ADVERTISEMENT

ವಿಜಯಪುರ | ಜೆಡಿಎಸ್‌ಗೆ ಬೆಳ್ಳಿಹಬ್ಬ; ಬಿಜೆಪಿಗೆ ತಳಮಳ

ಬಸವರಾಜ ಸಂಪಳ್ಳಿ
Published 1 ಮಾರ್ಚ್ 2026, 2:40 IST
Last Updated 1 ಮಾರ್ಚ್ 2026, 2:40 IST
ಗುರುಲಿಂಗಪ್ಪ ಅಂಗಡಿ
ಗುರುಲಿಂಗಪ್ಪ ಅಂಗಡಿ   

ವಿಜಯಪುರ: ಜೆಡಿಎಸ್‌ ಬೆಳ್ಳಿಹಬ್ಬದ ಅಂಗವಾಗಿ ವಿಜಯಪುರದಲ್ಲಿ ಆಯೋಜಿಸಿದ್ದ ಕಿತ್ತೂರು ಕರ್ನಾಟಕ ಭಾಗದ ಜನತಾ ಸಮಾವೇಶ ಮಿತ್ರ ಪಕ್ಷ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ಜೊತೆಗೆ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುವ ಸಂದೇಶ ರವಾನಿಸಿದೆ.

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮುಂಬರುವ 2028ರ ಚುನಾವಣೆಯಲ್ಲಿ ಇಂಡಿ, ನಾಗಠಾಣ, ಬಸವನ ಬಾಗೇವಾಡಿ, ದೇವರ ಹಿಪ್ಪರಗಿ ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆಗೆ ಈಗಲೇ ಅಣಿಯಾಗಿರುವಂತಿದೆ. ಇನ್ನುಳಿದ ಬಬಲೇಶ್ವರ, ಮುದ್ದೇಬಿಹಾಳ, ಸಿಂದಗಿ ಮತ್ತು ವಿಜಯಪುರವನ್ನು ಬಿಜೆಪಿಗೆ ಬಿಟ್ಟುಕೊಡುವ ಇರಾದೆ ವ್ಯಕ್ತಪಡಿಸಿದೆ.

ಹೌದು, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಜತನಾ ಸಮಾವೇಶದ ವೇದಿಕೆ ಮೇಲೆಯೇ ನಾಗಠಾಣದ ಮಾಜಿ ಶಾಸಕ ದೇವಾನಂದ ಚಹ್ವಾಣ, ದೇವರ ಹಿಪ್ಪರಗಿ ಹಾಲಿ ಶಾಸಕ ರಾಜುಗೌಡ ಪಾಟೀಲ, ಇಂಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಬಿ.ಡಿ.ಬಿರಾದಾರ ಹಾಗೂ ಬಸವನ ಬಾಗೇವಾಡಿ ಅಭ್ಯರ್ಥಿಯಾಗಿದ್ದ ಅಪ್ಪುಮನಗೂಳಿ ಅವರನ್ನು ಹೊಗಳಿ, ಹಾರೈಸಿ, ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಆಶೀರ್ವದಿಸಿದ್ದಾರೆ.

ADVERTISEMENT

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಂತೂ ನಾಲ್ಕೂ ಕ್ಷೇತ್ರಗಳ ಸೋತ, ಗೆದ್ದ ಅಭ್ಯರ್ಥಿಗಳನ್ನು ತಮ್ಮ ಅಕ್ಕಪಕ್ಕ ನಿಲ್ಲಿಸಿಕೊಂಡು, ಚುನಾವಣಾ ಪ್ರಚಾರವನ್ನೇ ನಡೆಸಿ, ಹೋಗಿದ್ದಾರೆ.

ಅಲ್ಲದೇ, ಈ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್‌ ಪ್ರಬಲವಾಗಿರುವುದು ಈ ಹಿಂದಿನ ಚುನಾವಣಾ ಫಲಿತಾಂಶಗಳಲ್ಲಿ ಸಾಬೀತಾಗಿರುವುದರಿಂದ ಜೆಡಿಎಸ್‌ ಮುಂದಿನ ದಿನಗಳಲ್ಲಿ ಪ್ರಬಲ ಹಕ್ಕು ಮಂಡಿಸುವುದು ಬಹುತೇಕ ನಿಶ್ಚಿತವಾಗಿದೆ. ಜೆಡಿಎಸ್‌ನ ಆರಂಭಿಕ ನಡೆಯು ನಾಗಠಾಣ, ಇಂಡಿ, ಬಸವನ ಬಾಗೇವಾಡಿ, ದೇವರ ಹಿಪ್ಪರಗಿ ಕ್ಷೇತ್ರಗಳ ಬಿಜೆಪಿಯ ಆಕ್ಷಾಂಕ್ಷಿಗಳಲ್ಲಿ ಈಗಲೇ ತಳಮಳ ಸೃಷ್ಟಿಸಿದೆ.

ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇರುವಾಗಲೇ ಜೆಡಿಎಸ್‌ನ ಈ ಆಕ್ರಮಣಕಾರಿ ನಡೆಯು ಭವಿಷ್ಯದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಗೆ ದಕ್ಕೆ ತರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಆದರೆ, ಬಿಜೆಪಿ ವರಿಷ್ಠರು ಈ ವಿಷಯದಲ್ಲಿ ಜೆಡಿಎಸ್‌ ಅನ್ನು ಕಟ್ಟಿಹಾಕಲು ಯಾವ ತಂತ್ರ ಅನುಸರಿಸಲಿದ್ದಾರೆ, ಜೆಡಿಎಸ್‌ ಕೇಳಿದ ನಾಲ್ಕೂ ಕ್ಷೇತ್ರಗಳ ಬದಲಿಗೆ ಎರಡು ಕ್ಷೇತ್ರಗಳನ್ನಷ್ಟೇ ಕೊಡುತ್ತಾರೋ ಅಥವಾ ಮೂರು ಕ್ಷೇತ್ರಗಳನ್ನು ಬಿಟ್ಟುಕೊಡುತ್ತಾರೋ ಇಲ್ಲವೇ, ಕ್ಷೇತ್ರ ಹಂಚಿಕೆ ವಿಷಯವಾಗಿಯೇ ಮೈತ್ರಿಗೆ ದಕ್ಕೆ ಬಂದೊದಗಲಿದೆಯೋ ಎಂಬುದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.

ಬಸವನಬಾಗೇವಾಡಿ, ಇಂಡಿ, ನಾಗಠಾಣದಲ್ಲಿ ಹಾಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಈ ಕ್ಷೇತ್ರಗಳಲ್ಲಿ ಮುಂಬರುವ ದಿನಗಳಲ್ಲಿ ಜೆಡಿಎಸ್‌ ಅಂದುಕೊಂಡಂತೆ ನಡೆದು, ಬಿಜೆಪಿಯೂ ಬೆಂಬಲವಾಗಿ ನಿಂತರೆ ಕಾಂಗ್ರೆಸ್‌ಗೆ ದೊಡ್ಡ ನಷ್ಠವಾಗುವ ಸಾಧ್ಯತೆಗಳು ಅಧಿಕವಾಗಿವೆ ಎಂಬ ವಿಶ್ಲೇಷಣೆಯೂ ನಡೆದಿದೆ.

ಅಲ್ಲದೇ, ಸಿಂದಗಿ, ವಿಜಯಪುರ, ಬಬಲೇಶ್ವರ ಮತ್ತು ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಜೆಡಿಎಸ್‌ ಬೆಂಬಲಿತ ಮತಗಳು ವರ್ಗಾವಣೆಯಾದರೆ ಅಲ್ಲಿಯೂ ಕಾಂಗ್ರೆಸ್‌ಗೆ ಅಘಾತ ಎದುರಾಗಬಹುದು ಎಂದು ಹೇಳಲಾಗುತ್ತಿದೆ. ಯಾವುದಕ್ಕೂ ಇನ್ನೂ ಎರಡೂವರೆ ವರ್ಷ ಕಾದುನೋಡಬೇಕಿದೆ.

ಜೆಡಿಎಸ್‌ ಪ್ರಸ್ತಾಪಿಸುತ್ತಿರುವ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲವಾಗಿದೆ. ಮಿತ್ರ ಪಕ್ಷವಾಗಿರುವುದರಿಂದ ಅವರಿಗೆ ಕೇಳುವ ಹಕ್ಕಿದೆ. ಆದರೆಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಜಿಲ್ಲೆ ಎಂಟೂ ಕ್ಷೇತ್ರಗಳು ಎನ್‌ಡಿಎ ಪಾಲಾಗುವುದು
ನಿಶ್ಚಿತ ಗುರುಲಿಂಗಪ್ಪ ಅಂಗಡಿ ಅಧ್ಯಕ್ಷ ಜಿಲ್ಲಾ ಘಟಕ ಬಿಜೆಪಿ ವಿಜಯಪುರ
ನಾಗಠಾಣ ದೇವರಹಿಪ್ಪರಗಿ ಬಸವನ ಬಾಗೇವಾಡಿ ಇಂಡಿ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಉತ್ತಮ ಅವಕಾಶವಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆಲುವಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು
ನಿಖಿಲ್‌ ಕುಮಾರಸ್ವಾಮಿ ಅಧ್ಯಕ್ಷ  ಜೆಡಿಎಸ್ ಯುವ ಘಟಕ 
ಬಿಜೆಪಿ ಜೆಡಿಎಸ್‌ ಎರಡೂ ನಮಗೆ ಸಮಾನ ಎದುರಾಳಿಗಳು. ಎರಡೂ ಪಕ್ಷಗಳು ಒಂದಾಗಿ ಸ್ಪರ್ಧಿಸಿದರೂ ಕಾಂಗ್ರೆಸ್‌ಗೆ ಯಾವುದೇ ಆತಂಕ ಇಲ್ಲ. ಬಿಜೆಪಿಯವರು ಜೆಡಿಎಸ್‌ಗೆ ಎರಡು ಕ್ಷೇತ್ರ ಬಿಟ್ಟುಕೊಡಬಹುದೇ ಹೊರತು ನಾಲ್ಕು ಕ್ಷೇತ್ರ ಕೊಡುವುದು ಅನುಮಾನ
ಮಲ್ಲಿಕಾರ್ಜುನ ಲೋಣಿ ಅಧ್ಯಕ್ಷ ಕಾಂಗ್ರೆಸ್‌ ಜಿಲ್ಲಾ ಘಟಕ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.