ADVERTISEMENT

PV Web Exclusive: ಕಳೆಯಿತು ನಾಲ್ಕು ವರ್ಷ, ಇಲ್ಲ ಜಿಲ್ಲಾಡಳಿತ ಭವನ

ಎಂ.ಜಿ.ಬಾಲಕೃಷ್ಣ
Published 3 ಮಾರ್ಚ್ 2026, 14:47 IST
Last Updated 3 ಮಾರ್ಚ್ 2026, 14:47 IST
   

ಹೊಸಪೇಟೆ (ವಿಜಯನಗರ): ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ವಿಜಯನಗರ ಜಿಲ್ಲೆ ರಾಜ್ಯದ 31ನೇ ಜಿಲ್ಲೆಯಾಗಿ ರೂಪುಗೊಂಡು ನಾಲ್ಕು ವರ್ಷ ಕಳೆದಿದೆ. ಆದರೂ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಜಿಲ್ಲಾಡಳಿತ ಭವನವೇ ನಿರ್ಮಾಣವಾಗಿಲ್ಲ. ಇದರಿಂದಾಗಿ ಜನರಿಗೆ ಅಲೆದಾಟದ ಕಷ್ಟ ತಪ್ಪಿಲ್ಲ.

ಒಂದು ಜಿಲ್ಲೆಯಲ್ಲಿ ಸಾಮಾನ್ಯವಾಗಿ 65ಕ್ಕೂ ಅಧಿಕ ವಿವಿಧ ಇಲಾಖೆಗಳ ಕಚೇರಿಗಳು ಇರುತ್ತವೆ. ಆದರೆ ವಿಜಯನಗರ ಜಿಲ್ಲೆಯಲ್ಲಿ ಸದ್ಯ ಜಿಲ್ಲಾ ಮಟ್ಟದ ಕಚೇರಿಗಳು ಸೃಜನೆಯಾಗಿರುವುದು ಸುಮಾರು 35ರಷ್ಟು ಮಾತ್ರ. ಇನ್ನೂ ಕನಿಷ್ಠ 30 ಇಲಾಖೆಗಳು ಬಳ್ಳಾರಿಯಿಂದ ಹೊಸಪೇಟೆಗೆ ಸ್ಥಳಾಂತರಗೊಂಡಿಲ್ಲ. ಅಂದರೆ ಆ ಇಲಾಖೆಗಳ ಕೆಲಸಗಳಿಗಾಗಿ ಜನರು ಈಗಲೂ ಬಳ್ಳಾರಿಗೇ ತೆರಳಬೇಕಾಗಿದೆ. 

ಇದಕ್ಕೆ ಕಾರಣ ಏನೆಂದು ನೋಡಲು ಹೊರಟರೆ ಮೊದಲಿಗೆ ಕಾಣಿಸುವುದೇ ಜಿಲ್ಲಾಡಳಿತ ಭವನದ ಕೊರತೆ. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿಗಳು ಹಾಗೂ ಇತರ ಕೆಲವೇ ಕೆಲವು ಇಲಾಖೆಗಳ ಕಚೇರಿಗಳು ಸದ್ಯ ಟಿ.ಬಿ.ಡ್ಯಾಂ ರಸ್ತೆಯ ಪಕ್ಕದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಇವೆ. ಈ ಕಟ್ಟಡ ಈ ಹಿಂದಿನ ತುಂಗಭದ್ರಾ ಸ್ಟೀಲ್‌ ಪ್ರೊಡಕ್ಟ್‌ (ಟಿಎಸ್‌ಪಿ) ಕಂಪನಿಯ ಆಡಳಿತ ಕಚೇರಿಯಾಗಿದ್ದ ಕಟ್ಟಡ. ಅಂದರೆ ಹೊಸ ಜಿಲ್ಲೆಯಲ್ಲಿ ಸದ್ಯ ತಾತ್ಕಾಲಿಕ ಅವಧಿಗೆ ಮಾತ್ರ ಜಿಲ್ಲಾಧಿಕಾರಿ ಕಚೇರಿ ಈ ಕಟ್ಟಡದಲ್ಲಿದೆ. ಪೂರ್ಣ ಪ್ರಮಾಣದಲ್ಲಿ ಜಿಲ್ಲಾಡಳಿತ ನಡೆಯಬೇಕೆಂದರೆ ಪ್ರಮುಖ ಇಲಾಖೆಗಳ ಕಚೇರಿಗಳು ಒಂದೇ ಸೂರಿನಡಿಗೆ ಬರಲೇಬೇಕು. ಸದ್ಯಕ್ಕೆ ಅದಕ್ಕೆ ಅವಕಾಶವೇ ಇಲ್ಲ. ಹೀಗಾಗಿ ನಗರದ ನಾನಾ ಕಡೆಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಚೇರಿಗಳು ನಡೆಯುತ್ತಿವೆ. ಹೊಸದಾಗಿ ಜಿಲ್ಲಾ ಕೇಂದ್ರಕ್ಕೆ ಬರುವ ಜನರಿಗೆ ಇಲಾಖೆಗಳ ಕಚೇರಿಗಳು ಎಲ್ಲಿವೆ ಎಂದು ಹುಡುಕುವುದೇ ದೊಡ್ಡ ಸಾಹಸವೂ ಅಗುತ್ತಿದೆ.

