ADVERTISEMENT

Competitive Exams | ನೇಮಕಾತಿ ಪರೀಕ್ಷೆ: ಅಧಿಸೂಚನೆವರೆಗೂ ಕಾಯುವುದೇಕೆ?

ಸದಾಶಿವ ಸೊರಟೂರು
Published 5 ಅಕ್ಟೋಬರ್ 2025, 23:31 IST
Last Updated 5 ಅಕ್ಟೋಬರ್ 2025, 23:31 IST
   

ನೇಮಕಾತಿ ಪರೀಕ್ಷೆಗಾಗಿ ಪತ್ರಿಕೆಯಲ್ಲಿ ಪ್ರಕಟವಾದ ಅಧಿಸೂಚನೆ ನೋಡುತ್ತಲೇ ಅಭ್ಯರ್ಥಿಗಳು ಎದ್ದು ಕೂರುತ್ತಾರೆ. ಇರುವುದು ನಲವತ್ತೇ ದಿನಗಳು. ರಾಶಿಗಟ್ಟಲೆ ಸಿಲಬಸ್. ಪುಸ್ತಕ ಹೊಂದಿಸಲು ಅಲೆದಾಟ. ಅರ್ಜಿ ಹಾಕಲು ತಾಕಲಾಟ. ಅದರ ಮಧ್ಯೆ, ಕೆಲಸ ಸಿಗುತ್ತದೋ ಇಲ್ಲವೋ ಎಂಬ ವಿಚಿತ್ರ ಚಡಪಡಿಕೆ. ಜೊತೆಗೆ ಒಂದಷ್ಟು ಭಯ, ಒತ್ತಡ. ಓದಬೇಕಾದದ್ದನ್ನು ಓದಲಾಗದೆ, ಬರೆಯಬೇಕಾದದ್ದನ್ನು ಬರೆಯಲಾಗದೆ ಪರೀಕ್ಷೆ ಕೊಠಡಿಯಲ್ಲಿ ಬೆವರಿನ ಮಳೆ.‌

ನಲವತ್ತು ದಿನಗಳ ಹೋರಾಟ ಮಕಾಡೆ. ಮತ್ತೊಂದು ಅಧಿಸೂಚನೆಯವರೆಗೂ ಕಾಯುತ್ತಾ ಕೂರುವ ಹಣೆಬರಹ. ಕಾಯುತ್ತಾ ಕೂರುವಿರೊ, ತಯಾರಿಗೆ ಕೂರುವಿರೊ ಎನ್ನುವುದು ಬಹಳ ಮುಖ್ಯ. ಅದರ ಮೇಲೆಯೇ ಗೆಲುವು ನಿರ್ಧರಿಸಲ್ಪಡುತ್ತದೆ.

ಒಂದು ನೌಕರಿ ಬೇಕು ಎನ್ನುವವರು ಅಧಿಸೂಚನೆ ಎಂಬ ‘ಗುರುಬಲ’ಕ್ಕೆ ಕಾಯುತ್ತಾ ಕೂರಬಾರದು. ತಯಾರಿಗೆ ಇಳಿಯಬೇಕು. ಅಂತಹ ಓದಿಗೆ ಬರೀ ನಲವತ್ತೊ, ಐವತ್ತೊ ದಿನಗಳು ಸಾಕಾಗುವುದಿಲ್ಲ. 

ADVERTISEMENT

ನೌಕರಿ‌ ಬೇಕು ಎಂಬ ಅಪೇಕ್ಷೆ ಮನದಲ್ಲಿ ಮೂಡಿದ ದಿನವೇ ಓದುವಿಕೆ ಶುರುವಾಗಬೇಕು. ಸಿಲಬಸ್ ಇಲ್ಲದೆ ಏನು ಓದುವುದು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಏನೇನು ಓದಬಹುದು ಎಂಬುದನ್ನು ಇಲ್ಲಿ ಚರ್ಚಿಸೋಣ. ಎಲ್ಲ ಪರೀಕ್ಷೆಗಳಿಗೂ ಒಂದು ಸಾಮಾನ್ಯ ಪಠ್ಯ ಅನ್ನುವುದು ಇರುತ್ತದೆ. ಅದನ್ನು ಓದಿಕೊಂಡು ಬಿಟ್ಟರೆ ಮುಂದೆ ಅವರು ನೀಡುವ ಪಠ್ಯ ಸುಲಭಕ್ಕೆ ನಿಮ್ಮ ಕೈವಶವಾಗುತ್ತದೆ.

