ನಾಗ್ಪುರದ ತಮ್ಮ ನಿವಾಸದಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ಭಾನುವಾರ ಸಂದರ್ಶನ ನೀಡಿದ ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ
ಪಿಟಿಐ ಚಿತ್ರ
ನಾಗ್ಪುರ: ‘ಬಿಜೆಪಿಯು ಸದ್ಯ ಸಂಸತ್‌ನಲ್ಲಿ 288 ಸದಸ್ಯ ಬಲ ಹೊಂದಿದೆ. ಇದನ್ನು ಉಳಿಸಿಕೊಳ್ಳುವುದರ ಜತೆಗೆ ದಕ್ಷಿಣದಿಂದ ಹೆಚ್ಚಿನ ಸ್ಥಾನಗಳನ್ನು ಗೆದ್ದು ಪ್ರಧಾನಿ ಮೋದಿ ಅವರ ಗುರಿಯಂತೆ 370 ಸ್ಥಾನಗಳನ್ನು ಗಳಿಸುತ್ತೇವೆ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ವ್ಯಕ್ತಪಡಿಸಿದ್ದಾರೆ.
‘ಪ್ರತಿ ರಾಜ್ಯದ ಲೆಕ್ಕಾಚಾರ ನೋಡುವ ಅಗತ್ಯವೇ ಇಲ್ಲ. ಈ ಬಾರಿ ನಾವು ದಕ್ಷಿಣದಲ್ಲಿ ಯಶಸ್ಸನ್ನು ಕಾಣಲಿದ್ದೇವೆ. ಮೋದಿ ಸರ್ಕಾರ ದಕ್ಷಿಣದಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾಡಿದ ಕೆಲಸಕ್ಕೆ ಫಲ ಸಿಗುವ ಕಾಲ ಬಂದಿದೆ’ ಎಂದು ಹೇಳಿದರು.
‘ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, ‘ಕಳೆದ 10 ವರ್ಷಗಳಿಂದ ಮಾಡಿದ ಕೆಲಸಗಳ ಬಲದಿಂದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು, ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸುವುದರಲ್ಲಿ ಅನುಮಾನವೇ ಇಲ್ಲ’ ಎಂದರು.
2025ರಲ್ಲಿ ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬಲಿದ್ದು, ಈ ಬಗ್ಗೆ ನಿಮ್ಮ ಕಾರ್ಯಸೂಚಿ ಏನು ಎಂಬ ಪ್ರಶ್ನೆಗೆ, ‘ನನಗೆ ವ್ಯಕ್ತಿಗತವಾಗಿ ಯಾವ ಕಾರ್ಯಸೂಚಿಯೂ (ಅಜೆಂಡಾ) ಇಲ್ಲ. ಆರ್‌ಎಸ್‌ಎಸ್ ಅದರ ಕಾರ್ಯಸೂಚಿ ಏನು ಅನ್ನುವುದನ್ನು ಹೇಳುತ್ತದೆ. ಅದನ್ನು ಈಡೇರಿಸುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದು ಉತ್ತರಿಸಿದರು.
ಬಿಜೆಪಿಯು ಚುನಾವಣಾ ಬಾಂಡ್‌ಗಳ ಮೂಲಕ ಹೆಚ್ಚಿನ ದೇಣಿಗೆ ಪಡೆದದ್ದು ಸಹಜ ಎಂದು ಗಡ್ಕರಿ ಅಭಿಪ್ರಾಯ ಪಟ್ಟರು. ‘ಟಿ.ವಿ ಮಾಧ್ಯಮದಲ್ಲಿಯೂ ಕೂಡ ಟಿಆರ್‌ಪಿ ಹೆಚ್ಚು ಇರುವವರಿಗೆ ಹೆಚ್ಚು ಜಾಹೀರಾತು ಸಿಗುತ್ತದೆ. ಟಿಆರ್‌ಪಿ ಕಡಿಮೆ ಇದ್ದರೆ ಕಡಿಮೆ ದರದ ಜಾಹೀರಾತು ಸಿಗುತ್ತದೆ. ಇಂದು ನಾವು ಆಡಳಿತ ನಡೆಸುತ್ತಿದ್ದೇವೆ. ಹಾಗಾಗಿ ನಮಗೆ ಹೆಚ್ಚು ದೇಣಿಗೆ ಸಿಕ್ಕಿದೆ. ನಾಳೆ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದರೆ, ಅದು ಹೆಚ್ಚು ದೇಣಿಗೆ ಪಡೆಯುತ್ತದೆ’ ಎಂದು ಅವರು ಸಮರ್ಥಿಸಿಕೊಂಡರು.
ಕೇಜ್ರಿವಾಲ್ ಸೇರಿದಂತೆ ವಿರೋಧ ಪಕ್ಷಗಳ ಮುಖಂಡರ ವಿರುದ್ಧ ಇ.ಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ ಮುಂತಾದ ಸಂಸ್ಥೆಗಳು ಕ್ರಮ ಜರುಗಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿ, ‘ನಾವು ನಮ್ಮಿಚ್ಛೆಯಂತೆ ಕ್ರಮ ಜರುಗಿಸಲಿಲ್ಲ. ಕಾನೂನು ಪ್ರಕಾರವಾಗಿ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮೋದೀಜಿ ಅಥವಾ ಬಿಜೆಪಿ ಪಾತ್ರ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.