ADVERTISEMENT

100 ಎಕರ ಸ್ಥಳ ನಿಗದಿ: ಜಿಲ್ಲಾಡಳಿತ ಭವನ, ಜಿಲ್ಲಾ ನ್ಯಾಯಾಲಯ ಕಟ್ಟಡ, ವಸತಿಗೃಹಗಳು,  ಇತರ ಕೆಲವು ಇಲಾಖೆಗಳ ಕಟ್ಟಡಗಳ ನಿರ್ಮಾಣಕ್ಕಾಗಿ ಸುಮಾರು 100 ಎಕರೆ ಸ್ಥಳವನ್ನು ಮೀಸಲಿರಿಸಲಾಗಿದೆ. ಈಗಿನ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲೇ ಈ ನಿವೇಶನ ಇದೆ. ಮಾಜಿ ಸಚಿವ ಆನಂದ್ ಸಿಂಗ್ ಅವರ ದೂರದೃಷ್ಟಿ, ಛಲದಿಂದಾಗಿಯೇ ಈ ನಿವೇಶನ ಜಿಲ್ಲಾಡಳಿತ ಭವನ ಸಂಕೀರ್ಣಗಳಿಗಾಗಿ ಸಿಗುವಂತಾಗಿದೆ. ಆದರೆ ಬಳಿಕ ಅವರ ಅಧಿಕಾರ ಹೋಯಿತು, ಮುಂದೆ ಅಧಿಕಾರಕ್ಕೆ ಬಂದವರಿಗೆ ಜಿಲ್ಲಾಡಳಿತ ಭವನವನ್ನು ಈ ಸ್ಥಳದಲ್ಲಿ ನಿರ್ಮಿಸಬೇಕು ಎಂಬ ಪ್ರಬಲ ಇಚ್ಛಾಶಕ್ತಿ ಇಲ್ಲದಾಯಿತು, ಸರ್ಕಾರದ ಮೇಲೆ ಒತ್ತಡವೂ ಸಾಲದಾಯಿತು. ಪರಿಣಾಮವಾಗಿ ಹೊಸ ಜಿಲ್ಲೆಯಾಗಿ ನಾಲ್ಕು ವರ್ಷ ಕಳೆದ ಮೇಲೂ ಜಿಲ್ಲಾಡಳಿತ ಭವನ ನಿರ್ಮಾಣವಾಗಲೇ ಇಲ್ಲ.

