
ರಾಹುಲ್ ಗಾಂಧಿ ಹಾಗೂ ಅಮಿತ್ ಶಾ
ಪಿಟಿಐ ಚಿತ್ರಗಳು
ಪ್ರತಾಪಗಢ/ರಾಯ್‌ಬರೇಲಿ (ಉತ್ತರ ಪ್ರದೇಶ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಅಣು ಬಾಂಬ್’ಗೆ ಹೆದರಬಹುದು ಆದರೆ ಬಿಜೆಪಿ ಹಾಗಲ್ಲ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತಕ್ಕೆ ಸೇರಿದ್ದು, ಅದನ್ನು ನಾವು ಮರಳಿ ಪಡೆದುಕೊಳ್ಳುತ್ತೇವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಭಾನುವಾರ ಹೇಳಿದರು.
ಪ್ರತಾಪ್‌ಗಢದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನವು ಅಣು ಬಾಂಬ್ ಹೊಂದಿರುವುದರಿಂದ ಆ ದೇಶಕ್ಕೆ ಗೌರವ ನಿಡಬೇಕು’ ಎಂದು ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಈಚೆಗೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದರು.
ಸೋನಿಯಾ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಸಂಸದರ ಅನುದಾನದ ಶೇ 70ರಷ್ಟನ್ನು ಅಲ್ಪಸಂಖ್ಯಾತರಿಗಾಗಿ ವಿನಿಯೋಗಿಸಿದ್ದಾರೆ ಎಂದು ಆರೋಪಿಸಿದ ಅಮಿತ್ ಶಾ, ‘ಗಾಂಧಿ ಕುಟುಂಬದವರು ಸುಳ್ಳು ಹೇಳುವುದರಲ್ಲಿ ಪರಿಣತರು’ ಎಂದು ವಾಗ್ದಾಳಿ ನಡೆಸಿದರು.
‘ನೀವು ಗಾಂಧಿ ಕುಟುಂಬದವರಿಗೆ ಹಲವು ವರ್ಷಗಳಿಂದ ಅವಕಾಶ ನೀಡಿದ್ದೀರಿ. ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕಾಂಗ್ರೆಸ್‌ನವರಿಗೆ ಅಭಿವೃದ್ಧಿಯಲ್ಲಿ ನಂಬಿಕೆಯಿಲ್ಲ’ ಎಂದರು.
‘ಪ್ರತಿ ಮಹಿಳೆಗೆ ₹1 ಲಕ್ಷ ನೀಡುವುದಾಗಿ ಕಾಂಗ್ರೆಸ್ ಈಗ ಭರವಸೆ ನೀಡುತ್ತಿದೆ. ಪ್ರತಿ ಮಹಿಳೆಗೆ ₹15 ಸಾವಿರ ನೀಡುವುದಾಗಿ ತೆಲಂಗಾಣ ವಿಧಾನಸಭಾ ಚುನಾವಣೆಯ ವೇಳೆ ಅದು ಹೇಳಿತ್ತು. ಅಲ್ಲಿನ ಮಹಿಳೆಯರು ಕಾಂಗ್ರೆಸ್ ಅನ್ನು ಆಯ್ಕೆ ಮಾಡಿದ್ದಾರೆ. ಆದರೆ ₹15 ಸಾವಿರ ಬಿಡಿ ₹1,500 ಕೂಡ ನೀಡಿಲ್ಲ’ ಎಂದು ಶಾ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.