ಯಾದಗಿರಿ: ನವರಾತ್ರಿ ಹಬ್ಬ ಭಾಗವಾಗಿ ಆಯುಧಪೂಜೆ ಮತ್ತು ವಿಜಯದಶಮಿ ಸಂಭ್ರದ ಆಚರಣೆಯ ಮೇಲೂ ಭೀಮಾ ನದಿ ಪ್ರವಾಹದ ಛಾಯೆ ಆವರಿಸಿಕೊಂಡಿದೆ. ಹಬ್ಬದ ಹಿಂದಿನ ದಿನವಾದ ಮಂಗಳವಾರ ಮಾರುಕಟ್ಟೆಯಲ್ಲಿ ಖರೀದಿಯ ಸಂಭ್ರಮ ಮಂಕಾಗಿತ್ತು.
ಆಯುಧಪೂಜೆಗಾಗಿ ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ವರ್ತಕರು ಹೂ, ಬೂದುಕುಂಬಳಕಾಯಿ, ಬಾಳೆ ಕಂದು, ಮಾವಿನ ಸೊಪ್ಪು, ನಿಂಬೆ ಹಣ್ಣು, ತೆಂಗಿನಕಾಯಿ, ಕಬ್ಬು, ಹಣ್ಣು ಹಂಪಲು, ಅರಿಸಿನ, ಕುಂಕುಮ ಸೇರಿದಂತೆ ಹಲವು ವಸ್ತುಗಳ ರಾಶಿ ಹಾಕಿಕೊಂಡು ಕುಳಿತ್ತಿದ್ದರು. ನಿರೀಕ್ಷಿತ ವ್ಯಾಪಾರ ಇಲ್ಲದೆ ವ್ಯಾಪಾರಿಗಳು ಕಂಗಾಲಾದರು.
ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಆಯುಧಪೂಜೆ, ವಿಜಯದಶಮಿಯನ್ನು ವಿಜೃಂಭಣೆಯಿಂದ ಆಚರಿಸುವುದು ವಾಡಿಕೆ. ಹಬ್ಬದ ಹಿಂದಿನ ದಿನವೇ ಗ್ರಾಮೀಣ ಭಾಗ ಸಾವಿರಾರು ಜನರು ನೇತಾಜಿ ಸುಭಾಷ್ ವೃತ್ತ, ಹೊಸಳ್ಳಿ ಕ್ರಾಸ್, ರೈಲ್ವೆ ನಿಲ್ದಾಣ ರಸ್ತೆ, ಗಂಜ್ ವೃತ್ತದಲ್ಲಿ ಹಬ್ಬಕ್ಕೆ ಬೇಕಾಗಿರುವ ಸಾಗ್ರಿಗಳ ಖರೀದಿಗೆ ಬರುವುದು ವಾಡಿಕೆ. ಆದರೆ, ಈ ಬಾರಿ ಅಂತಹ ಜನ ದಟ್ಟಣೆ ಕಂಡುಬರಲಿಲ್ಲ.
ಸತತ ಮಳೆಯಿಂದ ಹೆಸರು, ಉದ್ದು ಬೆಳೆಗಳು ಕೈಕೊಟ್ಟವು. ಕೆಲವೇ ದಿನಗಳಲ್ಲಿ ಹಣವನ್ನು ತಂದುಕೊಡುತ್ತಿದ್ದ ಹತ್ತಿ ಬೆಳೆಯೂ ನೆರೆ, ಮಳೆಗೆ ಸಿಲುಕಿತ್ತು. ಪ್ರವಾಹದಲ್ಲಿ ಸಿಲುಕಿದ್ದ ರೈತರು, ಕೃಷಿ ಕೂಲಿ ಕಾರ್ಮಿಕರು ತಮ್ಮ ನಿತ್ಯದ ಬದುಕು ಕಟ್ಟಿಕೊಳ್ಳುವಲ್ಲಿ ಎದುಸಿರು ಬಿಡುತ್ತಿದ್ದಾರೆ. ಹೀಗಾಗಿ, ಗ್ರಾಮೀಣರು ಇಲ್ಲದೆ ವಿಜಯದಶಮಿಯ ಮಾರುಕಟ್ಟೆ ಕಳೆಗುಂದಿದೆ ಎಂದು ವ್ಯಾಪಾರಿಗಳು ವಿಶ್ಲೇಷಿಸಿದರು.