ಪ್ರಸ್ತಾವ ಸಲ್ಲಿಸಿದ್ದೇವೆ: ‘ಜಿಲ್ಲೆಯ ಸುಲಲಿತ ಆಡಳಿತ ವ್ಯವಸ್ಥೆಗೆ ಜಿಲ್ಲಾಡಳಿತ ಭವನ ಅತ್ಯಗತ್ಯ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಈ ವರ್ಷದ ಬಜೆಟ್‌ನಲ್ಲಿ ಅನುದಾನ ಸಿಗುವ ವಿಶ್ವಾಸ ಇದೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಮುಖ ಬೇಡಿಕೆಗಳಲ್ಲಿ ಇದೂ ಒಂದು: ‘ಹೊಸಪೇಟೆಗೆ ಪ್ರಮುಖವಾಗಿ ಏನು ಅಗಬೇಕು ಎಂದು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವಗಳಲ್ಲಿ ಜಿಲ್ಲಾಡಳಿತ ಭವನವೂ ಪ್ರಮುಖವಾಗಿದೆ. ಇದನ್ನು ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರು ಸಹಿತ ಹಲವು ಸಚಿವರ, ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ’ ಎಂದು ಶಾಸಕ ಎಚ್.ಆರ್‌.ಗವಿಯಪ್ಪ ಹೇಳಿದರು.

ಜನರ ಅಲೆದಾಟ ತಪ್ಪಿಸಿ

‘ಹೊಸ ಜಿಲ್ಲೆ ನಿರ್ಮಾಣವಾದ ಬಳಿಕ ವಿಜಯನಗರ ಜಿಲ್ಲೆಯ ಜನರಿಗೆ ಹೊಸ ಭರವಸೆ ಮೂಡಿತ್ತು. ಆದರೆ ಹಲವು ಇಲಾಖೆಗಳು ಇನ್ನೂ ಹೊಸಪೇಟೆಗೆ ಸ್ಥಳಾಂತರಗೊಂಡಿಲ್ಲ. ಸಹಜವಾಗಿಯೇ ಭ್ರಮನಿರಸನವಾದ ಭಾವನೆ ಇದ್ದೇ ಇದೆ. ಹರಪನಹಳ್ಳಿ, ಹೂವಿನಹಡಗಲಿ ಭಾಗದ  ಜನರು ಬಳ್ಳಾರಿಗೆ ತೆರಳಲು 150ರಿಂದ 180 ಕಿ.ಮೀ.ನಷ್ಟು ದೂರ ಕ್ರಮಿಸಬೇಕು. ಒಂದು ದಿನದಲ್ಲಿ ಕೆಲಸ ಮುಗಿಸಿ ಬರಲು ಸಾಧ್ಯವೇ ಇಲ್ಲ. ಜಿಲ್ಲೆ  ರಚಿಸಿದ ಬಳಿಕವೂ ಸರ್ಕಾರ ಇಂತಹ ಕಷ್ಟವನ್ನು ಜನರಿಗೆ ನೀಡಬಾರದು’ ಎಂದು ಜಿಲ್ಲಾ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ವೈ.ಯಮುನೇಶ್ ಹೇಳುತ್ತಾರೆ.

ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಜಿಲ್ಲಾಡಳಿತ ಭವನಕ್ಕೆ ಹಣ ಮೀಸಲಿಡಲೇಬೇಕು, ಹಾಗಾದರೆ ಒಂದು ಅಥವಾ ಎರಡು ವರ್ಷದೊಳಗೆ ಜಿಲ್ಲಾಡಳಿತ ಭವನ ನಿರ್ಮಾಣವಾಗಿ ಜನರಿಗೆ ಒಂದೇ ಸೂರಿನಡಿ ಅಥವಾ ಒಂದೇ ಸ್ಥಳದ ಸುತ್ತಮುತ್ತಲಲ್ಲೇ ಹೆಚ್ಚಿನ ಇಲಾಖೆಗಳ ಸೇವೆ ದೊರೆಯಬಹುದು. ಈ ವರ್ಷ ಅದನ್ನು ಮಾಡದೆ ಹೋದರೆ ಈ ಸರ್ಕಾರ ಇರುವ ತನಕ ನೂತನ ಜಿಲ್ಲಾಢಳಿತದ ಭವನದ ಕನಸು ಕನಸಾಗಿಯೇ ಉಳಿಯುವುದು ನಿಶ್ಚಿತ ಎಂದು ಅವರು ಹೇಳಿದರು.

ನ್ಯಾಯಾಲಯ ಕಟ್ಟಡಕ್ಕೆ ₹150 ಕೋಟಿ ಒದಗಿಸಿ...

