
ಚಿತ್ರ: ಗೆಟ್ಟಿ
ಪುಟಾಣಿ ಮಕ್ಕಳನ್ನು ನೋಡಿದ ತಕ್ಷಣ ನಮ್ಮೊಳಗಿನ ತುಂಟತನ ತೆರೆದುಕೊಳ್ಳುತ್ತದೆ. ಮಕ್ಕಳ ಪುಟ್ಟ ಪುಟ್ಟ ನಡಿಗೆ, ನಗು, ಅಳು ಹಾಗೂ ಕುತೂಹಲಗಳು ನಮ್ಮೊಳಗಿನ ಮೃದು ಸ್ವಭಾವವನ್ನು ಎಚ್ಚರಿಸುತ್ತವೆ. ಮಕ್ಕಳ ಆರೈಕೆ ಪೋಷಕರ ಜವಾಬ್ದಾರಿಯಾಗಿದೆ. ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಪೋಷಕರು ಸಮಯ ಕೊಡಬೇಕು.
ಸಾಮಾನ್ಯವಾಗಿ ಎಲ್ಲಾ ಪೋಷಕರು ಮಕ್ಕಳ ದೈಹಿಕ ಅಗತ್ಯತೆಗಳನ್ನು ಪೂರೈಸುತ್ತಾರೆ. ಆದರೆ ಮಕ್ಕಳ ಮನಸ್ಸಿನ ಮಾತು, ಭಾವನೆ, ಗೊಂದಲ ಹಾಗೂ ಭಯಗಳಂತಹ ಮಕ್ಕಳ ತುಡಿತಗಳ ಬಗ್ಗೆ ಗಮನ ವಹಿಸುವುದಿಲ್ಲ ಎಂದು ಮನೋವಿಜ್ಞಾನ ಹೇಳುತ್ತದೆ.
ಹಲವು ಪೋಷಕರು ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿ ಹಾಕುತ್ತಾರೆ. ಅವರು ತಮಗೆ ಇಷ್ಟ ಬಂದ ಕೆಲಸ ಮಾಡುವಂತಿಲ್ಲ. ಎಲ್ಲದಕ್ಕೂ ಪೋಷಕರ ಅನುಮತಿ ಪಡೆಯಬೇಕು. ಇದು ಒಂದು ಹಂತದ ವರೆಗೆ, ಸರಿ ಎನಿಸಿದರೂ ಮಾನಸಿಕವಾಗಿ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ.
ಮಾನಸಿಕ ಆರೋಗ್ಯ ಕಣ್ಣಿಗೆ ಗೋಚರಿಸುವುದಲ್ಲ. ಅದು ಮಕ್ಕಳ ನಡವಳಿಕೆಯಿಂದ ಅರ್ಥವಾಗುತ್ತದೆ ಎಂದು ಮನೋವಿಜ್ಞಾನ ಹೇಳುತ್ತದೆ. ಪೋಷಕರಿಂದ ಸರಿಯಾದ ಆರೈಕೆ ಇರದ ಮಕ್ಕಳ ಮಾನಸಿಕ ಸಂಕೇತಗಳಿವು. ಅವುಗಳೆಂದರೆ,
ಮಾತನಾಡುವುದು ಕ್ರಮೇಣ ಕಡಿಮೆಯಾಗುವುದು.
ಒಂಟಿಯಾಗಿರುವ ಹವ್ಯಾಸ
ಗಾಬರಿ ಅಥವಾ ನಿರಾಶೆ
ಶಾಲೆಗೆ ಹೋಗಲು ಆಸಕ್ತಿ ತೋರದಿರುವುದು
ಹೆಚ್ಚಾದ ಚಡಪಡಿಕೆ
ಸೂಕ್ತ ನಿದ್ರೆ ಮಾಡದಿರುವುದು.
ಯಾರೊಂದಿಗೂ ಎನನ್ನು ನೇರವಾಗಿ ಹಂಚಿಕೊಳ್ಳದೇ ತಮ್ಮಲ್ಲಿಯೇ ಇಟ್ಟುಕೊಳ್ಳುವುದು.
ಈ ಸಂದರ್ಭದಲ್ಲಿ ಪೋಷಕರು ಏನು ಮಾಡಬೇಕು?
ಪೋಷಕರ ಬೆಂಬಲವೇ ಮಕ್ಕಳ ಮನಸ್ಸಿಗೆ ಔಷಧಿ ಎಂದು ಮನೋವಿಜ್ಞಾನ ಹೇಳುತ್ತದೆ.
