ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರುದ್ಯೋಗ ಬಹು ದೊಡ್ಡ ಸಮಸ್ಯೆಯಾಗಿದೆ. ಯುವಕರು ಕೌಶಲಾಧಾರಿತ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಇತ್ತೀಚಿನ ವರ್ಷಗಳಲ್ಲಿ ಕೌಶಲಾಧಾರಿತ ಕೋರ್ಸ್‌ಗಳಿಗೆ ಮತ್ತು ಕೌಶಲಾಧಾರಿತ ವ್ಯಕ್ತಿಗಳಿಗೆ ಬೇಡಿಕೆ ಸಿಗುತ್ತಿದೆ. ಬೇಡಿಕೆ ಇರುವಂಥ ಕೋರ್ಸ್‌ಗಳನ್ನು ಆಯ್ಕೆ ಮಾಡಿ ಉದ್ಯೋಗದ ಭರವಸೆ ಹೊಂದಬಹುದು.
ಉದ್ಯೋಗ ಭರವಸೆಯ ಕೋರ್ಸ್‌ಗಳನ್ನು ನೀಡುವಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಮುಂಚೂಣಿಯಲ್ಲಿದೆ. ಜಿಟಿಟಿಟಸಿಯು ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‌ನಿಂದ ಮಾನ್ಯತೆ ಪಡೆದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಯಾಗಿದೆ. ಇಲ್ಲಿ ಉತ್ತಮ ಗುಣಮಟ್ಟದ ಉಧ್ಯಮ ಆಧಾರಿತ ತಾಂತ್ರಿಕ ತರಬೇತಿ ನೀಡಲಾಗುತ್ತದೆ.
ಜಿಟಿಟಿಸಿಯಲ್ಲಿ ಕೋರ್ಸ್ ಮಾಡಿದವರಿಗೆ ಹೆಚ್ಚು ಬೇಡಿಕೆ ಇದೆ. ಕರ್ನಾಟಕದಾದ್ಯಂತ 35 ಕೇಂದ್ರಗಳಿದ್ದು ಪ್ರತಿ ಕೇಂದ್ರಕ್ಕೂ ಪ್ರತಿ ವರ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಜಿಟಿಟಿಸಿಯಲ್ಲಿ ಲಭ್ಯವಿರುವ ಡಿಪ್ಲೊಮಾ ಕೋರ್ಸ್‌ಗಳು ಇತರೆ ಡಿಪ್ಲೊಮಾ ಕೋರ್ಸ್‌ಗಳಿಗಿಂತ ಭಿನ್ನವಾಗಿವೆ. ತಾತ್ವಿಕ ತರಬೇತಿಗಿಂತ ಪ್ರಾಯೋಗಿಕ ತರಬೇತಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕೌಶಲಗಳನ್ನು ಇಲ್ಲಿ ಕಲಿಸಲಾಗುತ್ತದೆ. ಹಾಗಾಗಿ ಜಿಟಿಟಿಸಿ ಕೋರ್ಸ್‌ಗಳು ಭಿನ್ನವಾಗಿವೆ.
ಅರ್ಹತೆ ಮತ್ತು ಆಯ್ಕೆ :
ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ ಅಥವಾ ಐಸಿಎಸ್‌ಇ ಪಠ್ಯಕ್ರಮದ 10ನೇ ತರಗತಿ ಉತ್ತೀರ್ಣರಾಗಿರಬೇಕು. ವಿದ್ಯಾರ್ಥಿಯು ಕರ್ನಾಟಕದಲ್ಲಿ ಕನಿಷ್ಠ 5 ವರ್ಷಗಳ ಶಿಕ್ಷಣವನ್ನು ಮಾಡಿರಬೇಕು. ವಿದ್ಯಾರ್ಥಿಗಳ ಅಂಕಗಳ ಆಧಾರದ ಮೇಲೆ ಅಂದರೆ ಮೆರಿಟ್ ಕಮ್ ರೋಸ್ಟರ್ ಪದ್ದತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಶೇಕಡಾ 33 ಸೀಟುಗಳನ್ನು ಕಾಯ್ದಿರಿಸಲಾಗಿರುತ್ತದೆ.
ಅರ್ಜಿ ಸಲ್ಲಿಕೆ : ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಮುಗಿದ ನಂತರ https://www.gttc.karnataka.gov.in/ ಅರ್ಜಿ ಸಲ್ಲಿಸಿ ಅಥವಾ 155267 ಸಂಖ್ಯೆಗೆ ಕರೆಮಾಡಿ ಹೆಸರು ನೋಂದಾಯಿಸಬೇಕು. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಮತ್ತು ಅಭ್ಯರ್ಥಿಗಳ ವೈಯಕ್ತಿಕ ವಾಟ್ಸಪ್ ಸಂಖ್ಯೆಗೆ ಸಂದೇಶ ಕಳಿಸಲಾಗುತ್ತದೆ.
