ADVERTISEMENT

ಯಾದಗಿರಿ: ಬಸವಸಾಗರ ಜಲಾಶಯದ ಬಳಿ ಫೋಟೋ ಕ್ರೇಜ್‌

ನಾರಾಯಣಪುರದ ಡ್ಯಾಂ ಬಳಿ ಜನ ಜಂಗುಳಿ, ಅಕ್ಕಪಕ್ಕದ ಜಿಲ್ಲೆಗಳಿಂದ ಪ್ರವಾಸಿಗರ ಆಗಮನ

ಬಿ.ಜಿ.ಪ್ರವೀಣಕುಮಾರ
Published 30 ಜುಲೈ 2021, 3:02 IST
Last Updated 30 ಜುಲೈ 2021, 3:02 IST
ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಬಸವಸಾಗರ ಜಲಾಶಯದ ಬಳಿ ಯುವತಿಯರು ಸೆಲ್ಫಿ ತೆಗೆದುಕೊಳ್ಳುತ್ತಿರುವುದುಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಬಸವಸಾಗರ ಜಲಾಶಯದ ಬಳಿ ಯುವತಿಯರು ಸೆಲ್ಫಿ ತೆಗೆದುಕೊಳ್ಳುತ್ತಿರುವುದುಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ   

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯ ಜಲರಾಶಿ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಲ್ಲಿ ಫೋಟೋ ಕ್ರೇಜ್‌ ಹೆಚ್ಚಾಗಿದೆ.

ಜಲಾಶಯದ ಪ್ರತಿಯೊಂದು ಕೋನವನ್ನು ತಮ್ಮ ಮೊಬೈಲ್‌, ಕ್ಯಾಮೆರಾದ ಮೂಲಕ ಸೆರೆ ಹಿಡಿಯುತ್ತಿದ್ದಾರೆ. ನೀರು ಹಿಂಭಾಗದಲ್ಲಿ ಬರುವಂತೆ ಫೋಟೊಗಳನ್ನು ಸೆರೆ ಹಿಡಿಯುತ್ತಿದ್ದಾರೆ. ಕುಟುಂಬದೊಂದಿಗೆ ಬಂದವರು ತಮ್ಮ ಮಕ್ಕಳ ಚಿತ್ರ ತೆಗೆಯುವುದರಲ್ಲಿ ತಲ್ಲೀನರಾಗುತ್ತಿದ್ದಾರೆ.

36 ಜಲಾಶಯ ಗೇಟುಗಳನ್ನು ಹೊಂದಿದ್ದು, 30 ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ. ಗೇಟ್‌ ಮೇಲಿನಿಂದ ಬೀಳುವ ನೀರನ್ನು ನೋಡಿ ಆನಂದವಾಗುತ್ತದೆ.

ADVERTISEMENT

ವಿವಿಧ ಭಂಗಿಗಳಲ್ಲಿ ಫೋಟೋ ಕ್ಲಿಕ್ಲಿಸಿಕೊಳ್ಳುವುದು ಸಾಮಾನ್ಯವಾಗಿದೆ. ಯುವಕ, ಯುವತಿಯರು ಮೊಬೈಲ್‌ಗಳಲ್ಲಿ ಜಲರಾಶಿಯನ್ನು ಸೆರೆ ಹಿಡಿಯುತ್ತಿದ್ದಾರೆ. ಜೊತೆಗೆ ಸೆಲ್ಫಿ, ಫೋಟೊ ಕ್ಲಿಕ್ಲಿಸಿ ಸಂಭ್ರಮಿಸುತ್ತಿದ್ದಾರೆ.

ಮುಳ್ಳಿನ ಬೇಲಿ:ಜಲಾಶಯದಿಂದ 4 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರನ್ನು ಹರಿಸುತ್ತಿರುವುದರಿಂದ ನದಿ ಭೋರ್ಗೆರೆಯುತ್ತಿದೆ. ಇದನ್ನು ನೋಡಲು ಅಪಾಯ ಲೆಕ್ಕಿಸದೇ ಪ್ರವಾಸಿಗರು ಮುಂದಾಗುತ್ತಿದ್ದಾರೆ. ಇದರಿಂದ ಜಲಾಶಯದ ಅಧಿಕಾರಿಗಳು ನೀರಿನ ಸಮೀಪ ತೆರಳದಂತೆ ಮುಳ್ಳಿನ ಬೇಲಿ ಅಳವಡಿಸಿದ್ದಾರೆ. ಅಲ್ಲದೇ ಭದ್ರತಾ ಸಿಬ್ಬಂದಿಯನ್ನು ನೇಮಿಸಿ ಜನರನ್ನು ನಿಯಂತ್ರಿಸಲಾಗುತ್ತಿದೆ.

ಸಾರ್ವಜನಿಕರಿಗೆ ಮೇಲುಗಡೆ ಪ್ರವೇಶವಿಲ್ಲ:ಹೆಚ್ಚಿನ ನೀರು ಹರಿಸುತ್ತಿರುವುದರಿಂದ ಜಲಾಶಯದ ಮೇಲ್ಭಾಗದಲ್ಲಿ ತೆರಳಲು ಸಾರ್ವಜನಿಕರಿಗೆ ಅವಕಾಶವಿಲ್ಲ. ಗೇಟ್‌ ಕೆಳಗಡೆಯಿಂದ ಮಾತ್ರ ಜನರಿಗೆ ಪ್ರವೇಶ ಕಲ್ಪಿಸಲಾಗಿದೆ.

