ADVERTISEMENT

ಸಂದರ್ಶನ | ಗ್ಯಾರಂಟಿ ಕೊಟ್ಟು ಸೋಂಬೇರಿ ಮಾಡಬೇಡಿ...: ಎಂ.ಮಲ್ಲೇಶ್‌ ಬಾಬು

ಕೋಲಾರ ಮೀಸಲು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಂ.ಮಲ್ಲೇಶ್‌ ಬಾಬು ಸಂದರ್ಶನ

ಕೆ.ಓಂಕಾರ ಮೂರ್ತಿ
Published 23 ಏಪ್ರಿಲ್ 2024, 6:54 IST
Last Updated 23 ಏಪ್ರಿಲ್ 2024, 6:54 IST
<div class="paragraphs"><p>ಎಂ.ಮಲ್ಲೇಶ್‌ ಬಾಬು ಮತ್ತು&nbsp;ಕೆ.ವಿ.ಗೌತಮ್‌</p></div>

ಎಂ.ಮಲ್ಲೇಶ್‌ ಬಾಬು ಮತ್ತು ಕೆ.ವಿ.ಗೌತಮ್‌

   

ಮೈತ್ರಿ ಪಕ್ಷ ಬಿಜೆಪಿ ಮುಖಂಡರಲ್ಲೇ ಮನಸ್ತಾಪ ಇದೆಯಲ್ಲಾ, ಒಳೇಟಿನ ಆತಂಕ ಇಲ್ಲವೇ?

ಬಿಜೆಪಿ ಮುಖಂಡರ ಮನಸ್ತಾಪ, ಇನ್ನಿತರ ಸಮಸ್ಯೆಗಳನ್ನು ಆ ಪಕ್ಷದ ಹಿರಿಯರು, ಹೈಕಮಾಂಡ್‌ನವರೇ ಸರಿಪಡಿಸುತ್ತಿದ್ದಾರೆ. ಅದು ನಮ್ಮ ಪಕ್ಷದ ಮೇಲಾಗಲಿ, ಚುನಾವಣೆ ಮೇಲಾಗಲಿ ಪರಿಣಾಮ ಬೀರುವುದಿಲ್ಲ. ಹೀಗಾಗಿ, ಒಳೇಟಿನ ಪ್ರಶ್ನೆಯೇ ಬರುವುದಿಲ್ಲ.

ADVERTISEMENT

ತಳಮಟ್ಟದಲ್ಲಿ ಬಿಜೆಪಿ–ಜೆಡಿಎಸ್‌ ಕಾರ್ಯಕರ್ತರು ಒಂದುಗೂಡಿದ್ದಾರೆಯೇ?

ಬಿಜೆಪಿ ಎಲ್ಲಿ ಬಲಿಷ್ಠವಿದೆಯೋ ಅಲ್ಲಿ ಸ್ವಲ್ಪ ತೊಂದರೆ ಇತ್ತು. ಆದರೆ, ಸಮನ್ವಯ ಸಮಿತಿ ಸಭೆ ಬಳಿಕ ಎಲ್ಲವೂ ಸರಿ ಹೋಗಿದೆ. ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ. ಒಂದೆರಡು ಹಳ್ಳಿಗಳಲ್ಲಿ ಸಮಸ್ಯೆ ಇದೆ.

ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಎರಡು ಬಾರಿ ಸೋಲು ಕಂಡಿದ್ದೀರಿ. ಈಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದೀರಿ. ಧೈರ್ಯ ಹೇಗೆ ಬಂತು?

ಭಯ ಇದ್ದೇ ಇರುತ್ತದೆ. ಆದರೆ, ದೇವೇಗೌಡರು, ಕುಮಾರಸ್ವಾಮಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನನ್ನ ತಂದೆ ಐಎಎಸ್‌ ಅಧಿಕಾರಿಯಾಗಿ ಜಿಲ್ಲೆಗೆ ಅವರದ್ದೇ ಆದ ಕೊಡುಗೆ ನೀಡಿದ್ದಾರೆ. ತಾಯಿ ಮಂಗಮ್ಮ ಕೂಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಆ ಕೆಲಸ ಮುಂದುವರಿಸಲು ನನ್ನನ್ನು ಗುರುತಿಸಿ ಟಿಕೆಟ್‌ ನೀಡಿದ್ದಾರೆ. ಈ ಬಾರಿ ಜನ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಗ್ಯಾರಂಟಿ ಕೂಡ ಕಾರಣ. ಈ ಬಾರಿ ಲೋಕಸಭೆ ಚುನಾವಣೆಯಲ್ಲೂ ಗ್ಯಾರಂಟಿ ಮುಂದಿಟ್ಟಿಕೊಂಡಿದ್ದಾರೆ. ಭಯ ಆಗುತ್ತಿದೆಯೇ?