ಹಳೆಯ ಪ್ರಶ್ನೆಪತ್ರಿಕೆ, ಹೊಸ ಭರವಸೆ:

 ನೀವು ಕಣ್ಣಿಟ್ಟಿರುವ ಮೂರ್ನಾಲ್ಕು ನೌಕರಿಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ. ಜೊತೆಗೆ, ಇತರ ನೌಕರಿಗಳ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನೂ ಸಂಗ್ರಹಿಸಿಕೊಳ್ಳಿ. ಎರಡು ದಿನ ಕೂತು, ಅವುಗಳಲ್ಲಿ ಬಂದಿರುವ ಸಾಮಾನ್ಯ ಅಂಶಗಳನ್ನು ಗುರುತು ಮಾಡಿಕೊಳ್ಳಿ. ಬಹುತೇಕ ಪರೀಕ್ಷೆಗಳಲ್ಲಿ ಒಂದು ಸಾಮಾನ್ಯ ಪತ್ರಿಕೆ ಇದ್ದೇ ಇರುತ್ತದೆ. ಅದಕ್ಕೆ ಸಾಮಾನ್ಯ ವಿಷಯಗಳ ಓದುವಿಕೆ ಮುಖ್ಯ. ಆ ದಿಸೆಯಲ್ಲಿ ತಯಾರಿ ನಡೆಸಿ.

ದಿನಪತ್ರಿಕೆಗಳೆಂಬ ಬೆಳಕು: 

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಿನಪತ್ರಿಕೆಗಳು ತುಂಬಾ ಸಹಾಯಕ. ಅವನ್ನು ನಿರಂತರವಾಗಿ ಓದುತ್ತಾ ಬನ್ನಿ. ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದು ಕೆಲಸ ಹಿಡಿದವರ ಬಳಿ ‘ಸರ್, ದಿನಪತ್ರಿಕೆಗಳಿಂದ  ಏನಾದ್ರೂ ಉಪಯೋಗವಾದೀತ?’ ಎಂದು ಕೇಳಿ ನೋಡಿ. ‘ಹೌದು, ದಿನಪತ್ರಿಕೆ ಎಂಬುದು ಅಗತ್ಯವಾದ ಓದು. ಅದರಿಂದ ಹೆಚ್ಚಿನ ಸಹಾಯವಾಗುತ್ತದೆ’ ಅನ್ನುತ್ತಾರೆ.

ದಿನಕ್ಕೆ ಕನಿಷ್ಠ ಎರಡು– ಮೂರು ಪತ್ರಿಕೆಗಳನ್ನು ವಿವರವಾಗಿ ಓದುವುದು ಒಳ್ಳೆಯದು. ಒಂದು ಇಂಗ್ಲಿಷ್ ಪತ್ರಿಕೆಯೂ ಜೊತೆಗೆ ಇರಲಿ. ಸಾಮಾನ್ಯ ಜ್ಞಾನ ನಿಮ್ಮನ್ನು ತಲುಪುವುದಲ್ಲದೆ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚೆಗಳಿರುತ್ತವೆ. ಪ್ರಬಂಧದ ಮಾದರಿಯ ವಿವರ ಬಯಸುವ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚೆ ರೂಪದ ಪ್ರಶ್ನೆಗಳಿರುತ್ತವೆ.‌ ಅಲ್ಲಿಗೆ ಇದರಿಂದ ಸಹಾಯವಾದೀತು. ಅಂತರರಾಷ್ಟ್ರೀಯ ಆಗುಹೋಗುಗಳ ಜ್ಞಾನ ನಿಮಗೆ ಸಿಗುತ್ತದೆ. ಪ್ರಚಲಿತ ವಿಷಯಗಳ ಬಗ್ಗೆ ಏನೇ ಕೇಳಿದರೂ ನೀವು ಬರೆಯಲು ಸಿದ್ಧರಾಗಬಹುದು.

