ADVERTISEMENT

ಹಾಸನ| ಪ್ರೀತಂಗೌಡರ ಸವಾಲು ಸ್ವೀಕರಿಸಿದ ರೇವಣ್ಣ ಕುಟುಂಬ

ಜೆಡಿಎಸ್‌ ಅಭ್ಯರ್ಥಿ ಸ್ವರೂಪ್‌ ನೆಪ ಮಾತ್ರ| ದುಬಾರಿಯಾದ ಬಿಜೆಪಿ ಅಭ್ಯರ್ಥಿ ಮಾತು

ಚಿದಂಬರಪ್ರಸಾದ್
Published 1 ಮೇ 2023, 19:37 IST
Last Updated 1 ಮೇ 2023, 19:37 IST
   

ಹಾಸನ: ಜೆಡಿಎಸ್‌ ಟಿಕೆಟ್‌ ಗೊಂದಲದಿಂದ ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯದ ಗಮನ ಸೆಳೆದಿದ್ದ ಹಾಸನ ಕ್ಷೇತ್ರವು ಬಿಜೆಪಿ ಹಾಗೂ ಜೆಡಿಎಸ್‌ಗೆ ‘ಪ್ರತಿಷ್ಠೆ’ಯ ಪ್ರಶ್ನೆಯಾಗಿದೆ.

ಶಾಸಕ, ಬಿಜೆಪಿಯ ಅಭ್ಯರ್ಥಿ ಪ್ರೀತಂಗೌಡ, ‘ರೇವಣ್ಣ ಕುಟುಂಬದ ಯಾರೇ ಸ್ಪರ್ಧಿಸಿದರೂ 50 ಸಾವಿರ ಮತಗಳಿಂದ ಸೋಲಿಸುತ್ತೇನೆ. ಒಂದು ಮತ ಕಡಿಮೆಯಾದರೂ, ರಾಜೀನಾಮೆ ನೀಡಿ, ಮತ್ತೆ ಚುನಾವಣೆಗೆ ಹೋಗುತ್ತೇನೆ’ ಎಂದು ಹಾಕಿದ್ದ ಸವಾಲು, ಕ್ಷೇತ್ರದಲ್ಲಿ ಕಿಡಿ ಹೊತ್ತಿಸಿತ್ತು.

ಸವಾಲನ್ನು ಗಂಭೀರವಾಗಿ ಪರಿಗಣಿಸಿದ ರೇವಣ್ಣ ಕುಟುಂಬ, ‘ಹಾಸನದಲ್ಲಿ ಸ್ಪರ್ಧಿಸಲೇಬೇಕು’ ಎಂದು ಪಣ ತೊಟ್ಟ ವೇಳೆ, ರೇವಣ್ಣ ಪತ್ನಿ ಭವಾನಿ, ‘ಹಾಸನದಲ್ಲಿ ನಾನೇ ಅಭ್ಯರ್ಥಿ’ ಎಂದು ಹೇಳಿದ್ದು, ಟಿಕೆಟ್‌ ಗೊಂದಲವನ್ನೂ ಸೃಷ್ಟಿಸಿತ್ತು.

