ADVERTISEMENT

ಖನಿಜ ನಿಧಿ: 4 ವರ್ಷಗಳಲ್ಲಿ ₹6.24 ಕೋಟಿ ಜಮೆ, ₹ 14 ಲಕ್ಷ ವೆಚ್ಚ

ಮಲ್ಲಿಕಾರ್ಜುನ ನಾಲವಾರ
Published 4 ಫೆಬ್ರುವರಿ 2026, 4:42 IST
Last Updated 4 ಫೆಬ್ರುವರಿ 2026, 4:42 IST
ಯಾದಗಿರಿ ತಾಲ್ಲೂಕಿನ ವರ್ಕನಳ್ಳಿ ಗ್ರಾಮದಲ್ಲಿನ ಕಲ್ಲು ಗಣಿಗಾರಿಕೆ
ಯಾದಗಿರಿ ತಾಲ್ಲೂಕಿನ ವರ್ಕನಳ್ಳಿ ಗ್ರಾಮದಲ್ಲಿನ ಕಲ್ಲು ಗಣಿಗಾರಿಕೆ   

ಯಾದಗಿರಿ: ‘ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ’ ಎನ್ನುವಂತೆ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್‌) ನಿಧಿಯು ಯಾದಗಿರಿ ಜಿಲ್ಲೆಗೆ ನಾಲ್ಕು ವರ್ಷಗಳಲ್ಲಿ ₹ 6.24 ಕೋಟಿ ಹರಿದುಬಂದಿದ್ದು, ಮೂರು ವರ್ಷಗಳಲ್ಲಿ ಖರ್ಚಾಗಿದ್ದು ಕೇವಲ ₹ 14 ಲಕ್ಷ!

ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಗಣಿಗಾರಿಕೆ ಚಟುವಟಿಕೆಗಳು ವಿಸ್ತರಿಸಿಕೊಳ್ಳುತ್ತಿವೆ. ಅಂತೆಯೆ, 2022–23ರಲ್ಲಿ ಕೇವಲ ₹ 15 ಲಕ್ಷ ಜಮೆಯಾಗಿದ್ದ ಡಿಎಂಎಫ್‌ ನಿಧಿ, 2025–26ರ 9 ತಿಂಗಳಲ್ಲಿ ₹2.33 ಕೋಟಿ ನಿಧಿ ಹರಿದು ಬಂದಿದೆ. ಕೋಟ್ಯಂತರ ರೂಪಾಯಿ ಖನಿಜ ನಿಧಿ ಖಜಾನೆಗೆ ಸೇರುತ್ತಿದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮೂರು ವರ್ಷಗಳ ಹಿಂದೆ ಕ್ರಿಯಾಯೋಜನೆ ರೂಪಿಸಿ ₹ 14 ಲಕ್ಷ ಅನುದಾನವನ್ನು ಆರೋಗ್ಯಕ್ಕಾಗಿ ಖರ್ಚು ಮಾಡಲಾಗಿತ್ತು. ಆ ನಂತರ ಹೊಸ ಯೋಜನೆಗಳು ರೂಪುಗೊಂಡಿಲ್ಲ. ಡಿಎಂಎಫ್‌ ಟ್ರಸ್ಟ್‌ ಆಡಳಿತ ಮಂಡಳಿಯ ಸಭೆಯೂ ಆಗಿಲ್ಲ. ಸರ್ಕಾರದ ನಿರ್ಲಕ್ಷ್ಯದ ಜತೆಗೆ ಆಡಳಿತ ಹಾಗೂ ನಾಯಕರ ಇಚ್ಛಾಶಕ್ತಿಯ ಕೊರತೆ ಎಂಬ ದೂರುಗಳು ಕೇಳಿಬರುತ್ತಿವೆ.

ADVERTISEMENT

‘ಜಿಲ್ಲೆಯಲ್ಲಿ ಮರಳು, ಕಲ್ಲು, ಮುರುಮ್ ಹಾಗೂ ಸುಣ್ಣದ ಕಲ್ಲು ಗಣಿಗಾರಿಕೆ ಅನುಮತಿಸಲಾಗಿದೆ. ವರ್ಕನಳ್ಳಿ, ಹಳಗೇರಾ, ಯರಗೋಳ, ಸುರಪುರ ತಾಲ್ಲೂಕಿನ ಸೂಗುರು, ವಡಗೇರಾ, ಸೈದಾಪುರ, ಶಿರವಾಳ ಸೇರಿ ಇತರೆಡೆ ಗಣಿಗಾರಿಕೆ ಪ್ರದೇಶವೆಂದು ಗುರುತಿಸಲಾಗಿದೆ. ಅವುಗಳ 15 ಕಿ.ಮೀ. ವ್ಯಾಪ್ತಿಯನ್ನು ನೇರ ಗಣಿಬಾಧಿತ ಪ್ರದೇಶವೆಂದು ಪರಿಗಣಿಸಲಾಗಿದೆ ಎನ್ನುತ್ತಾರೆ’ ಗಣಿ ಇಲಾಖೆ ಅಧಿಕಾರಿಗಳು.

ಡಿಎಂಎಫ್ ಅಡಿ ಸಂಗ್ರಹವಾಗುವ ಒಟ್ಟು ನಿಧಿಯಲ್ಲಿ ಶೇ 10ರಷ್ಟು ಮೊತ್ತವನ್ನು ದತ್ತಿನಿಧಿಗೆ, ಶೇ 5ರಷ್ಟು ಮೊತ್ತ ಆಡಳಿತ ವೆಚ್ಚಕ್ಕೆ ಮೀಸಲಿದೆ. ಉಳಿದ ಶೇ 85ರಷ್ಟು ನಿಧಿಯನ್ನು ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮತ್ತು ಪರೋಕ್ಷವಾಗಿ ಒಳಗಾದ ಪ್ರದೇಶಗಳಲ್ಲಿನ ವಾಸಿಸುವ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೊಗಿಸಬಹುದು ಎನ್ನುತ್ತದೆ ಡಿಎಂಎಫ್‌ ಟ್ರಸ್ಟ್‌ ನಿಯಮ.

