
ಬೆಂಗಳೂರು: ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿ ಎರಡೂವರೆ ತಿಂಗಳಾದರೂ, ಅರಣ್ಯ ಇಲಾಖೆಯ 23 ಮಂದಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಎಸಿಎಫ್) ಹುದ್ದೆಯನ್ನೇ ನೀಡಿಲ್ಲ. ಇದರಿಂದಾಗಿ ಅವರಿಗೆ ವೇತನವೂ ಪಾವತಿಯಾಗಿಲ್ಲ.
ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿರುವ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ನಿತ್ಯ ಸಹಿ ಹಾಕುವುದು ಬಿಟ್ಟರೆ, ಅವರಿಗೆ ಬೇರೇನೂ ಕೆಲಸ ಇಲ್ಲ. ಸರ್ಕಾರ ಹುದ್ದೆ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಅವರು ಕಚೇರಿಗೆ ಬಂದು ಹೋಗುತ್ತಲೇ ಇದ್ದಾರೆ.
ತರಬೇತಿ ಅವಧಿ ಮುಗಿಸಿ ಬಂದಿದ್ದ ಎಸಿಎಫ್‌ಗಳಿಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ನಿಷ್ಠೆ ಮತ್ತು ಪ್ರಾಮಾಣಿಕ ಕರ್ತವ್ಯ ನಿರ್ವಹಣೆಯ ಪ್ರತಿಜ್ಞಾವಿಧಿ ಬೋಧಿಸಿ ಬೇಗನೇ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಹುದ್ದೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘2022ರಲ್ಲಿ ಖಾಲಿ ಇದ್ದ ಹುದ್ದೆಗಳನ್ನು ಆಧರಿಸಿ ನೇಮಕ ಪ್ರಕ್ರಿಯೆ ನಡೆದಿತ್ತು. 24 ಮಂದಿ ಆಯ್ಕೆಯಾಗಿದ್ದು ಒಬ್ಬರನ್ನು ಹೊರತುಪಡಿಸಿ 23 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಎರಡು ವರ್ಷ ಕೊಯಮತ್ತೂರಿನಲ್ಲಿ ತರಬೇತಿ ಮುಗಿಸಿದ್ದೇವೆ. ಆ ನಂತರ ಒಂದು ವರ್ಷ ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಪ್ರೊಬೇಷನರಿ ಆಗಿ ಕಾರ್ಯನಿರ್ವಹಿಸಿದ್ದೇವೆ. 2025ರ ನವೆಂಬರ್ 18ಕ್ಕೆ ಪ್ರೊಬೇಷನರಿ ಅವಧಿ ಮುಗಿದಿದ್ದು ಅರಣ್ಯ ಭವನದಲ್ಲಿ ವರದಿ ಮಾಡಿಕೊಂಡಿದ್ದೇವೆ. ಆಗಿನಿಂದಲೂ ಹುದ್ದೆಗಾಗಿ ಕಾಯುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅರಣ್ಯ ಇಲಾಖೆಯಲ್ಲಿ ವನ್ಯಜೀವಿ, ಪ್ರಾದೇಶಿಕ, ತಾಂತ್ರಿಕ, ಸಾಮಾಜಿಕ ಅರಣ್ಯ, ಸಂಶೋಧನೆ ಹಾಗೂ ಕಾರ್ಯಯೋಜನೆ ವಿಭಾಗಗಳು, ಜಲಾನಯನ ಸಹಿತ ಇತರೆ ಇಲಾಖೆಗಳಲ್ಲೂ ಎಸಿಎಫ್ ಹುದ್ದೆಗಳಿದ್ದು, ಅಲ್ಲಿಗೆ ನಿಯೋಜಿಸಲಾಗುತ್ತದೆ. ಅದರಲ್ಲೂ ವನ್ಯಜೀವಿ ವಿಭಾಗಗಳಿಗೆ ಹೊಸದಾಗಿ ನೇಮಕಗೊಂಡ ಎಸಿಎಫ್‌ಗಳನ್ನು ಅವರ ಕಾರ್ಯದಕ್ಷತೆ ಆಧರಿಸಿ ನೇಮಕ ಮಾಡಲಾಗುತ್ತದೆ. ಅಲ್ಲದೇ ವನ್ಯಜೀವಿ ಹಾಗೂ ಮಾನವ ಸಂಘರ್ಷ ಇರುವ ಪ್ರಾದೇಶಿಕ ವಿಭಾಗಗಳಿಗೆ ಹೊಸ ಎಸಿಎಫ್‌ಗಳನ್ನು ನೇಮಕ ಮಾಡುವುದು ಹಿಂದಿನಿಂದಲೂ ನಡೆದಿದೆ.
