ಬೆಂಗಳೂರು: ತಮ್ಮ ವಿಶಿಷ್ಟ ಮ್ಯಾನರಿಸಂ ಹಾಗೂ ಕೆಜಿಎಫ್ ಎಂಬ ಬ್ಲಾಕ್ ಬಸ್ಟರ್ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಭಾರತಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ಕನ್ನಡದ ನಟ 'ರಾಕಿಂಗ್ ಸ್ಟಾರ್' ಯಶ್ ಅವರಿಗೆ ಇಂದು (ಜನವರಿ 8) 39ನೇ ಜನ್ಮದಿನದ ಸಂಭ್ರಮ.
ಯಶ್‌ಗೆ ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಚಿತ್ರರಂಗ, ರಾಜಕೀಯ, ಉದ್ಯಮದವರು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟರ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ 'ಯಶ್' ಟ್ರೆಂಡ್ ಆಗಿದ್ದಾರೆ. ರಾಜ್ಯದ ಹಲವು ಕಡೆಗಳಲ್ಲಿ ಯಶ್ ಅಭಿಮಾನಿಗಳು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
ಯಶ್ ಜನ್ಮದಿನದ ಪ್ರಯುಕ್ತ ಇಂದು ‘ಟಾಕ್ಸಿಕ್’ ಚಿತ್ರದ ಟೈಟಲ್ ಟೀಸರ್ (ಬರ್ತಡೇ ಪೀಕ್) ಬಿಡುಗಡೆಯಾಗಿದೆ. ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಕ್ಕಂತಾಗಿದೆ.
59 ಸೆಕೆಂಡುಗಳ ಟೀಸರ್ ಅನ್ನು ಕೆವಿಎನ್ ಪ್ರೊಡಕ್ಷನ್ಸ್ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಿದೆ. ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಮೂಲಕ ನಾಯಕನ ಪಾತ್ರವನ್ನು ಚಿತ್ರತಂಡ ಪರಿಚಯಿಸಿದೆ.
ಭುವನಹಳ್ಳಿಯಿಂದ ಬಂದ ನವೀನ್ ಕುಮಾರ್ ಗೌಡ ಈಗ ರಾಕಿಂಗ್ ಸ್ಟಾರ್!
ಜನವರಿ 8 ರಂದು 1986ರಲ್ಲಿ ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಜನಿಸಿದ ಯಶ್ ಅವರ ಮೊದಲ ಹೆಸರು ನವೀನ್ ಕುಮಾರ್ ಗೌಡ. ಶಾಲಾ– ಕಾಲೇಜು ದಿನಗಳಿಂದಲೇ ಅಭಿನಯ, ನಾಟಕದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು ಮೊದಲು ಧಾರವಾಹಿಗಳಲ್ಲಿ ಗುರುತಿಸಿಕೊಂಡು ನಂತರ ಕನ್ನಡ ಚಿತ್ರರಂಗದಲ್ಲಿ ಮಿಂಚಿ ‘ಯಶ್’ ಆದರು.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್ 2 ಮೂಲಕ ದೇಶದಾದ್ಯಂತ ಹೆಸರು ಮಾಡಿದರು.
ಸದ್ಯ ಮಲಯಾಳಂನ ಗೀತು ಮೋಹನದಾಸ್ ಅವರ ಟಾಕ್ಸಿಕ್ ಎಂಬ ಬಿಗ್ ಬಜೆಟ್ ಚಿತ್ರದಲ್ಲಿ ಯಶ್ ನಟಿಸುತ್ತಿದ್ದಾರೆ. ‘A fairy tale for grown-ups’ ಎಂಬ ಅಡಿಬರಹವಿರುವ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. 2025ರ ಏಪ್ರಿಲ್ 10ರಂದು ಸಿನಿಮಾ ಬಿಡುಗಡೆಯಾಗಲಿದೆ.
ಯಶ್ ಅವರು ಚಿತ್ರಗಳ ಜೊತೆ ಮಾಡಲಿಂಗ್, ಜಾಹೀರಾತು ಅಲ್ಲದೇ ತಮ್ಮದೇಯಾದ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಎಂಬ ನಿರ್ಮಾಣ ಸಂಸ್ಥೆ ತರೆದಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗವನ್ನು ಜಾಗತಿಕಮಟ್ಟಕ್ಕೆ ತೆಗೆದುಕೊಂಡು ಹೋಗುವ ಶಪಥ ಮಾಡಿದ್ದಾರೆ.
ಅಭಿಮಾನಿಗಳಿಗೆ ಯಶ್ ಪತ್ರ
ಹೊಸ ವರ್ಷದ ಶುಭಾಶಯದೊಂದಿಗೆ ನಟ ಯಶ್ ಅವರು ತಮ್ಮ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.
ಪತ್ರವನ್ನು ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ತನ್ನ ಜನ್ಮದಿನದ ಹೆಸರಿನಲ್ಲಿ ಅತಿರೇಕದ ವರ್ತನೆಗಳನ್ನು ತೋರದೆ ಏನಾದರೂ ಮಾಡುವುದಿದ್ದರೇ ನಿಮ್ಮ ಕುಟುಂಬದವರು, ಸ್ನೇಹಿತರು ಹೆಮ್ಮೆ ಪಡುವಂತ ಕೆಲಸಗಳನ್ನು ಮಾಡಿ ಎಂದು ಮನವಿ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಹುಟ್ಟುಹಬ್ಬದ ದಿನ ಈ ಸಾರಿಯೂ ನಾನು ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಟ ಯಶ್ ಅವರು ಅನಪೇಕ್ಷಿತ ಗದ್ದಲ, ಗಲಾಟೆಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಕಳೆದ ಸಲ ಯಶ್ ಹುಟ್ಟುಹಬ್ಬಕ್ಕೆ ಓಣಿಯಲ್ಲಿ ಕಟೌಟ್ ನಿಲ್ಲಿಸಲು ಹೋಗಿ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸೂರಣಗಿಯಲ್ಲಿ ಇಬ್ಬರು ಯುವಕರು ವಿದ್ಯುತ್ ತಗುಲಿ ಮೃತಪಟ್ಟಿದ್ದರು. ಇತ್ತೀಚೆಗೆ ಪುಷ್ಪ–2 ಸಿನಿಮಾದ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಸಂದ್