ADVERTISEMENT

ಶಹಾಪುರ: ರಾಜಕೀಯ ತಿಕ್ಕಾಟಕ್ಕೆ ನಾಂದಿಯಾದ ಕಾಲುವೆ ನೀರು!

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತ ಪೈರು

ಟಿ.ನಾಗೇಂದ್ರ
Published 1 ಏಪ್ರಿಲ್ 2025, 4:58 IST
Last Updated 1 ಏಪ್ರಿಲ್ 2025, 4:58 IST
<div class="paragraphs"><p>ಶಹಾಪುರ ತಾಲ್ಲೂಕಿನಲ್ಲಿ ಬೆಳೆದು ನಿಂತ ನಿಷೇಧಿತ ಬೆಳೆ ಭತ್ತ</p></div>

ಶಹಾಪುರ ತಾಲ್ಲೂಕಿನಲ್ಲಿ ಬೆಳೆದು ನಿಂತ ನಿಷೇಧಿತ ಬೆಳೆ ಭತ್ತ

   

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬೇಸಿಗೆ ಹಂಗಾಮಿನ ಬೆಳೆದು ನಿಂತ ಪೈರಿಗೆ ಏ.15ವರೆಗೆ ನೀರು ಹರಿಸುವಂತೆ ರೈತರ ಹೆಸರಿನಲ್ಲಿ ರಾಜಕೀಯ ಮುಖಂಡರು ಹೋರಾಟಕ್ಕೆ ಮುಂದಾಗಿರುವುದರಿಂದ ನೀರಿನ ಹಕ್ಕಿನ ಹೋರಾಟ ಸಂಪೂರ್ಣವಾಗಿ ರಾಜಕೀಯ ಮೇಲಾಟವನ್ನು ಪಡೆದುಕೊಂಡಿದೆ. ಮೇಲ್ನೋಟಕ್ಕೆ ಕಾಲುವೆ ನೀರಿಗಾಗಿ ಹೋರಾಟ ಎನ್ನುವಂತಿದ್ದರೂ ಒಳಗೆ ಮಾತ್ರ ಕಾಂಗ್ರೆಸ್ ಹಾಗೂ ಬಿಜೆಪಿಯ ರಾಜಕೀಯ ತಿಕ್ಕಾಟಕ್ಕೆ ನಾಂದಿಯಾಗಿದೆ.

ಪ್ರತಿ ವರ್ಷ ಬೇಸಿಗೆ ಹಂಗಾಮಿನಲ್ಲಿ ಕಾಲುವೆಗೆ ನೀರು ಹರಿಸುವಂತೆ ಹೋರಾಟ, ಧರಣಿ, ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇದಕ್ಕಿಂತ ಕಾಲುವೆ ಜಾಲದಲ್ಲಿ ತಾಂಡವಾಡುತ್ತಿರುವ  ಜ್ವಲಂತ ಸಮಸ್ಯೆಗಳಾದ ನಿಷೇಧಿತ ಬೆಳೆ ಭತ್ತ ನಾಟಿ, ನಿಗದಿತ ಅವಧಿಯಲ್ಲಿ ಬೆಳೆ ನಾಟಿ ಮಾಡದೆ ಇರುವುದು, ಏಕರೂಪದ ಬೆಳೆಯಿಂದ ಇಳುವರಿ ಕುಂಠಿತವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದೆ ಬಗ್ಗೆ ಚಕಾರ ಎತ್ತದೇ ಇರುವುದು. ಅಧಿಕ ನೀರು ಬಳಕೆಯಿಂದ ಭೂಮಿಯ ಫಲವತ್ತತ್ತೆ ಹಾಳಾಗಿರುವುದು. ಕಾಲುವೆ ಮೇಲ್ಭಾಗದಲ್ಲಿ ಸಮೃದ್ಧಿಯಾಗಿ ಎರಡು ಬೆಳೆಗೆ ನೀರು ಪಡೆದುಕೊಳ್ಳುವ ರೈತರು ನಯಾ ಪೈಸೆ ನೀರಾವರಿ ತೆರಿಗೆ ಕಟ್ಟದೆ ಇರುವುದರ ಬಗ್ಗೆ ಒಬ್ಬ ರೈತರಾಗಲಿ, ಇಲ್ಲವೇ ರಾಜಕೀಯ ಮುಖಂಡರು ತುಟಿ ಬಿಚ್ಚುತ್ತಿಲ್ಲ. ನಮಗೂ ಗೊತ್ತಾಗಿದೆ. ನೀರಿನ ಹೆಸರಿನಲ್ಲಿ ರಾಜಕೀಯ ಮಾಡುವುದು ಎನ್ನುತ್ತಾರೆ ಕೃಷ್ಣಾ ಅಚ್ಚುಕಟ್ಟು ಪ್ರದೇಶ ಭೂಮಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಅಶೋಕರಾವ ಮಲ್ಲಾಬಾದಿ.

