ADVERTISEMENT

PV Web Exclusive: ಬಿಡದಿ ಉಪನಗರವೂ... ರಾಜಧಾನಿ ವಿಸ್ತರಣೆಯೂ...

ಪ್ರತಿರೋಧದ ದನಿ ನಡುವೆಯೂ ಅಂತಿಮ ಅಧಿಸೂಚನೆಯತ್ತ ಬಿಡದಿಯ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ

ಓದೇಶ ಸಕಲೇಶಪುರ
Published 24 ಜನವರಿ 2026, 23:30 IST
Last Updated 24 ಜನವರಿ 2026, 23:30 IST
   

ಕರ್ನಾಟಕದ ರಾಜಧಾನಿಯಾದ ಬೆಂಗಳೂರು ವಿಶ್ವ ಭೂಪಟದಲ್ಲಿ ತನ್ನದೇ ಸ್ಥಾನ ಪಡೆದಿದೆ. ಉದ್ಯಾನ ನಗರಿ, ಐಟಿ–ಬಿಟಿ ಪಾರ್ಕ್, ನವೋದ್ಯಮ ಮತ್ತು ಶೈಕ್ಷಣಿಕ ಹಬ್ ಎಂಬೆಲ್ಲಾ ಬಿರುದುಗಳಿರುವ ರಾಜಧಾನಿ ನಾಲ್ಕೂ ದಿಕ್ಕುಗಳಲ್ಲಿ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಲೇ ಇದೆ. ಇದರಿಂದಾಗಿ ಒಂದು ಕಾಲದಲ್ಲಿ ದೂರವೆನಿಸಿದ್ದ ತಮಿಳುನಾಡು ಗಡಿಯ ಹೊಸೂರು, ಆಂಧ್ರಪ್ರದೇಶದ ಗಡಿ ಹಂಚಿಕೊಂಡಿರುವ ಕೋಲಾರ, ತುಮಕೂರು ಹಾಗೂ ಇತ್ತ ಮೈಸೂರು ಭಾಗದ ರಾಮನಗರ ಜಿಲ್ಲೆಗಳು ರಾಜಧಾನಿಗೆ ಮತ್ತಷ್ಟು ಹತ್ತಿರವಾಗುತ್ತಿವೆ.

ರಾಜಧಾನಿಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಉದ್ಯೋಗ ಅರಸಿ ದೇಶ–ವಿದೇಶಗಳಿಂದ ಬರುವವರ ಏರಿಕೆ, ಹೂಡಿಕೆಗೆ ತುದಿಗಾಲಲ್ಲಿ ನಿಲ್ಲುವ ಬಹುರಾಷ್ಟ್ರೀಯ ಕಂಪನಿಗಳು... ಹೀಗೆ ಎಲ್ಲಾ ಆಯಾಮಗಳಿಂದಲೂ ಹೆಚ್ಚುತ್ತಿರುವ ಒತ್ತಡದಿಂದಾಗಿ ಬೆಂಗಳೂರಿನಾಚೆಗೂ ಉಪನಗರಗಳನ್ನು ನಿರ್ಮಿಸಿ ಬದುಕಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಹೊಣೆಗಾರಿಕೆ ಸರ್ಕಾರಗಳ ಮೇಲಿದೆ. ಆ ನಿಟ್ಟಿನಲ್ಲಿ ಬೆಂಗಳೂರಿನಾಚೆ ಉಪನಗರಗಳನ್ನು ನಿರ್ಮಿಸಲು ಯೋಜನೆಗಳನ್ನು ಸರ್ಕಾರ ರೂಪಿಸುತ್ತಲೇ ಬಂದಿದೆ.

ರಾಜ್ಯದಲ್ಲಿ 2006ರಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು, ರಾಜಧಾನಿಗಳ ಸುತ್ತಲೂ ಐದು ಉಪನಗರಗಳನ್ನು ನಿರ್ಮಿಸುವ ದೂರದೃಷ್ಟಿಯೊಂದಿಗೆ ಉಪನಗರ ಯೋಜನೆಯನ್ನು ರೂಪಿಸಿದರು. ಆ ಪೈಕಿ ಇಂದಿನ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ರಾಮನಗರ ತಾಲ್ಲೂಕಿನ ಬಿಡದಿ, ಕನಕಪುರ ತಾಲ್ಲೂಕಿನ ಸಾತನೂರು, ಮಾಗಡಿ ತಾಲ್ಲೂಕಿನ ಸೋಲೂರು ಹಾಗೂ ಬೆಂಗಳೂರು ಉತ್ತರ (ಬೆಂಗಳೂರು ಗ್ರಾಮಾಂತರ) ಜಿಲ್ಲೆಯ ಹೊಸಕೋಟೆಯ ನಂದಗುಡಿ ಸೇರಿವೆ.