ADVERTISEMENT

ಭವಾನಿಗೆ ಟಿಕೆಟ್‌ ನೀಡಬೇಕು ಎನ್ನುವ ರೇವಣ್ಣ ಕುಟುಂಬದ ಬೇಡಿಕೆಗೆ ಸೊಪ್ಪು ಹಾಕದ ಎಚ್‌.ಡಿ. ಕುಮಾರಸ್ವಾಮಿ, ‘ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಮೀಸಲು’ ಎಂದು ಪಟ್ಟು ಹಿಡಿದಿದ್ದರು. ದೇವೇಗೌಡರ ಮಧ್ಯಪ್ರವೇಶದಿಂದ ಮಾಜಿ ಶಾಸಕ ದಿವಂಗತ ಎಚ್‌.ಎಸ್‌. ಪ್ರಕಾಶ್‌ ಅವರ ಪುತ್ರ ಸ್ವರೂಪ್‌ ಅವರಿಗೇ ಟಿಕೆಟ್‌ ನೀಡಲಾಗಿದೆ. ತಮ್ಮ ಕುಟುಂಬದವರು ಕಣದಲ್ಲಿ ಇಲ್ಲದಿದ್ದರೂ, ಪ್ರೀತಂಗೌಡರ ಸವಾಲನ್ನು ರೇವಣ್ಣ ಕುಟುಂಬ ವೈಯಕ್ತಿಕವಾಗಿ ಪರಿಗಣಿಸಿರುವುದು ವಿಶೇಷ. ಹೀಗಾಗಿ ಸ್ವರೂಪ್‌ ಇಲ್ಲಿ ನೆಪಮಾತ್ರ.

ಕ್ಷೇತ್ರದಲ್ಲಿ ಒಕ್ಕಲಿಗರು, ಅದರಲ್ಲೂ ಒಳಪಂಗಡವಾದ ದಾಸ ಒಕ್ಕಲಿಗರೇ ಹೆಚ್ಚು. ಮೂರೂ ಪಕ್ಷಗಳು ಈ ಸಮುದಾಯದವರಿಗೇ ಟಿಕೆಟ್‌ ನೀಡಿದ್ದು, ಮತಗಳು ಹಂಚಿ ಹೋಗುವುದು ನಿಶ್ಚಿತ. ಹೀಗಾಗಿ ಬೇರೆ ಸಮುದಾಯಗಳ ಮತಗಳನ್ನು ಸೆಳೆಯುವಲ್ಲಿ ಪಕ್ಷಗಳು ಗಮನ ಹರಿಸಿವೆ.

‘ಲಿಂಗಾಯತರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡದ ಮತಗಳ ಬುಟ್ಟಿಗೆ ಕೈ ಹಾಕಿದರೆ ಗೆಲ್ಲಬಹುದು‘ ಎಂಬುದು ಎಲ್ಲ ಪಕ್ಷಗಳ ಲೆಕ್ಕಾಚಾರ.

ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಿ ಲಾಭ ಪಡೆಯಬೇಕೆಂಬುದು ಪ್ರೀತಂಗೌಡರ ತಂತ್ರ. ಪ್ರಚಾರ ಸಭೆಯಲ್ಲಿ ಅವರು, ‘ಜೆಡಿಎಸ್‌ಗೆ ಮತ ಹಾಕಿದರೆ, ಬಿಜೆಪಿಗೇ ಹಾಕಿದಂತೆ. ದೇವೇಗೌಡರು, ಮೋದಿ ಸಾಹೇಬರು ಮಾತನಾಡಿಕೊಂಡಿದ್ದಾರೆ. ಮೈಸೂರಿನ ಮೇಲೆ ಬೆಂಗಳೂರಿಗೆ ಹೋಗೋದು ಬೇಡ. ಹಾಸನದಿಂದ ಬೆಳ್ಳೂರು ಕ್ರಾಸ್‌ ಮೇಲೆ ಹೋಗಿ ಎಂದು ಹೇಳುತ್ತೇನೆ. ಅದರ ಮೇಲೆ ನಿಮ್ಮಿಷ್ಟ‘ ಎಂದಿದ್ದರು. ’ಆ ಮೂಲಕ ಜೆಡಿಎಸ್‌ಗೆ ಮತ ನೀಡಬೇಡಿ ಎಂದು ಅವರು ಅಲ್ಪಸಂಖ್ಯಾತರಿಗೆ ಹೇಳಿದ್ದಾರೆ‘ ಎಂದು ವಿಶ್ಲೇಷಿಸಲಾಗುತ್ತಿದೆ.

