ತಡಿಯಂಡಮೊಳ್ ಹಾಗೂ ಅಬ್ಬಿ ಫಾಲ್ಸ್
-ಪ್ರಜಾವಾಣಿ ಚಿತ್ರಗಳು
ಮಡಿಕೇರಿ: ಹಸಿರಿತ್ತಲ್, ಹಸಿರತ್ತಲ್, ಹಸಿರ್‌ಗುಟ್ಟಿತು ಕವಿಯ ಆತ್ಮಂ... ಕುವೆಂಪು ಅವರ ಮಾತಿನಂತೆ ಈಗ ಕೊಡಗಿನ ಎಲ್ಲೆಲ್ಲೂ ಹಸಿರೇ ಹಸಿರು. ಮಳೆಗಾಲದಲ್ಲಿ ಸದಾ ಮಂಜನ್ನೇ ಹೊದ್ದು ಮಲಗಿದ್ದ ಬೆಟ್ಟ, ಗುಡ್ಡಗಳು ಈಗ ಮಂಜಿನ ಪರದೆಯಿಂದ ಬಿಡಿಸಿಕೊಂಡು ಹಸಿರನ್ನೇ ಹೊದ್ದು ನಿಂತಿವೆ. ಎಷ್ಟು ದೂರ ನೋಡಿದರೂ ಹಸಿರೇ ಹಸಿರು ಎನ್ನುವಷ್ಟರಮಟ್ಟಿಗೆ ಜಿಲ್ಲೆಯಲ್ಲಿನ ಗಿರಿ, ಶಿಖರಗಳು ಕಂಗೊಳಿಸುತ್ತಿವೆ.
ಮಳೆಗಾಲದಲ್ಲಿ ಕೊಡಗನ್ನು ನೋಡುವುದೇ ಒಂದು ವಿಧದ ಖುಷಿ. ಕೆಲವರಿಗೆ ಮಳೆ ಇರಿಸು ಮುರಿಸು. ಸುರಿಯುವ ಮಳೆಯಲ್ಲಿ ನೋಡುವುದಾದರೂ ಏನನ್ನು ಎಂದು ಮೂಗು ಮುರಿಯುವವರೇ ಹೆಚ್ಚು. ಅಂತವರಿಗೆ ಕೊಡಗನ್ನು ಕಣ್ತುಂಬಿಕೊಳ್ಳಲು ಈಗ ಸುಸಮಯ.
ಈಗ ಚಳಿಗಾಲ ಕಳೆದೆಲ್ಲ ಬಾರಿಗಿಂತಲೂ ಹೆಚ್ಚು ಕಠೋರವಾಗಿಯೇ ಇದೆ. ಮೈಕೊರೆಯುವ ಚಳಿ ವ್ಯಾಪಿಸಿದೆ. ಆದರೆ, ಈ ಚಳಿಯಲ್ಲಿ ಮಧ್ಯಾಹ್ನದ ಬಿಸಿಲಿಗೆ ಮೈಯೊಡ್ಡಿ ಕುಳಿತು ಕೊಳ್ಳುವಂತಹ ಸ್ವರ್ಗ ಸುಖ ಬೇರೆಲ್ಲೂ ಸಿಗದು. ಇಂತಹದ್ದೊಂದು ಅನೂಹ್ಯ ಹಾಗೂ ಅನುಪಮವಾದ ಖುಷಿಯನ್ನು ಅನುಭವಿಸಲು ಇದು ಸಕಾಲ.
ಬೇಸಿಗೆಯಲ್ಲಾದರೆ ಜಲಪಾತಗಳು ಬತ್ತುತ್ತಾ ಸಾಗಿ ನೀರು ಜಿನುಗುವುದನ್ನಷ್ಟೇ ಕಾಣಬಹುದು. ಆದರೆ, ಈಗ ಇದೇ ತಾನೇ ಮಳೆಗಾಲ ಮುಗಿದಿರುವುದರಿಂದ ಜಲಪಾತಗಳೆಲ್ಲವೂ ತುಂಬಿ ತುಳುಕುತ್ತಿವೆ. ಕೆರೆ, ತೊರೆ, ತೋಡುಗಳೆಲ್ಲವೂ ತುಂಬಿವೆ. ಎಲ್ಲೆಲ್ಲೂ ನೀರೇ ನೀರು, ಹಸಿರೇ ಹಸಿರು ಎನ್ನುವಂತಿದೆ ಕೊಡಗಿನ ಹವಾಗುಣ.
