
ಹುಬ್ಬಳ್ಳಿ: ಚಳಿಗಾಲದಲ್ಲಿ ಬ್ರಾಯ್ಲರ್ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಕೋಳಿಗಳ ಪೂರೈಕೆ ಆಗುತ್ತಿಲ್ಲ. ಹವಾಮಾನ ವೈಪರೀತ್ಯ ಸೇರಿ ಬೇರೆ ಬೇರೆ ಕಾರಣಗಳಿಂದ ಕೋಳಿ ಉತ್ಪಾದಕ ಕಂಪನಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೋಳಿಗಳೂ ಇಲ್ಲ. ಪರಿಣಾಮವಾಗಿ ಕೋಳಿ ಮಾಂಸದ ದರ ದುಬಾರಿಯಾಗಿದೆ.
ಡಿಸೆಂಬರ್‌ನಲ್ಲಿ ಬ್ರಾಯ್ಲರ್ ಕೋಳಿ ಮಾಂಸದ ದರ ₹240 ಇತ್ತು. ಸದ್ಯ, ರಾಜ್ಯದ ಬಹುತೇಕ ಕಡೆ ಒಂದು ಕೆ.ಜಿ ಕೋಳಿ ಮಾಂಸದ ದರ ₹300ರಿಂದ ₹340 ಇದೆ. ನಾಟಿ ಕೋಳಿ ದರ ಕೆ.ಜಿ.ಗೆ ₹400ರ ಸಮೀಪಲ್ಲಿದ್ದರೆ, ಕುರಿ–ಮೇಕೆ ಮಾಂಸದ ದರ ₹700ರಿಂದ ₹800ರ ಆಸುಪಾಸಿನಲ್ಲಿದೆ. ಇದೀಗ ಬ್ರಾಯ್ಲರ್ ಕೋಳಿ ಮಾಂಸ ದರವೂ ಏರಿಕೆಯಾಗಿದೆ.
‘ಡಿಸೆಂಬರ್ ಕೊನೆಯಲ್ಲಿ ಮತ್ತು ಜನವರಿ ಮೊದಲ ವಾರದಲ್ಲಿ ಮೊಟ್ಟೆಗಳನ್ನು ಕೋಳಿಮರಿಗಳನ್ನಾಗಿಸುವ ಪ್ರಕ್ರಿಯೆ ನಡೆಯುತ್ತದೆ. ಅವುಗಳ ಬೆಳವಣಿಗೆ ಆಗುವವರೆಗೆ ಕೊರತೆ ಆಗಲಿದೆ. ಬೇಸಿಗೆ ವೇಳೆಗೆ ಮಾಂಸ ಸೇವನೆ ಪ್ರಮಾಣ ಕಡಿಮೆ ಆಗುತ್ತದೆ. ಆಗ, ಕೋಳಿ ಮಾಂಸದ ದರ ಕಡಿಮೆ ಆಗುತ್ತದೆ’ ಎಂದು ಧಾರವಾಡ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಸಹಾಯಕ ನಿರ್ದೇಶಕ ಡಾ. ಮಹೇಶ ಕುರಿಯವರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಶೀತ ವಾತಾವರಣದಲ್ಲಿ ಕೋಳಿ ಮರಿಗಳು ಅಷ್ಟಾಗಿ ಬೆಳವಣಿಗೆ ಆಗುವುದಿಲ್ಲ. ಕೋಳಿಗಳ ಉತ್ಪಾದನಾ ವೆಚ್ಚ ಏರಿಕೆ ಆಗಿರುವುದರಿಂದ ಕೋಳಿ ಮಾರಾಟಗಾರರು ಸಗಟು ದರ ಹೆಚ್ಚಿಸಿದ್ದಾರೆ. ಒಮ್ಮೆಲೇ 500 ಕೋಳಿಗಳನ್ನು ಕೇಳಿದರೆ, 200ರಿಂದ 250 ಕೋಳಿಗಳನ್ನು ಮಾತ್ರ ಪೂರೈಸುತ್ತಾರೆ’ ಎಂದು ಹುಬ್ಬಳ್ಳಿಯ ಚಿಕನ್ ಅಂಗಡಿಯೊಂದರ ಮಾಲೀಕ ಆನಂದ ಹೇಳಿದರು.
‘ಕೋಳಿ ಮಾಂಸದ ಅಂಗಡಿಯವರಿಗೆ ನಮ್ಮ ಕಂಪನಿಯ ಕೋಳಿಗಳನ್ನು ನಿರಂತರವಾಗಿ ಪೂರೈಸುತ್ತಿದ್ದೇವೆ. ಆದರೆ, ಕೆಲ ಕಂಪನಿಗಳಲ್ಲಿ ಕೋಳಿಗಳೇ ಇಲ್ಲ. ಬೇಡಿಕೆ ಹೆಚ್ಚಿರುವುದರಿಂದ ಕೋಳಿಗಳ ಕೊರತೆಯಾಗಿದೆ. ಇದರಿಂದ ದರ ಏರಿಕೆ ಆಗುತ್ತಿದೆ’ ಎಂದು ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿನ ಸ್ನೇಹ ಕಂಪನಿಯ ಹನುಮಂತ ಹುಂಚೆಕಟ್ಟೆ ಹಾಗೂ ಕರ್ನಾಟಕ ಪೌಲ್ಟ್ರಿ ಫಾರಂನ ಅವೀಶ್ ತಿಳಿಸಿದರು.
ಚಳಿಗಾಲದಲ್ಲಿ ಬ್ರಾಯ್ಲರ್ ಕೋಳಿ ದರ ದುಬಾರಿಯಾಗಿದ್ದು ಇದೇ ಮೊದಲು. ಒಂದು ಕೆ.ಜಿ ಮಾಂಸ ಖರೀದಿಸುತ್ತಿದ್ದ ಗ್ರಾಹಕರು ಈಗ ಅರ್ಧ ಕೆ.ಜಿ. ಖರೀದಿಸುತ್ತಿದ್ದಾರೆ.–ಹರೀಶ್ ಕುಮಾರ್, ಮ್ಯಾಕ್ಸ್ ಫ್ರೆಶ್ ಮೀಟ್, ತುಮಕೂರು
ಸ್ಥಳೀಯ ಮಟ್ಟದಲ್ಲಿ ಪೌಲ್ಟ್ರಿ ಫಾರ್ಮ್‌ಗಳ ಸಂಖ್ಯೆ ಕುಸಿದಿದೆ. ಹೀಗಾಗಿ ಮೊಟ್ಟೆಗಳನ್ನು ಮರಿಯಾಗಿಸುವ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ದೊಡ್ಡ ಕಂಪನಿಯವರು ಕೇಳಿದಷ್ಟೇ ದರ ಕೊಟ್ಟು ಕೋಳಿ ಖರೀದಿಸಬೇಕಿದೆ.–ಅಮ್ಜತ್ ಖಾನ್, ಕೋಳಿ ಮಾಂಸ ವ್ಯಾಪಾರಿ, ಹುಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.