
ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮೊದಲ ಎರಡು ಹಂತಗಳಲ್ಲಿ 177 ಗ್ರಾಮಗಳು ಮುಳುಗಡೆಯಾಗಿವೆ. ಮೂರನೇ ಹಂತದಲ್ಲಿ 20 ಗ್ರಾಮಗಳು ಮುಳುಗಡೆಯಾಗಲಿವೆ. ಮುಳುಗಡೆ ಸಂತ್ರಸ್ತರಾಗಿ ನಿರ್ಮಿಸಿದ ಪುನರ್‌ವಸತಿ ಕೇಂದ್ರಗಳು ಸೌಲಭ್ಯಗಳ ಕೊರತೆ ಎದುರಿಸುತ್ತಿವೆ. ನೀರಾವರಿಗಾಗಿ ಗ್ರಾಮವನ್ನೇ ತೊರೆದ ಜನರು ಈಗ ಸಂಕಷ್ಟ ಅನುಭವಿಸುತ್ತಿದ್ದಾರೆ.
ಮುಳುಗಡೆ ಗ್ರಾಮಗಳ ಜನರಿಗೆ ಪುನರ್ ವಸತಿಗೆ ಜಾಗ ನೀಡಲಾಗಿದೆ. ಆದರೆ, ಜನರು ಪೂರ್ತಿಯಾಗಿ ಇನ್ನು ಸ್ಥಳಾಂತರವಾಗಿಲ್ಲ. ಆದ್ದರಿಂದ ಖಾಲಿ ನಿವೇಶನಗಳಲ್ಲಿ ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ಕೆಲವು ಕಡೆಗಳಲ್ಲಿ ಸರ್ಕಾರಿ ಅಧಿಕಾರಿಗಳಿಗೆ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಅವರು ಅಲ್ಲಿ ವಾಸಿಸದ್ದರಿಂದ ಪಾಳು ಬಿದ್ದಿವೆ.
ಕೆಲವು ಪುನರ್‌ವಸತಿ ಗ್ರಾಮಗಳನ್ನು ಜಮೀನುಗಳಿಂದ ಬಹಳ ದೂರದಲ್ಲಿ ನಿರ್ಮಿಸಲಾಗಿದೆ. ಹೊಲಕ್ಕೆ ಹೋಗಿ–ಬರಲು ತೊಂದರೆಯಾಗುವುದರಿಂದ ಜನರು ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹಲವು ಗ್ರಾಮಗಳಿ ಸರಿಯಾದ ಬಸ್ ಸಂಚಾರ ಸೌಕರ್ಯ ಕಲ್ಪಿಸಿಲ್ಲ.
20 ವರ್ಷಗಳ ಹಿಂದೆ ಪುನರ್ ವಸತಿ ಕಲ್ಪಿಸಿದಾಗ ರಸ್ತೆಗಳನ್ನು ನಿರ್ಮಿಸಿದ್ದು, ನಂತರ ದಿನಗಳಲ್ಲಿ ಅವುಗಳ ದುರಸ್ತಿಯನ್ನೂ ಕೈಗೆತ್ತಿಕೊಂಡಿಲ್ಲ. ಹಾಗಾಗಿ, ಅವುಗಳು ಹಾಳಾಗಿದ್ದು, ಕಂಕರ್ ಎದ್ದಿವೆ. ಗಟಾರುಗಳೂ ಕುಸಿದು ಹೋಗಿವೆ. ವಿದ್ಯುತ್ ದೀಪಗಳು ಆರಿ ಹಲವು ವರ್ಷಗಳೇ ಕಳೆದಿವೆ.
ಬಾಗಲಕೋಟೆ ಜಿಲ್ಲೆ ಸ್ಥಾಪನೆಗೂ ಕೆಲವೇ ವರ್ಷಗಳ ಮೊದಲು ಸ್ಥಳಾಂತರ ಕಾರ್ಯ ಆರಂಭಗೊಂಡಿದೆ. ಆಲಮಟ್ಟಿ ಜಲಾಶಯದಲ್ಲಿ 136 ಗ್ರಾಮಗಳು ಮುಳುಗಡೆಯಾಗಿದ್ದರೆ, 58,432 ಕುಟುಂಬಗಳ 2,92,160 ಜನರು ಸಂತ್ರಸ್ತರಾಗಿದ್ದಾರೆ. ಅದೇ ರೀತಿ ನಾರಾಯಣಪುರ ಜಲಾಶಯದಲ್ಲಿ 40 ಗ್ರಾಮಗಳು ಮುಳುಗಡೆಯಾಗಿದ್ದು, 11,744 ಕುಟುಂಬಗಳ 58,720 ಜನರು ಸಂತ್ರಸ್ತರಾಗಿದ್ದಾರೆ.
136 ಗ್ರಾಮಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ. ಕೃಷ್ಣ ಜಲಭಾಗ್ಯ ನಿಗಮದಿಂದ ಮೂಲ ಸೌಲಭ್ಯಗಳನ್ನು ಒದಗಿಸುವ ಕೆಲಸ ಬಾಕಿ ಇದೆ. ಕೃಷ್ಣಾ ಮೆಲ್ಡಂಡೆ ಯೋಜನೆಯ 1 ಮತ್ತು 2ನೇ ಹಂತಗಳಿಂದ 6.22 ಲಕ್ಷ ಹೆಕ್ಟೇರ್ ನೀರಾವರಿಗೆ ಒಳಪಡಿಸಲಾಗಿದೆ.
ಮುಳುಗಡೆಯಾದ 177 ಗ್ರಾಮಗಳಲ್ಲಿ ಬಾಗಲಕೋಟೆಯ 39, ಬೀಳಗಿಯ 33, ಜಮಖಂಡಿಯ 22, ಆಲಮಟ್ಟಿ ವ್ಯಾಪ್ತಿಯ 43, ನಾರಾಯಣಪುರ ವ್ಯಾಪ್ತಿಯ (ಹುನಗುಂದ ತಾಲ್ಲೂಕು ಸೇರಿದಂತೆ) 29 ಹಳ್ಳಿಗಳು ನೀರಿನಲ್ಲಿವೆ. 1,76,783 ಎಕರೆ ಜಮೀನು ಮುಳುಗಡೆಯಾಗಿದೆ. 78,854 ಕಟ್ಟಡಗಳು ನೀರಿನಲ್ಲಿ ಮುಳುಗಡೆಯಾಗಿವೆ. ಜಿಲ್ಲಾ ಕೇಂದ್ರವಾದ ಬಾಗಲಕೋಟೆ ನಗರದ ಒಂದು ಭಾಗ ಸೇರಿದಂತೆ ಹೆಚ್ಚಿನ ಹಳ್ಳಿಗಳು ಜಿಲ್ಲೆಯಲ್ಲಿ ಬರುತ್ತವೆ. ಅತಿ ಹೆಚ್ಚು ಸಂತ್ರಸ್ತರು ಇದೇ ಜಲ್ಲೆಯವರಾಗಿದ್ದಾರೆ.
ಮೊದಲ ಎರಡು ಹಂತಗಳಿಗಾಗಿ ಪುನರ್ ವಸತಿ ಕೇಂದ್ರಗಳ ನಿರ್ಮಾಣಕ್ಕಾಗಿ 15,092 ಎಕರೆ ವಶಪಡಿಸಿಕೊಳ್ಳಲಾಗಿದೆ. 77,328 ಎಕರೆ ಕಾಲುವೆ ನಿರ್ಮಾಣಕ್ಕಾಗಿ, 4,595 ಎಕರೆ ಅಚ್ಚುಕಟ್ಟು ಹಾಗೂ ಮುಖ್ಯ ರಸ್ತೆ ನಿರ್ಮಾಣಕ್ಕಾಗಿ ವಶಪಡಿಸಿಕೊಳ್ಳಲಾಗಿದೆ.
