ನಟ ಯಶ್ ಕಳೆದ ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದ ಯಾವ ಸಮಾರಂಭಗಳಲ್ಲಿಯೂ ಭಾಗಿಯಾಗಿರಲಿಲ್ಲ. ತಮ್ಮ ಮೊದಲ ಸಿನಿಮಾ ನಿರ್ಮಾಪಕ ಇ.ಕೃಷ್ಣಪ್ಪ ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿರುವ ‘ಮನದ ಕಡಲು’ ಚಿತ್ರದ ಟ್ರೇಲರ್ ಬಿಡುಗಡೆಗಾಗಿ ಅವರು ಇತ್ತೀಚೆಗೆ ವೇದಿಕೆಯಲ್ಲಿದ್ದರು. ಆ ಸಂದರ್ಭದಲ್ಲಿ ಚಿತ್ರರಂಗದ ಬೆಳವಣಿಗೆಗಾಗಿ ಅವರು ಆಡಿದ ಮಾತಿನ ಸಾರ ಇಲ್ಲಿದೆ...
1. ನನ್ನನ್ನು ಬೆಳೆಸಿದವರನ್ನು ಇವತ್ತಿಗೂ ಮರೆತಿಲ್ಲ. ಸಾಮಾನ್ಯ ನಟನಾಗಿದ್ದಾಗ ಮಾಡಿದ ಅವಮಾನಗಳೂ ನೆನಪಿವೆ. ಧಾರಾವಾಹಿಯಲ್ಲಿ ನಟಿಸುತ್ತಿದ್ದ ದಿನಗಳಲ್ಲಿ ಸಾಕಷ್ಟು ಅವಮಾನ ಎದುರಿಸಿರುವೆ. ಆಗ ಸಿನಿಮಾದಲ್ಲಿ ನಟಿಸಲು ಅವಕಾಶ ಬರುತ್ತಿತ್ತು. ಆದರೆ ಸಿನಿಮಾದ ಕಥೆ ಅಥವಾ ಸ್ಕ್ರಿಪ್ಟ್ ಕೇಳಿದರೆ, ನಿನಗೇಕೆ ಹೇಳಬೇಕು ಎಂಬ ಮನಸ್ಥಿತಿಯಲ್ಲಿ ಕೆಲ ಚಿತ್ರತಂಡಗಳು ಇರುತ್ತಿದ್ದವು. ಹೀಗಾಗಿಯೇ ಅನೇಕ ಚಿತ್ರಗಳನ್ನು ತಿರಸ್ಕರಿಸಿದ್ದೆ. ಚಿತ್ರದ ಕಥೆ ಪೂರ್ತಿಯಾಗಿ ಗೊತ್ತಿಲ್ಲದೆ ಚಿತ್ರದಲ್ಲಿ ನನ್ನನ್ನು ನಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಹೇಗೆ ಸಾಧ್ಯ ಎಂಬುದು ನನ್ನ ಆಲೋಚನೆಯಾಗಿತ್ತು. ‘ಮೊಗ್ಗಿನ ಮನಸು’ ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ, ನಿರ್ದೇಶಕ ಶಶಾಂಕ್ ಬಹಳ ವೃತ್ತಿಪರವಾಗಿ ನಡೆಸಿಕೊಂಡರು. ಹೀಗಾಗಿಯೇ ಇವತ್ತಿಗೂ ನನಗೆ ಅವರ ಮೇಲೆ ಅದೇ ಪ್ರೀತಿ ಇದೆ. ಚಿತ್ರೋದ್ಯಮದಲ್ಲಿ ಎಲ್ಲರೂ ಗೌರವಕ್ಕೆ ಅರ್ಹರು. ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಳ್ಳಿ.