2007ರಲ್ಲಿ ಅಧಿಸೂಚನೆ

ತಾವು ಪ್ರತಿನಿಧಿಸುತ್ತಿದ್ದ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ 10 ಗ್ರಾಮಗಳನ್ನು ಒಳಗೊಂಡ 9,178.29 ಎಕರೆ ಪ್ರದೇಶದಲ್ಲಿ ಬಿಡದಿ ಉಪನಗರವನ್ನು ಮೊದಲಿಗೆ ಪ್ರಾಯೋಗಿಕವಾಗಿ, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು 2007ರಲ್ಲಿ ಅಧಿಸೂಚನೆ ಹೊರಡಿಸಿದ್ದರು. ವಿವಿಧ ಕಾರಣಗಳಿಗಾಗಿ ಈ ಯೋಜನೆ ನನೆಗುದಿಗೆ ಬಿದ್ದಿತು. 19 ವರ್ಷಗಳ ನಂತರ ಯೋಜನೆಗೆ ಇಂದಿನ ಕಾಂಗ್ರೆಸ್ ಸರ್ಕಾರ ಜೀವ ಕೊಟ್ಟಿದೆ. ಜಿಲ್ಲೆಯವರೇ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎರಡು ದಶಕದ ಹಿಂದಿನ ಯೋಜನೆಯ ಸಾಕಾರಕ್ಕೆ ಪಣ ತೊಟ್ಟಿದ್ದಾರೆ. ದೇಶದ ಮೊದಲ ಎ.ಐ ನಗರವನ್ನು ಇದೇ ಉಪನಗರದಲ್ಲಿ ನಿರ್ಮಿಸುವ ಘೋಷಣೆ ಮಾಡಿದ್ದಾರೆ. ಅದರ ಬೆನ್ನಲ್ಲೇ, ರಾಮನಗರ ಎಂಬ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿ, ಹೂಡಿಕೆದಾರರ ಗಮನ ಸೆಳೆಯಲು ಮುಂದಾಗಿದ್ದಾರೆ.

ಬಿಡದಿ ಹೋಬಳಿಯಲ್ಲಿ ನಿರ್ಮಾಣವಾಗಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನಾ ಪ್ರದೇಶದ ಪಕ್ಷಿ ನೋಟ ಬಿಡದಿ ಹೋಬಳಿಯಲ್ಲಿ ನಿರ್ಮಾಣವಾಗಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನಾ ಪ್ರದೇಶದ ಪಕ್ಷಿ ನೋಟ


ADVERTISEMENT


ಬಿಡದಿ ಉಪನಗರ ಯೋಜನೆಗೆ 2007ರಲ್ಲಿ ಅಧಿಸೂಚನೆ ಹೊರಡಿಸಿದ 10 ಗ್ರಾಮಗಳ 9,178 ಎಕರೆಯನ್ನು ಕೆಂಪು ವಲಯ ಎಂದು ಗುರುತಿಸಲಾಯಿತು. ಕೈಗಾರಿಕೆ, ವಾಣಿಜ್ಯ, ವಹಿವಾಟು ಸೇರಿದಂತೆ ಯಾವುದೇ ಅಭಿವೃದ್ಧಿ ಚಟುವಟಿಕೆಗಳನ್ನು ಅನುಮತಿ ಇಲ್ಲದೆ ಮಾಡುವಂತಿಲ್ಲ ಎಂದು ಆದೇಶಿಸಲಾಗಿತ್ತು. ಅಂದಿನಿಂದಲೂ ಈ ಭಾಗ ಯಥಾಸ್ಥಿತಿಯಲ್ಲಿತ್ತು. ಜನರು ಜಮೀನು ಮಾರಾಟ ಸೇರಿದಂತೆ ಬೇರಾವುದೇ ಚಟುವಟಿಕೆ ನಡೆಸಲಾಗದೆ ತೊಂದರೆ ಅನುಭವಿಸುತ್ತಲೇ ಬಂದಿದ್ದಾರೆ. ಇದೀಗ, ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಡಿಎ) ಮೂಲಕ ಯೋಜನೆ ಕಾರ್ಯಗತಕ್ಕೆ ಹೆಜ್ಜೆಗಳನ್ನು ಇಟ್ಟಿದೆ.

