ಎಲ್ಲಾ ಶಾಖೆಗಳ ತಾಯಿ ಶಿಕ್ಷಣ. ದಿನ ಕಳೆದಂತೆ ಶಿಕ್ಷಣವು ಆಧುನಿಕತೆಯತ್ತ ಮುಖಮಾಡಿದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಅಧ್ಯಾಪಕರು ಪ್ರಮುಖರಾಗಿರುತ್ತಾರೆ.
ಜ್ಞಾನ, ತಂತ್ರಜ್ಞಾನ ಮತ್ತು ಕಲಿಕೆಯ ಬಗ್ಗೆ ಶಿಕ್ಷಣ ತಜ್ಞರು ಹಾಗೂ ಬೋಧಕರಲ್ಲಷ್ಟೇ ಅಲ್ಲದೆ ವಿದ್ಯಾರ್ಥಿಗಳು ಇದರ ಬಗ್ಗೆ ತಿಳಿದರೆ ಶೈಕ್ಷಣಿಕ ಕೇತ್ರವೂ ಇನ್ನಷ್ಟು ಉತ್ತುಂಗಕ್ಕೆ ಏರಲು ಸಹಕಾರಿಯಾಗಬಹುದು.
ಶೈಕ್ಷಣಿಕ ಪ್ರಕ್ರಿಯೆ ಚೆನ್ನಾಗಿ ನಡೆಯಬೇಕಾದರೆ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ. ಔದ್ಯೋಗಿಕ ಪರಿಸರದಲ್ಲಿ ಅಧ್ಯಾಪಕರ ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿರುತ್ತದೆ.
ಕಂಪ್ಯೂಟರ್, ಅಂತರ್ಜಾಲ ಸಂಪರ್ಕ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಗ್ರಂಥಾಲಯ, ಸ್ಮಾರ್ಟ್ ಬೋರ್ಡ್ ಹೀಗೆ ಏನೇ ತಂತ್ರಜ್ಞಾನ ಬಂದರೂ ಸಮಾಜ ಹಾಗೂ ಭವಿಷ್ಯದ ನಾಗರಿಕರ ರೂಪಿಸುವಲ್ಲಿ ಇಂದಿಗೂ ಶಿಕ್ಷಕರ ಮಹತ್ವದ್ದಾಗಿದೆ.
ಹೀಗೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣದ ವ್ಯವಸ್ಥೆಯ ಕುರಿತು ಶಿಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಮೊದಲಿದ್ದ ಶಿಕ್ಷಣ ವ್ಯವಸ್ಥೆಗೂ ಇಂದಿಗೂ ಬಹಳಷ್ಟು ಬದಲಾವಣೆಗಳಾಗಿವೆ. ತಂತ್ರಜ್ಞಾನ ಬೆಳೆದಿರಬಹುದು, ಆದರೆ ಶಿಕ್ಷಕರ ಪಾತ್ರ ಕ್ಷೀಣಿಸಿಲ್ಲ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟರೆ ತಂತ್ರಜ್ಞಾನವನ್ನೇ ಅಸ್ತ್ರವನ್ನಾಗಿಸಿ ಇನ್ನೂ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ’ ಎಂದು ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಸತೀಶ್ ಕುಮಾರ್ ಅಂಡಿಂಜೆ ಅವರು ಅಭಿಪ್ರಾಯಪಟ್ಟಿದ್ದಾರೆ.
‘ನಿಜವಾದ ಜ್ಞಾನ ಹಂಚಿಕೆ ಈಗಲೂ ಎಂದಿನಂತೆಯೇ ಮುಂದುವರಿದಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸುವ ಸೋಗಿನಲ್ಲಿ ಶಿಕ್ಷಕರ ವೃತ್ತಿ ಗೌಣವಾಗಬಾರದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯ ಮಧ್ಯದಲ್ಲೂ ಶಿಕ್ಷಕರ ಮಾರ್ಗದರ್ಶನ, ವಿವರಣೆ ಅಗತ್ಯವಿದೆ ಎಂಬುದನ್ನು ಮರೆಯುವಂತಿಲ್ಲ’ ಎಂದು ಸಂಶೋಧನಾ ವಿದ್ಯಾರ್ಥಿ ಸುನೀಲ್ ಎಸ್. ಅವರು ಅನಿಸಿಕೆ ಹಂಚಿಕೊಂಡಿದ್ದಾರೆ.