ಗೇಟ್‌ ಬಳಿ ಜನ ಜಂಗುಳಿ:ಬಸವಸಾಗರಕ್ಕೆ ತೆರಳುವ ಪ್ರವೇಶ ದ್ವಾರದಿಂದಲೇ ಜನಜಂಗುಳಿ ಕಂಡು ಬರುತ್ತದೆ. ಸ್ವಂತ ವಾಹನ ತಂದವರು, ಬಸ್‌ಗೆ ಬಂದವರು ಗೇಟ್‌ನಿಂದ ಜಲಾಶಯದ ಒಳಗೆ ನಡೆದುಕೊಂಡು ತೆರಳುತ್ತಾರೆ. ಅಲ್ಲಲ್ಲಿ ಗುಂಪು ಗುಂಪಾಗಿ ನಡೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತಿದೆ.

ಮೂರು ಜಿಲ್ಲೆಗಳ ಪ್ರವಾಸಿಗರು:ಬಸವಸಾಗರ ಜಲಾಶಯ ಮೂರು ಜಿಲ್ಲೆಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಯಾದಗಿರಿ, ವಿಜಯಪುರ, ರಾಯಚೂರು ಜಿಲ್ಲೆಯ ಪ್ರವಾಸಿಗರು ಜಲಾಶಯ ವೈಭವವನ್ನು ಕಂಡು ಪುಳಕಿರಾಗುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ತಾಳಿಕೋಟಿ, ರಾಯಚೂರು ಜಿಲ್ಲೆಯ ಲಿಂಗಸುಗೂರು, ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿಗೆ ಜಲಾಶಯ ಹತ್ತಿರವಿದ್ದರಿಂದ ಕುಟುಂಬ ಸಮೇತ, ಸ್ನೇಹಿತರ ಜೊತೆಗೆ ಆಗಮಿಸುತ್ತಿದ್ದಾರೆ. ವಾರಾಂತ್ಯದ ದಿನಗಳಲ್ಲಿ ಜಲಾಶಯದ ಬಳಿ ಜನಸಾಗರವೇ ಸೇರಿ ಬರುತ್ತಿದೆ. ಮಧ್ಯವಾರದಲ್ಲೂ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ. ಮುಂದಿನ ಎರಡು ದಿನಗಳಲ್ಲಿ ಕೃಷ್ಣಾ ನದಿಗೆ ಹರಿಸುವ ಪ್ರಮಾಣ ಇಳಿಕೆಯಾಗುವ ಸಾಧ್ಯತೆ ಇದೆ.

ಮೊದಲ ಬಾರಿಗೆ ಲಕ್ಷಾಂತರ ಕ್ಯುಸೆಕ್‌ ನೀರು ಕಂಡವರು ಮೂಕವಿಸ್ಮತರಾಗುತ್ತದೆ. ಅಷ್ಟೊಂದು ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿದೆ.

ಛಾಯಾ ಭಗವತಿಗೆ ಜಲಕಂಟಕ:
ದಕ್ಷಿಣ ಭಾರತದ ಏಕೈಕ ದೇವಸ್ಥಾನ ಖ್ಯಾತಿಯ ಛಾಯಾ ಭಗವತಿ ಪ್ರವಾಹದ ನೀರಿನಿಂದ ದೇಗುಲ ಬಂದ್‌ ಆದರೂ ಪ್ರವಾಸಿಗರ ದಂಡು ಮಾತ್ರ ಕಡಿಮೆಯಾಗಿಲ್ಲ.

ಪ್ರತಿ ವರ್ಷ ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾದರೆ ಛಾಯಾ ಭಗವತಿ ದೇಗುಲ ನೀರಿನಿಂದ ಜಲಾವೃತ್ತವಾಗುತ್ತದೆ. ಮುಖಮಂಟಪ ಮುಳುಗಡೆಯಾಗಿದೆ. ದೇವಿ ಮೂರ್ತಿಯನ್ನು ಮೆಟ್ಟಿಲ ಬಳಿ ಇಟ್ಟು ಪೂಜೆ ಮಾಡಲಾಗುತ್ತಿದೆ. ತಂಡೊಪ ತಂಡವಾಗಿ ಸಾರ್ವಜನಿಕರು ದೇವಿ ದರ್ಶನ, ಜಲ ಪ್ರವಾಹ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.

ಛಾಯಾ ಭಗವತಿ ದೇಗುಲ ಜಲಾವೃತ್ತವಾಗಿದ್ದರೂ ಬರುವ ಭಕ್ತರಿಗೆನೂ ಕೊರತೆ ಇಲ್ಲ. ಶನಿವಾರ, ಭಾನುವಾರ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ
-‌ ಚಿದಂಬರ್‌ ಭಟ್‌, ದೇವಸ್ಥಾನದ ಆರ್ಚಕ

ಛಾಯಾ ಭಗವತಿ ದೇವಸ್ಥಾನಕ್ಕೆ ತೆರಳದಂತೆ ಕಟ್ಟಿಗೆಯಿಂದ ತಡೆ ಒಡ್ಡಲಾಗಿದೆ. ಆದರೂ ಜನರು ಅದನ್ನು ದಾಟಿ ಹೋಗುತ್ತಿದ್ದಾರೆ. ಜನರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ
- ಅಶೋಕ ಎ.ಡಿ., ಭದ್ರತಾ ಸಿಬ್ಬಂದಿ

ಬಸವಸಾಗರ ಜಲಾಶಯದ ಜಲರಾಶಿಯನ್ನು ನೋಡುವುದೇ ಚೆಂದ. ಕೋಲಾರದಿಂದ ಸ್ಥಳೀಯ ಸಂಬಂಧಿಕರ ಮನೆಗೆ ಬಂದಿದ್ದು, ಜಲಾಶಯ ನೀರು ನೋಡಿ ಖುಷಿಯಾಯಿತು
- ಅಜಯ್‌ ಬಿರಾದಾರ, ಪ್ರವಾಸಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.