ADVERTISEMENT

ಸ್ಪರ್ಧಾ ವಾಣಿ | ರಾಷ್ಟ್ರೀಯ ವಿದ್ಯಮಾನ

​ಪ್ರಜಾವಾಣಿ ವಾರ್ತೆ
Published 8 ಮೇ 2025, 0:30 IST
Last Updated 8 ಮೇ 2025, 0:30 IST
   

ಶೇ 20ರಷ್ಟು ಜೈವಿಕ ಇಂಧನ ಬಳಕೆಯ ಗುರಿ

*ದೇಶದ ಒಟ್ಟು ಇಂಧನ ಬಳಕೆಯಲ್ಲಿ ಜೈವಿಕ ಇಂಧನದ ಬಳಕೆ ಪ್ರಮಾಣವನ್ನು ಈ ವರ್ಷದ ಅಕ್ಟೋಬರ್‌ ವೇಳೆಗೆ ಶೇ 20ರಷ್ಟಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್‌ ಸಿಂಗ್ ಪುರಿ ತಿಳಿಸಿದ್ದಾರೆ.

*ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು 2070ರ ಒಳಗೆ ಶೂನ್ಯಕ್ಕೆ ಇಳಿಸುವ ಗುರಿ ನಿಗದಿಪಡಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಕಂಪನಿಗಳು 2040ರ ಒಳಗೆ ಈ ಗುರಿ ತಲುಪಲು ತಯಾರಿ ಮಾಡಿಕೊಂಡಿವೆ.

ADVERTISEMENT

*ಭಾರತದಲ್ಲಿ ಇನ್ನೂ 20 ವರ್ಷಗಳಷ್ಟು ಬಳಸುವಷ್ಟು ಪಳೆಯುಳಿಕೆ ಇಂಧನ ಲಭ್ಯ ಇದೆ. ಭವಿಷ್ಯದ ದೃಷ್ಟಿಯಿಂದ ಸಾಂದ್ರೀಕೃತ ಜೈವಿಕ ಅನಿಲ (CBG) ಮತ್ತು ಸಾಂದ್ರೀಕೃತ ನೈಸರ್ಗಿಕ ಅನಿಲ (CNG), ಸೌರಶಕ್ತಿ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ. ‌

*ಭಾರತದ ದೈನಂದಿನ ಕಚ್ಚಾತೈಲದ ಬಳಕೆ 50 ಲಕ್ಷ ಬ್ಯಾರೆಲ್‌ಗಳಿಂದ 57ಲಕ್ಷ ಬ್ಯಾರೆಲ್‌ಗೆ ಹೆಚ್ಚಿದೆ. ಶೀಘ್ರವೇ ಇದರ ಪ್ರಮಾಣ 70ಲಕ್ಷ ಬ್ಯಾರೆಲ್‌ಗಳಿಗೆ ಏರಿಕೆಯಾಗಲಿದೆ.

*ಗ್ರೀನ್ ಹೈಡ್ರೊಜನ್‌ ಕ್ಷೇತ್ರದಲ್ಲಿ ಭಾರತದ ಸಾಧನೆ ಚೇತೋಹಾರಿಯಾಗಿದೆ. ಸೌರಶಕ್ತಿ ಬಳಸಿ ಗ್ರೀನ್‌ ಹೈಡ್ರೋಜನ್‌ ಅನ್ನು ಮಿತ ದರದಲ್ಲಿ ಉತ್ಪಾದಿಸಲು ಯೋಜನೆ ರಚಿಸಲಾಗಿದೆ.

*ಕೇಂದ್ರ ಸರ್ಕಾರ ಉತ್ಪಾದನೆ ಆಧರಿತ ಉತ್ತೇಜನ (PLI) ಕಾರ್ಯಕ್ರಮದಡಿ ಎಲೆಕ್ಟ್ರೊಲೈಸರ್‌ ಉತ್ಪಾದನೆಗೆ ₹19,700 ಕೋಟಿ ನೆರವು ನೀಡಿದೆ ಎಂದು ಸಚಿವರು ಹೇಳಿದರು.