ಮೂರನೇ ಹಂತದ ಯೋಜನೆ ಜಾರಿ ಮಾಡಿದರೆ 26 ಗ್ರಾಮಗಳು ಹಾಗೂ 75,563 ಎಕರೆ ಭೂಂಇ ಮುಳುಗಡೆಯಾಗಲಿದೆ. 20 ಗ್ರಾಮಗಳ ಪುನರ್ ವಸತಿಗಾಗಿ 6,467 ಎಕರೆ, ಕಾಲುವೆ ಜಾಲ ನಿರ್ಮಾಣಕ್ಕಾಗಿ 51,837 ಎಕರೆ ಬೇಕಾಗಿದೆ. ಅರಲ್ಲಿ ಈಗಾಗಲೇ 25,642 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆ ಸಂತ್ರಸ್ತರಿಗಾಗಿ ನಿರ್ಮಿಸಿರುವ ಬಾಗಲಕೋಟೆಯ ‘ನವನಗರ’ ಮಾದರಿಯಾಗಿದೆ.
ಚಂಡೀಗಢ ಮಾದರಿಯಲ್ಲಿ ನವನಗರ ನಿರ್ಮಾಣ ಆರಂಭಿಸಲಾಗಿತ್ತು. ನಂತರ ಅಂತರರಾಷ್ಟ್ರೀಯ ವಾಸ್ತುಶಿಲ್ಪಿ ಚಾರ್ಲ್ಸ್ ಕೋರಿಯಾ ಅವರ ನೆರವಿನಿಂದ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಯಿತು.
ಮುಳುಗಡೆ ಪ್ರದೇಶದ ಜನರಿಗಾಗಿ ಹೊಸ ನಗರ ನಿರ್ಮಾಣ ಕಾರ್ಯದ ಉಸ್ತುವಾರಿಯನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಮೊದಲ ಎರಡು ಹಂತಗಳಲ್ಲಿ 6,459 ಕಟ್ಟಡಗಳು ಮುಳುಗಡೆಯಾಗಿವೆ. ಮೂರನೇ ಹಂತದಲ್ಲಿ 2,392 ಕಟ್ಟಡಗಳು ಮುಳಗುಡೆಯಾಗಲಿವೆ. ಕಟ್ಟಡಗಳಿಗೆ ₹1,055 ಕೋಟಿ ಪರಿಹಾರ ಪಾವತಿಸಲಾಗಿದೆ.
ಕೆಲವು ಕಡೆ ಶಾಲಾ ಕೊಠಡಿಗಳು ಇಲ್ಲದೇ ಮಕ್ಕಳ ಅಧ್ಯಯನಕ್ಕೆ ತೊಂದರೆ ಅನುಭವಿಸುತ್ತಿದ್ದರೆ. ಕೂಡಲಸಂಗಮ ಸುತ್ತ–ಮುತ್ತಲಿನ ಪುನರ್ ವಸತಿ ಕೇಂದ್ರಗಳಲ್ಲಿ ಪುನರ್ ವಸತಿ, ಪುನರ್ ನಿರ್ಮಾಣ ಇಲಾಖೆ ಕೋಟ್ಯಂತರ ವೆಚ್ಚಮಾಡಿ ನಿರ್ಮಿಸಿದ ಶಾಲಾ ಕಟ್ಟಡಗಳು ಅನಾಥವಾಗಿವೆ. ಬಳಕೆಗೂ ಮುನ್ನವೇ ಅವನತಿ ಹಾದಿ ಹಿಡಿದಿವೆ.
ಶಾಲಾ ಕಟ್ಟಡಗಳಲ್ಲದೇ ಶಿಕ್ಷಕರಿಗಾಗಿ ವಸತಿ ನಿಲಯ, ಪಂಚಾಯಿತಿ ಕಟ್ಟಡ, ಅಂಗನವಾಡಿ ಸೇರಿದಂತೆ ಹಲವು ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಆದರೆ, ಅವುಗಳು ಬಳಕೆಯಿಲ್ಲದೇ ಹಾಳಾಗುತ್ತಿವೆ.
