ADVERTISEMENT

PV Web Exclusive: ಹಗಲು, ರಾತ್ರಿ ಚಿರತೆ ಭಯದಲ್ಲಿ ಕಾಡಂಚಿನ ಜನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 16:10 IST
Last Updated 3 ಫೆಬ್ರುವರಿ 2026, 16:10 IST
<div class="paragraphs"><p><strong>ತಿಮ್ಮಯ್ಯನದೊಡ್ಡಿ-ಮೈಸೂರಮ್ಮನದೊಡ್ಡಿ ಗ್ರಾಮದ ರಸ್ತೆಗಳ ನೋಟ</strong></p></div>

ತಿಮ್ಮಯ್ಯನದೊಡ್ಡಿ-ಮೈಸೂರಮ್ಮನದೊಡ್ಡಿ ಗ್ರಾಮದ ರಸ್ತೆಗಳ ನೋಟ

   

ಆನೆಕಲ್: ಬಸ್‌ ಇಲ್ಲದೆ ಬಸವಳಿದಿದ್ದ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಯ್ಯನ ದೊಡ್ಡಿ ಮತ್ತು ಮೈಸೂರಮ್ಮನದೊಡ್ಡಿ ಕಾಡಂಚಿನ ಗ್ರಾಮಗಳಲ್ಲಿ ಇದೀಗ ಚಿರತೆಗಳ ಹಾವಳಿ ವಿಪರೀತವಾಗಿದೆ. 

ಕಳೆದ 15 ದಿನಗಳಿಂದ ಚಿರತೆ ಹಾವಳಿಯಿಂದ ಆತಂಕದಲ್ಲಿರುವ ಗ್ರಾಮಸ್ಥರು ಮುಸ್ಸಂಜೆಯಾಗುತ್ತಿದ್ದಂತೆಯೇ ಮನೆಗೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಚಿರತೆ ಹಾವಳಿ ಒಂದು ವಾರದಿಂದ ವಿಪರೀತವಾಗಿದೆ. ಮಂಗಳವಾರ ಬೆಳಗ್ಗೆ ತಿಮಯ್ಯನದೊಡ್ಡಿ ಗ್ರಾಮದ ಚಿನ್ನಯ್ಯ ಎಂಬುವರ ಹಸುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸಿದೆ. ಹಸುವಿನ ಗೋಮಾಳೆ ಕತ್ತು ಕಿವಿ ಭಾಗ ಕಿತ್ತು ಹೋಗಿವೆ. ಮೇಯಲು ಹೋದ ಹಸುಗಳು ಚಿರತೆ ದಾಳಿಯಿಂದ ಬದುಕಿ ಉಳಿದು ಮನೆಗೆ ಸೇರುವುದೇ ಕಷ್ಟವಾಗಿದೆ.

ತಿಮ್ಮಯ್ಯನ ದೊಡ್ಡಿಯಲ್ಲಿ ನಾಲ್ಕೈದು ದಿನಗಳಿಂದ ನಿರಂತರವಾಗಿ ಚಿರತೆ ದಾಳಿ ನಡೆಸುತ್ತಿದೆ. ಗ್ರಾಮಕ್ಕೆ ನುಗ್ಗಿ ಮೇಕೆ, ಕುರಿ, ಕೋಳಿ, ನಾಯಿಗಳನ್ನು ಹೊತ್ತು ಓಯ್ಯುತ್ತಿದೆ. ಚಿರತೆ ದಾಳಿ ತಪ್ಪಿಸಲು ಅರಣ್ಯ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂಬುದು ಸಾರ್ವಜನಿಕರ ಪ್ರಶ್ನೆ.

ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಯ್ಯನದೊಡ್ಡಿ 50 ಮನೆಗಳ ಚಿಕ್ಕ ಗ್ರಾಮ. ಈ 300ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಚಿರತೆಯ ಹಾವಳಿಯಿಂದಾಗಿ ಸಂಜೆ ಆದರೆ ತಿಮ್ಮಯ್ಯನ ದೊಡ್ಡಿ ರಸ್ತೆಗಳು ಬಿಕೋ ಎನ್ನುತ್ತಿವೆ.

ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಡುವ ಭರವಸೆ ನೀಡಿದ್ದರು. ಇದುವರೆಗೂ ಬೋನು ಇಟ್ಟಿಲ್ಲ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ತಿಮ್ಮಯ್ಯನ ದೊಡ್ಡಿಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಶಾಲೆ, ಕಾಲೇಜುಗಳಿಗೆ ಹೋಗುವಾಗ ಪ್ರತಿ ಹೆಜ್ಜೆಯನ್ನು ಚಿರತೆಯ ಭಯ, ಆತಂಕದಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿರತೆ ದಾಳಿಯಲ್ಲಿ ಗಾಯಗೊಂಡ ರಾಸುಗಳಿಗೆ ಯಾವುದೇ ಪರಿಹಾರ ದೊರೆಯುವುದಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕೇಳಿದಾಗ ರಾಸುಗಳು ಸತ್ತರೆ ಮಾತ್ರ ಪರಿಹಾರ ದೊರೆಯುತ್ತದೆ ಎಂದು ಹೇಳುತ್ತಾರೆ. ಇದರಿಂದಾಗಿ ಈ ಭಾಗದಲ್ಲಿ ರಾಸುಗಳನ್ನು ಸಾಕುವುದೇ ಸವಾಲಾಗಿದೆ. ಕಳೆದ ಬಾರಿ ₹50 ಸಾವಿರ ನೀಡಿ ಹಸು ಖರೀದಿಸಿದ್ದೆವು . ಚಿರತೆ ದಾಳಿಯಿಂದ ರಾಸು ಸಾವನ್ನಪ್ಪಿದಾಗ ನಮಗೆ ದೊರೆತ ಪರಿಹಾರ ಕೇವಲ ₹4-₹5 ಸಾವಿರ ಎನ್ನುತ್ತಾರೆ ತಿಮ್ಮಯ್ಯನ ದೊಡ್ಡಿಯ ರೈತ ಚಿನ್ನಯ್ಯ.    

ಕಾಡುಪ್ರಾಣಿಗಳ ದಾಳಿಯಿಂದಾಗಿ ಮೃತಪಟ್ಟ ಸಾಕು ಪ್ರಾಣಿಗಳಿಗೆ ನೀಡುವ ಪರಿಹಾರ ಹಣವನ್ನು ಸರ್ಕಾರ ಹೆಚ್ಚಿಸಬೇಕು. ಕಾಡಂಚಿನ ಗ್ರಾಮಗಳಲ್ಲಿ ಸೂಕ್ತ ಸುರಕ್ಷತೆ ಮತ್ತು ಕಾಡುಪ್ರಾಣಿಗಳು ನಾಡಿನತ್ತ ಬಾರದಂತೆ ಕ್ರಮವಹಿಸಬೇಕು ಎನ್ನುವುದು ಅವರ ಒತ್ತಾಸೆ.

ತಾಲೂಕಿನ ಹೆಂಗ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಸೂರ್ಯ ಸಿಟಿ ನಾಲ್ಕನೇ ಹಂತ ನಿರ್ಮಿಸಲಾಗುತ್ತಿದೆ. ಇದು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು ಬಗ್ಗನ್ದೊಡ್ಡಿ ಮತ್ತು ತಿಮ್ಮಯ್ಯನ ದೊಡ್ಡಿ ಗ್ರಾಮದಲ್ಲಿಯೂ ಸೂರ್ಯ ಸಿಟಿ ನಿವೇಶನ ಸಜ್ಜಾಗುತ್ತೇವೆ.

ಸೂರ್ಯಸಿಟಿ 4ನೇ ಹಂತ ಮುಕ್ತಾಯಗೊಂಡು ಹೆಚ್ಚಿನ ಮನೆಗಳು ಕಾಡಂಚಿನಲ್ಲಿವೆ. ಕಾಡು ಪ್ರಾಣಿಗಳು ಬಂದರೆ ಏನು ಮಾಡಬೇಕು ಎನ್ನುವ ಆತಂಕ ಅಲ್ಲಿಯ ನಿವಾಸಿಗಳನ್ನು ಕಾಡುತ್ತಿದೆ.  

ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು ಹೆಚ್ಚಿಸುವ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು ಹೆಚ್ಚಿಸಿದರೆ ಸೂರ್ಯಸಿಟಿಯ ನಾಲ್ಕನೇ ಹಂತಕ್ಕೂ ತೊಂದರೆಯಾಗುವ ಸಾಧ್ಯತೆ ಹೆಚ್ಚಿವೆ. 

ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಕಾಡಂಚಿನ ಗ್ರಾಮಗಳಿಗೆ ಬರಲು ಹಿಂಜರಿಯುತ್ತಾರೆ. ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕಾಡಂಚಿನ ಗ್ರಾಮಸ್ಥರ ಸಮಸ್ಯೆ ಅರಿವಿಲ್ಲ. ಅರಿವಿದ್ದರೂ ನಿರ್ಲಕ್ಷ್ಯವಹಿಸಿದ್ದಾರೆ. ಕಾರಣ ಏನು ಎಂದು ಕೇಳಿದರೆ ಸಿಬ್ಬಂದಿ ಕೊರತೆ ಎಂಬ ಸಿದ್ಧ ಸಮಜಾಯಿಷಿ, ಸಬೂಬು ನೀಡುತ್ತಾರೆ ಎನ್ನುವುದು ಸ್ಥಳೀಯರ ಆರೋಪ.

ತಿಮ್ಮಯ್ಯನದೊಡ್ಡಿ, ಮೈಸೂರಮ್ಮದೊಡ್ಡಿಯ ರೈತರು ಭಯದಿಂದ ಜೀವನ ನಡೆಸುತ್ತಿದ್ದೇವೆ. ಕಳೆದ ಒಂದು ವಾರದಿಂದ ಚಿರತೆಯ ಕಾಟ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ಗ್ರಾಮಗಳಿಗೆ ಬಸ್‌ ಸೌಲಭ್ಯ ನೀಡದಿದ್ದರೆ ಮುಂದಿನ ಚುನಾವಣೆಯನ್ನು ಬಹಿಷ್ಕರಿಸಲಾಗುವುದು. 
ರಮೇಶ್‌ ನಾಯಕ್, ಮೈಸೂರಮ್ಮದೊಡ್ಡಿಯ ನಿವಾಸಿ
ಅರಣ್ಯ ವ್ಯಾಪ್ತಿಯಲ್ಲಿ ಒಂದು ಮೊಲ ಸತ್ತರೆ ಇಡೀ ಅರಣ್ಯ ಇಲಾಖೆಯೇ ಇಲ್ಲಿರುತ್ತದೆ. ಆದರೆ ರೈತರ ರಾಸುಗಳಿಗೆ ಏನಾದರೂ ತೊಂದರೆಯಾದರೆ ಯಾರೂ ತಿರುಗಿ ನೋಡುವುದಿಲ್ಲ. ಕಾಡು ಪ್ರಾಣಿಗಳೊಂದಿಗೆ ಸಂಘರ್ಷ ತಡೆಯಲು ಅರಣ್ಯ ಇಲಾಖೆ, ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಆದ್ಯತೆ ನೀಡಬೇಕು.
ಮಂಜುನಾಥ ನಾಯಕ್‌, ಸ್ಥಳೀಯ ನಿವಾಸಿ
ನಾನು ಅಂಗವಿಕಲ. ನನ್ನ ಪತ್ನಿ ಕೂಲಿ ಮಾಡುತ್ತಾಳೆ. ಕಳೆದ ಮೂರು ದಿನಗಳ ಹಿಂದೆ ಒಂದು ರಾಸು ಸತ್ತು ಹೋಗಿದೆ. ಚಿರತೆಯ ದಾಳಿಯಿಂದಾಗಿ ಮತ್ತೊಂದು ರಾಸು ಉಳಿಯುವುದು ಅನುಮಾನ. ಇಂತಹ ಪರಿಸ್ಥಿತಿಯಲ್ಲಿ ನಾವು ಜೀವನ ನಡೆಸುವುದೇ ಕಷ್ಟವಾಗಿದೆ.
ಚಿನ್ನಯ್ಯ, ತಿಮ್ಮಯ್ಯನದೊಡ್ಡಿ ನಿವಾಸಿ
ಚಿರತೆಯ ಕಾಟದಿಂದಾಗಿ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ವಿದ್ಯಾರ್ಥಿಗಳು, ಕೆಲಸಗಳಿಗೆ ಹೋಗುವವರಿಗೆ ಹೆಚ್ಚು ತೊಂದರೆಯಾಗಿದೆ. ಇಷ್ಟೆಲ್ಲಾ ಘಟನೆಗಳಾದರೂ ಅರಣ್ಯ ಇಲಾಖೆಯ ಬೋನ್‌ ಇಡದಿರುವುದು ವಿಪರ್ಯಾಸ
ನಾರಾಯಣಸ್ವಾಮಿ, ಸ್ಥಳೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.