ಶೈನ್ ಟಾಮ್ ಚಾಕೊ
(ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್/ಶೈನ್ ಟಾಮ್ ಚಾಕೊ)
ಕೊಚ್ಚಿ: ಮಾದಕವಸ್ತು ನಿಗ್ರಹ ದಾಳಿಯ ಸಂದರ್ಭದಲ್ಲಿ ಹೋಟೆಲ್‌ನಿಂದ ಪರಾರಿಯಾಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮಲಯಾಳ ನಟ ಶೈನ್ ಟಾಮ್ ಚಾಕೊ ಇಂದು (ಶನಿವಾರ) ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಎರ್ನಾಕುಲಂ ನಾರ್ತ್ ಪೊಲೀಸ್ ಠಾಣೆಗೆ ಶೈನ್, ವಕೀಲರ ಸಹಿತ ಹಾಜರಾದರು.
ಹೋಟೆಲ್ ಮೇಲಿನ ದಾಳಿ ಸಂದರ್ಭದಲ್ಲಿ ನಟ ಪರಾರಿಯಾಗಿರುವುದರ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನಟ ಶೈನ್ ಟಾಮ್ ಚಾಕೊಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಇದರಂತೆ ಎಸಿಪಿ ನೇತೃತ್ವದ ತಂಡವು ನಟನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆ.
ಬುಧವಾರ ರಾತ್ರಿ ಪೊಲೀಸ್ ದಾಳಿ ಸಂದರ್ಭದಲ್ಲಿ ಸಿನಿಮಾ ಶೈಲಿಯಲ್ಲಿ ಮೂರನೇ ಮಹಡಿಯ ಕೋಣೆಯ ಕಿಟಕಿಯಿಂದ ಹಾರಿ ಶೈನ್ ಟಾಮ್ ಚಾಕೊ ಪರಾರಿಯಾಗಿದ್ದರು.
ಮೂರನೇ ಮಹಡಿಯಿಂದ ಎರಡನೇ ಮಹಡಿಗೆ ಬಳಿಕ ಈಜುಕೊಳಕ್ಕೆ ಹಾರಿ ಮೆಟ್ಟಿಲುಗಳ ಮೂಲಕ ನಟ ಪರಾರಿಯಾಗಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೋಟೆಲ್‌ನಲ್ಲಿ ಮಾದಕ ದ್ರವ್ಯ ಪತ್ತೆಯಾಗದ ಕಾರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.
ಈ ಮೊದಲು ಮಾದಕ ದ್ರವ್ಯಗಳ ವ್ಯಸನಿಯಾಗಿದ್ದ ಶೈನ್ ಟಾಮ್ ಚಾಕೊ, ಇನ್ನಷ್ಟೇ ಬಿಡುಗಡೆಗೊಳ್ಳಲಿರುವ 'ಸೂತ್ರವಾಕ್ಯಂ' ಚಿತ್ರದ ಸೆಟ್‌ನಲ್ಲಿ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ನಟಿ ವಿನ್ಸಿ ಅಲೋಶಿಯಸ್ ಮಲಯಾಳಂ ಚಲನಚಿತ್ರ ಮಂಡಳಿಗೆ ದೂರು ನೀಡಿದ್ದರು.
ಮಲಯಾಳಂ ಚಲನಚಿತ್ರ ಕಲಾವಿದರ ಸಂಘಕ್ಕೂ (ಅಮ್ಮ) ನಟಿ ವಿನ್ಸಿ ದೂರು ನೀಡಿದ್ದರು. ಆದರೆ ಈವರೆಗೆ ಪೊಲೀಸ್ ದೂರು ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.