ನೈನಾರ್ ನಾಗೇಂದ್ರನ್ ಹಾಗೂ ರಾಬರ್ಟ್ ಬ್ರೂಸ್
ನೈನಾರ್ ನಾಗೇಂದ್ರನ್ (ಬಿಜೆಪಿ)
ತಮಿಳುನಾಡಿನ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ತಿರುನೆಲ್ವೇಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಈ ಬಾರಿ ನೈನಾರ್ ನಾಗೇಂದ್ರನ್ ಅವರನ್ನು ಕಣಕ್ಕಿಳಿಸಿದೆ. ಎಐಎಡಿಎಂಕೆಯಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದ ನಾಗೇಂದ್ರನ್ ಅವರು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಿಧನಾನಂತರ 2017ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಉದ್ಯಮಿ ಹಾಗೂ ರಾಜಕಾರಣಿಯಾಗಿರುವ ನಾಗೇಂದ್ರನ್ ಅವರು 2001ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2006ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ರಾಜ್ಯಮಟ್ಟದಲ್ಲಿ ಸಾಕಷ್ಟು ಪ್ರಭಾವವಿರುವ ಮುಖಂಡರಾಗಿರುವುದರಿಂದ ಇವರು ಈ ಬಾರಿ ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿದೆ ಬಿಜೆಪಿ. ತಿರುನೆಲ್ವೇಲಿಗೆ ಈಚೆಗೆ ರೈಲಿನಲ್ಲಿ ತೆರಳುತ್ತಿದ್ದ ಮೂವರನ್ನು ಬಂಧಿಸಿದ್ದ ಅಧಿಕಾರಿಗಳು, ₹4 ಕೋಟಿ ನಗದು ವಶಪಡಿಸಿಕೊಂಡಿದ್ದರು. ಬಂಧಿತರು ನಾಗೇಂದ್ರನ್ ಅವರ ಬೆಂಬಲಿಗರು ಎಂದು ಆಡಳಿತಾರೂಢ ಡಿಎಂಕೆ ಆರೋಪಿಸಿದೆ.
ರಾಬರ್ಟ್ ಬ್ರೂಸ್ (ಕಾಂಗ್ರೆಸ್)
2019ರ ಚುನಾವಣೆಯಲ್ಲಿ ಡಿಎಂಕೆ ಅಭ್ಯರ್ಥಿ ಗೆದ್ದಿದ್ದ ತಿರುನೆಲ್ವೇಲಿ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್, ರಾಬರ್ಟ್ ಬ್ರೂಸ್ ಅವರನ್ನು ಅಖಾಡಕ್ಕಿಳಿಸಿದೆ. ಡಿಎಂಕೆಯು ‘ಇಂಡಿಯಾ’ ಒಕ್ಕೂಟದಲ್ಲಿರುವುದರಿಂದ ರಾಬರ್ಟ್ ಅವರು ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸದಲ್ಲಿದೆ ಕಾಂಗ್ರೆಸ್. ವೃತ್ತಿಯಲ್ಲಿ ವಕೀಲರಾಗಿರುವ ರಾಬರ್ಟ್ ಅವರು, 2023ರ ತೆಲಂಗಾಣ ವಿಧಾನಸಭಾ ಚುನಾವಣೆಯ ವೇಳೆ ಎಐಸಿಸಿ ವೀಕ್ಷಕರಾಗಿಯೂ ಕಾರ್ಯನಿರ್ವಹಿಸಿದ್ದರು. ಹಿಂದಿನ ಚುನಾವಣೆಗಳಲ್ಲಿ ರಾಬರ್ಟ್ ಅವರು ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಒಲವು ವ್ಯಕ್ತಪಡಿಸಿದ್ದರು. ಆದರೆ ಪಕ್ಷವು ಅವರನ್ನು ಸ್ಪರ್ಧೆಗಿಳಿಸಿರಲಿಲ್ಲ. ಈ ಬಾರಿ ತಿರುನೆಲ್ವೇಲಿಯಿಂದ ಅದೃಷ್ಟ ಪರೀಕ್ಷೆಗಿಳಿಯುವ ಅವಕಾಶ ಒದಗಿ ಬಂದಿದೆ. ದೀರ್ಘ ಕಾಲ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ರಾಬರ್ಟ್ ಅವರು ಸ್ಥಳೀಯವಾಗಿಯೂ ಪ್ರಭಾವಿ ಮುಖಂಡರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.