ಇಬ್ಬರು ರಾಜ್ಯಪಾಲರ ನೇಮಕ ಮೂವರು ರಾಜ್ಯಪಾಲರ ವರ್ಗ

*1984ರ ಬ್ಯಾಚ್‌ನ ಐಎಎಸ್‌ ಅಧಿಕಾರಿ, ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರನ್ನು ಮಣಿಪುರಕ್ಕೆ ಮತ್ತು ಕೇಂದ್ರದ ಮಾಜಿ ಸಚಿವ ವಿ.ಕೆ.ಸಿಂಗ್ ಅವರನ್ನು ಮಿಜೋರಾಂ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕ ಮಾಡಿದ್ದಾರೆ.

*ಮಿಜೋರಾಂ ರಾಜ್ಯಪಾಲರಾಗಿದ್ದ ಡಾ.ಹರಿಬಾಬು ಕಂಬಂಪತಿ ಅವರನ್ನು ಒಡಿಶಾಕ್ಕೆ, ಬಿಹಾರದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಕೇರಳಕ್ಕೆ, ಕೇರಳದ ರಾಜ್ಯಪಾಲರಾಗಿದ್ದ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಬಿಹಾರದ ರಾಜ್ಯಪಾಲರಾಗಿ ವರ್ಗಾವಣೆ ಮಾಡಿದ್ದಾರೆ.

*ಇದೇ ವೇಳೆ ಒಡಿಶಾದ ರಾಜ್ಯಪಾಲ ರಘುವರ ದಾಸ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ.

ಡಿಸೆಂಬರ್ 23ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ರೈತರ ದಿನವನ್ನು 'ಸಮೃದ್ಧ ರಾಷ್ಟ್ರಕ್ಕಾಗಿ ಅನ್ನದಾತರನ್ನು ಸಬಳೀಕರಣಗೊಳಿಸುವುದು' ಎಂಬ ಧ್ಯೇಯಯಡಿ ಆಚರಿಸಲಾಯಿತು.

ಡಿ.23 ರಾಷ್ಟ್ರೀಯ ರೈತ ದಿನ

*ಡಿಸೆಂಬರ್ 23ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. 2024ರ ರೈತರ ದಿನವನ್ನು ‘ಸಮೃದ್ಧ ರಾಷ್ಟ್ರಕ್ಕಾಗಿ ಅನ್ನದಾತರನ್ನು ಸಬಲೀಕರಣಗೊಳಿಸುವುದು’ ಎಂಬ ಧ್ಯೇಯದಡಿ ಆಚರಿಸಲಾಯಿತು.

*ಭಾರತದ ಆರ್ಥಿಕತೆಯಲ್ಲಿ ರೈತರು ಮೂಲ ಪಾತ್ರ ನಿರ್ವಹಿಸುತ್ತಾರೆ. ರೈತರು ದೇಶದ ಅಪಾರ ಪ್ರಮಾಣದ ಜನಸಂಖ್ಯೆಗೆ ಆಹಾರವನ್ನು ಒದಗಿಸುವುದಲ್ಲದೇ, ಗ್ರಾಮೀಣ ಉದ್ಯೋಗಗಳಿಗೂ ಕೊಡುಗೆ ನೀಡುತ್ತಾರೆ.

*ರೈತರು ಕೃಷಿ, ತೋಟಗಾರಿಕೆ ಜೊತೆಗೆ ಜಾನುವಾರು ಸಾಕಣೆ ಸೇರಿದಂತೆ ವಿವಿಧ ಮೂಲ ಉದ್ಯೋಗಗಳನ್ನು ಬೆಂಬಲಿಸುತ್ತಾರೆ. ಕೃಷಿ ಕ್ಷೇತ್ರವು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ದೇಶದ GDP ಮತ್ತು ಜೀವನೋಪಾಯದ ಮೇಲೆ ಪ್ರಭಾವ ಬೀರುತ್ತದೆ.