ಯೋಜನೆಗಾಗಿ ಗುರುತಿಸಿರುವ 8 ಗ್ರಾಮಗಳಲ್ಲಿ ಸರ್ಕಾರ ಕಳೆದ ಮಾರ್ಚ್‌ನಲ್ಲಿ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ, ಯೋಜನೆ ವಿರುದ್ಧ ದನಿಗಳು ಮೊಳಗಿವೆ. ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘ ಕಟ್ಟಿಕೊಂಡಿರುವ ರೈತರು, ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಭೈರಮಂಗಲದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಧರಣಿ ಸ್ಥಳಕ್ಕೆ ಜೆಡಿಎಸ್–ಬಿಜೆಪಿ ನಾಯಕರು ಭೇಟಿ ನೀಡಿ ಪ್ರಾತಿನಿಧಿಕ ಬೆಂಬಲ ಕೊಟ್ಟಿದ್ದಾರೆ. ಇಲ್ಲಿನ ಪ್ರತಿಭಟನೆ, ಪಾದಯಾತ್ರೆ, ರಸ್ತೆ ತಡೆ, ಅಹೋರಾತ್ರಿ ಧರಣಿಯು ರಾಜ್ಯಮಟ್ಟದಲ್ಲಿ ಸುದ್ದಿಯಾಗಿ ಗಮನ ಸೆಳೆದಿದೆ.

ಹೇಳಿಕೊಳ್ಳುವಂತಹ ಬೆಂಬಲವಿಲ್ಲ

ದೇವನಹಳ್ಳಿ ಹೋರಾಟಕ್ಕೆ ಹೋಲಿಸಿದರೆ, ಬಿಡದಿ ಉಪನಗರದ ವಿರುದ್ಧ ನಡೆಯುತ್ತಿರುವ ಹೋರಾಟದ ಕಾವು ಕಡಿಮೆಯೇ. ವಿರೋಧ ಪಕ್ಷಗಳ ಬೆಂಬಲದಲ್ಲಿ ಸ್ಥಳೀಯ ರಾಜಕಾರಣದ ಲಾಭವಲ್ಲದೆ, ನಿಜವಾಗಿಯೂ ಉಪನಗರದ ವಿರುದ್ದದ ದನಿಗೆ ಶಕ್ತಿ ತುಂಬಿ ಯೋಜನೆ ರದ್ದುಗೊಳಿಸುವಂತೆ ಮಾಡುವ ಇರಾದೆ ಇಲ್ಲದಿರುವುದು ಸ್ಪಷ್ಟ. ಮತ್ತೊಂದೆಡೆ ಯೋಜನೆಗೆ ಭೂಮಿ ಕಳೆದುಕೊಳ್ಳುವವರಲ್ಲಿ ಬಹುತೇಕರು ಒಪ್ಪಿಗೆ ನೀಡಿದ್ದು, ಕೆಲವರು ಮಾತ್ರ ವಿರೋಧಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೋರಾಟಗಾರರು ಈ ಮಾತನ್ನು ನಿರಾಕರಿಸಿದರೂ ಧರಣಿನಿರತರ ಸಂಖ್ಯೆ ಗಮನಿಸಿದರೆ ಅಲ್ಲಗಳೆಯಲಾಗದು. ದೇವನಹಳ್ಳಿ ಹೋರಾಟಕ್ಕೆ ಸಿಕ್ಕ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಬೆಂಬಲ ಬಿಡದಿ ಹೋರಾಟಗಾರರಿಗೆ ಸಿಕ್ಕಿಲ್ಲ.

ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಪ್ರಾಧಿಕಾರವು ಯೋಜನಾ ಪ್ರದೇಶದ ಜಮೀನು ಮಾಲೀಕರಿಗೆ ನೋಟಿಸ್ ನೀಡಿ, ಆಕ್ಷೇಪಣೆಗಳನ್ನು ಸ್ವೀಕರಿಸಿದೆ. ಕೆಲ ಗ್ರಾಮಗಳ ಜಮೀನುಗಳಲ್ಲಿ ಜಂಟಿ ಅಳತೆ ಪ್ರಮಾಣೀಕರಣವೂ (ಜೆಎಂಸಿ) ನಡೆದಿದೆ. ಇದರ ನಡುವೆಯೇ ಜಿಲ್ಲಾಧಿಕಾರಿ ಜಮೀನು ಮಾಲೀಕರ ಜೊತೆ ಸಭೆ ನಡೆಸಿ, ಪರಿಹಾರ ದರವನ್ನು ಸಹ ಪ್ರಕಟಿಸಿದ್ದಾರೆ. ಹೋರಾಟ ನಿರತರ ಪ್ರತಿರೋಧದ ನಡುವೆಯೇ ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ಸಹ ಜಮೀನು ಮಾಲೀಕರ ಅಹವಾಲು ಸ್ವೀಕರಿಸಿದ್ದಾರೆ. ಅಂತಿಮ ಅಧಿಸೂಚನೆಗೆ ಎಲ್ಲಾ ತಯಾರಿಗಳು ನಡೆಯುತ್ತಿದ್ದು, ಒಮ್ಮೆ ಅಧಿಸೂಚನೆ ಹೊರಬಂದರೆ ಪರಿಹಾರ ಪಾವತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಚಹರೆ ಬದಲಿಸುವ ಯೋಜನೆ

ಯೋಜನೆಯಿಂದ ಮುಂದೆ ಈ ಭಾಗದ ಚಹರೆಯೇ ಬದಲಾಗುವುದರಲ್ಲಿ ಎರಡು ಮಾತಿಲ್ಲ. ಎರಡು ಕೈಗಾರಿಕಾ ಪ್ರದೇಶಗಳ ನಡುವೆ ತಲೆ ಎತ್ತಲಿರುವ ಈ ಉಪನಗರ, ಒಂದು ಕಡೆ ಬಿಡದಿ ಹೋಬಳಿ ಕೇಂದ್ರ ಹಾಗೂ ಮತ್ತೊಂದು ಕಡೆ ಹಾರೋಹಳ್ಳಿ ತಾಲ್ಲೂಕು ಕೇಂದ್ರಕ್ಕೆ ಹೊಂದಿಕೊಂಡಂತೆ ನಿರ್ಮಾಣವಾಗಲಿದೆ. ಎರಡೂ ದಿಕ್ಕಿನಲ್ಲೂ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಬಿಡದಿ ರೈಲು ನಿಲ್ದಾಣವು ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರನ್ನು ಬೆಸೆಯುತ್ತದೆ. ಮತ್ತೊಂದು ಹೊರ ವರ್ತಲ ರಸ್ತೆ ಹಾಗೂ ಉಪನಗರ ರೈಲು ಯೋಜನೆ ಕೂಡ ಯೋಜನಾ ಪ್ರದೇಶವನ್ನು ಸಂಧಿಸುತ್ತದೆ. ಬೆಂಗಳೂರು–ಮೈಸೂರು ನಡುವಣ ಹೊಸ ರಾಷ್ಟ್ರೀಯ ಹೆದ್ದಾರಿಯು ಬೆಂಗಳೂರನ್ನು ಬಿಡದಿಗೆ ಮತ್ತಷ್ಟು ನಿಕಟವಾಗಿಸಿದೆ. ಸದ್ಯ ಚಲ್ಲಘಟ್ಟದವರೆಗೆ ಬಂದಿರುವ ಮೆಟ್ರೊ ರೈಲು ಸೇವೆಯನ್ನು ಮುಂದೆ ಬಿಡದಿಗೂ ವಿಸ್ತರಿಸುವ ಕುರಿತು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಇವೆಲ್ಲವನ್ನು ಗಮನಿಸಿದರೆ ಉಪನಗರ ಯೋಜನೆಯಿಂದ ಭವಿಷ್ಯದಲ್ಲಿ ಇಡೀ ಪ್ರದೇಶದ ಚಹರೆ ಬದಲಾಗಲಿದೆ.

