ADVERTISEMENT

14 ವರ್ಷಗಳ ವನವಾಸದಿಂದ ರಾಜಕೀಯಕ್ಕೆ ವಾಪಸ್: ಶಿವ ಸೇನಾ ಸೇರಿದ ನಟ ಗೋವಿಂದ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2024, 2:36 IST
Last Updated 29 ಮಾರ್ಚ್ 2024, 2:36 IST
<div class="paragraphs"><p>ನಟ ಗೋವಿಂದ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ</p></div>

ನಟ ಗೋವಿಂದ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ

   

ಪಿಟಿಐ ಚಿತ್ರ

ಮುಂಬೈ: ನಟ–ರಾಜಕಾರಣಿ ಗೋವಿಂದ ಅವರು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ 'ಶಿವಸೇನಾ' ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಸಾರ್ವತ್ರಿಕ ಚುನಾವಣೆಗೂ ಮುನ್ನ, ಮಹಾರಾಷ್ಟ್ರ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.

ADVERTISEMENT

150ಕ್ಕೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ 60 ವರ್ಷದ ಗೋವಿಂದ, ಲೋಕಸಭೆಗೆ ಸ್ಪರ್ಧಿಸಲಿದ್ದಾರೆಯೇ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ.

2004ರಲ್ಲಿ ಕಾಂಗ್ರೆಸ್ ಸೇರಿದ್ದ ಗೋವಿಂದ, ಮುಂಬೈ ಉತ್ತರ ಲೋಕಸಭೆಗೆ ಸ್ಪರ್ಧಿಸಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿದ್ದ ಬಿಜೆಪಿಯ ಕಟ್ಟಾಳು ರಾಮ್‌ ನಾಯಕ್‌ ವಿರುದ್ಧ ಜಯ ಸಾಧಿಸಿ ಸಂಸತ್‌ ಪ್ರವೇಶಿಸಿದ್ದರು. ಆದರೆ, ಅವಧಿ ಮುಕ್ತಾಯದ ಬಳಿಕ, ಕಾಂಗ್ರೆಸ್‌ಗೆ ವಿದಾಯ ಹೇಳಿ ರಾಜಕೀಯದಿಂದ ಹಿಂದೆ ಸರಿದಿದ್ದರು.

'ವನವಾಸದಿಂದ ವಾಪಸ್‌ ಆದಂತಿದೆ'
ಶಿವಸೇನಾಗೆ ಸೇರುವ ಮುನ್ನ, ಮಲಬಾರ್‌ ಹಿಲ್‌ನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ವರ್ಷಾ'ದಲ್ಲಿ ಶಿಂದೆ ಅವರೊಂದಿಗೆ ಕಳೆದ 15 ದಿನಗಳಿಂದ ಸರಣಿ ಸಭೆ ನಡೆಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ವರ್ಷಾಚರಣೆ ವೇಳೆ ಗುರುವಾರ, ಮುಂಬೈನಲ್ಲಿ ಶಿಂದೆ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿರುವ ಗೋವಿಂದ, 'ನಾನು 14ನೇ ಲೋಕಸಭೆಯ ಭಾಗವಾಗಿದ್ದೆ. ಅದಾದ 14 ವರ್ಷಗಳ ಬಳಿಕ ರಾಜಕೀಯಕ್ಕೆ ಮರಳಿದ್ದೇನೆ. ಇದು 14 ವರ್ಷಗಳ ವನವಾಸದಿಂದ ವಾಪಸ್‌ ಆದಂತಿದೆ' ಎಂದಿದ್ದಾರೆ.

'2004ರಿಂದ 2009ರ ವರೆಗಿನ ಅವಧಿ ಮುಕ್ತಾಯದ ಬಳಿಕ, ಮತ್ತೆ (ರಾಜಕೀಯಕ್ಕೆ) ಮರಳುತ್ತೇನೆಂದು ಎಂದೂ ಭಾವಿಸಿರಲಿಲ್ಲ. ದೇವರ ಆಶೀರ್ವಾದದಿಂದ ವಾಪಸ್‌ ಆಗುತ್ತಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುವಿರಾ ಎಂದು ಮಾಧ್ಯಮದವರು ಕೇಳಿದ್ದಕ್ಕೆ, 'ಯಾವ ಕೆಲಸ ನಿಯೋಜಿಸಿದರೂ, ಸಾಧ್ಯವಾದಷ್ಟು ಮಾಡುತ್ತೇನೆ' ಎಂದಷ್ಟೇ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಅಭಿವೃದ್ಧಿಪರ ಆಡಳಿತ, ದೇಶದ ಯಶೋಗಾಥೆಯಿಂದ ಪ್ರೇರಿತರಾಗಿ ಶಿವಸೇನಾ ಸೇರಿರುವುದಾಗಿಯೂ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿರುವ ಶಿಂದೆ, 'ಗೋವಿಂದ ಅವರು ಯಾವುದೇ ಷರತ್ತುಗಳಿಲ್ಲದೆ ಶಿವಸೇನಾ ಸೇರಿದ್ದಾರೆ. ಖಂಡಿತಾ, ಅವರು ನಮ್ಮ ತಾರಾ ಪ್ರಚಾರಕರಾಗಲಿದ್ದಾರೆ' ಎಂದಿದ್ದಾರೆ.

ಮುಂಬೈ ವಾಯವ್ಯ ಕ್ಷೇತ್ರದಿಂದ ಸ್ಪರ್ಧೆ?
ಮುಂಬೈ ವಾಯವ್ಯ ಕ್ಷೇತ್ರಕ್ಕೆ ಗೋವಿಂದ ಹೆಸರು ಬಲವಾಗಿ ಕೇಳಿಬರುತ್ತಿದೆ. ಅಲ್ಲಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ ಶಿವಸೇನೆಯಿಂದ (ಯುಬಿಟಿ) ಹಾಲಿ ಸಂಸದ ಗಜಾನನ್ ಕೀರ್ತಿಕರ್‌ ಅವರ ಪುತ್ರ ಅಮೋಲ್ ಕೀರ್ತಿಕರ್‌ ಸ್ಪರ್ಧಿಸಲಿದ್ದಾರೆ.

ಉದ್ಧವ್ ಅವರು ಅಮೋಲ್ ಹೆಸರನ್ನು ಘೋಷಿಸಿರುವುದಕ್ಕೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ನಿರುಪಮ್‌ ಅಸಮಾಧಾನಗೊಂಡಿದ್ದಾರೆ. ಅವರು ಮುಂದಿನ ಆಯ್ಕೆಗಳು ಮುಕ್ತವಾಗಿವೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

'ಬಾಲಿವುಡ್‌ನ ರಾಜಾ ಬಾಬು' ಎಂದೇ ಖ್ಯಾತರಾಗಿರುವ ಗೋವಿಂದ, ರಾಜಾ ಬಾಬು (1994), ಕೂಲಿ ನಂ.1 (1995), ಹೀರೊ ನಂ.1 (1997), ದೀವಾನಾ ಮಸ್ತಾನಾ (1997), ದುಲ್ಹೇ ರಾಜಾ (1998), ಬಡೇ ಮಿಯಾನ್‌ ಚೋಟೆ ಮಿಯಾನ್‌ (1998), ಅನ್ಸಾರಿ ನಂ.1 (1999), ಜೋಡಿ ನಂ.1 (2001) ಸೇರಿದಂತೆ ಹಲವು ಹಿಟ್‌ ಸಿನಿಮಾಗಳ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.