ಮಳೆಗಾಲದಲ್ಲಿ ಮೋಡಗಳು ಸದಾ ಕವಿದಿರುವುದರಿಂದ ಮಡಿಕೇರಿಯ ರಾಜಾಸೀಟ್‌ನಲ್ಲಿ ಸೂರ್ಯಾಸ್ತದ ಸೊಬಗನ್ನು ಸವಿಯಲು ಅವಕಾಶವೇ ಸಿಕ್ಕುವುದಿಲ್ಲ. ಈ ವರ್ಷವಂತೂ ಮಳೆದಿನಗಳು ಹೆಚ್ಚಿತ್ತು. ಮೋಡಕವಿದ ದಿನಗಳಂತೂ ಬಹುಪಾಲು ಮಳೆಗಾಲ ಎಲ್ಲ ದಿನಗಳಲ್ಲೂ ಇತ್ತು. ಹೀಗಾಗಿ, ಸೂರ್ಯಾಸ್ತದ ರಂಗು ಕಂಡಿರಲಿಲ್ಲ. ಈಗ ಆಕಾಶ ದಿನವಿಡೀ ಶುಭ್ರವಾಗಿರುವುದರಿಂದ ಸೂರ್ಯಾಸ್ತದ ರಸಮಯ ಕ್ಷಣಗಳನ್ನು, ಪಡುವಣದ ದಿಗಂತದಲ್ಲಿ ಮೂಡುವ ಕೆಂಬಣ್ಣವನ್ನು ಸವಿಯುವ ಅವಕಾಶ ಈಗ ಇದೆ.
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಸೂರ್ಯನು ಪಡುವಣದತ್ತ ಪವಡಿಸಿದ ಕ್ಷಣದಲ್ಲಿ ಹೊಂಬಣ್ಣವು ಗಗನದಲ್ಲಿ ಚೆಲ್ಲಿದ ಕ್ಷಣ
ಮಡಿಕೇರಿಯ ಸಮೀಪವೆ ಇರುವ ಅಬ್ಬಿಫಾಲ್ಸ್‌ನಲ್ಲಿ ಈಗ ಮಳೆಗಾಲ ಭೋರ್ಗರೆತದ ನೀರಿನ ಪ್ರವಾಹವಿಲ್ಲ. ಮಂದಗಾಮಿನಿಯಾಗಿ ನೀರಿನ ತೊರೆಯು ಶಾಂತಚಿತ್ತದಿ ಕಪ್ಪುಬಣ್ಣದ ಬಂಡೆಗಳ ಮೇಲಿಂದ ಧುಮ್ಮಿಕ್ಕುತ್ತಿದೆ. ಮಳೆಗಾಲದಲ್ಲಿ ಕೆಸರು ಮಿಶ್ರಿತ ನೀರಿನಿಂದ ಭೋರ್ಗರೆಯುವ ಅಂದಕ್ಕಿಂತ ಈಗ ನೀರಿನ ಬಣ್ಣದಲ್ಲೇ ಸುರಿಯುವ ಜಲಪಾತ ವಿಶಿಷ್ಟ ಅನುಭವವನ್ನು ತಂದುಕೊಡುತ್ತದೆ. ಎಷ್ಟು ಹೊತ್ತು ನಿಂತರೂ ನೋಡಲೇಬೇಕು ಎನ್ನುವ ಭಾವವನ್ನು ಈಗ ಈ ಜಲಕನ್ಯೆ ಮೂಡಿಸುತ್ತಿದೆ.
ಇದೇ ಬಗೆಯಲ್ಲಿ ಜಿಲ್ಲೆಯ ಇರ್ಪು, ಅಭ್ಯಾಲ ಸೇರಿದಂತೆ ಎಲ್ಲ ಜಲಪಾತಗಳೂ ತಮ್ಮ ಸೌಂದರ್ಯವನ್ನು ಹೊರಸೂಸುತ್ತಿವೆ. ಪ್ರವಾಸಿಗರನ್ನು ಬರಸೆಳೆಯುತ್ತಿವೆ.
ಮಳೆಗಾಲ ಮುಗಿದ ನಂತರ ಅಬ್ಬಿ ಫಾಲ್ಸ್‌ನಲ್ಲಿ ಶಾಂತಚಿತ್ತದಿಂದ ಜಲಧಾರೆ ಧುಮ್ಮಿಕ್ಕುತ್ತಿರುವ ಸೊಬಗು ಈಚೆಗೆ ಕಂಡು ಬಂತು
ದುಬಾರೆ, ಬರಪೊಳೆಯಲ್ಲಿ ರ‍್ಯಾಫ್ಟಿಂಗ್‌ನಂತಹ ಸಾಹಸಮಯ ಜಲಕ್ರೀಡೆಗಳು ಸಹ ಈಗ ಸಾಹಸಪ್ರಿಯರ ಆಕರ್ಷಣೆಯ ಕೇಂದ್ರ ಬಿಂದುಗಳೆನಿಸಿವೆ. ರಭಸದಲ್ಲಿ ಹರಿಯುವ ನೀರಿನಲ್ಲಿ ರ‍್ಯಾಫ್ಟಿಂಗ್ ಮಾಡುವುದು ಒಂದು ಬಗೆಯ ರೋಮಾಂಚನದ ಅನುಭವವನ್ನು ನೀಡುತ್ತದೆ. ಇಂತಹದ್ದೊಂದು ಅನುಭವ ಬೇರೆ ಕಡೆ ಸಿಗುವುದು ಅಪರೂಪ. ಮಳೆಗಾಲದಲ್ಲಿ ಮಳೆ ಹೆಚ್ಚಿದ್ದಾಗ, ನದಿ, ತೊರೆಗಳು ಅಪಾಯದ ಅಂಚನ್ನು ಮೀರಿ ಹರಿಯುವಾಗ ಈ ಜಲಸಾಹಸ ಕ್ರೀಡೆಯನ್ನು ನಿಷೇಧಿಸಲಾಗುತ್ತದೆ. ಆದರೆ, ಈಗ ಅದರ ತೊಡಕು ಇಲ್ಲವೇ ಇಲ್ಲ. ಬಿರು ಬಿಸಿಲಿನ ಮಧ್ಯೆ, ಹರಿಯುವ ನದಿ ನೀರಿನ ಮಧ್ಯೆ, ಹೋಗುವುದರ ಅನುಭವವನ್ನು ಅನುಭವಿಸಿಯೇ ಸವಿಯಬೇಕು.
ಇನ್ನು ಚಾರಣಕ್ಕೂ ಇದೇ ಹೇಳಿ ಮಾಡಿಸಿದ ಸಮಯ. ಮಳೆಗಾಲದಲ್ಲಿ ಮುತ್ತುವ ಜಿಗಣೆಗಳು ಈಗ ಕಡಿಮೆ. ಮಳೆಗಾಲದಲ್ಲಿ ಜಾರುವ ಮಣ್ಣು, ಕುಸಿಯುವ ಭೀತಿಯೂ ಇಲ್ಲ. ಬೇಸಿಗೆಯಲ್ಲಾದರೆ ಬಿರು ಬಿಸಿಲ ಝಳ. ಆದರೆ, ಈಗ ಬಿಸಿಲಿದ್ದರೂ ಬೀಸುವ ಕುಳಿರ್ಗಾಳಿಗೆ ಮೈಯೊಡ್ಡಿ ಬೆಟ್ಟ ಹತ್ತುವುದೇ ಒಂದು ವಿಭಿನ್ನ ಅನುಭವ. ಇಲ್ಲಿನ ತಡಿಯಂಡಮೊಳ್, ನಿಶಾನೆ ಮೊಟ್ಟೆ, ಪುಷ್ಪಗಿರಿಯ ಬೀದಳ್ಳಿ ಸೇರಿದಂತೆ ಹಲವೆಡೆ ನಿಗದಿತ ದರ ಪಾವತಿಸಿ, ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿಕೊಂಡು ಬೆಟ್ಟ ಹತ್ತಬಹುದು.
ಸದ್ಯ, ಸೋಮವಾರಪೇಟೆ ತಾಲ್ಲೂಕಿನ ಬೀದಹಳ್ಳಿ– ಕುಮಾರಪರ್ವತ, ಬೀದಹಳ್ಳಿ–ಕುಮಾರಪರ್ವತ–ಸುಬ್ರಹ್ಮಣ ಚಾರಣ, ಸುಬ್ರಹ್ಮಣ್ಯ–ಶೇಷಪರ್ವತ, ತಡಿಯಂಡಮೋಳ್ ಚಾರಣ ಹಾಗೂ ತಲಕಾವೇರಿ– ನಿಶಾನಿಮೊಟ್ಟೆ ಚಾರಣಗಳು ಲಭ್ಯವಿದೆ. ಇವುಗಳಿಗೆ ಚಾರಣ ಹೊರಡಬೇಕೆಂದರೆ ಮುಂಚಿತವಾಗಿಯೇ https://aranyavihaara.karnataka.gov.in/ ವೆಬ್‌ತಾಣದಲ್ಲಿ ಬುಕ್ ಮಾಡಿಕೊಂಡು ಬೇಕು.