ಅಭಿವೃದ್ಧಿಯ ಮಾತು ಒಂದು ಕಡೆಯಾದರೆ, ಫಲವತ್ತಾದ ಕೃಷಿ ಮತ್ತು ತೋಟಗಾರಿಕೆ ಪ್ರದೇಶದಲ್ಲಿನ ಅಭಿವೃದ್ಧಿ ಚಟುವಟಿಕೆಗಳು ರೈತರ ಬದುಕಿಗೆ ಮಾರಕವಲ್ಲವೆ? ಇದರಿಂದ ಕೃಷಿಗೆ ಪೆಟ್ಟು ಬೀಳುವುದಿಲ್ಲವೆ? ಸರ್ಕಾರದ ಪರಿಹಾರ ಜನರ ಬದುಕಿಗೆ ಎಷ್ಟು ದಿನ ಆಧಾರವಾಗಿರಬಲ್ಲದು? ಹಣ ಖರ್ಚಾದ ಬಳಿಕ ಜನ ಬೀದಿಗೆ ಬರುವುದಿಲ್ಲವೆ? ಬದುಕಿಗೆ ಏನು ಮಾಡುತ್ತಾರೆ? ಎಂಬೆಲ್ಲಾ ವಾದಗಳನ್ನು ಉಪನಗರ ಯೋಜನೆ ವಿರೋಧಿಸುವವರು ಮಂಡಿಸುತ್ತಿದ್ದಾರೆ. ಆದರೆ ರಸ್ತೆ, ಬಡಾವಣೆ, ಕೈಗಾರಿಕೆ, ಆಸ್ಪತ್ರೆ, ಶಾಲಾ–ಕಾಲೇಜು, ರೈಲು ಮಾರ್ಗ, ಉಪನಗರ ಸೇರಿದಂತೆ ಯಾವೂ ವಿರೋಧವಿಲ್ಲದೆ ಕಾರ್ಯಗತವಾಗುವುದಿಲ್ಲ. ಎಲ್ಲವೂ ಜನನಿಬಿಡ ಪ್ರದೇಶಗಳಲ್ಲಿ ಮತ್ತು ಫಲವತ್ತಾದ ಜಮೀನುಗಳಲ್ಲೇ ತಲೆ ಎತ್ತುವುದನ್ನು ಚರಿತ್ರೆ ಗಮನಿಸಿದರೆ ಗೊತ್ತಾಗುತ್ತದೆ. ಆದರೆ, ಯೋಜನಾ ಪ್ರದೇಶದಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ಮತ್ತು ಪುನರ್ವಸತಿ ವ್ಯವಸ್ಥೆ ಹೇಗಿದೆ ಎಂಬುದು ಅಲ್ಲಿನ ಜನರ ಮುಂದಿನ ಸ್ಥಿತಿಗತಿ ಹೇಗಿರಲಿದೆ ಎಂಬುದನ್ನು ನಿರ್ಧರಿಸುತ್ತದೆ.

ಹೀಗಿರಲಿದೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರದಲ್ಲಿ ತಲೆ ಎತ್ತಲಿರುವ ದೇಶದ ಮೊದಲ ಎ.ಐ ನಗರ (ಚಿತ್ರ ಕೃಪೆ: ಜಿಬಿಡಿಎ)