ಇನ್‌ಪ್ಲಾಂಟ್ ತರಬೇತಿ:
ಜಿಟಿಟಿಸಿಯಲ್ಲಿ 3 ವರ್ಷದ ತರಬೇತಿಯನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಅವರ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಲು ದೇಶದಾದ್ಯಂತ ಸಂಬಂಧಿಸಿದ ಕೈಗಾರಿಕೆಗಳಲ್ಲಿ ಒಂದು ವರ್ಷ ಅವಧಿಗೆ ಕಡ್ಡಾಯ ಇನ್‌ಪ್ಲಾಂಟ್ ತರಬೇತಿಗೆ ನಿಯೋಜಿಸಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳು ಡಿಸೈನ್, ಪ್ರೋಸೆಸ್ ಪ್ಲಾನಿಂಗ್, ಉತ್ಪಾದನಾ ತಂತ್ರಗಳು, ಪರೀಕ್ಷಾ ವಿಧಾನಗಳು ಇತ್ಯಾದಿ ಕೌಶಲಗಳನ್ನು ಪಡೆದುಕೊಳ್ಳುತ್ತಾರೆ. ತರಬೇತಿ ಅವಧಿಯಲ್ಲಿ, ಶಿಕ್ಷಣಾರ್ಥಿಗಳಿಗೆ ಶಿಷ್ಯವೇತನವನ್ನು ನೀಡಲಾಗುತ್ತದೆ. ಹಲವಾರು ಅಭ್ಯರ್ಥಿಗಳು ಕೋರ್ಸ್ ನಂತರ ಕಾಯಂ ಕೆಲಸ ಪಡೆಯುತ್ತಾರೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ ದೇಶ ವಿದೇಶಗಳಲ್ಲಿ ಉದ್ಯೋಗ ಪಡೆಯಬಹುದು.
ಜಿಟಿಟಿಸಿ
ಉದ್ಯೋಗಾವಕಾಶಗಳು
ಕೋರ್ಸ್ ನಂತರ ಟೂಲ್ ರೂಮ್, ಆಟೊಮೊಬೈಲ್, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ಸ್, ಗೃಹೋಪಯೋಗಿ ಉಪಕರಣ ತಯಾರಿಕಾ ಕೈಗಾರಿಕೆಗಳು, ಏರೋಸ್ಪೇಸ್, ಮೆಕ್ಯಾನಿಕಲ್, ಡಿಸೈನ್ ಇಂಜಿನಿಯರ್, ಸರ್ವಿಸ್ ಮೆಂಟೆನೆನ್ಸ್ ಎಂಜಿನಿಯರಿಂಗ್, ಪ್ರೊಡಕ್ಷನ್ ಎಂಜಿನಿಯರಿಂಗ್, ಪ್ರೋಗ್ರಾಮಿಂಗ್ ಎಂಜಿನಿಯರಿಂಗ್, ಮೊಬೈಲ್ ಸಂವಹನ, ವೆರಿ ಲಾರ್ಜ್ಸೈಲ್ ಇಂಟಿಗ್ರೇಷನ್, ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್, ವಯರ್‌ಲೆಸ್ ಕಮ್ಯೂನಿಕೇಷನ್, ಬಯೋಟೆಕ್ನಾಲಜಿ, ಮಾಹಿತಿ ತಂತ್ರಜ್ಞಾನ, ಕೈಗಾರಿಕೆ, ಕಾರ್ಪೊರೇಟ್, ಮಾಧ್ಯಮ ಹಾಗೂ ಸೆಮಿಕಂಡಕ್ಟರ್, ಬಹು ಡೇಟಾ ವಿಶ್ಲೇಷಕ, ಬಳಕೆದಾರರ ಅನುಭವ, ಡಿಸೈನ್ ಡೆವೆಲಪರ್, ಲ್ಯಾಂಗ್ರೇಜ್ ಪ್ರೋಸೆಸಿಂಗ್ ಎಂಜಿನಿಯರ್, ಸಂಶೋಧನಾ ವಿಜ್ಞಾನಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಜಿನಿಯರ್, ಏರೋಸ್ಪೇಸ್ ತಂತ್ರಜ್ಞ, ಸರ್ಕೀಟ್ ವಿನ್ಯಾಸ ತಂತ್ರಜ್ಞ, ಪ್ರಸಾರ ತಂತ್ರಜ್ಞ, ಪವರ್ ಎಂಜಿನಿಯರ್, ಮೈಕ್ರೋ ಎಲೆಕ್ಟ್ರಿಕಲ್ ಎಂಜಿನಿಯರ್ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳಿವೆ.
ಎಸ್ಸೆಸ್ಸೆಲ್ಸಿ ಫೇಲಾದವರಿಗೂ ಕೋರ್ಸ್
ಎಸ್ಸೆಸ್ಸೆಲ್ಸಿ ಫೇಲಾದವರಿಗೂ ಸರ್ಟೀಫಿಕೇಟ್ ಕೋರ್ಸ್‌ಗಳನ್ನು ನೀಡಲಾಗುತ್ತದೆ. ಟೂಲ್ ರೂಮ್ ಮೆಕ್ಯಾನಿಸ್ಟ್ (2 ವರ್ಷ) ಹಾಗೂ ಮಲ್ಟಿ ಸ್ಕಿಲ್ ಟೆಕ್ನಿಷಿಯನ್ (6 ತಿಂಗಳು) ಕೋರ್ಸ್ ಆಗಿದೆ.