ADVERTISEMENT

‘ಕಾಂಗ್ರೆಸ್ ಸರ್ಕಾರ ತೆಲಂಗಾಣ ರಾಜ್ಯಕ್ಕೆ ಹರಿಸಿದ್ದನ್ನು ಗುರಾಣಿ ಹಿಡಿದುಕೊಂಡ ಬಿಜೆಪಿಯ ಮಾಜಿ ಸಚಿವ ರಾಜೂಗೌಡ ಮೊದಲ ಹಂತದ ಭಾಗವಾಗಿ ಕೆಲ ದಿನದ ಹಿಂದೆ ನಾರಾಯಣಪುರದಲ್ಲಿ ಟ್ರ್ಯಾಕ್ಟರ್ ಮೂಲಕ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ. ಅಲ್ಲದೇ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದರ ಮುಂದುವರೆದ ಭಾಗವಾಗಿ ಏ.1ರಂದು ಭೀಮರಾಯನಗುಡಿಯಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಯಾರ ಹಿತಕ್ಕಾಗಿ ಹೋರಾಟ ಮಾಡುತ್ತಾರೆ ಎಂಬುವುದು ಮೊದಲು ರಾಜಕೀಯ ಮುಖಂಡರು ಸ್ಪಷ್ಟಪಡಿಸಬೇಕು’ ಎಂದು ಕಾಲುವೆ ಜಾಲದ ಕೆಳಭಾಗದ ನೀರು ವಂಚಿತ ರೈತ ಸಾಬಣ್ಣ ಪ್ರಶ್ನೆ.

ಸೂಕ್ಷ್ಮವಾದ ನೀರಿನ ಸಮಸ್ಯೆಯನ್ನು ಅರಿತ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ತೆಲಂಗಾಣ ರಾಜ್ಯಕ್ಕೆ ಮಾನವೀಯತೆ ಮೇಲೆ ಕೇವಲ 1.29 ಟಿಎಂಸಿ ನೀರು ಮಾತ್ರ ಹರಿಬಿಡಲಾಗಿದೆ. ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಲಭ್ಯವಿರುವ ನೀರಿನ ಮಟ್ಟದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ವಾಸ್ತವ ಪರಿಸ್ಥಿತಿಯನ್ನು ರೈತರು ಅರಿತುಕೊಳ್ಳಬೇಕು. ‘ಸದ್ಯ ಕೇವಲ 3 ಟಿಎಂಸಿ ನೀರು ಬೆಳೆಗೆ ದೊರೆಯಬಹುದು. ಹಾಗಾಗಿ ಮೂರು ದಿನ ಕಾಲುವೆಗೆ ನೀರು ಹರಿಸಲು ಪ್ರಾಮಾಣಿಕವಾಗಿ ಯತ್ನಿಸುವುದಾಗಿ ಸಚಿವರು ಸ್ಪಷ್ಟಪಡಿಸಿರುವುದು ಬಿಜೆಪಿ ನಾಯಕರಿಗೆ ಕೆರಳುವಂತೆ ಮಾಡಿದೆ ಎನ್ನುತ್ತಾರೆ’ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು.

ತೆಲಂಗಾಣ ರಾಜ್ಯಕ್ಕೆ ಕುಡಿಯುವ ನೀರಿಗಾಗಿ ಮಾನವೀಯತೆಯ ಮೇಲೆ 1.29 ಟಿಎಂಸಿ ನೀರು ಮಾತ್ರ ಹರಿಸಲಾಗಿದೆ. ರೈತರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ತೆಗೆದುಕೊಂಡು ಕಾಲುವೆಗೆ ನೀರು ಹರಿಸುವ ಬಗ್ಗೆ ಪ್ರಾಮಾಣಿಕ ಯತ್ನ ಮಾಡುವೆ.
ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ

ಇವೆಲ್ಲದರ ನಡುವೆ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಕಾಲುವೆಗೆ ನೀರು ಹರಿಸುವಂತೆ ಮನವಿ ಸಲ್ಲಿಸಿದ್ದರು. ಕಾಲುವೆಯ ನೀರು ಸುರಪುರ ಹಾಗೂ ಶಹಾಪುರ ಕ್ಷೇತ್ರಕ್ಕೆ ರಾಜಕೀಯ ಸಂಘರ್ಷದ ಮೆಟ್ಟಿಲು ಆಗುವುದರ ಜತೆಗೆ ನಿಷೇಧಿತ ಬೆಳೆಯಾದ ಭತ್ತಕ್ಕೆ ನೀರು ಕೊಡಿಸುವುದು ಏಕಮಾತ್ರ ಉದ್ದೇಶ ಅದರಲ್ಲಿ ಅಡಗಿದೆ ಎಂಬ ಆರೋಪವನ್ನು ಕಾಲುವೆ ಜಾಲದ ನೀರು ವಂಚಿತ ರೈತರು ಮಾಡಿದ್ದಾರೆ.

ಆಡಳಿತ ಕಚೇರಿಯ ಮುಂದೆ ಪ್ರತಿಭಟನೆ ಇಂದು

ಶಹಾಪುರ: ನಾರಾಯಣಪುರ ಎಡ ಮತ್ತು ಬಲದಂಡೆ ಭಾಗಕ್ಕೆ ಏ.1ರಿಂದ 15ರವರೆಗೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಮಾಜಿ ಸಚಿವ ರಾಜೂಗೌಡ ಹಾಗೂ ಬಿಜೆಪಿಯ ಹಿರಿಯ ಮುಖಂಡ ಅಮೀನರಡ್ಡಿ ಪಾಟೀಲ ಯಾಳಗಿ  ಕನ್ನಡಪರ ದಲಿತಪರ ರೈತ ಸಂಘಟನೆಗಳು ರೈತರು ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ಭೀಮರಾಯನಗುಡಿ ಮುಖ್ಯ ಎಂಜಿನಿಯರ್ ಆಡಳಿತ ಕಚೇರಿಯ ಮುಂದೆ ಮಂಗಳವಾರ (ಏ.1) ರಂದು ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ಹಾಗೂ ಮುಖ್ಯ ಎಂಜಿನಿರಿಂಗ್ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿಯ ಮುಖಂಡರೊಬ್ಬರು  ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.