*ರೈತ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನ ಮಂತ್ರಿ ಫಸಲ್ ಬಿಮಾ, ಪ್ರಧಾನ ಮಂತ್ರಿ ಕಿಸಾನ್ ಮನ್‌ಧನ್ ಸೇರಿ ಹಲವು ಯೋಜನೆಗಳನ್ನು ಆರಂಭಿಸಿದೆ.

*ಈಚೆಗೆ ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತ ಗಮನಾರ್ಹ ಯಶಸ್ಸು ಸಾಧಿಸಿದೆ. ದೇಶ 2024 ರಲ್ಲಿ 332.2 ಮಿಲಿಯನ್ ಟನ್‌ಗಳ ಆಹಾರ ಧಾನ್ಯ ಉತ್ಪಾದನೆಯನ್ನು ದಾಖಲಿಸಿದೆ. 2023 ರಲ್ಲಿ ಈ ಪ್ರಮಾಣ 329.7 ಮಿಲಿಯನ್ ಟನ್‌ಗಳಷ್ಟಿತ್ತು.

*ಭಾರತದಲ್ಲಿ ಆಹಾರ ಭದ್ರತೆಯನ್ನು ಕಾಪಾಡಲು ರೈತರು ಅತ್ಯಗತ್ಯ. ಅವರ ಉತ್ಪಾದಕತೆ ಜನಸಂಖ್ಯೆಗೆ ಬೇಕಾದ ಆಹಾರದ ಲಭ್ಯತೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

*ಈ ನಿಟ್ಟಿನಲ್ಲಿ ಹಸಿವು ಮತ್ತು ಅಪೌಷ್ಟಿಕತೆಯನ್ನು ಎದುರಿಸಲು ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳ ಸ್ಥಿರ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ನಿರ್ಣಾಯಕವಾಗಿದೆ.

*ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಉಳಿಸುವಲ್ಲಿಯೂ ರೈತರು ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಸ್ಥಳೀಯ ಬೆಳೆಗಳ ಕೃಷಿಯ ಮೂಲಕ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ.

*ಸುಸ್ಥಿರ ಕೃಷಿ ವಿಧಾನಗಳನ್ನು ಉತ್ತೇಜಿಸುವ ಮೂಲಕ, ರೈತರು ಪರಿಸರ ಸಂರಕ್ಷಣೆ, ಕೃಷಿಯ ದೀರ್ಘಾವಧಿಯ ಕಾರ್ಯಸಾಧ್ಯತೆಗೆ ಕೊಡುಗೆ ನೀಡುತ್ತಾರೆ.

‘ಇಂದೋರ್’ ಭಾರತದ ಮೊದಲ ಶೂನ್ಯ–ತ್ಯಾಜ್ಯ ವಿಮಾನ ನಿಲ್ದಾಣ

*‘ಇಂದೋರ್ ವಿಮಾನ ನಿಲ್ದಾಣ’ ದೇಶದ ಮೊದಲ ಶೂನ್ಯ–ತ್ಯಾಜ್ಯ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ.

*ಸಮಗ್ರ ತ್ಯಾಜ್ಯ ನಿರ್ವಹಣೆ, ವಿಮಾನ ನಿಲ್ದಾಣ ಮತ್ತು ಅದರ ವಿಮಾನಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮರುಬಳಕೆ ಮಾಡುವ ತಂತ್ರಜ್ಞಾನವನ್ನು ಆಧರಿಸಿ ಈ ಶ್ರೇಯವನ್ನು ನೀಡಲಾಗಿದೆ.

*ಇಂದೋರ್ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯಲ್ಲಿ ವಿಮಾನಗಳು, ಅಂಗಡಿಗಳು, ಉದ್ಯಾನಗಳು ಮತ್ತು ಶೌಚಾಲಯಗಳಿಂದ ಹೊರಹೊಮ್ಮಿದ ತ್ಯಾಜ್ಯವನ್ನು ಮರುಬಳಕೆ ಮಾಡಲಾಗುತ್ತದೆ. ಆರ್ದ್ರ ತ್ಯಾಜ್ಯ ಗೊಬ್ಬರವಾಗಿ ರೂಪಾಂತರಗೊಳ್ಳುತ್ತದೆ.