ಸುಮ್ಮನೆ ಹಾಗೆ ಓದಿ ಎತ್ತಿಡುವುದಕ್ಕಿಂತ, ಓದಿದ ಮುಖ್ಯ ವಿಷಯಗಳನ್ನು ಟಿಪ್ಪಣಿ ಮಾಡಿಟ್ಟುಕೊಳ್ಳಿ. 

ಪಠ್ಯಪುಸ್ತಕಗಳೆಂಬ ಭರವಸೆಯ ಗೆಳೆಯ: 

ನಾವು ಇಷ್ಟು ದಿನ ಓದಿದ ಪಠ್ಯಪುಸ್ತಕಗಳನ್ನು ಎತ್ತಿಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ವರ್ಷದ ಕೊನೆಯಲ್ಲಿ ಪಠ್ಯಪುಸ್ತಕಗಳನ್ನು ರದ್ದಿಗೆ ಹಾಕುವುದಕ್ಕಿಂತ ನಷ್ಟ ಮತ್ತೊಂದಿಲ್ಲ. ಆರನೇ ತರಗತಿಯಿಂದ ಪದವಿ ತರಗತಿವರೆಗಿನ ಎಲ್ಲಾ ಪುಸ್ತಕಗಳ ಒಂದು ಸೆಟ್ ನಿಮ್ಮ ಬಳಿ ಇರಲಿ. ಅಲ್ಲದೆ‌ ಸಿಬಿಎಸ್‍ಇ ಪಠ್ಯಪುಸ್ತಕಗಳನ್ನು ಸಂಗ್ರಹಿಸಿಕೊಳ್ಳಿ.

ಪಠ್ಯಪುಸ್ತಕಗಳಲ್ಲಿ ‌ಸಮಾಜ ವಿಜ್ಞಾನ, ಕನ್ನಡ ಭಾಷೆ, ಸಾಮಾನ್ಯ ವಿಜ್ಞಾನ, ಸಾಮಾನ್ಯ ಗಣಿತದ ಬಗ್ಗೆ ಗಮನ ಕೇಂದ್ರೀಕರಿಸಿ. ನೀವು ಈಗಾಗಲೇ ಓದಿರುವ ಪುಸ್ತಕಗಳಾದ್ದರಿಂದ ಓದುವುದು ಮತ್ತು ನೆನಪಿಡುವುದು ಸುಲಭ. ಓದಿದ್ದನ್ನು ಟಿಪ್ಪಣಿ ಮಾಡಿಟ್ಟುಕೊಳ್ಳಿ.

ಪರೀಕ್ಷೆಗಳಲ್ಲಿ ಕೇಳುವ ಸಾಮಾನ್ಯ ಜ್ಞಾನದ ವಿಷಯಗಳು‌ ಪಠ್ಯವನ್ನು ಹೆಚ್ಚು ಆಧರಿಸಿರುತ್ತವೆ. ಅಲ್ಲದೆ ಪಠ್ಯ ಓದುವುದರಿಂದ ನಿಮಗೆ ನಿಖರ ಮಾಹಿತಿ‌ ಸಿಗುತ್ತದೆ. ಒಂದು ವೇಳೆ ಪರೀಕ್ಷಾ ಮಂಡಳಿ‌ ತಪ್ಪು ಉತ್ತರ‌ ಪ್ರಕಟಿಸಿದರೆ, ನೀವು ಪಠ್ಯದ ಆಕರವನ್ನು ಸಲ್ಲಿಸಬಹುದು. ಪಠ್ಯದಲ್ಲಿ ಬಂದಿರುವುದು ಅಧಿಕೃತವಾದದ್ದು.