ದೇಶದ ಬೇರೆಲ್ಲಾ ಉಪನಗರ ಯೋಜನೆಗಳಿಗೆ ಹೋಲಿಸಿದರೆ ಬಿಡದಿ ಉಪನಗರ ಯೋಜನೆಯು ರೈತ ಸ್ನೇಹಿಯಾಗಿದೆ ಎಂಬುದು ಸರ್ಕಾರದ ವಾದ. ಭೂ ಸ್ವಾಧೀನ ಪಾರದರ್ಶಕತೆ, ಸೂಕ್ತ ಪರಿಹಾರ ಹಕ್ಕು, ಪುರ್ನವಸತಿ ಮತ್ತು ಪುರ್ನವ್ಯವಸ್ಥೆ ಹಕ್ಕು ನಿರ್ಮಾಣ ಕಾಯ್ದೆ– 2013ರ ಮಾನದಂಡಗಳ ಜೊತೆಗೆ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಪ್ರಸ್ತುತ ಇರುವ ಭೂ ವಹಿವಾಟು ಆಧರಿಸಿ ಜಮೀನಿಗೆ ಪರಿಹಾರ ದರ ನಿಗದಿಪಡಿಸಲಾಗಿದೆ. ಯೋಜನಾ ಪ್ರದೇಶದಲ್ಲಿ ವಸತಿ ಉದ್ದೇಶಕ್ಕೆ ಅಭಿವೃದ್ಧಿಪಡಿಸುವ ಭೂಮಿಯಲ್ಲಿ ಮಾಲೀಕರಿಗೆ 50:50 ಅನುಪಾತದಲ್ಲಿ ಮತ್ತು ವಾಣಿಜ್ಯ ಉದ್ದೇಶದ ಭೂಮಿಯಲ್ಲಿ 45:55 ಅನುಪಾತದಲ್ಲಿ ಪಾಲುದಾರಿಕೆ ಸಿಗಲಿದೆ. ಉಪನಗರದಲ್ಲಿ ತಲೆ ಎತ್ತಲಿರುವ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ, ಯೋಜನೆ ಅನುಷ್ಠಾನವಾಗುವವರೆಗೆ ಜೀವನ ಭತ್ಯೆ ಸೇರಿದಂತೆ ಹಲವು ಸೌಲಭ್ಯಗಳನ್ನು ಘೋಷಿಸಿದ್ದಾರೆ. ಯೋಜನಾ ಪ್ರದೇಶದಲ್ಲಿರುವ 450 ಎಕರೆಯಷ್ಟಿರುವ ವಿಶಾಲವಾಗಿರುವ ಕಲುಷಿತ ಭೈರಮಂಗಲ ಕೆರೆ ಶುದ್ಧೀಕರಣ, ಊರುಗಳನ್ನು ಒಕ್ಕಲೆಬ್ಬಿಸದೆ ಮತ್ತಷ್ಟು ಮೂಲಸೌಕರ್ಯ ಒದಗಿಸಿ ಅಭಿವೃದ್ಧಿಪಡಿಸುವುದು ಯೋಜನೆಯ ಭಾಗವಾಗಿದೆ. ಯೋಜನೆಯ ರೂಪುರೇಷೆಗಳು ಯಥಾರೀತಿ ಅನುಷ್ಠಾನವಾದರೆ ನಿಜಕ್ಕೂ ಇದೊಂದು ಉತ್ತಮ ಯೋಜನೆ. ಆದರೆ, ಅಂದುಕೊಂಡಂತೆ  ಅದು ಸಾಕಾರಾವಾಗುವುದೇ ಅಥವಾ ಭರವಸೆಗಳು ಕೇವಲ ಕಾಗದದ ಮೇಲೆ ಉಳಿಯುವುದೇ ಎಂಬುದನ್ನು ಕಾದು ನೋಡಬೇಕಿದೆ.

ಅಂಕಿಅಂಶ...
  • 7,481: ಯೋಜನೆಗೆ ಸ್ವಾಧೀನವಾಗಲಿರುವ ಭೂಮಿ

  • 10,450: ಒಟ್ಟು ಸರ್ವೆ ನಂಬರ್‌ಗಳು

  • 7,032: ಒಟ್ಟು ಖಾತೆದಾರರು

ಎಲ್ಲಿ, ಎಷ್ಟು ಭೂ ಸ್ವಾಧೀನ? (ಎಕರೆಗಳಲ್ಲಿ)
ಗ್ರಾಮಭೂಮಿಖಾತೆದಾರರು
ಅರಳಾಳುಸಂದ್ರ1,4941,250
ಬನ್ನಿಗಿರಿ714641
ಭೈರಮಂಗಲ1,1311,758
ಹೊಸೂರು2,5441,796
ಕೆಂಪಯ್ಯನಪಾಳ್ಯ359406
ಮಂಡಲಹಳ್ಳಿ7123
ಕೆ.ಜಿ. ಗೊಲ್ಲರಪಾಳ್ಯ314243
ವಡೇರಹಳ್ಳಿ6576
ಕಂಚುಗಾರನಹಳ್ಳಿ784839

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.