*ಶೂನ್ಯ–ತ್ಯಾಜ್ಯ ಯೋಜನೆ ‘4R’ ತತ್ವಕ್ಕೆ ಬದ್ಧವಾಗಿದೆ. ‘4R’ ಎಂದರೆ Reduce, Reuse, Recycle and Restore (ಕಡಿಮೆ ಬಳಸಿ, ಮರುಬಳಸಿ, ಮರುಬಳಕೆ ಪ್ರಕ್ರಿಯೆಗೊಳಪಡಿಸಿ ಮತ್ತು ಮರುಸ್ಥಾಪಿಸಿ). ಈ ಚೌಕಟ್ಟು ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡಿ, ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.

*ತ್ಯಾಜ್ಯದ ಪರಿಣಾಮಕಾರಿ ನಿರ್ವಹಣೆಗೆ ವಿಮಾನ ನಿಲ್ದಾಣದಲ್ಲಿ, 3,000 ಚದರ ಅಡಿ ಮರುಬಳಕೆ ಘಟಕ ಸ್ಥಾಪಿಸಲಾಗಿದೆ.

*ಈ ವಿಮಾನ ನಿಲ್ದಾಣ ಈಗಾಗಲೇ ಭಾರತದಲ್ಲಿ ನಾಲ್ಕನೇ–ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಖ್ಯಾತಿ ಪಡೆದಿದೆ. ಇಲ್ಲಿನ ಪ್ರಯಾಣಿಕರ ಸೌಲಭ್ಯಗಳು ದೆಹಲಿ, ಹೈದರಾಬಾದ್‌ಗಿಂತ ಉತ್ಕೃಷ್ಟವಾಗಿವೆ.

ಏನಿದು ‘ಉಡಾನ್ ಯಾತ್ರಿ ಕೆಫೆ’?

*ನಾಗರಿಕ ವಿಮಾನಯಾನ ಸಚಿವಾಲಯ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ‘ಉಡಾನ್ ಯಾತ್ರಿ ಕೆಫೆ’ ಅನ್ನು ಪ್ರಾರಂಭಿಸಿದೆ.

*ಇದು ವಿಮಾನ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಆಹಾರ ಮತ್ತು ಪಾನೀಯಗಳನ್ನು ಒದಗಿಸುವ ಉಪಕ್ರಮವಾಗಿದೆ.

*ಕೆಫೆಯಲ್ಲಿ ನೀರು, ಚಹಾ, ಕಾಫಿ, ವಿವಿಧ ಬಗೆಯ ಲಘು ತಿಂಡಿಗಳು, ಇತರ ಅಗತ್ಯ ವಸ್ತುಗಳು ಲಭ್ಯವಿರುತ್ತವೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸಹಯೋಗದಲ್ಲಿ ದೇಶಾದ್ಯಂತ ವಿಸ್ತರಣೆಗೊಳ್ಳಲಿದೆ.

*‘ಉಡಾನ್ ಯಾತ್ರಿ ಕೆಫೆ’ ಯೋಜನೆಯನ್ನು ವಿಶಾಲ ಶ್ರೇಣಿಯ ಪ್ರಯಾಣಿಕರನ್ನು ಆಕರ್ಷಿಸಲು ವಿನ್ಯಾಸ ಮಾಡಲಾಗಿದೆ.

*ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI): ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ನಾಗರಿಕ ವಿಮಾನಯಾನ ಮೂಲಸೌಕರ್ಯವನ್ನು ರಚಿಸುವ, ನವೀಕರಿಸುವ, ನಿರ್ವಹಿಸುವ ಜವಾಬ್ದಾರಿ ಹೊಂದಿದೆ. ಇದು ಭಾರತದಾದ್ಯಂತ ವಿಮಾನ ನಿಲ್ದಾಣಗಳ ಮೇಲ್ವಿಚಾರಣೆ ಮಾಡುತ್ತದೆ. ವಿಮಾನ ಪ್ರಯಾಣದಲ್ಲಿ ಸುರಕ್ಷತೆ ಮತ್ತು ದಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.