ಅಲ್ಪಾವಧಿಯ ಸ್ಪರ್ಧಾತ್ಮಕ ಕೋರ್ಸ್‌ಗಳು: ವೃತ್ತಿಯಲ್ಲಿ ನಾವೀನ್ಯ ಕೌಶಲ ಹೊಂದಲು ಐಟಿಐ, ಡಿಪ್ಲಾಮೊ, ಬಿ.ಇ, ವಿದ್ಯಾರ್ಥಿಗಳಿಗಾಗಿ ವಿವಿಧ ಕೌಶಲಾಭಿವೃದ್ದಿ ಹಾಗೂ ಕೌಶಲವರ್ಧನೆಗಾಗಿ ವಿವಿಧ ಅಲ್ಪಾವಧಿಯ ಕೋರ್ಸ್‌ಗಳು ಲಭ್ಯ ಇದೆ. 2 ವಾರದಿಂದ 3 ತಿಂಗಳವರೆಗೆ ಕೋರ್ಸ್‌ಗಳಿವೆ.
ಲಭ್ಯವಿರುವ ಡಿಪ್ಲೊಮಾ ಕೋರ್ಸ್‌ಗಳು:
ಟೂಲ್ ಅಂಡ್ ಡೈ ಮೇಕಿಂಗ್ ಡಿಪ್ಲೊಮಾ
ಪ್ರಿಶಿಷನ್ ಮ್ಯಾನುಫ್ಯಾಕ್ಟರಿಂಗ್ ಡಿಪ್ಲೊಮಾ
ಮೆಕೆಟ್ರಾನಿಕ್ಸ್ ಡಿಪ್ಲೊಮಾ
ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಡಿಪ್ಲೊಮಾ
ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಡಿಪ್ಲೊಮಾ
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಡಿಪ್ಲೊಮಾ
ಆಟೋಮೇಷನ್ ಮತ್ತು ರೊಬೊಟಿಕ್ಸ್ ಡಿಪ್ಲೊಮಾ
ಜಿಟಿಟಿಸಿ
ನಾನು ಕಳೆದ ವರ್ಷ ಎಸ್.ಎಸ್.ಎಲ್.ಸಿ, ಫೇಲಾಗಿದ್ದೆ. ಹುಬ್ಬಳ್ಳಿ ಜಿಟಿಟಿಸಿಯವರು ನನಗೆ ಫೋನ್ ಮಾಡಿ ಕೆಲವು ಕೋರ್ಸ್‌ಗಳ ಬಗ್ಗೆ ಹೇಳಿದರು. ಅದರಲ್ಲಿ ನಾನು ಮಲ್ಟಿ ಸ್ಕಿಲ್ ಟೆಕ್ನಿಷಿಯನ್ ಕೋರ್ಸ್ ಆಯ್ಕೆ ಮಾಡಿಕೊಂಡೆ. ಕೋರ್ಸ್ ಮುಗಿಯುತ್ತಾ ಬಂದಿದೆ. ಈಗಾಗಲೇ ಖಾಸಗೀ ಕಂಪನಿಯೊಂದರಲ್ಲಿ ಕೆಲಸಕ್ಕೆ ನೇಮಕಾತಿ ಆದೇಶ ಸಿಕ್ಕಿದೆ.ಮಂಜುನಾಥ ಯರಿನಾರಾಯಣಪುರ, ಹುಬ್ಬಳ್ಳಿ
ಕೈಗಾರಿಕೋಧ್ಯಮದ ಬೇಡಿಕೆಗೆ ಅನುಗುಣವಾದ ಕೌಶಲಗಳನ್ನು ಕಲಿಯುವಂತೆ ಜಿಟಿಟಿಸಿ ಕೋರ್ಸ್‌ಗಳನ್ನು ರೂಪಿಸಲಾಗಿದೆ. ಇಲ್ಲಿ ದಾಖಲಾದ ಪ್ರತಿ ವಿದ್ಯಾರ್ಥಿಯು ನೇಮಕಾತಿ ಹೊಂದಲು ಬೇಕಾದ ಎಲ್ಲಾ ಅರ್ಹತೆ ಮತ್ತು ಕೌಶಲಗಳನ್ನು ಕಲಿಸುತ್ತೇವೆ. ಕೋರ್ಸ್ ಪೂರ್ಣಗೊಳಿಸಿದ ಪ್ರತಿ ವಿದ್ಯಾರ್ಥಿಗೆ ನೇಮಕಾತಿ ಆದೇಶ ಕೊಡಿಸುವವರೆಗೂ ನಮ್ಮ ಜವಾಬ್ದಾರಿ ಇರುತ್ತದೆ.ಮಾರುತಿ ಭಜಂತ್ರಿ, ಕೇಂದ್ರದ ಮುಖ್ಯಸ್ಥರು. ಜಿಟಿಟಿಸಿ ಹುಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.