ADVERTISEMENT

Forensic Science | ಬೇಡಿಕೆಯ ಕೋರ್ಸ್‌ ಫೋರೆನ್ಸಿಕ್‌ ಸೈನ್ಸ್‌

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 0:30 IST
Last Updated 17 ಮಾರ್ಚ್ 2025, 0:30 IST
   
ಕೆಲವೊಂದು ಕಷ್ಟವಾಗುವಂಥ ಅಪರಾಧಗಳನ್ನು ಸುಲಭವಾಗಿ ಪತ್ತೆಹಚ್ಚಲು ಫೋರೆನ್ಸಿಕ್‌ ತಜ್ಞರು ನೆರವಾಗುತ್ತಾರೆ.

ಫೋರೆನ್ಸಿಕ್  ಸೈನ್ಸ್ ಅಥವಾ ವಿಧಿವಿಜ್ಞಾನ ವಿಭಾಗದಲ್ಲಿ  ಪರಿಣತಿ ಪಡೆದ ವೃತ್ತಿಪರರಿಗೆ ಬೇಡಿಕೆ ಹೆಚ್ಚುತ್ತಿದ್ದು, ಪ್ರಮುಖವಾಗಿ ಸೈಬರ್ ಕ್ರೈಂ, ಆನ್‌ಲೈನ್‌ ವಂಚನೆ  ಕಂಡುಹಿಡಿಯಲು ಫೋರೆನ್ಸಿಕ್ ವಿಜ್ಞಾನ ಕ್ಷೇತ್ರದ ತಜ್ಞರ ಅಗತ್ಯವಿದೆ. 

ಅಪರಾಧದ ಸ್ವರೂಪದ ತನಿಖೆಗೆ ಪೂರಕ ವೈಜ್ಞಾನಿಕ ಆಧಾರ ಒದಗಿಸುವುದು ವಿಧಿವಿಜ್ಞಾನದ ವೈಶಿಷ್ಟ್ಯ. ಕಾನೂನಿಗೆ ಸಂಬಂಧಪಟ್ಟ ಯಾವುದೇ ವಿಜ್ಞಾನವನ್ನು ಫೋರೆನ್ಸಿಕ್ ಸೈನ್ಸ್ ಎಂದು ಕರೆಯಲಾಗುತ್ತದೆ. ಇದಕ್ಕೆ ಕನ್ನಡದಲ್ಲಿ ವಿಧಿವಿಜ್ಞಾನ, ಅಪರಾಧ ಪತ್ತೆ ಶಾಸ್ತ್ರ, ಅಪರಾಧ ನ್ಯಾಯಶಾಸ್ತ್ರ ಇತ್ಯಾದಿ ಹಲವು ಅರ್ಥಗಳಿವೆ. ಫೋರೆನ್ಸಿಕ್ ವಿಜ್ಞಾನವು ಅಪರಾಧಗಳು (Crime),  ಸಾಕ್ಷ್ಯಗಳು (Evidence) ಮತ್ತು ಕ್ರಿಮಿನಲ್ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಅಧ್ಯಯನದ ಕ್ಷೇತ್ರವಾಗಿದೆ. ಕಾನೂನು ಪ್ರಕ್ರಿಯೆಯಲ್ಲಿ ಅಪರಾಧಿಗಳನ್ನು ಪತ್ತೆಹಚ್ಚಲು ಮತ್ತು ನಿರಪರಾಧಿಗಳಿಗೆ ನ್ಯಾಯ ಒದಗಿಸಲು ವಿಧಿ ವಿಜ್ಞಾನ ಶಾಸ್ತ್ರವು ಸಾಕಷ್ಟು ನೆರವು ನೀಡುತ್ತದೆ.

ಕೆಲವೊಂದು ಕಷ್ಟವಾಗುವಂಥ ಅಪರಾಧಗಳನ್ನು ಸುಲಭವಾಗಿ ಪತ್ತೆಹಚ್ಚಲು ಫೋರೆನ್ಸಿಕ್‌ ತಜ್ಞರು ನೆರವಾಗುತ್ತಾರೆ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು  ಸ್ವಾಭಾವಿಕವಾದ ಒಲವು ಮತ್ತು ಆಸಕ್ತಿ ಇದ್ದು ವಿವೇಚನೆ, ದತ್ತಾಂಶ ಸಂಗ್ರಹಣೆ ಮತ್ತು ನಿರ್ವಹಣೆ, ತಾರ್ಕಿಕ ಪ್ರತಿಪಾದನಾ ಕೌಶಲ,  ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ ಸಮಯಪಜ್ಞೆ ಇತ್ಯಾದಿ ಕೌಶಲಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಫೋರೆನ್ಸಿಕ್ ವಿಜ್ಞಾನ ಪದವಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಉತ್ತಮ ಫಲಿತಾಂಶವನ್ನು ಹೊಂದಿರಬೇಕು.

ADVERTISEMENT

 ಅರ್ಹತೆ: ಪಿಯುಸಿಯಲ್ಲಿ ವಿಜ್ಞಾನವನ್ನು ಓದಿರಬೇಕು. ಶೇ 50ರಷ್ಟು ಅಂಕಗಳನ್ನು ಗಳಿಸಿರಬೇಕು. ಆಧುನಿಕ ತಂತ್ರಜ್ಞಾನದ ಸಹಾಯದಿಂದ ವೈಜ್ಞಾನಿಕವಾಗಿ ಅಪರಾಧದ ಕುರಿತು ತನಿಖೆ ನಡೆಸುವುದನ್ನು ಈ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗುತ್ತದೆ.