ಜಿಲ್ಲೆ ಉದಯವಾಗಿ ನಾಲ್ಕು ವರ್ಷ ತುಂಬುವ ಹಂತದಲ್ಲಿ ಅಂದರೆ 2025ರ ಸೆಪ್ಟೆಂಬರ್ 27ರಂದು ಜಿಲ್ಲಾ ನ್ಯಾಯಾಲಯ ಹೊಸಪೇಟೆಯಲ್ಲಿ ಕಾರ್ಯಾರಂಭ ಮಾಡಿದೆ. ಆದರೆ ಅದು ಸದ್ಯ ಹಾಲಿ ನ್ಯಾಯಾಲಯ ಸಂಕೀರ್ಣದ ಸಮೀಪ ತಾಲ್ಲೂಕು ಕಚೇರಿಯ ಒಂದು ಭಾಗದಲ್ಲಿ ಕಾರ್ಯಾಚರಿಸುತ್ತಿದೆ. 

ಟಿ.ಬಿ.ಡ್ಯಾಂ ರಸ್ತೆ ಸಮೀಪದ ನೂತನ ಜಿಲ್ಲಾಡಳಿತ ಭವನಕ್ಕೆ ಮೀಸಲಿಟ್ಟ 100 ಎಕರೆ ಸ್ಥಳದ ಪೈಕಿ 10 ಎಕರೆಯನ್ನು ಜಿಲ್ಲಾ ನ್ಯಾಯಾಲಯ ಸಂಕೀರ್ಣಗಳಿಗೆ ಮೀಸಲಿಡಲಾಗಿದೆ. ಅಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲು ಈ ಬಾರಿಯ ಬಜೆಟ್‌ನಲ್ಲಿ ₹150 ಕೋಟಿ ಅನುದಾನ ಒದಗಿಸಬೇಕು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಗುಜ್ಜಲ್‌ ನಾಗರಾಜ್‌, ಉಪಾದ್ಯಕ್ಷ ಎಚ್.ಎಸ್‌.ದಿವಾಕರ್‌, ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ ದೇವರಾಯಲು ಹಾಗೂ ಇತರರು ಜಿಲ್ಲ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌ ಅವರಿಗೆ ಮನವಿ ಮಾಡಿದ್ದಾರೆ. 

₹200 ಕೋಟಿಗೂ ಅಧಿಕ ಅನುದಾನ ಬೇಕು

‘ಸದ್ಯ ಜಿಲ್ಲಾಡಳಿತ ಭವನಕ್ಕೆ ಮೀಸಲಿಟ್ಟ ಸ್ಥಳದಲ್ಲಿ ನೂತನ ಎಸ್‌ಪಿ ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿ, ಎಸ್‌ಪಿ, ಜಿಲ್ಲಾ ಪಂಚಾಯಿತಿ ಸಿಇಒ ನಿವಾಸ, ಕೆಲವು ವಸತಿ ಗೃಹಗಳು ನಿರ್ಮಾಣವಾಗಿವೆ ಅಷ್ಟೇ. ಜಿಲ್ಲಾಡಳಿತ ಭವನ ಸಂಕೀರ್ಣ, ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಕನಿಷ್ಠ ₹200 ಕೋಟಿ ಒದಗಿಸಿದರೆ ಮಾತ್ರ ಒಂದಿಷ್ಟು ಕೆಲಸ ಈ ವರ್ಷವೇ ಆರಂಭವಾಗಬಹುದು. ಜನರಿಂದಲೂ ಒತ್ತಡ ಬರಬೇಕಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯ ಬಜೆಟ್‌ಗೆ ಇಡೀ ರಾಜ್ಯದ ಎಲ್ಲೆಡೆಯಂತೆ ವಿಜಯನಗರ ಜಿಲ್ಲೆ ಸಹ ಕಾಯುತ್ತಿದ್ದು, ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಬಜೆಟ್‌ ಅನುದಾನದ ಮೂಲಕ ಶುಕ್ರದೆಸೆ ಬರಲಿದೆಯೇ ಎಂಬುದು ಸದ್ಯ 200 ಕೋಟಿ ರೂಪಾಯಿ ಪ್ರಶ್ನೆಯಾಗಿದೆ. 

ಶಾಸಕ ಎಚ್.ಆರ್‌.ಗವಿಯಪ್ಪ

ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.