ಜಾಲತಾಣ ಅಂಕದ ಖಜಾನೆ: 

ಈಗಾಗಲೇ ಬಹಳಷ್ಟು ವೆಬ್‍ಸೈಟ್‌ಗಳು ಈ ದಿಸೆಯಲ್ಲಿ ಸಕ್ರಿಯವಾಗಿವೆ.‌ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು, ಚರ್ಚೆಗಳು, ಪ್ರಬಂಧಗಳು ಮತ್ತು‌ ಮಾಹಿತಿ ನಿಮಗೆ ಸಿಗುತ್ತದೆ. ಅದನ್ನು ಪ್ರತಿನಿತ್ಯ ‌ನೀವು ಓದುತ್ತಾ ಹೋಗಬಹುದು. 

ಆ್ಯಪ್‌ಗಳು ಮತ್ತು ಜಾಲತಾಣಗಳಲ್ಲಿ ಉಚಿತವಾದವೂ ಇವೆ, ಹಣ ಖರೀದಿಸಿ ಬಳಸಬಹುದಾದವೂ ಇವೆ. ಬಹಳಷ್ಟು ಮಾಹಿತಿಗಳು ಎರಡು ಕಡೆಯೂ ಲಭ್ಯವಾಗುವುದರಿಂದ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಅಲ್ಲದೆ ಅಣಕು ಪರೀಕ್ಷೆಗಳು ಕೂಡ ಇರುವುದರಿಂದ, ಅವನ್ನು ತೆಗೆದುಕೊಂಡು ನೀವು ನಿಮ್ಮ ಓದಿನ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಬಹುದು. ನಿಮಗೆ ಆತ್ಮವಿಶ್ವಾಸ ನೀಡುವ ಕೆಲಸವನ್ನು ಅಣಕು ಪರೀಕ್ಷೆಗಳು ಮಾಡುತ್ತವೆ. 

ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾನಸಿಕ ಸಾಮರ್ಥ್ಯಕ್ಕೆ ತಾಲೀಮು ನೀಡುವ ಪ್ರಶ್ನೆಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ. ಇವುಗಳಿಗೆ ತಯಾರಿ ನಡೆಸಲು ನೇಮಕಾತಿ ಸಮಯದ ಸಿಲಬಸ್‌ನ ಅವಶ್ಯಕತೆ ಇಲ್ಲ. ನೀವು ಹಳೆಯ ಪ್ರಶ್ನೆಪತ್ರಿಕೆಗಳನ್ನು ಗಮನಿಸಿಕೊಂಡರೆ, ಅದೇ ಮಾದರಿಯಲ್ಲಿ ಸಿಗುವ ಸಂಪನ್ಮೂಲಗಳನ್ನು ಒಳಗೊಂಡ ಪುಸ್ತಕಗಳ ಲಭ್ಯತೆ ಬಹಳಷ್ಟಿರುತ್ತದೆ. ನೀವು ಅವನ್ನು ಖರೀದಿಸಿ ಪ್ರತಿನಿತ್ಯ ಅಭ್ಯಸಿಸುವುದು ಒಳ್ಳೆಯದು. ವಿವಿಧ ನಮೂನೆಗಳ ಬಗ್ಗೆ ಸತತ ಅಭ್ಯಾಸ ಮಾಡುವುದರಿಂದ, ಆ ಬಗೆಯ ಯಾವುದೇ ಪ್ರಶ್ನೆ ಕೊಟ್ಟರೂ ಅದರ ಮೂಲ ಹಿಡಿದು ಬಿಡಿಸಲು ನಿಮಗೆ ಅನುಕೂಲವಾಗುತ್ತದೆ. 

