ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಬೀದರ್‌ನ ಚೌಬಾರದಲ್ಲಿರುವ ವಿದ್ಯಾರ್ಥಿ ಸುಚಿವ್ರತ್ ಅವರ ಮನೆಗೆ ಶುಕ್ರವಾರ ಭೇಟಿ ಕೊಟ್ಟು ಧೈರ್ಯ ತುಂಬಿದರು
ವಿಜಯಪುರ: ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿ ಧರಿಸಿದ್ದ ಪವಿತ್ರ ಜನಿವಾರ ತೆಗೆಸಿರುವ ಘಟನೆ ಸಮಸ್ತ ಬ್ರಾಹ್ಮಣ ಸಮುದಾಯದವರಲ್ಲಿ ನೋವುಂಟು ಮಾಡಿದೆ. ಈ ರೀತಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ತಪ್ಪಿತಸ್ಥರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಬ್ರಾಹ್ಮಣ ಸಮಾಜ ಒತ್ತಾಯಿಸಿದೆ.
ಧಾರ್ಮಿಕ ಆಚರಣೆಗಳನ್ನು ಮಾಡುವುದು ಧಾರ್ಮಿಕ ಹಕ್ಕು, ಪರೀಕ್ಷೆ ನೆಪದಲ್ಲಿ ಅನಾವಶ್ಯಕವಾಗಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಿ ಜನಿವಾರ ತೆಗೆಯಿಸಲು ಹೇಳಿರುವುದು ನೋವಿನ ಸಂಗತಿ, ಇದು ವಿದ್ಯಾರ್ಥಿಗಳ ಮನಸ್ಸಿಗೂ ಆಘಾತ ತಂದಿದೆ, ಹೀಗಾಗಿ ವಿದ್ಯಾರ್ಥಿ ಆಘಾತದಿಂದ ಪರೀಕ್ಷೆಯನ್ನು ಸರಿಯಾಗಿ ಬರೆದಿಲ್ಲ, ಅವರ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೂ ಸಹ ಧಕ್ಕೆಯಾಗಲಿದೆ ಎಂದು ಬ್ರಾಹ್ಮಣ ಸಮಾಜದ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಯಲ್ಲಿ ಲೋಹದ ಸರ ಧರಿಸಬಾರದು ಎಂಬ ಉಲ್ಲೇಖವಿದೆ. ಆದರೆ, ಜನಿವಾರ ಧರಿಸಬಾರದು ಎಂಬ ಯಾವ ಉಲ್ಲೇಖವೂ ಇಲ್ಲ. ಅಧಿಕಾರಿಗಳು ಕೇವಲ ಒಂದು ಸಮುದಾಯದ ಧಾರ್ಮಿಕ ಸಂಕೇತವನ್ನು ತೆಗೆದುಹಾಕಲು ಹೇಳಿ ಧರ್ಮಕ್ಕೂ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ಬ್ರಾಹ್ಮಣ ಸಮಾಜದ ಯುವ ಮುಖಂಡರಾದ
ಪ್ರಕಾಶ ಅಕ್ಕಲಕೋಟ, ವಿಜಯ ಜೋಶಿ, ಗೋವಿಂದ ಜೋಶಿ, ರಾಕೇಶ ಕುಲಕರ್ಣಿ, ವೆಂಕಟೇಶ ಜೋಶಿ, ವಿಕಾಸ ಪದಕಿ, ಸಂಜೀವ ದಿವಾಣ, ದತ್ತಾತ್ರಾಯ ಜೋಶಿ, ವೆಂಕಟೇಶ ಗುಡಿ, ಸಂತೋಷ ಕುಲಕರ್ಣಿ, ನಾಗರಾಜ್ ಜೋಶಿ ಗುರುರಾಜ್ ರಾವ್ ಪ್ರಶಾಂತ ರಾವ್ ವಲ್ಲಭ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.