‘ಆರೇಳು ವರ್ಷದ ನಂತರ ನೇರ ನೇಮಕಾತಿ ಮೂಲಕ ಎಸಿಎಫ್ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ತರಬೇತಿ, ಪ್ರೊಬೇಷನರಿ ಅವಧಿ ಮುಗಿದ ಕೆಲವೇ ದಿನಗಳಲ್ಲಿ ಹುದ್ದೆ ನೀಡಬೇಕು. ಈಗಂತೂ ರಾಜ್ಯದಲ್ಲಿ ವನ್ಯಜೀವಿ, ಮಾನವ ಸಂಘರ್ಷ ಹೆಚ್ಚಾಗಿದೆ. ಬೇಸಿಗೆ ಶುರುವಾಗುತ್ತಿರುವುದರಿಂದ ಕಾಡಿನಲ್ಲಿ ಬೆಂಕಿಯಂತಹ ಸವಾಲು ಎದುರಿಸಬೇಕಾಗುತ್ತದೆ. ಅಧಿಕಾರಿಗಳಿಗೆ ಹುದ್ದೆ ನೀಡಲು ವಿಳಂಬ ಮಾಡುವುದು ಸರಿಯಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ತರಬೇತಿ ಮುಗಿಸಿರುವ ಹೊಸ ಎಸಿಎಫ್‌ಗಳಿಗೆ ಹುದ್ದೆ ನೀಡುವುದಕ್ಕೆ ಸಂಬಂಧಿಸಿದ ಕಡತ ರವಾನೆಯಾಗಿದ್ದು, ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆಕುಮಾರ್ ಪುಷ್ಕರ್, ಪಿಸಿಸಿಎಫ್( ವನ್ಯಜೀವಿ)
‘ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಡಳಿತ ವಿಭಾಗದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಖಾಲಿ ಇರುವ ಹುದ್ದೆಯ ವಿವರವನ್ನು ಈಗಾಗಲೇ ಕಳುಹಿಸಲಾಗಿದೆ. ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆಯು ಅಧಿಕಾರಿಗಳನ್ನು ಹುದ್ದೆಗಳಿಗೆ ನಿಯೋಜನೆ ಮಾಡುತ್ತದೆ. ಸದ್ಯ ವನ್ಯಜೀವಿ ವಿಭಾಗಗಳಲ್ಲಿ ಎಸಿಎಫ್ ಹುದ್ದೆಗಳು ಹೆಚ್ಚಾಗಿ ಖಾಲಿ ಇಲ್ಲ. ಆದರೂ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿದ್ದಪಡಿಸಲಾಗುತ್ತಿದೆ. ಡಿಸಿಎಫ್ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಖಾಲಿ ಹುದ್ದೆ ನೋಡಿಕೊಂಡು ಅಂತಿಮಗೊಳಿಸಲಾಗುತ್ತದೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಮಂಜೂರಾದ ಎಸಿಎಫ್ ಹುದ್ದೆ: 231
2022 ಬ್ಯಾಚ್ ನೇಮಕ: 24
2023 ಬ್ಯಾಚ್‌ನವರು: 16
ನೇಮಕ ನಂತರವೂ ಖಾಲಿ ಹುದ್ದೆ: 31
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.