2. ಒಬ್ಬ ವ್ಯಕ್ತಿ ತಾನಾಗಿಯೇ ಬೆಳೆದು ಬಿಡುವುದಿಲ್ಲ. ಅವರ ಸುತ್ತಮುತ್ತ ಸಾಕಷ್ಟು ಜನ ಪಿಲ್ಲರ್‌ಗಳಾಗಿ ನಿಂತು, ಅವರೆಲ್ಲರೂ ಬೆವರು ಹರಿಸಿ ಒಬ್ಬನನ್ನು ಮುಂದೆ ತಳ್ಳುತ್ತಾರೆ. ಆತನ ಬೆಳವಣಿಗೆಗಾಗಿ ಹಗಲು, ರಾತ್ರಿ ಶ್ರಮಿಸಿರುತ್ತಾರೆ. ಆ ರೀತಿ ತಳ್ಳಿದ್ದರಿಂದ ನಾನು ಇವತ್ತು ಈ ಸ್ಥಾನದಲ್ಲಿ ನಿಂತಿರುವೆ. ಅವರು ತಳ್ಳಿ ನೀಡಿದ ಬೆಂಬಲದಿಂದ ಜವಾಬ್ದಾರಿ ಇಟ್ಟುಕೊಂಡು ಇನ್ನು ಮುಂದೆ ಹೋಗಿ ಅವರು ಖುಷಿ ಪಡುವಂತಹ ಕೆಲಸ ಮಾಡಬೇಕು ಅಂತ ಗುರಿ ಇಟ್ಟುಕೊಂಡಿರುವೆ. ಕನ್ನಡ ಚಿತ್ರರಂಗವನ್ನು ಇನ್ನಷ್ಟು ಎತ್ತರಕ್ಕೆ ಕೊಂಡುಹೋಗುವ ಕನಸಿದೆ.
3.ಇವತ್ತಿನ ದಿನದಲ್ಲಿ ಕನ್ನಡ ಸಿನಿಮಾ ಎಂದಾಗ ತುಂಬಾ ಗೋಳಾಟ ಕೇಳಿಸುತ್ತದೆ. ನಾನು ಒಂದು ಕಾಲದಲ್ಲಿ ಜನ ಕನ್ನಡ ಸಿನಿಮಾ ನೋಡಲ್ಲ ಅಂತ ಬೈಯ್ಯುತ್ತಿದೆ. ಜನಗಳು ಬೇರೆ ಭಾಷೆ ಸಿನಿಮಾವನ್ನೇ ನೋಡುತ್ತಾರೆ ಅಂತ ಒಂದು ಸಂದರ್ಶನದಲ್ಲಿ ಮಾತಾಡಿದ್ದೆ. ಆಮೇಲೆ ಕುಳಿತು ಕನ್ನಡ ಸಿನಿಮಾ ನೋಡುತ್ತಿರುವಾಗ ನನಗೆ ಅನ್ನಿಸಿತು, ನಮ್ಮ ಕೆಲಸ ನಾವು ಸರಿ ಮಾಡಿಕೊಂಡು, ಒಳ್ಳೆ ಸಿನಿಮಾ ಕೊಟ್ಟರೆ ಕನ್ನಡ ಪ್ರೇಕ್ಷಕರು ಯಾವತ್ತೂ ಕೈಬಿಟ್ಟಿಲ್ಲ ಅಂತ. ಅಭಿಮಾನಿಗಳು ಯಾವತ್ತಿದ್ದರೂ ಒಳ್ಳೆಯ ಚಿತ್ರವನ್ನು ಹರಸಿಯೇ ಹರಸುತ್ತಾರೆ.
4. ಸಾಕಷ್ಟು ಜನ ಬಂದು ಹೊಸಬರನ್ನು ನೀವು ಲಾಂಚ್ ಮಾಡಿಕೊಡಿ, ನಮ್ಮ ಚಿತ್ರಕ್ಕೆ ಸಪೋರ್ಟ್ ಮಾಡಿ ಅಂತ ಆಗಾಗ ಕೇಳುತ್ತಲೇ ಇರುತ್ತಾರೆ. ಆ ರೀತಿ ಕಾರ್ಯಕ್ರಮಗಳಿಂದ ಪ್ರಚಾರ ಸಿಗಬಹುದು. ನಿಜವಾದ ಗೆಲುವು ಸಿಗೋದು ಸಿನಿಮಾ ಚೆನ್ನಾಗಿದ್ದಾಗ ಹೊರತು, ದೊಡ್ಡ ನಾಯಕರು ಬರುತ್ತಾರೆ ಅಂತಲ್ಲ. ನೀವು ಮಾಡುವ ಕೆಲಸದಿಂದ ನಿಮ್ಮ ಯಶಸ್ಸು ನಿರ್ಧಾರವಾಗುತ್ತದೆ.
