ADVERTISEMENT

ತುಮಕೂರಿನಿಂದ ಸ್ಪರ್ಧಿಸುವಂತೆ ದೇವೇಗೌಡರನ್ನು ನಾವ್ಯಾರೂ ಕರೆದಿರಲಿಲ್ಲ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 8:03 IST
Last Updated 30 ಮಾರ್ಚ್ 2024, 8:03 IST
<div class="paragraphs"><p>ಎಚ್‌.ಡಿ. ದೇವೇಗೌಡ</p></div>

ಎಚ್‌.ಡಿ. ದೇವೇಗೌಡ

   

ಬೆಂಗಳೂರು: ‘2019ರ ಲೋಕಸಭೆ ಚುನಾವಣೆಯಲ್ಲಿ ತುಮಕೂರಿಗೆ ಎಚ್‌.ಡಿ. ದೇವೇಗೌಡರನ್ನು ಕರೆದುಕೊಂಡು ಹೋಗಿ ನಾವು (ಕಾಂಗ್ರೆಸ್‌) ಅವರನ್ನು ಸೋಲಿಸಿಲ್ಲ. ದೇವೇಗೌಡ ಪರವಾಗಿ ಜೆಡಿಎಸ್ ಪಕ್ಷದವರೇ ಕೆಲಸ ಮಾಡಲಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ತುಮಕೂರಿನಿಂದ ಸ್ಪರ್ಧಿಸುವಂತೆ ದೇವೆಗೌಡ ಅವರನ್ನು ಯಾರೂ ಕರೆದಿರಲಿಲ್ಲ. ಆಗ ನಾನು ಕೆಪಿಸಿಸಿ ಅಧ್ಯಕ್ಷ್ಯನಾಗಿದ್ದೆ’ ಎಂದರು.

ADVERTISEMENT

‘ದೇವೇಗೌಡ ಅವರು ತುಮಕೂರಿನಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ನೀವು ಸ್ಪರ್ಧಿಸುತ್ತೀರಾ? ಎಂದು ನಾನು ದೇವೇಗೌಡ ಅವರನ್ನು ಕೇಳಿದ್ದೆ. ಅದಕ್ಕೆ ಅವರು ನಾನು ಇನ್ನೂ ತೀರ್ಮಾನ ಮಾಡಿಲ್ಲಪ್ಪ. ಬೆಂಗಳೂರು ಉತ್ತರ ಕ್ಷೇತ್ರದಿಂದ ನಿಲ್ಲಲು ತೀರ್ಮಾನ ಮಾಡಿಕೊಂಡಿದ್ದೀನಿ ಎಂದಿದ್ದರು. ಬಳಿಕ ನಮ್ಮ ಹೈಕಮಾಂಡ್ ಜೊತೆ ಏನು ಮಾತನಾಡಿಕೊಂಡರು ಎಂಬ ವಿಷಯ ನನಗೆ ಗೊತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ತುಮಕೂರಿನಿಂದ ದೇವೇಗೌಡ ಅವರು ಸ್ಪರ್ಧಿಸುತ್ತಾರೆಂದು ಹೈಕಮಾಂಡ್‌ನಿಂದ ಸೂಚನೆ ಬಂತು. ನಾವೆಲ್ಲ ಪ್ರಾಮಾಣಿಕವಾಗಿ ದೇವೇಗೌಡ ಅವರ ಗೆಲುವಿಗಾಗಿ ಕೆಲಸ ಮಾಡಿದ್ದೇವೆ. ಪ್ರಧಾನ ಮಂತ್ರಿ ಆಗಿದ್ದವರು ನಮ್ಮ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅಂದಾಗ ಗೆಲ್ಲಿಸಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು’ ಎಂದು ಹೇಳಿದರು‌.

‘ಎಚ್‌.ಡಿ. ಕುಮಾರಸ್ವಾಮಿ ಅವರ ಆರೋಗ್ಯದ ವಿಚಾರವಾಗಿ ಶಾಸಕ ಬಂಡಿ ಸಿದ್ದೇಗೌಡ ಅವರು ನೀಡಿದ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಚುನಾವಣೆ ಸಂದರ್ಭದಲ್ಲಿ ಯಾರೊಬ್ಬರು ವೈಯಕ್ತಿಕ ವಿಚಾರಗಳನ್ನು ಮಾತನಾಡಬಾರದು. ನಮ್ಮ ಮಾತಿನ ಮೇಲೆ ನಮಗೆ ನಿಯಂತ್ರಣ ಇದ್ದರೆ ಒಳ್ಳೆಯದು‌. ನಾನೇ‌ ಇರಲಿ, ಬೇರೆ ಯಾರೇ ಇರಲಿ ಅದು ಸೂಕ್ತವಲ್ಲ‌’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.