಮಾಜದ ಸ್ಪಷ್ಟ ಅಭಿಪ್ರಾಯಗಳನ್ನು ರಾಜ್ಯಕ್ಕೆ ತಿಳಿಸಲಾಗುವುದು ಎಂಬ ನಿರ್ಣಯವನ್ನು ಕೊನೆಯಲ್ಲಿ ಕೈಗೊಳ್ಳಲಾಯಿತು.

ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ, ವಿವಿಧ  ಕೇರಿಗಳ ಯಜಮಾನರು ಇದ್ದರು.

ಹಗರಣ– ಯಾಕೆ ಪ್ರಶ್ನಿಸಲಿಲ್ಲ

‘ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಪೈಕಿ ₹91 ಕೋಟಿ ಆಂಧ್ರಕ್ಕೆ ಹೋಯಿತು, ಅಲ್ಲಿಂದ ಇನ್ನೆಲ್ಲಿಗೋ ಬಂತು. ನೀವು ಇದನ್ನು ಯಾಕೆ ಪ್ರಶ್ನಿಸಲಿಲ್ಲ? ಸಮುದಾಯದ ಸ್ವಾಮೀಜಿ ಸಹ ಯಾಕೆ ಪ್ರಶ್ನಿಸಲಿಲ್ಲ? ಅಮಾಯಕ ಚಂದ್ರಶೇಖರ ಎಂಬಾತ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ವಿಷಯ ಬಯಲಾಯಿತು. ತಕ್ಷಣ ನಾನು ಸಿಎಂಗೆ ಪತ್ರ ಬರೆದು ಕೂಲಂಕಷ ತನಿಖೆ ಆಗಲೇಬೇಕು ಎಂದಿದ್ದಕ್ಕೆ ತನಿಖೆ ಆಯಿತು. ನಿಗಮದ ದುಡ್ಡು ವಿದ್ಯಾರ್ಥಿವೇತನ, ಹಾಸ್ಟೆಲ್‌, ಕೊಳವೆವಾವಿ ಮೊದಲಾದ ಯೋಜನೆಗಳಿಗೆ ಇರುವಂತದ್ದು. ಅದರೆ ಸಮಾಜ ಈಗಲೂ ಆ ವಿಷಯದಲ್ಲಿ ಚಕಾರ ಎತ್ತುತ್ತಿಲ್ಲ. ಇದು ನಮ್ಮ ಸಮಾಜಕ್ಕೆ ನಾವೇ ಮಾಡುತ್ತಿರುವ ದ್ರೋಹ’ ಎಂದು ಉಗ್ರಪ್ಪ ಹೇಳಿದರು.