ನಾಲ್ಕು ವರ್ಷಗಳಲ್ಲಿ ಜಮೆಯಾಗಿರುವ ₹ 6.24 ಕೋಟಿಯಲ್ಲಿ ಜಿಲ್ಲಾಡಳಿತಕ್ಕೆ ₹ 14 ಲಕ್ಷವಷ್ಟೇ ಖರ್ಚು ಮಾಡಲು ಸಾಧ್ಯವಾಗಿದೆ. ಉಳಿದ ಹಣ ಖಜಾನೆಯಲ್ಲಿಯೇ ಕೊಳೆಯುತ್ತಿದೆ. ಗಣಿಬಾಧಿತ ಬಹುತೇಕ ಪ್ರದೇಶಗಳು ಸಮಸ್ಯೆಗಳ ಸರಮಾಲೆಯಿಂದ ನರಳುತ್ತಿವೆ. ‘ಕಲ್ಲು, ಮರಳು, ಮರುಮ್‌ ಹೊತ್ತು ವಾಹನಗಳು ಓಡಾಡಿದ ರಸ್ತೆಗಳು ಗುಂಡಿಮಯವಾಗಿವೆ. ಯಾದಗಿರಿ– ವರ್ಕನಳ್ಳಿ – ಮೈಲಾಪುರದ ರಸ್ತೆಯ ಇದಕ್ಕೆ ಸಾಕ್ಷಿಯಾಗಿದೆ’ ಎನ್ನುತ್ತಾರೆ ಗಣಿಬಾಧಿತ ಪ್ರದೇಶದ ನಿವಾಸಿಗಳು.

ವರ್ಕನಳ್ಳಿ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಯಿಂದ ಸುತ್ತಲಿನ ಗ್ರಾಮಗಳ ಗರ್ಭಿಣಿಯರು ವೃದ್ಧರು ಮಕ್ಕಳಿಗೂ ತೊಂದರೆ ಆಗುತ್ತಿದೆ. ಜಮೆಯಾಗಿರುವ ಡಿಎಂಎಫ್‌ ನಿಧಿ ಜನ ಕಲ್ಯಾಣಕ್ಕೆ ಬಳಕೆಯಾಗಬೇಕು.
ಭೀಮು ಪೂಜಾರಿ, ಸಾಮಾಜಿಕ ಕಾರ್ಯಕರ್ತ

‘ಶೀಘ್ರವೇ ಸಭೆ; ಕ್ರಿಯಾ ಯೋಜನೆ ಸಲ್ಲಿಕೆಗೆ ಪತ್ರ’

‘ಡಿಎಂಎಫ್‌ ಟ್ರಸ್ಟ್‌ ಆಡಳಿತ ಮಂಡಳಿಯ ಸಭೆ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಶೀಘ್ರವೇ ಎರಡು ಸಭೆ ಮಾಡಿ ಕ್ರಿಯಾ ಯೋಜನೆಗಳನ್ನು ಕೊಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗುವುದು’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವೀರೇಶ ಶಾಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ‘ಇಲ್ಲಿಯವರೆಗೆ ಡಿಎಂಎಫ್‌ ಖನಿಜ ನಿಧಿಯ ಮೊತ್ತ ₹ 7.06 ಕೋಟಿಯಷ್ಟಾಗಿದೆ. ಅದರಲ್ಲಿ ₹6.05 ಕೋಟಿಯಷ್ಟು ಅನುದಾನ ಖರ್ಚು ಮಾಡಬಹುದು. ನೇರ ಪರಿಣಾಮ ಮತ್ತು ಪರೋಕ್ಷವಾಗಿ ಪರಿಣಾಮ ಬೀರಿದ ಪ್ರದೇಶಗಳಿಗೆ ಖರ್ಚು ಮಾಡಲಾಗುವುದು’ ಎಂದರು.

ಡಿಎಂಎಫ್‌ ನಿಧಿ ಯಾವುದಕ್ಕೆಲ್ಲ ಬಳಕೆ?

ಹೆಚ್ಚಿನ ಆದ್ಯತಾ ವಲಯಕ್ಕೆ ಶೇ 60ರಷ್ಟು ಅನುದಾನ ಬಳಿಕೆ. ಕುಡಿಯುವ ನೀರು ಸರಬರಾಜು ಪರಿಸರ ಸಂರಕ್ಷಣೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಆರೋಗ್ಯ ರಕ್ಷಣೆ ಶಿಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವೃದ್ಧರು ಮತ್ತು ಅಂಗವಿಕಲರ ಕಲ್ಯಾಣ ಕೌಶಲಾಭಿವೃದ್ಧಿ ನೈರ್ಮಲ್ಯ ಕಾರ್ಯಗಳಿಗೆ ಅನುದಾನವನ್ನು ವಿನಿಯೋಗಿಸಬಹುದು. ಮೂಲಸೌಕರ್ಯ ನೀರಾವರಿ ಇಂಧನ ಮತ್ತು ಜಲಾನಯನ ಅಭಿವೃದ್ಧಿ ಹಾಗೂ ಗಣಿ ಪರಿಸರದಲ್ಲಿನ ಪರಿಸರ ಸಂರಕ್ಷಣೆಯಂತಹ ಇತರೆ ಆದ್ಯತಾ ಕಾರ್ಯಗಳಿಗೆ ಶೇ 40ರಷ್ಟು ಅನುದಾನ ಬಳಸಲು ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.