ನಾರಾಯಣಪುರ ಜಲಾಶಯ ಹಿನ್ನೀರಿನಲ್ಲಿ ಮುಳುಗಡೆಗೊಂಡ ಖಜಗಲ್, ಕೆಂಗಲ್, ವರಗೋಡದಿನ್ನಿ, ಇದ್ದಲಗಿ, ಬಿಸನಾಳಕೊಪ್ಪ, ಕಮದತ್ತ, ಅಡವಿಹಾಳ, ಕೆಸರಪೆಂಟಿ, ಅನಪಕಟ್ಟಿ, ತುರಡಗಿ, ಕಟಗೂರ, ಕೂಡಲಸಂಗಮ, ಧನ್ನೂರ ಮುಂತಾದ ಪುನರ್ ವಸತಿ ಕೇಂದ್ರದಲ್ಲಿ ಪುನರ್ ವಸತಿ ಪುನರ್ ನಿರ್ಮಾಣ ಇಲಾಖೆ ಪ್ರಾಥಮಿಕ, ಪ್ರೌಢ ಶಾಲೆಗೆ ವಿಶಾಲವಾದ ಜಾಗ ಮೀಸಲಿಟ್ಟು, ಬೃಹತ್ ಕಟ್ಟಡಗಳನ್ನು ನಿರ್ಮಿಸಿದೆ. ಬಹುತೇಕ ಪುನರ್ ವಸತಿ ಕೇಂದ್ರದಲ್ಲಿ ನಿರ್ಮಾಣವಾದ ಕಟ್ಟಡಗಳು ಬಳಕೆಯಾಗುತ್ತಿಲ್ಲ.
ಇದ್ದಲಗಿ, ಅಡವಿಹಾಳ, ಖಜಗಲ್, ಕೆಂಗಲ್ ಕಡಪಟ್ಟಿ, ವರಗೋಡದಿನ್ನಿ, ಕೆಸರಪೆಂಟಿ, ಕಮದತ್ತ, ಅನುಪಕಟ್ಟಿ ಪುನರ್ ವಸತಿ ಕೇಂದ್ರದಲ್ಲಿ ನಿರ್ಮಾಣವಾದ ಶಾಲಾ ಕಟ್ಟಡಗಳು ನಿರುಪಯುಕ್ತವಾಗಿವೆ. ಶಾಲಾ ಕೊಠಡಿಯ ಬಾಗಿಲುಗಳು ಕಿತ್ತು ಹೊಗಿದ್ದು, ನೆಲಹಾಸು ಕುಸಿದಿವೆ. ಕುಡುಕರಿಗೆ ನೆಚ್ಚಿನ ತಾಣವಾಗಿವೆ. ಕುರಿಗಾರರು ಮಳೆ ಬಂದರೆ ಶಾಲಾ ಕೊಠಡಿಗಳಲ್ಲಿ ಕುರಿಗಳನ್ನು ನಿಲ್ಲಿಸುವರು.
‘ಪುನರ್‌ವಸತಿ ಕೇಂದ್ರಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಆಗಾಗ, ಮೂಲಸೌಲಭ್ಯಗಳನ್ನು ಕಲ್ಪಿಸುವ ಮಾತುಗಳು ಕೇಳಿ ಬರುತ್ತವೆ. ಆದರೆ, ರಸ್ತೆ, ಬಸ್ ಸೌಲಭ್ಯ, ಮಕ್ಕಳ ಓದಿಗೆ ಬೇಕಾದ ವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ’ ಎನ್ನುತ್ತಾರೆ ಕೆಂಗಲ್ಲಿನ ಮಲ್ಲಿಕಾರ್ಜುನ ಪಾಟೀಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.