ವಿವಿಧ ಕಾನೂನು ಮತ್ತು ಅಪರಾಧ ಸಂಬಂಧಿತ ವಿಷಯಗಳಲ್ಲಿ ವೈಜ್ಞಾನಿಕ ವಿಧಾನಗಳು ಮತ್ತು ಪ್ರಕ್ರಿಯೆಗಳನ್ನು ಒಳಗೊಂಡಿರುವುದರಿಂದ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಬೇಕಾಗುತ್ತದೆ. ಗುರುತಿಸುವಿಕೆ, ಪರೀಕ್ಷೆ ಮತ್ತು ಮೌಲ್ಯಮಾಪನದ ಮೂಲಕ ಭೌತಿಕ ಪುರಾವೆಗಳನ್ನು ಬಹಿರಂಗಪಡಿಸುವುದು ಫೋರೆನ್ಸಿಕ್ ವಿಜ್ಞಾನದ ಮುಖ್ಯ ಕೆಲಸವಾಗಿದೆ. ಅಪರಾಧ ಸಂಬಂಧಿತ ದತ್ತಾಂಶವನ್ನು ವಿಶ್ಲೇಷಿಸಲು ರಸಾಯನವಿಜ್ಞಾನ, ಜೀವವಿಜ್ಞಾನ ಮತ್ತು ಭೌತವಿಜ್ಞಾನ ಸೇರಿ ವಿಜ್ಞಾನದ ವಿವಿಧ ಪ್ರಕಾರಗಳನ್ನು ವಿಧಿವಿಜ್ಞಾನವು ಅವಲಂಬಿಸಿದೆ.

ಲಭ್ಯವಿರುವ ಕಾಲೇಜುಗಳು: ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ, ಕ್ರೈಸ್ಟ್ ವಿಶ್ವವಿದ್ಯಾಲಯ,  ಆರ್.ವಿ ವಿಶ್ವವಿದ್ಯಾಲಯ, ಕ್ರಿಸ್ತು ಜಯಂತಿ ಕಾಲೇಜು, ಗಾರ್ಡನ್ ಸಿಟಿ ಕಾಲೇಜು, ಸೌಂದರ್ಯ ಕಾಲೇಜು, ಹರ್ಷ ಕಾಲೇಜು ಹಾಗೂ ಕೃಪಾನಿಧಿ ಕಾಲೇಜು. 

 ಮೈಸೂರಿನ ಜೆಎಸ್ಎಸ್ ಕಾಲೇಜು,  ಎಸ್.ಬಿ.ಆರ್. ಆರ್ ಮಹಾಜನ ಕಾಲೇಜು ಹಾಗೂ ಸೇಂಟ್‌ ಫಿಲೋಮಿನಾ ಕಾಲೇಜು ಮತ್ತು ಧಾರವಾಡದ ಕರ್ನಾಟಕ ವಿಜ್ಞಾನ ಕಾಲೇಜು ಸೇರಿದಂತೆ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಫೋರೆನ್ಸಿಕ್ ವಿಜ್ಞಾನದ ಪದವಿ ಕೋರ್ಸ್‌ ನಡೆಸಲಾಗುತ್ತಿದೆ. 

ಇದಲ್ಲದೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಗುಜರಾತಿನ ವಿಧಿವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಹೊಸದಾಗಿ ಆರಂಭಗೊಂಡಿರುವ ಧಾರವಾಡದ ವಿಧಿವಿಜ್ಞಾನ ವಿಶ್ವವಿದ್ಯಾಲಯದಲ್ಲೂ  ಫೋರೆನ್ಸಿಕ್ ವಿಜ್ಞಾನದ ಪದವಿ ಕೋರ್ಸ್‌ಗೆ ಸೇರಬಹುದು.

ಉದ್ಯೋಗವಕಾಶಗಳು: ವಿದ್ಯಾಭ್ಯಾಸದ ನಂತರ ಸರ್ಕಾರಿ ಮತ್ತು ಖಾಸಗಿ ಪತ್ತೇದಾರಿ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಪೊಲೀಸ್ ಇಲಾಖೆ, ರಾಜ್ಯ ಮತ್ತು ಕೇಂದ್ರ ವಿಧಿ ವಿಜ್ಞಾನ ಪ್ರಯೋಗಗಳು, ಸಿಐಡಿ, ಸಿಬಿಐ, ಐಬಿ,  ನಾರ್ಕೋಟಿಕ್ಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಬ್ಯಾಂಕ್ ಮತ್ತು ಹಣಕಾಸಿನ ಸಂಸ್ಥೆಗಳು, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆ, ಭಾರತೀಯ ರಕ್ಷಣಾ ಮತ್ತು ಅರೆಸೇನಾ ಪಡೆ ಸಂಸ್ಥೆಗಳು,  ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ, ನ್ಯಾಯಾಂಗ ಸಂಸ್ಥೆ, ಅಬಕಾರಿ ಇಲಾಖೆ ಹಾಗೂ ಇತರೆ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಬಹುದು. ಫೋರೆನ್ಸಿಕ್ ವಿಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿಯನ್ನು ಪೂರ್ಣಗೊಳಿಸಿದವರು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಮತ್ತು ವೈಜ್ಞಾನಿಕ ಸಂಶೋಧಕರಾಗಿ ಕೆಲಸ ನಿರ್ವಹಿಸಲು ಅವಕಾಶವಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.