‘ಕಳೆದ ವರ್ಷ ಚೆಂಡು ಹೂವು ಒಂದು ಕೆ.ಜಿ.ಗೆ ₹150ಯಂತೆ ಎರಡೂವರೆ ಕ್ವಿಂಟಲ್ ಮಾರಿದ್ದೆ. ಈ ಬಾರಿ ಮಳೆಯಿಂದಾಗಿ ಹೂಗಳು ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಂದಿಲ್ಲ. ಪೂರೈಕೆ ಕಡಿಮೆ ಇದ್ದರೂ ಒಂದು ಕೆ.ಜಿ.ಗೆ ₹ 120 ನಿಗದಿ ಮಾಡಿ, ಗ್ರಾಹಕರ ಬೇಡಿಕೆಗೂ ಮುನ್ನವೇ ₹20 ಕಡಿಮೆ ಮಾಡಿದರೂ ₹30, ₹40, ₹50ಯಲ್ಲಿ ಖರೀದಿ ಮಾಡುತ್ತಿದ್ದಾರೆ’ ಎಂದು ವರ್ತಕಿ ಮಲ್ಲಮ್ಮ ಹೇಳಿದರು.
ಬೂದುಗುಂಬಳ ಗಾತ್ರದ ಆಧಾರದ ಮೇಲೆ ₹30ಯಿಂದ ₹200 ರವರೆಗೆ ಮಾರಾಟ ಮಾಡಲಾಗುತ್ತಿದೆ. ಜೋಡಿ ಕಬ್ಬು, ಬಾಳೆದಿಂಡಿಗೆ ₹ 120 ನಿಗದಿಪಡಿಸಲಾಗಿದೆ. 5 ನಿಂಬೆ ಹಣ್ಣಿಗೆ ₹ 20, ಜೋಡಿ ಕಬ್ಬಿಗೆ ₹60, ಪ್ರತಿ 50 ಗ್ರಾಂ ಕುಂಕುಮ, ಕೇಸರಿ, ಗುಲಾಲ್, ಭಂಡಾರಕ್ಕೆ ₹30ಯಂತೆ ಮಾರಾಟ ಆಗುತ್ತಿದೆ.
ಈ ಹಿಂದೆ ವಿಜಯದಶಮಿಯ ವ್ಯಾಪಾರ ಮೂರು ದಿನಗಳು ನಡೆಯುತ್ತಿದ್ದವು. ಮೊದಲನೇ ದಿನ ಗ್ರಾಮೀಣ ಭಾಗದವರು ಎರಡು ದಿನ ನಗರದವರು ಬರುತ್ತಿದ್ದರು. ಈಗ ಅಂತಹ ಸಂಭ್ರಮ ಇಲ್ಲವಾಗಿದೆಮಹೇಶ ಯಾದಗಿರಿ ,ಕುಂಕುಮ ವ್ಯಾಪಾರಿ
ಹಳ್ಳಿಯಿಂದ ಜನರು ಬಂದು ಖರೀದಿ ಮಾಡಿದರೆ ಮಾತ್ರ ವ್ಯಾಪಾರ ಜೋರಾಗಿ ನಮ್ಮ ಜೇಬು ಸಹ ತುಂಬುತ್ತದೆ. ಮಳೆ ನೆರೆಯಿಂದ ಜನರು ಹಳ್ಳಿಯಿಂದ ಆಚನೇ ಬರುತ್ತಿಲ್ಲಬಸವರಾಜ ಬೂದುಕುಂಬಳಕಾಯಿ, ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.