ADVERTISEMENT

ಮಹರ್ಷಿ ವಾಲ್ಮೀಕಿ ಜಯಂತಿ: ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:27 IST
Last Updated 8 ಅಕ್ಟೋಬರ್ 2025, 5:27 IST
ಯಾದಗಿರಿಯಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು
ಯಾದಗಿರಿಯಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು   

ಯಾದಗಿರಿ: ‘ಸಾವಿರಾರು ವರ್ಷಗಳ ಹಿಂದೆ ಮಹರ್ಷಿ ವಾಲ್ಮೀಕಿ ರಚಿಸಿದ್ದ ರಾಮಾಯಣ ಮಹಾಕಾವ್ಯ ಹಾಗೂ ಅದರಲ್ಲಿನ ಶ್ರೀರಾಮ ಇಂದಿನ ಸಮಾಜಕ್ಕೆ ದಾರಿದೀಪ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಇಲ್ಲಿನ ಮಹರ್ಷಿ ವಾಲ್ಮೀಕಿ ‌ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಪರಿಶಿಷ್ಟ ಜಾತಿ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ‌ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ‌ವತಿಯಿಂದ‌ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಮಾಯಣ ಮಹಾಕಾವ್ಯದಲ್ಲಿ ವಾಲ್ಮೀಕಿ ಲಕ್ಷಾಂತರ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಬಹುತೇಕ ಪಾತ್ರಗಳ ಹೆಸರುಗಳು ಶೇ 90ರಷ್ಟು ಜನರಿಗೆ ಗೊತ್ತೇ ಇಲ್ಲ. ಆದರೆ, ಶ್ರೀರಾಮನ ಪಾತ್ರ ನಮ್ಮಲ್ಲಿ ಅಚ್ಚಳಿಯದೆ ಉಳಿದಿದೆ. ರಾಮನ ಹೆಸರು ಸದಾ ಸ್ಮರಣೀಯವಾಗಿ ಇರುವುದು, ತ್ಯಾಗದ ಮನೋಭಾವ ಮತ್ತು ಜನರಲ್ಲಿ ರಾಮನು ಮೂಡಿಸಿದ್ದ ವಿಶ್ವಾಸದಿಂದಾಗಿಯೇ. ಕಠಿಣವಾದ ಪರಿಸ್ಥಿತಿಯಲ್ಲಿಯೂ  ಪಿತೃವಾಕ್ಯ ಪರಿಪಾಲನೆ ಮಾಡಿದ್ದನು’ ಎಂದರು.

ADVERTISEMENT

‘ಮಹನೀಯರು ತಾವು ಕಷ್ಟಪಟ್ಟು ಸಮಾಜಕ್ಕೆ ಉತ್ತಮವಾದ ದಾರಿ ತೋರಿ ಬೆಳಕನ್ನು ನೀಡಿದ್ದವರು. ಅವರು ಪಟ್ಟಿರುವ ಕಷ್ಟದಲ್ಲಿ ಕನಿಷ್ಠ 5 ಪರ್ಸೆಂಟಾದರು ನಾವು ಶ್ರಮಿಸಿದ್ದರೆ ನಮ್ಮ ಜೀವನ ಸಾರ್ಥಕ ಆಗುತ್ತದೆ. ಆ ಮೂಲಕ ಜಯಂತಿಗಳ ಆಚರಣೆಗೂ ಅರ್ಥ ಬರುತ್ತದೆ’ ಎಂದರು ಹೇಳಿದರು.

‘ನಮ್ಮ ಭಾಗದಲ್ಲಿ ವಾಲ್ಮೀಕಿ ಜನಾಂಗಕ್ಕೆ ತನ್ನದೆಯಾದ ಇತಿಹಾಸವಿದೆ. ಸುರಪುರ ಸಂಸ್ಥಾನವು ಬ್ರಿಟಿಷರು ಮತ್ತು ಮೊಘಲರ ವಿರುದ್ಧ ‌ಹೊರಾಡಿ, ನಮ್ಮ ಭಾಗದವರನ್ನು ರಕ್ಷಣೆ ಮಾಡಿದ್ದರು’ ಎಂದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಮ್ಮ ಮಿತಿಯಲ್ಲಿ ಯೋಜನೆಗಳನ್ನು ರೂಪಿಸಿ, ಆರ್ಥಿಕವಾಗಿ ಕಷ್ಟದಲ್ಲಿ ಇರುವ ಬಡ ಕುಟುಂಬಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿವೆ. ನಿಮ್ಮಲ್ಲಿ ಸಹ ಸಾಧಿಸುವ ಛಲ, ಭರವಸೆ ಇದ್ದಾಗ ಸಮಾಜದಲ್ಲಿ ವಿಶೇಷ ಸ್ಥಾನ, ಹೆಸರು ಗಳಿಸಲು ಸಾಧ್ಯ. ಜೊತೆ  ಶಿಕ್ಷಣವೂ ಅಷ್ಟೇ ಮುಖ್ಯವಾಗುತ್ತದೆ. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು’ ಎಂದು ಹೇಳಿದರು.