‘ತಂತ್ರಜ್ಞಾನ ಎಷ್ಟೇ ಮುಂದುವರಿದರೂ ವಿದ್ಯಾರ್ಥಿಗಳ ಜೀವನ ರೂಪಿಸಲು ಅಧ್ಯಾಪಕರು ಅನಿವಾರ್ಯ. ದೈಹಿಕ ಶಿಕ್ಷಣ ಮಾತ್ರವಲ್ಲದೇ ಎಲ್ಲಾ ವಿಷಯಗಳನ್ನು ಮೊಬೈಲ್ ಮೂಲಕ ಮಾಹಿತಿ ಪಡೆದರೂ ಪ್ರತ್ಯಕ್ಷವಾಗಿ ಶಿಕ್ಷಕರ ಮಾರ್ಗದರ್ಶನ ಅನಿವಾರ್ಯವಾಗಿದೆ. ತಂತ್ರಜ್ಞಾನ ಯುಗದಲ್ಲೂ ಶಿಕ್ಷಕರು ಇದ್ದರೇ ಮಾತ್ರ ಪರಿಪೂರ್ಣ’ ಎಂದು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮಾಗಳ್ದ ಕರಿಬಸಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.
‘ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲು ಶಿಕ್ಷಕರಿಂದ ಸರ್ಕಾರ ಬೇರೆ ಬೇರೆ ಕೆಲಸಗಳನ್ನು ಮಾಡಿಸದೇ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಇಂದಿನ ಸಮಾಜವು ವಿದ್ಯಾರ್ಥಿಗಳ ಮೇಲೆ ಭರವಸೆ ಇಡಬೇಕಾದರೆ ಶಿಕ್ಷಕರು ಸೂಕ್ತವಾದ ಮಾರ್ಗದರ್ಶನ ನೀಡುವುದು ಅತ್ಯಗತ್ಯ’ ಎಂದು ಬಾಗಲಕೋಟೆ ನಾಯನೇಗಲಿಯ ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಮಹಾಂತೇಶ ಎಂ. ಕಾಶಿನಕುಂಟಿ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿ ಪಾಠ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಅರ್ಥೈಸಲು ಸಹಕಾರಿಯಾಗಲಿದೆ. ಆದರೆ ಮೊಬೈಲ್ ಬಳಸುವಾಗ ವಿದ್ಯಾರ್ಥಿಗಳನ್ನು ಪ್ರತಿ ಹಂತದಲ್ಲೂ ಗಮನಿಸುವುದು ಶಿಕ್ಷಕರ ಕರ್ತವ್ಯ’ ಎಂದು ವಿಜಯಪುರ ಮುದ್ದೇಬಿಹಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ರಮೇಶ್ ಆರ್. ಗೌಡರ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
‘ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಮಸ್ಯೆ-ಪರಿಹರಿಸುವ ಕೌಶಲ್ಯ ಮತ್ತು ಸಹಯೋಗದ ಮನೋಭಾವ ಬೆಳೆಸಲು ಪ್ರೇರೇಪಿಸಬೇಕು. ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುತ್ತಾ, ವೃತ್ತಿಪರ ಅಭಿವೃದ್ಧಿಗೆ ಒತ್ತು ನೀಡಿ, ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ತಯಾರು ಮಾಡುವತ್ತ ಶಿಕ್ಷಕರು ಸಜ್ಜಾಗಬೇಕಿದೆ’ ಎಂದು ಅಗಸಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಚೌಡಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಎಷ್ಟೇ ತಂತ್ರಜ್ಞಾನ ಬಂದರೂ ವಿದ್ಯಾರ್ಥಿಗಳಿಗೆ ಶಿಕ್ಷಕರ ಮಾರ್ಗದರ್ಶನ, ಜ್ಞಾನ ಹಂಚಿಕೆ ಮುಖ್ಯ ಎಂಬುವುದು ಶಿಕ್ಷಕರ ಅಭಿಪ್ರಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.