ADVERTISEMENT

ಯಾದಗಿರಿ: ಇನ್ನೂ ಬಾರದ ಪ್ರವಾಹದ ಪರಿಹಾರ ಧನ

ಮನೆ ಕಳೆದುಕೊಂಡವರಿಗೂ ಸಿಕ್ಕಿಲ್ಲ ಪರಿಹಾರ, ಅಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 2:27 IST
Last Updated 25 ಮಾರ್ಚ್ 2021, 2:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾದಗಿರಿ: ಜಿಲ್ಲೆಯಲ್ಲಿ ಕಳೆದ 7–8 ತಿಂಗಳ ಹಿಂದೆ ಸುರಿದ ಅಧಿಕ ಮಳೆ, ನದಿಗಳ ಪ್ರವಾಹದಿಂದ ಹಾಳಾದ ಬೆಳೆಗೆ ಇನ್ನೂ ಪರಿಹಾರದ ಧನ ತಲುಪಿಲ್ಲ. ಇದರಿಂದ ಜಿಲ್ಲೆಯ ರೈತಾಪಿ ವರ್ಗ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೃಷ್ಣಾ, ಭೀಮಾ ನದಿಯಿಂದ ಉಂಟಾದ ಭೀಕರ ಪ್ರವಾಹದಿಂದ ನದಿ ಪಾತ್ರದ ಬೆಳೆಗಳು ಭಾಗಶಃ ಹಾನಿಯಾಗಿದ್ದವು. ಇದರ ಜೊತೆಗೆ ಅಧಿಕ ಮಳೆಯಿಂದ ಮಣ್ಣಿನ ಮನೆಗಳು ಬಿದ್ದಿದ್ದವು. ಇವುಗಳಿಗೆ ಕೇವಲ ₹10 ಸಾವಿರ ಪರಿಹಾರ ನೀಡಿ ಕೈತೊಳೆದುಕೊಂಡಿದ್ದಾರೆ. ಉಳಿದ ಹಣ ನೀಡದೇ ಇರುವುದರಿಂದ ಹರಕು ಮನೆಗಳಲ್ಲಿ ವಾಸ ಮಾಡುವ ಪರಿಸ್ಥಿತಿ ಏರ್ಪಟ್ಟಿದೆ.

ಪ್ರವಾಹದಿಂದ ಜಿಲ್ಲೆಯ ವಾಣಿಜ್ಯ ಬೆಳೆಯಾದ ಹತ್ತಿ ಸಂಪೂರ್ಣ ನಾಶವಾಗಿದೆ. ಹೊಲ, ಗದ್ದೆಗಳಲ್ಲಿ 10 ದಿನಕ್ಕೂ ಹೆಚ್ಚು ದಿನ ನೀರು ನಿಂತಿದ್ದರಿಂದ ಬೆಳೆ ಸುಟ್ಟ ರೀತಿಯಲ್ಲಿ ಎಲೆ, ಗಿಡಗಳು ಕೆಂಪಾಗಿದ್ದವು. ಹಲವಾರು ರೈತರು ಹತ್ತಿ ಬೆಳೆ ನಾಶ ಮಾಡಿದ್ದಾರೆ. ಹತ್ತಿ ಬೆಳೆ ವಾರ್ಷಿಕ ಬೆಳೆಯಾಗಿದೆ. ಆದರೆ, ಪ್ರವಾಹದಿಂದ ಕೇವಲ ಎರಡ್ಮೂರು ತಿಂಗಳಲ್ಲಿ ಹಾಳಾಗಿದೆ.

ADVERTISEMENT

ಅಧಿಕ ಮಳೆ, ಆಲಿಕಲ್ಲು ಮಳೆಯಿಂದ ಜಿಲ್ಲೆಯಲ್ಲಿ 1,526 ಹೆಕ್ಟೇರ್ ಪ್ರದೇಶ ಹಾಳಾಗಿತ್ತು. ಇಲ್ಲಿಯವರೆಗೆ ಕೆಲ ರೈತರಿಗೆ ಪರಿಹಾರವೇ ಬಂದಿಲ್ಲ ಎನ್ನುವ ಆರೋಪವೂ ಇದೆ. ಜಿಲ್ಲೆಯಲ್ಲಿ ಅಧಿಕ ಮಳೆ, ಪ್ರವಾಹದಿಂದ 6,500 ಹೆಕ್ಟೇರ್‌ಗೂ ಹೆಚ್ಚು ಬೆಳೆ, 2,900 ಮನೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಹಲವಾರು ರೈತರಿಗೆ ಪರಿಹಾರದ ಹಣ ಬಂದಿಲ್ಲ.

ಬೆಳೆ ಹಾನಿಯಾದ ಬಗ್ಗೆ ಕಂದಾಯ, ಕೃಷಿ ಇಲಾಖೆಯಿಂದ ಜಂಟಿ ಸರ್ವೆ ಮಾಡಲಾಗಿದೆ.

ಜಿಲ್ಲೆಯಲ್ಲಿ 3.58 ಲಕ್ಷ ಹೆಕ್ಟೇರ್‌ ಸಾಗುವಳಿ ಕ್ಷೇತ್ರ, 2.69 ಲಕ್ಷ ಹೆಕ್ಟೇರ್‌ ಮುಂಗಾರು, 1.67 ಲಕ್ಷ ಹೆಕ್ಟೇರ್‌ ಹಿಂಗಾರು, 600 ಹೆಕ್ಟೇರ್‌ ಅರಣ್ಯ ಪ್ರದೇಶ ಇದೆ.

*
ಜಿಲ್ಲೆಯಲ್ಲಿ ಉಂಟಾದ ಪ್ರವಾಹದ ಪರಿಹಾರ ಧನ ಈಗ ಮೊದಲನೇ ಹಂತದಲ್ಲಿ ಬಿಡುಗಡೆಯಾಗಿದೆ. ಹಂತಹಂತವಾಗಿ ಹಣ ಬರಲಿದೆ
–ಡಾ.ರಾಗಪ್ರಿಯಾ ಆರ್‌, ಜಿಲ್ಲಾಧಿಕಾರಿ

*
ಜಿಲ್ಲೆಯ ಹಲವಾರು ರೈತರಿಗೆ ಪ್ರವಾಹದಿಂದ ಉಂಟಾದ ಪರಿಹಾರದ ಧನವೇ ಬಂದಿಲ್ಲ. ಸರ್ಕಾರಕ್ಕೆ ಪ್ರಮಾಣಿಕೃತ ವರದಿ ಸಲ್ಲಿಸಿಲ್ಲ. ಇದರಿಂದ ಹಲವಾರು ರೈತರಿಗೆ ನಷ್ಟ ಉಂಟಾಗಿದೆ.
–ಮಾಣಿಕರೆಡ್ಡಿ ಕುರಕುಂದಿ, ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಕಾರ್ಯಾಧ್ಯಕ್ಷ

*
ಹತ್ತಿ ಬೆಳೆ ನಾಶವಾದರೂ ಇಲ್ಲಿಯವರೆಗೆ ಪರಿಹಾರ ಧನ ಬಂದಿಲ್ಲ. ಸಂಬಂಧಿಸಿದವರನ್ನು ಕೇಳಿದರೆ ಈ ವಾರ, ಮುಂದಿನವಾರ ಬರುತ್ತೆ ಎಂದು ಕಾಲ ತಳ್ಳುತ್ತಿದ್ದಾರೆ. ಬೆಳೆ ನಾಶದಿಂದ ಕಂಗಲಾಗಿದ್ದೇವೆ.
–ಬಸವರಾಜ ಗೌಡ ಶಿವಪುರ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.