ADVERTISEMENT

ಲೋಕಸಭೆ ಚುನಾವಣೆ: ಶೀಘ್ರವೇ ‘ಇಂಡಿಯಾ’ ಗ್ಯಾರಂಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 23:30 IST
Last Updated 17 ಏಪ್ರಿಲ್ 2024, 23:30 IST
ಸಾಂದರ್ಭಿಕ ಚಿತ್ರ (ಇಂಡಿಯಾ ಮೈತ್ರಿಕೂಟದ ಪಕ್ಷಗಳ ಮುಖಂಡರು)
ಸಾಂದರ್ಭಿಕ ಚಿತ್ರ (ಇಂಡಿಯಾ ಮೈತ್ರಿಕೂಟದ ಪಕ್ಷಗಳ ಮುಖಂಡರು)   

ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿ ಮತ್ತು ಇತರ ರಾಷ್ಟ್ರೀಯ ಭದ್ರತಾ ಲೋಪಗಳಿಗೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸುವುದು, ಎಲ್ಲ ಕುಟುಂಬಗಳಿಗೆ 200 ಯೂನಿಟ್‌ ಉಚಿತ ವಿದ್ಯುತ್‌, ರೈತರಿಗೆ ತಿಂಗಳಿಗೆ ₹ 1,000 ನೇರ ನಗದು ವರ್ಗಾವಣೆ, ಕೇಂದ್ರೀಯ ಸಂಸ್ಥೆಗಳ ಅಧಿಕಾರ ಮೊಟಕು ಮತ್ತು ಚುನಾವಣಾ ಬಾಂಡ್‌ಗಳ ಮೇಲಿನ ಎಸ್‌ಐಟಿ ತನಿಖೆ ಸೇರಿದಂತೆ ಹಲವು ಖಾತರಿಗಳನ್ನು ‘ಇಂಡಿಯಾ’ ಮೈತ್ರಿಕೂಟ ಶೀಘ್ರದಲ್ಲಿಯೇ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.

‘ಅಗ್ನಿವೀರ‘ ನೇಮಕಾತಿ ರದ್ದು, ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿ, ಸರ್ಕಾರಿ ವಲಯದಲ್ಲಿ ವರ್ಷದಲ್ಲಿ 30 ಲಕ್ಷ ಖಾಲಿ ಹುದ್ದೆಗಳ ಭರ್ತಿ, ನಗರ ಉದ್ಯೋಗ ಖಾತರಿ ಯೋಜನೆ, ಜಾತಿ ಗಣತಿ, ಮೀಸಲು ಕೋಟಾ ಮಿತಿ (ಶೇ 50) ಹೆಚ್ಚಳ, ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ತಕ್ಷಣದಿಂದಲೇ ಮಹಿಳೆಯರಿಗೆ ಶೇ 33ರಷ್ಟು ಮೀಸಲು ಜಾರಿ ವಿಷಯಗಳು ‘ಇಂಡಿಯಾ’ ಕೂಟದ ಖಾತರಿಯ ಭಾಗವಾಗುವ ಸಾಧ್ಯತೆಗಳಿವೆ.

ಈ ಕರಡನ್ನು ಈಗಾಗಲೇ ಮೈತ್ರಿಕೂಟದ ವಿವಿಧ ಪಕ್ಷಗಳಿಗೆ ನೀಡಲಾಗಿದ್ದು, ಆ ಪಕ್ಷಗಳ ಪ್ರಮುಖ ಭರವಸೆಗಳನ್ನು ಒಳಗೊಂಡಿರುವುದರಿಂದ ಒಮ್ಮತ ಮೂಡಿದೆ. ಖಾತರಿಗಳನ್ನು ಉದ್ಯೋಗ, ಸಾಮಾಜಿಕ ನ್ಯಾಯ, ಸಾಮಾಜಿಕ ಭದ್ರತೆ, ಆರೋಗ್ಯ ಮತ್ತು ಶಿಕ್ಷಣ, ರೈತರು, ರಾಷ್ಟ್ರೀಯ ಭದ್ರತೆ ಹಾಗೂ ನಾಗರಿಕರು ಎಂದು ಏಳು ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಾಮಾಣಿಕ ಉದ್ಯಮಿಗಳು ಮತ್ತು ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡಲು ಕೇಂದ್ರೀಯ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಪದೇ ಪದೇ ಆರೋಪಿಸಿವೆ. ‘ಇಂಡಿಯಾ’ ಕೂಟವು ಈ ಸಂಸ್ಥೆಗಳ ಅಧಿಕಾರವನ್ನು ಮೊಟಕುಗೊಳಿಸುವ ಭರವಸೆಯನ್ನು ನೀಡಲಿದೆ ಎಂದು ಮೂಲಗಳು ಹೇಳಿವೆ.

ಚುನಾವಣಾ ಬಾಂಡ್‌ಗಳಿಗೆ ಸಂಬಂದಿಸಿದಂತೆ ಎಸ್‌ಐಟಿ ತನಿಖೆಗೆ ಆದೇಶಿಸುವುದರ ಜತೆಗೆ ಕಠಿಣ ಕ್ರಮಗಳ ಕುರಿತು ಪರಿಶೀಲನೆ, ಸಾರ್ವಜನಿಕ ವಲಯದ ಘಟಕಗಳ ಖಾಸಗೀಕರಣದ ಮರುಪರಿಶೀಲನೆ ಹಾಗೂ ಜಿಎಸ್‌ಟಿ ವ್ಯವಸ್ಥೆಯನ್ನು ಉತ್ತಮಗೊಳಿಸುವ ಖಾತರಿಯನ್ನು ನೀಡುವ ಸಾಧ್ಯತೆ ಇದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವರ್ಷಕ್ಕೆ ಉಚಿತವಾಗಿ ಆರು ಎಲ್‌ಪಿಜಿ ಸಿಲಿಂಡರ್‌, ಹಳೆ ಪಿಂಚಣಿ ಯೋಜನೆ ಮರುಜಾರಿ, ಪ್ರತಿ ಬಿಪಿಎಲ್‌ ಕುಟುಂಬಕ್ಕೆ ಉಚಿತ ಪಡಿತರ ವಿತರಣೆ, ಕುಟುಂಬದ ಹಿರಿಯ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ನೇರ ನಗದು ವರ್ಗಾವಣೆ, ಪ್ರತಿ ನಿರುದ್ಯೋಗಿಗಳಿಗೆ ತಿಂಗಳಿಗೆ ₹ 1,000, ವೃದ್ಧಾಪ್ಯ ಪಿಂಚಣಿಯನ್ನು ದ್ವಿಗುಣಗೊಳಿಸುವುದು ಮತ್ತು ಉನ್ನತ ವ್ಯಾಸಂಗ ಮಾಡುವ ಬಾಲಕಿಯರಿಗೆ ಒಂದು ಬಾರಿ ₹ 50,000 ಅನುದಾನ ಖಾತರಿಯನ್ನು ಘೋಷಿಸುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.