ADVERTISEMENT

ಲೋಕಸಭೆ ಚುನಾವಣೆ | ‘ಮೇಕೆದಾಟು’ ಅನುಮತಿ ಪಡೆಯುವುದೇ ಗುರಿ: ಎಚ್‌ಡಿಕೆ ಶಪಥ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 13:56 IST
Last Updated 4 ಏಪ್ರಿಲ್ 2024, 13:56 IST
<div class="paragraphs"><p>ಎಚ್‌.ಡಿ.ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಮಂಡ್ಯ ವಿವಿ ಆವರಣದಲ್ಲಿ ನಡೆದ ಸಭೆಯಲ್ಲಿ ಮೈತ್ರಿ ಪಕ್ಷಗಳ ಮುಖಂಡರು ಕೈಕೈ ಹಿಡಿದು ಸಂಭ್ರಮಿಸಿದರು. ಬಿ.ಎಸ್‌.ಯರಿಯೂರಪ್ಪ, ಡಾ.ಪ್ರಮೋದ್‌ ಸಾವಂತ್‌, ಎಚ್‌.ಡಿ.ಕುಮಾರಸ್ವಾಮಿ ಬಂಡೆಪ್ಪ ಕಾಶೆಂಪೂರ, ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ ಇದ್ದಾರೆ</p></div>

ಎಚ್‌.ಡಿ.ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಮಂಡ್ಯ ವಿವಿ ಆವರಣದಲ್ಲಿ ನಡೆದ ಸಭೆಯಲ್ಲಿ ಮೈತ್ರಿ ಪಕ್ಷಗಳ ಮುಖಂಡರು ಕೈಕೈ ಹಿಡಿದು ಸಂಭ್ರಮಿಸಿದರು. ಬಿ.ಎಸ್‌.ಯರಿಯೂರಪ್ಪ, ಡಾ.ಪ್ರಮೋದ್‌ ಸಾವಂತ್‌, ಎಚ್‌.ಡಿ.ಕುಮಾರಸ್ವಾಮಿ ಬಂಡೆಪ್ಪ ಕಾಶೆಂಪೂರ, ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ ಇದ್ದಾರೆ

   

ಮಂಡ್ಯ: ‘ಸಂಸದನಾಗಿ ಆಯ್ಕೆಯಾಗಿ ಮೇಕೆದಾಟು, ಮಹದಾಯಿ, ಕೃಷ್ಣ, ಭದ್ರ ಮೇಲ್ದಂಡೆ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವುದೇ ನನ್ನ ಗುರಿ. ಇದು ಸಾಧ್ಯವಾಗದಿದ್ದರೆ ರಾಜಕಾರಣದಲ್ಲಿ ಮುಂದುವರಿಯುವುದಿಲ್ಲ’ ಎಂದು ಗುರುವಾರ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಶಪಥ ಮಾಡಿದರು.

ನಗರದ ಮಂಡ್ಯ ವಿವಿ ಮೈದಾನದಲ್ಲಿ ನಡೆದ ಬೃಹತ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದ 28 ಸಂಸದರೂ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡುತ್ತಿಲ್ಲವೆಂಬ ಆರೋಪವಿದೆ. ಎಚ್‌.ಡಿ.ದೇವೇಗೌಡರ ಮಾರ್ಗದರ್ಶನದೊಂದಿಗೆ ನಾನು ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ನೀರಾವರಿ ಯೋಜನೆಗಳ ಜಾರಿಗಾಗಿ ಹೋರಾಡುವೆ. ಸಂಸತ್‌ನಲ್ಲಿ ರಾಜ್ಯದ ಎಲ್ಲ ಸಂಸದರ ಧ್ವನಿಯಾಗಿ ಕೆಲಸ ಮಾಡುವೆ’ ಎಂದರು.

ADVERTISEMENT

‘ಮೇಕೆದಾಟು ಯೋಜನೆಗಾಗಿ ನನ್ನ ನೀರು ನನ್ನ ಹಕ್ಕು ಪಾದಯಾತ್ರೆ ಮಾಡಿದವರು ಇಂದು ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಬ್ಬು, ಭತ್ತ ಒಣಗುತ್ತಿದ್ದು, ರೈತರಿಗೆ ನೀರು ಕೊಡಲು ಸಾಧ್ಯವಾಗಿಲ್ಲ, ಕುಡಿಯುವ ನೀರು ಒದಗಿಸಿಲ್ಲ. ಆದರೆ ತಮಿಳುನಾಡಿಗೆ ನಿರಂತರವಾಗಿ ನೀರು ಹರಿದು ಹೋಗುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ದ ವಾಗ್ದಾಳಿ ನಡೆಸಿದರು.

ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ

‘ನಾನೂ ಮುಖ್ಯಮಾಂತ್ರಿಯಾಗಿ ಕೆಲಸ ಮಾಡಿದ್ದೇನೆ. ಎಂದೂ ಕೇಂದ್ರ ಸರ್ಕಾರದ ಎದುರು ಕೈಚಾಚಿಲ್ಲ. ಜನರ ತೆರಿಗೆ ಹಣದಲ್ಲೇ ರೈತರ ಸಾಲ ಮನ್ನಾ ಮಾಡಿದೆ. ಆದರೆ, ಈಗಿನ ಕಾಂಗ್ರೆಸ್‌ ಸರ್ಕಾರ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರದ ಮುಂದೆ ಕೈಚಾಚುತ್ತಿದೆ. ಭತ್ತ, ಕಬ್ಬು ಹಾಕಬೇಡಿ ಎಂದು ಹೇಳಿದ ಕೃಷಿ ಸಚಿವ ಇದ್ದರೆ, ಅದು ಕರ್ನಾಟಕದ ಕೃಷಿ ಸಚಿವ ಮಾತ್ರ. ಈ ಕುರಿತು ಸಾರ್ವಜನಿಕವಾಗಿ ಚರ್ಚೆಗೆ ಸಿದ್ಧನಿದ್ದೇನೆ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬರಲಿ’ ಎಂದು ಆಹ್ವಾನ ನೀಡಿದರು.

‘ನಾನು ಲಾಟರಿ, ಸಾರಾಯಿ ನಿಷೇಧಿಸಿದ್ದೆ. ಆದರೆ ಇಂದು ಕ್ರಿಕೆಟ್‌ ಬೆಟ್ಟಿಂಗ್‌, ಮಟ್ಕಾ ದಂಧೆ ಗಲ್ಲಿಗಲ್ಲಿಯಲ್ಲೂ ನಡೆಯುತ್ತಿದ್ದು, ಗ್ರಾಮೀಣ ಯುವಜನರ ಜೀವನ ಹಾಳಾಗುತ್ತಿದೆ. ಪಾಪದ ಹಣದಲ್ಲಿ ಸರ್ಕಾರ ನಡೆಯುತ್ತಿದೆ. ನಾನೆಂದೂ ಅಂಥ ಹಣ ಮುಟ್ಟಿಲ್ಲ. ಪ್ರಧಾನಿ ನರೇಂದ್ರ ಮೋದಿ ವಿಶ್ವನಾಯಕರಾಗಿ ಗುರುತಿಸಿಕೊಂಡಿದ್ದಾರೆ. ದೇಶದಲ್ಲಿ ಮುಸ್ಲಿಮರ ರಕ್ಷಣೆಗಾಗಿ ಅವರ ನಾಯಕತ್ವ ಅನಿವಾರ್ಯ’ ಎಂದರು.

ಬಿಜೆಪಿ ವರಿಷ್ಠ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ‘ಕಿಸಾನ್‌ ಸಮ್ಮಾನ್‌ ಯೋಜನೆ ಅಡಿ ಕೇಂದ್ರ ಸರ್ಕಾರ ನೀಡುವ ₹ 6 ಸಾವಿರದ ಜೊತೆ ನಮ್ಮ ಸರ್ಕಾರ ₹ 4 ಸಾವಿರ ಕೊಡುತ್ತಿತ್ತು, ಅದನ್ನು ಕಾಂಗ್ರೆಸ್‌ ಸರ್ಕಾರ ನಿಲ್ಲಿಸಿದ್ದೇಕೆ? ಮಹಿಳೆಯರ ಸ್ವಾಭಿಮಾನ ರಕ್ಷಿಸುತ್ತಿದ್ದ ಭಾಗ್ಯಲಕ್ಷ್ಮಿ ಯೋಜನೆಯನ್ನು ‌ಸ್ಥಗಿತಗೊಳಿಸಿದ್ದೇಕೆ’ ಎಂದು ಪ್ರಶ್ನಿಸಿದರು.

ಮಾತುಕತೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಎಚ್‌.ಡಿ.ಕುಮಾರಸ್ವಾಮಿ

ನೇಣು ಹಾಕಿಕೊಳ್ಳುವ ಒತ್ತಡ

‘ಮಂಡ್ಯ ಜಿಲ್ಲೆಯ ಜನರು ಒತ್ತಾಯದ ಮೇರೆಗೆ ನಾನು ಸ್ಪರ್ಧಿಸುತ್ತಿದ್ದೇನೆ. ಕೆಲವು ರೈತರು ನನಗೆ ಕರೆ ಮಾಡಿ ಮಂಡ್ಯದಿಂದ ಸ್ಪರ್ಧಿಸದಿದ್ದರೆ ಸಂಜಯ ವೃತ್ತದಲ್ಲಿ ನೇಣು ಹಾಕಿಕೊಳ್ಳುವುದಾಗಿ ಒತ್ತಡ ಹೇರಿದರು’ ಎಂದು ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.