‘ಕಳೆದ ಬಾರಿ ಕಾಂಗ್ರೆಸ್‌ನವರು ರಾಹುಲ್‌ ಗಾಂಧಿ ಮೂಲಕ ಜೆಡಿಎಸ್‌, ಬಿಜೆಪಿಯ ಬಿ ಟೀಂ ಎಂದು ಹೇಳಿಸಿದ್ದರು. ಅದರಿಂದಲೇ ನಾವು ಸೋಲಬೇಕಾಯಿತು’ ಎಂದು ಎಚ್‌.ಡಿ.ರೇವಣ್ಣ ಆರೋಪಿಸುತ್ತಲೇ ಬಂದಿದ್ದಾರೆ.

2004 ರಿಂದ 2013 ರವರೆಗೆ ಮೂರು ಚುನಾವಣೆಯಲ್ಲಿ ಜೆಡಿಎಸ್‌ನ ಎಚ್‌.ಎಸ್. ಪ್ರಕಾಶ್‌ ಆಯ್ಕೆಯಾಗಿದ್ದರು. ಕ್ಷೇತ್ರದ ಹಿಡಿತ ರೇವಣ್ಣ ಕೈಯಲ್ಲಿಯೇ ಇತ್ತು. 2018 ರಲ್ಲಿ ಬಿಜೆಪಿಯ ಪ್ರೀತಂಗೌಡ ಗೆದ್ದ ಬಳಿಕ ಹಿಡಿತ ಸಂಪೂರ್ಣ ಕೈತಪ್ಪಿದೆ.

’ಪ್ರೀತಂಗೌಡರನ್ನು ಸೋಲಿಸಿ, ಕ್ಷೇತ್ರದಲ್ಲಿ ಹಿಡಿತ ಸಾಧಿಸಲೇಬೇಕು‘ ಎಂಬ ಏಕೈಕ ಉದ್ದೇಶದಿಂದ ಪ್ರಕಾಶ್‌ ಪುತ್ರ, ಪಕ್ಷದ ಅಭ್ಯರ್ಥಿ ಸ್ವರೂಪ್‌ ಜೊತೆಗಿನ ಮುನಿಸನ್ನು ರೇವಣ್ಣ ಮರೆತಿದ್ದಾರೆ. ಆಕಾಂಕ್ಷಿಯಾಗಿದ್ದ ಭವಾನಿ ಕೂಡ ’ಸ್ವರೂಪ್‌ ನನ್ನ ಮಗನಂತೆ‘ ಎಂದು, ಅವರಿಗೆ ಜೊತೆಯಾಗಿದ್ದಾರೆ. ‘ಪ್ರೀತಂಗೌಡರನ್ನು ಸೋಲಿಸಿಯೇ ಸಿದ್ಧ’ ಎನ್ನುತ್ತಿದ್ದಾರೆ.

ರೇವಣ್ಣ ದಂಪತಿಯಿಂದಾಗಿ ಸ್ವರೂಪ್‌ ಬಲ ಹೆಚ್ಚಿದೆ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಅವರಿಗೆ ಕ್ಷೇತ್ರದ ಗ್ರಾಮಗಳ ನಿಕಟ ಪರಿಚಯವೂ ಇದೆ. ’ತಂದೆ ದಿ.ಎಚ್‌.ಎಸ್‌. ಪ್ರಕಾಶ್‌ ಬಗ್ಗೆ ಕ್ಷೇತ್ರದಲ್ಲಿರುವ ಅನುಕಂಪವೂ ಕೈಹಿಡಿಯುತ್ತದೆ‘ ಎಂಬ ನಿರೀಕ್ಷೆಯೂ ಇದೆ.