ಹೆಚ್ಚಿನ ಜನರಿಗೆ ಗ್ಯಾರಂಟಿಗಳು ತಲುಪಿಲ್ಲ. ಕುಟುಂಬಗಳಲ್ಲಿಯೇ ಜಗಳ ತಂದೊಡ್ಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಇರುವವರೆಗೆ ಮಾತ್ರ ಗ್ಯಾರಂಟಿ. ಮಕ್ಕಳು, ಮೊಮ್ಮಕ್ಕಳ ಭವಿಷ್ಯದ ಕಥೆ ಏನು? ಜನರನ್ನು ಸ್ವಂತ ಕಾಲು ಮೇಲೆ ನಿಂತುಕೊಳ್ಳುವಂತೆ ಮಾಡಬೇಕೇ ಹೊರತು ಸೋಂಬೇರಿ ಮಾಡಬಾರದು. ಗ್ಯಾರಂಟಿಗಾಗಿ ಜನರ ಮೇಲೆ ತೆರಿಗೆ ಭಾರ ಹೇರಬೇಡಿ.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 1984ರಲ್ಲಿ ಜನತಾ ಪರಿವಾರ ಹೊರತುಪಡಿಸಿ ಜೆಡಿಎಸ್‌ಗೆ ಅಷ್ಟೇನೂ ಯಶಸ್ಸು ಒಲಿದಿಲ್ಲ. ಯಾವ ಧೈರ್ಯದ ಮೇಲೆ ಟಿಕೆಟ್‌ ಪಡೆದುಕೊಂಡಿದ್ದೀರಿ?

ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂದು ಜನ ಬಯಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‌ನೊಳಗಿನ ಕಿತ್ತಾಟವನ್ನು ಜನ ಗಮನಿಸುತ್ತಿದ್ದಾರೆ. ಹೀಗಾಗಿ, ಯಾವ ಪಕ್ಷಕ್ಕೆ ಮತ ನೀಡಿದರೆ ಅಭಿವೃದ್ಧಿಯಾಗುತ್ತದೆ ಎಂಬುದು ಮತದಾರರಿಗೆ ಗೊತ್ತಿದೆ. ದೇವೇಗೌಡರ ಮೇಲೆ ಮೋದಿ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದಾರೆ.

ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಯೋಜನೆಗಳೇನು?

ಕ್ಷೇತ್ರಕ್ಕೆ ನೀರಾವರಿ ಯೋಜನೆ ಕಲ್ಪಿಸುವುದು ನನ್ನ ಮುಖ್ಯ ಆದ್ಯತೆ. ಕೃಷ್ಣಾ ನದಿಯಿಂದಲೂ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ತರಲು ಪ್ರಯತ್ನಿಸುತ್ತೇನೆ. ಜಿಲ್ಲೆಯಲ್ಲಿ ನಿರುದ್ಯೋಗ ಹೆಚ್ಚಿದ್ದು, ಬಂಗಾರಪೇಟೆ, ಕೆಜಿಎಫ್‌ನಿಂದ ನಿತ್ಯ ಸಾವಿರಾರು ಜನ ರೈಲಿನಲ್ಲಿ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತಾರೆ. ಬಿಜಿಎಂಎಲ್‌ನ 12,500 ಎಕರೆ ಜಾಗವಿದ್ದು, ಅಲ್ಲಿ ಉತ್ಪಾದನಾ ಘಟಕಗಳನ್ನು ಆರಂಭಿಸಬೇಕು. ಆಗ ಸ್ಥಳೀಯವಾಗಿ ಯುವಕರಿಗೆ ಕೆಲಸ ಸಿಗುತ್ತದೆ. ಗೆದ್ದರೆ ಈ ಸಂಬಂಧ ಸಂಸತ್ತಿನಲ್ಲಿ ಹೋರಾಟ ನಡೆಸುತ್ತೇನೆ. ಮೋದಿ ಜೊತೆ ದೇವೇಗೌಡರು ಉತ್ತಮ ಬಾಂಧವ್ಯ ಹೊಂದಿದ್ದು, ಅವರ ಮೂಲಕ ಈ ಕೆಲಸ ಮಾಡಿಸಿಕೊಂಡು ಬರುವ ವಿಶ್ವಾಸವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.