ಯಾವುದೇ ನೌಕರಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಕರೆಯುವ ಮುನ್ನ ನೀವು ಇವಿಷ್ಟು‌ ವಿಷಯಗಳನ್ನು ಚೆನ್ನಾಗಿ ಓದಿಕೊಂಡು ಸಿದ್ಧರಾಗಿದ್ದರೆ ಒಳ್ಳೆಯದು. ನಂತರ, ಅಧಿಸೂಚನೆಯಲ್ಲಿ ಕೊಡಲಾಗುವ ನಿರ್ದಿಷ್ಟ ಪಠ್ಯಕ್ಕೆ ತಯಾರಿ ನಡೆಸಲು ಅನುಕೂಲವಾಗುತ್ತದೆ. ತಯಾರಿಗೆ ಸಮಯವೂ ಸಿಗುತ್ತದೆ, ಗೆಲುವು ಕೂಡ ದಕ್ಕುತ್ತದೆ. ಎಷ್ಟು ಓದುವಿರೋ ಅಷ್ಟು ಗೆಲುವಿನ ಸಾಧ್ಯತೆ ಹೆಚ್ಚು.

ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾನಸಿಕ ಸಾಮರ್ಥ್ಯಕ್ಕೆ ತಾಲೀಮು ನೀಡುವ ಪ್ರಶ್ನೆಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ. ಇವುಗಳಿಗೆ ತಯಾರಿ ನಡೆಸಲು ನೇಮಕಾತಿ ಸಮಯದ ಸಿಲಬಸ್‌ನ ಅವಶ್ಯಕತೆ ಇಲ್ಲ. ನೀವು ಹಳೆಯ ಪತ್ರಿಕೆಗಳನ್ನು ಗಮನಿಸಿಕೊಂಡರೆ, ಅದೇ ಮಾದರಿಯಲ್ಲಿ ಸಿಗುವ ಸಂಪನ್ಮೂಲಗಳನ್ನು ಒಳಗೊಂಡ ಪುಸ್ತಕಗಳ ಲಭ್ಯತೆ ಬಹಳಷ್ಟಿರುತ್ತದೆ. ನೀವು ಅವನ್ನು ಖರೀದಿಸಿ ಪ್ರತಿನಿತ್ಯ ಅಭ್ಯಸಿಸುವುದು ಒಳ್ಳೆಯದು. ವಿವಿಧ ನಮೂನೆಗಳ ಬಗ್ಗೆ ಸತತ ಅಭ್ಯಾಸ ಮಾಡುವುದರಿಂದ, ಆ ಬಗೆಯ ಯಾವುದೇ ಪ್ರಶ್ನೆ ಕೊಟ್ಟರೂ ಅದರ ಮೂಲ ಹಿಡಿದು ಬಿಡಿಸಲು ನಿಮಗೆ ಅನುಕೂಲವಾಗುತ್ತದೆ. 

ಯಾವುದೇ ನೌಕರಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಕರೆಯುವ ಮುನ್ನ ನೀವು ಇವಿಷ್ಟು‌ ವಿಷಯಗಳನ್ನು ಚೆನ್ನಾಗಿ ಓದಿಕೊಂಡು ಸಿದ್ದರಾಗಿದ್ದರೆ ಒಳ್ಳೆಯದು. ನಂತರ, ಅಧಿಸೂಚನೆಯಲ್ಲಿ ಕೊಡಲಾಗುವ ನಿರ್ದಿಷ್ಟ ಪಠ್ಯಕ್ಕೆ ತಯಾರಿ ನಡೆಸಲು ಅನುಕೂಲವಾಗುತ್ತದೆ. ತಯಾರಿಗೆ ಸಮಯವೂ ಸಿಗುತ್ತದೆ, ಗೆಲುವು ಕೂಡ ದಕ್ಕುತ್ತದೆ. ಎಷ್ಟು ಓದುವಿರೋ ಅಷ್ಟು ಗೆಲುವಿನ ಸಾಧ್ಯತೆ ಹೆಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.