’ಐದು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಜನರೊಂದಿಗಿನ ಒಡನಾಟಗಳು ಕೈಹಿಡಿಯುತ್ತವೆ‘ ಎಂಬ ನಿರೀಕ್ಷೆ ಪ್ರೀತಂಗೌಡರದ್ದು. ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್‌ ಶಾ ಬಂದು ಮತಯಾಚನೆ ಮಾಡಿರುವುದೂ, ಗೆಲುವಿಗೆ ಸಹಕಾರಿಯಾಗಬಹುದೆಂಬ ವಿಶ್ವಾಸದಲ್ಲಿದ್ದಾರೆ. ಪ್ರತಿ ಮನೆಗೂ ಖುದ್ದಾಗಿ ಹೋಗಿ ಮತಯಾಚಿಸುತ್ತಿದ್ದಾರೆ.

ಹಿಂದಿನ ಚುನಾವಣೆಯಲ್ಲಿ 3ನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌ನಿಂದ ಬನವಾಸೆ ರಂಗಸ್ವಾಮಿ ಕಣದಲ್ಲಿದ್ದಾರೆ. ಆಕಾಂಕ್ಷಿಗಳಲ್ಲಿದ್ದ ಭಿನ್ನಮತವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪರಿಹರಿಸಿರುವುದು ಸಮಾಧಾನ ತಂದರೂ ಗೆಲುವನ್ನು ತಂದುಕೊಡುವಂಥ ಪರಿಸ್ಥಿತಿ ಇಲ್ಲ.

ಜೆಡಿಎಸ್‌ನಿಂದ ಹೊರಬಂದಿರುವ ಅಗಿಲೆ ಯೋಗೀಶ್‌ ಆಪ್‌ ಅಭ್ಯರ್ಥಿಯಾಗಿದ್ದು, ಪಕ್ಷದ ಮತಗಳನ್ನು ಸೆಳೆಯುವ ಸಾಧ್ಯತೆ ಇದೆ.

ಹಾಸನ ಕ್ಷೇತ್ರ
ಪ್ರೀತಂ ಗೌಡ
ಎಚ್.ಪಿ ಸ್ವರೂಪ್

ತಿರುಗು ಬಾಣವಾದ ಪ್ರೀತಂ ಸವಾಲು

’ಸವಾಲು ಸ್ವೀಕರಿಸಿ ರೇವಣ್ಣ ಕುಟುಂಬದವರೇ ಕಣಕ್ಕಿಳಿದರೆ ಕುಟುಂಬ ರಾಜಕಾರಣದ ದಾಳವನ್ನು ಉರುಳಿಸಬಹುದು. ಸ್ವರೂಪ್‌ಗೆ ಟಿಕೆಟ್‌ ನೀಡಿದರೆ ಸುಲಭದಲ್ಲಿ ಗೆಲ್ಲಬಹುದು‘ ಎಂಬ ಲೆಕ್ಕಾಚಾರದಲ್ಲಿದ್ದ ಪ್ರೀತಂಗೌಡರಿಗೆ ತಮ್ಮ ಸವಾಲೇ ತಿರುಗುಬಾಣವಾಗಿದೆ. ರೇವಣ್ಣ ಕುಟುಂಬ ಸ್ವರೂಪ್‌ ಬೆಂಬಲಿಸುತ್ತಿರುವುದು ಬಿಜೆಪಿಯಲ್ಲೂ ಆತಂಕವನ್ನು ತಂದೊಡ್ಡಿದೆ. ‘ಜಿಲ್ಲೆಯ ಜೆಡಿಎಸ್‌ನಲ್ಲಿ ರೇವಣ್ಣ ಒಂದು ಶಕ್ತಿ. ಅವರಿಂದಲೇ ಪಕ್ಷದ ಅಭ್ಯರ್ಥಿ ಗೆಲ್ಲುತ್ತಿದ್ದರು. ಅವರ ಬೆಂಬಲವಿಲ್ಲದಿದ್ದರೆ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ’ ಎಂದು ಸ್ವತಃ ಪ್ರೀತಂಗೌಡರೇ ಒಪ್ಪಿಕೊಳ್ಳುತ್ತಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.