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ್ ಮಾತನಾಡಿ, ‘ಮಹರ್ಷಿ ವಾಲ್ಮೀಕಿ ಅವರು ಜೀವನದಲ್ಲಿ ಪರಿವರ್ತನೆ ಹೊಂದಿ ರಾಮಾಯಣ ಎಂಬ ಮಹಾಗ್ರಂಥ ರಚಿಸಿ ಜಗತ್ತಿಗೆ ದಾರ್ಶನಿಕರಾಗಿದ್ದಾರೆ. ಮಹಾನ್ ಪುರುಷರಾಗಿ ಸಮಾಜಕ್ಕೆ ಬೆಳಕು‌ ನೀಡಿದವರು. ಹೀಗಾಗಿ, ಪ್ರತಿಯೊಬ್ಬರು ಧರ್ಮ, ‌ನ್ಯಾಯ, ನೀತಿಯಿಂದ ನಡೆಯಬೇಕು’ ಎಂದರು.

ಸಾಹಿತಿ ತಿಪ್ಪಣ್ಣ ನಾಯಕ್ ವಿಶೇಷ ಉಪನ್ಯಾಸ ನೀಡಿದರು. ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.‌ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನೆಗಳ ಮಾಹಿತಿಯ ಮಳಿಗೆ ತೆರೆಯಲಾಗಿತ್ತು.

ಕಾರ್ಯಕ್ರಮದಲ್ಲಿ ಎಸ್.ಪಿ. ಪೃಥ್ವಿಕ್ ಶಂಕರ್, ‘ಯುಡಾ’ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ, ಎಸಿ ಶ್ರೀಧರ, ಸಮಾಜದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ್ ಸೇರಿ ಹಲವರು ಉಪಸ್ಥಿತರಿದ್ದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸಿದ್ದಣ್ಣ ಅಣಬಿ ಸ್ವಾಗತಿಸಿದರು. ವಾಣಿಶ್ರೀ ನಿರೂಪಿಸಿದರು.

ಯಾದಗಿರಿಯಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಪ್ರದರ್ಶನ ನೀಡಿದ  ಡೊಳ್ಳು ಕಲಾವಿದರು 
ರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿ ಅವರು ಸ್ಮರಣೀಯ ಕೆಲಸ ಮಾಡಿ ಸತ್ಯ ಹಾಗೂ ಉತ್ತಮ ಕಾರ್ಯಗಳ ಮೂಲಕ ಒಳ್ಳೆಯ ಸ್ಥಾನ ಪಡೆಯಬೇಕು ಎಂಬ ಸಂದೇಶ ಸಾರಿದ್ದಾರೆ.
ಹರ್ಷಲ್‌ ಭೋಯರ್ ಜಿಲ್ಲಾಧಿಕಾರಿ    

ಭಾವಚಿತ್ರದ ಅದ್ದೂರಿ ಮೆರವಣಿಗೆ ಅಲಂಕೃತ ತೆರೆದ ವಾಹನದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು. ಇಲ್ಲಿನ‌ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಡೊಳ್ಳಿನ ವಾದ್ಯ ಯುವತಿಯರ ಪೂರ್ಣ ಕುಂಭ ಗೊಂಬೆ ವೇಷಧಾರಿಗಳ ಕುಣಿತದೊಂದಿಗೆ ಶಾಸ್ತ್ರಿ ಸರ್ಕಲ್ ನೇತಾಜಿ ಸುಭಾಷ್ ವೃತ್ತ ಸೇಡಂ ರಸ್ತೆಯ ಮೂಲಕ ಮಹರ್ಷಿ ವಾಲ್ಮೀಕಿ ಭವನ ತಲುಪಿತು. ಜೈ ವಾಲ್ಮೀಕಿ ಘೋಷಣೆಗಳು ಮೊಳಗಿದವು. ಯುವಕರು ವಾಲ್ಮೀಕಿ ಭಾವಚಿತ್ರದ ಬಾವುಟಗಳನ್ನು ಹಿಡಿದು ಆಟೊ ಬೈಕ್‌ಗಳಲ್ಲಿ ರ್‍ಯಾಲಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.