
ಸಿಂದಗಿ: ‘ಜ್ಞಾನಕ್ಕಿಂತ ಅಗಾಧವಾದ ಶಕ್ತಿ ಇನ್ನೊಂದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪುಸ್ತಕವನ್ನು ಪ್ರೀತಿಸಬೇಕು. ಸಾಧನೆಗೆ ಪುಸ್ತಕವೇ ಸಾಧನ’ ಎಂದು ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಸಲಹೆ ನೀಡಿದರು.
ಪಟ್ಟಣದ ಸಾರಂಗಮಠದ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಿಯು ಕಾಲೇಜಿನ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
26ನೆಯ ವರ್ಷದಲ್ಲಿ ಪಾದಾರ್ಪಣೆ ಮಾಡಿದ ವಿಜಯಪುರ ಚಾಣಿಕ್ಯ ಕರಿಯರ್ ಅಕಾಡೆಮಿ ಇದು ಸಿಂದಗಿ ಪಟ್ಟಣದಿಂದ ಚಾಲನೆಗೊಂಡಿದೆ ಎಂದು ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ. ಉಚಿತವಾಗಿ ತರಬೇತಿ ಪಡೆದುಕೊಂಡ 2 ಸಾವಿರ ಮಹಿಳೆಯರು, ಮಾಜಿ ಸೈನಿಕರು ಉದ್ಯೋಗವಂತರಾಗಿದ್ದಾರೆ. ಇದೇ ರೀತಿ ವಿಧವೆಯರಿಗೆ, ವಿಚ್ಚೇದಿತ ಮಹಿಳೆಯರಿಗೆ, ಅನಾಥ ಮಕ್ಕಳಿಗೆ ಉಚಿತ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.
ವಿಜಯಪುರ ಪೊಲೀಸ್ ಇಲಾಖೆಯ ಡಿವೈಎಸ್ಪಿ, ಸಿಂದಗಿ ಆರ್.ಡಿ.ಪಾಟೀಲ ಕಾಲೇಜು ಹಳೆಯ ವಿದ್ಯಾರ್ಥಿ ಟಿ.ಎಸ್.ಸುಲ್ಪಿ ಮಾತನಾಡಿ, ವಿದ್ಯಾರ್ಥಿಗಳು ಸಾಧಕರನ್ನು ಪ್ರೇರಣೆಯನ್ನಾಗಿಸಿಕೊಳ್ಳಬೇಕು. ಮನಸ್ಸು ಮಾಡಿದರೆ ಏನಾದರೂ ಸಾಧಿಸಬಹುದು. ಮೊಬೈಲ್ ಗೀಳು ಕೈಬಿಟ್ಟು ಸಜ್ಜನರ ಸಹವಾಸದಲ್ಲಿದ್ದುಕೊಂಡು ತಮ್ಮ ಗುರಿ ಸಾಧನೆಗೆ ಪರಿಶ್ರಮ ಪಡಬೇಕು ಎಂದರು.
ಸಾರಂಗಮಠದ ಉತ್ತರಾಧಿಕಾರಿ ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಕಾಲೇಜಿನ ಸಾಧಕ ವಿದ್ಯಾರ್ಥಿಗಳಾದ ಗಣೇಶ.ಎಸ್ (ರಾಜ್ಯಮಟ್ಟದ ಕುಸ್ತಿಪಟು), ರಜೀಯಾ ಬೇಗಂ (ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ), ಶ್ರೀನಿವಾಸ ನಂದಶೆಟ್ಟಿ (ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಆಟಗಾರ) ಮತ್ತು ಮಲಕಣ್ಣ ತಳವಾರ ( 2025ನೆಯ ಸಾಲಿನ ಪಿಯು ದ್ವಿತೀಯ ಕಲಾ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಮಟ್ಟಕ್ಕೆ 9ನೆಯ ರ‍್ಯಾಂಕ್) ಇವರನ್ನು ಪೂಜ್ಯರು ಗೌರವಿಸಿದರು.
ಪ್ರಾಚಾರ್ಯ ಬಿ.ಎಂ.ಸಿಂಗನಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಕಾರ್ಯಾಧ್ಯಕ್ಷ ಬಸವರಾಜ ಜಮಾದಾರ, ಪ್ರಧಾನಕಾರ್ಯದರ್ಶಿ ಸುಪ್ರಿತಾ ಮಾವೂರ ಭಾಗವಹಿಸಿದ್ದರು. ನಿಖಿತಾ ಪೂಜಾರಿ, ಸೃಷ್ಠಿ ರೋಡಗಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.