
ಕೆ.ಎಸ್.ಈಶ್ವರಪ್ಪ
ವಿಜಯಪುರ: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ರಾಜ್ಯಪಾಲರು ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಧೇಯಕದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿ ಹೇರಲು ಹವಣಿಸುತ್ತಿದೆ ಎಂದು ಆರೋಪಿಸಿದರು.
ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ ಪರಿಣಾಮ ಅಂದು ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿತು. ಈಗ ಹಿಂದೂ ನಾಯಕರನ್ನು ಹತ್ತಿಕ್ಕಲು ತಂದಿರುವ ಕರಾಳ ಶಾಸನದಿಂದ ರಾಜ್ಯದಲ್ಲಿ ಕಾಂಗ್ರೆಸ್ ನೆಲ ಕಚ್ಚಲಿದೆ ಎಂದರು.
ಹಿಂದೂ ನಾಯಕರನ್ನು, ಹಿಂದೂ ಸಂಘಟನೆಗಳನ್ನು ಜೈಲಿಗೆ ಕಳಿಸುವ ವ್ಯವಸ್ಥಿತ ಕಾರಣಕ್ಕಾಗಿ ಈ ಮಸೂದೆ ರೂಪಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕತ್ವ ದುರ್ಬಲ: ಕಾಂಗ್ರೆಸ್ ನಾಯಕತ್ವ ದುರ್ಬಲಗೊಂಡು ದುಸ್ಥಿತಿಗೆ ತಲುಪಿದೆ. ಸಿ.ಎಂ. ಸ್ಥಾನ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ತೀರ್ಮಾನ ಅಂತಿಮ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಹಾಗಾದರೆ, ಎಐಸಿಸಿ ಅಧ್ಯಕ್ಷರು ಹೈಕಮಾಂಡ್ ಅಲ್ಲವೇ? ಗಾಂಧಿ ಕುಟುಂಬಕ್ಕೆ ಇಡೀ ಕಾಂಗ್ರೆಸ್ ಪಕ್ಷವನ್ನು ಒತ್ತೆಯಾಗಿರಿಸಿದ್ದೀರಾ? ಎಂದು ಪ್ರಶ್ನಿಸಿದರು.
ಒಕ್ಕಲಿಗ ಸಮಾಜದ ಶ್ರೀಗಳು ಡಿ.ಕೆ. ಶಿವಕುಮಾರ್ ಪರವಾಗಿ, ಹಾಲುಮತ ಸ್ವಾಮೀಜಿಗಳು ಸಿದ್ಧರಾಮಯ್ಯ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಅತ್ತ ಶಾಸಕರ ಗುಂಪುಗಾರಿಕೆ ಸಹ ವ್ಯಾಪಕವಾಗಿದೆ, ಇದರಿಂದ ಕಾರ್ಯಕರ್ತರಿಗೆ ಅನುಮಾನ ಇದ್ದರೆ, ಅಧಿಕಾರಿ ವರ್ಗ ಮಾತ್ರ ಆರಾಮಾಗಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.