ಮಕ್ಕಳೊಂದಿಗೆ ಮಾತನಾಡುವುದು: ಮಕ್ಕಳ ಮಾತು ಎಷ್ಟೇ ಶುಲ್ಲಕವಾಗಿದ್ದರೂ ಅದನ್ನು ತಾಳ್ಮೆಯಿಂದ ಕೇಳುವುದು.
ಭಾವನೆ ವ್ಯಕ್ತ ಪಡಿಸಲು ಸ್ವಾತಂತ್ರ್ಯ : ಮಕ್ಕಳು ಏನನ್ನಾದರೂ ವ್ಯಕ್ತ ಪಡಿಸಲು ಬಂದಾಗ ಸುಮ್ಮನಿರು ಎಂದು ಹೇಳುವ ಬದಲು, ನಿನಗೆ ಹೀಗೆ ಅನ್ನಿಸಲು ಕಾರಣವೇನು? ಎಂದು ಕೇಳುವುದು ಮಕ್ಕಳ ಮನಸ್ಸಿನ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ.
ಮಕ್ಕಳೊಂದಿಗೆ ಸಂಯಮ ಇರಲಿ: ಮಕ್ಕಳನ್ನು ಗದರಿಸಿದರೆ ಮೌನವಾಗಿ ಬಿಡುತ್ತಾರೆ. ಅವರ ಮಾತನ್ನು ಕೇಳಿದರೆ ಮಕ್ಕಳು ಧೈರ್ಯಶಾಲಿಗಳಾಗುತ್ತಾರೆ.
ಮನೆಯಲ್ಲೇ ಸುರಕ್ಷಿತ ವಾತಾವರಣ: ಭಯ ರಹಿತ ಮನೆ, ಅಭಿವ್ಯಕ್ತಿಗೆ ಪ್ರಾಧಾನ್ಯತೆ ಹಾಗೂ ಪ್ರೀತಿ ಇವು ಮಕ್ಕಳು ಆಂತರಿಕವಾಗಿ ‘ನಾನು ಅಮೂಲ್ಯ ’ ಎಂಬ ನಂಬಿಕೆ ತರುತ್ತದೆ.
ಸಮಯ ಕಳೆಯಿರಿ: ಪ್ರತಿ ದಿನ ಮಕ್ಕಳೊಂದಿಗೆ 10 ನಿಮಿಷವಾದರೂ ಕಳೆಯಿರಿ. ಆ ದಿನ ಮಕ್ಕಳು ಏನೆಲ್ಲಾ ಮಾಡಿದರು ಎಂದು ವಿಚಾರಿಸಿ ಮಾತನಾಡಿ.
ಉದಾಹರಣೆ:
ಒಂದು ಮಗು ಪ್ರತಿದಿನ ಶಾಲೆಗೆ ಹೋಗುವುದಕ್ಕೆ ಕಾರಣವಿಲ್ಲದೆ ಅಳುತ್ತಿರುತ್ತದೆ ಎಂದುಕೊಳ್ಳಿ. ಪೋಷಕರು ಮಗುವನ್ನು ಗದರಿಸುವುದು ನಿಲ್ಲಿಸಿ, ಶಾಂತವಾಗಿ ಕೇಳಿದಾಗ ಮಗು ಕಾರಣವನ್ನು ಹೇಳುತ್ತದೆ. ಆಗ ಪೋಷಕರು ಅದಕ್ಕೆ ತಕ್ಕ ಪರಿಹಾರ ಅಥವಾ ಮಗುವಿನ ಮನವೊಲಿಕೆ ಮಾಡಿ ಶಾಲೆಗೆ ಹೋಗುವಂತೆ ಪ್ರೇರೆಪಿಸಬಹುದು.
ಮಕ್ಕಳಿಗೆ ನಾವು ನೀಡಬಹುದಾದ ಅತ್ಯುತ್ತಮ ಉಡುಗೊರೆ ಎಂದರೆ, ಅವರ ಮಾತನ್ನು ಕೇಳುವುದು ಹಾಗೂ ಭಾವನೆಗಳನ್ನು ಅರ್ಥೈಸಿಕೊಳ್ಳುವುದಾಗಿದೆ.
ಸಣ್ಣದೊಂದು ಗಮನ, ಸಣ್ಣದೊಂದು ಮಾತು, ಸಣ್ಣದೊಂದು ಪ್ರೀತಿ, ಮಗುವಿನ ಭವಿಷ್ಯಕ್ಕೆ ದೊಡ್ಡ ಬೆಳಕಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.