5. ನಾನು ಇಂಡಸ್ಟ್ರಿಯಲ್ಲಿ ಎಲ್ಲರನ್ನೂ ಕೇಳಿಕೊಳ್ಳುತ್ತೇನೆ, ಅಪ್‌ಗ್ರೇಡ್ ಆಗೋಣ, ಕೆಲಸ ಕಲಿಯೋಣ, ದೊಡ್ಡ ಗುರಿಗಳನ್ನು ಇಟ್ಟುಕೊಳ್ಳೊಣ. ಸ್ವಾಭಿಮಾನ ಬೆಳೆಸಿಕೊಳ್ಳೋಣ. ಯಾರ ಮುಂದೆಯೂ ನಾವು ಕಡಿಮೆ ಎಂಬ ಯೋಚನೆ ಇಟ್ಟುಕೊಳ್ಳಬೇಡಿ, ತಲೆ ತಗ್ಗಿಸಬೇಡಿ. ಬೇಡೋದು ಬೇಡ. ಕಷ್ಟಪಟ್ಟು ಕೆಲಸ ಮಾಡೋಣ. ಬೇರೆಯವರೆಲ್ಲ ನಮಗೆ ಗೌರವ ಕೊಡುವ ರೀತಿ ದುಡಿಯೋಣ. ಧೈರ್ಯವಾಗಿ ಚಿತ್ರರಂಗಕ್ಕೆ ಬನ್ನಿ. ಇವತ್ತು ಇಂಡಸ್ಟ್ರಿಗೆ ತುಂಬ ಯಂಗ್‌ಸ್ಟಾರ್ ಬರುತ್ತಿದ್ದಾರೆ. ಹೊಸ ತಲೆಮಾರಿನ ನಾಯಕರುಗಳು ಬರಬೇಕು.
6. ನಟರು ಸಿನಿಮಾ ಎಂದರೆ ಕೇವಲ ನಟನೆ ಅಷ್ಟೆ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನೀವು ಹೇಗೆ ಉದ್ಯಮದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು, ಶಿಸ್ತು ಇರಬೇಕು, ಟ್ರೆಂಡ್ ಏನಾಗುತ್ತಿದೆ, ನಿಮ್ಮ ಜವಾಬ್ದಾರಿ ಏನು ಎಂಬುದನ್ನು ತಿಳಿದುಕೊಂಡು ಬರಬೇಕು. ನಿರ್ದೇಶಕರು ಕೂಡ ಚಿತ್ರರಂಗಕ್ಕೆ ಬರುವ ಮೊದಲು ಸಿದ್ಧತೆ ನಡೆಸಿಕೊಂಡು ಬರಬೇಕು. ಆಗ ಮಾತ್ರ ಒಳ್ಳೆಯ ಚಿತ್ರಗಳು ಬರಲು ಸಾಧ್ಯ.
7. ಅಭಿಮಾನಿಗಳು ಕಿರುಚಾಟ ದೊಡ್ಡಸ್ತಿಕೆ ತಂದುಕೊಡಲ್ಲ, ಜವಾಬ್ದಾರಿ ತಂದುಕೊಡುತ್ತೆ. ಅದು ಕುಗ್ಗುವಂತೆ ನಡೆದುಕೊಳ್ಳಬಾರದು. ‘ಮನದ ಕಡಲು’ ಚಿತ್ರದ ವೇದಿಕೆಯಲ್ಲಿ ‘ಟಾಕ್ಸಿಕ್’ ಚಿತ್ರದ ಕುರಿತು ಮಾತನಾಡಲಾರೆ. ಆ ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ. ಕೆಲಸವನ್ನು ಮುಗಿಸಿ ನಿಮ್ಮೆದುರಿಗೆ ಬರುತ್ತೇವೆ.
‘ನಟ ಯಶ್ ಅವರ ‘ಟಾಕ್ಸಿಕ್’ ಚಿತ್ರದ ಸೆಟ್‌ಗೆ ಭೇಟಿ ನೀಡಿದ್ದೆ. ಬಹಳ ಖುಷಿಯಾಯಿತು. ಟೈಟಾನಿಕ್ ಚಿತ್ರದ ಸೆಟ್‌ಗಿಂತಲೂ ಅದ್ದೂರಿಯಾಗಿತ್ತು. ಬಹುಶಃ ಕನ್ನಡದಲ್ಲಿ ಈತನಕ ಇಷ್ಟು ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಆಗಿಲ್ಲ. ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲಿಯೂ ಚಿತ್ರ ಬರುತ್ತಿದೆ. ಕನ್ನಡದಿಂದ ಹಾಲಿವುಡ್‌ಗೆ ಪೈಪೋಟಿ ನೀಡುವ ಚಿತ್ರವಾಗಲಿದೆ ಎನ್ನಿಸಿತು’ ಎಂದರು ಇ.ಕೃಷ್ಣಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.