ಕಾಫಿ ಕೊಯ್ಲು ಹೇಗೆ ಮಾಡುತ್ತಾರೆ ಎಂಬುದನ್ನು ನೋಡಬೇಕಾದರೆ ಈಗಲೇ ಕೊಡಗಿಗೆ ಬರುವುದು ಸೂಕ್ತ. ಡಿಸೆಂಬರ್ ತಿಂಗಳಿನಲ್ಲಿ ಕಾಫಿ ಕೊಯ್ಲು ಎಲ್ಲೆಡೆ ಭರದಿಂದ ನಡೆಯುತ್ತಿರುತ್ತದೆ. ಒಣಗಿಸಲು ರಾಶಿ ರಾಶಿ ಕಾಫಿ ಹಣ್ಣನ್ನು ಹರಡಿಕೊಂಡಿರಲಾಗುತ್ತದೆ. ಮಾತ್ರವಲ್ಲ, ಅದರ ಪಲ್ಪಿಂಗ್ ಸೇರಿದಂತೆ ಇನ್ನಿತರ ಸಂಸ್ಕರಣಾ ವಿಧಾನಗಳನ್ನೂ ಈ ಅವಧಿಯಲ್ಲೇ ನೋಡಲು ಅವಕಾಶ ಸಿಗುತ್ತದೆ. ಹಾಗಾಗಿ, ಕಾಫಿ ಪ್ರಿಯರು ಈಗ ಕೊಡಗಿನ ಕಾಫಿ ತೋಟಗಳಿಗೆ ಭೇಟಿ ನೀಡಿದರೆ, ಅವರ ಕುತೂಹಲ ತಣಿಯುತ್ತದೆ.
ಪ್ರಸಕ್ತ ಸಮಯ ಹವಾಮಾನ ನಿಜಕ್ಕೂ ಚೆನ್ನಾಗಿದೆ. ಪರಿಸರವನ್ನು ಸುಸ್ಥಿತಿಯಲ್ಲಿಡುವ ಉದ್ದೇಶ ಇಟ್ಟುಕೊಂಡು ಪ್ರವಾಸಿಗರು ಬರಬೇಕು. ಮದ್ಯಸೇವನೆ, ಮೋಜು, ಮಸ್ತಿಗಾಗಿ ಪ್ರವಾಸ ಬೇಡ. ಜವಾಬ್ದಾರಿಯುತವಾದ ಪ್ರವಾಸ ಇರಬೇಕು. ತಮ್ಮ ಪ್ರವಾಸದ ಕಾಲದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಪರಿಸರದ ಉಳಿವಿಗೆ ನಾನೂ ಸಹ ಕೈಜೋಡಿಸುವೆ ಎಂಬ ಮನೋಭಾವದಲ್ಲೇ ಬಂದು ಪ್ರವಾಸಿ ಸ್ಥಳವನ್ನು ವೀಕ್ಷಿಸಿ ಸುಂದರ ನೆನಪುಗಳೊಂದಿಗೆ ವಾಪಸ್ ತೆರಳುವುದು ಉತ್ತಮ.ಗೀತಾ ಗಿರೀಶ್, ಆರ್ಥಿಕ ಸಲಹೆಗಾರರು ಮತ್ತು ಯೋಗ ತರಬೇತುದಾರರು.
ಕ್ರಿಸ್‌ಮಸ್ ಹಾಗೂ ವರ್ಷಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಾಗಿ ಬರುವ ನಿರೀಕ್ಷೆ ಇದೆ. ಈಗಾಗಲೇ ಬುಕಿಂಗ್‌ಗಳು ಆರಂಭವಾಗಿವೆ. ಶೇ 70ರಷ್ಟು ಬುಕಿಂಗ್ ಮುಗಿದಿದೆ. ಕೊಡಗಿನ ಹವಾಗುಣ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ.ಈ ವರ್ಷವೂ ಹೆಚ್ಚಿನ ಪ್ರವಾಸಿಗರು ಬರುವ ನಿರೀಕ್ಷೆ ಇದೆ.ನಾಗೇಂದ್ರಪ್ರಸಾದ್, ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್‌ನ ಮುಖ್ಯ ಸಲಹೆಗಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.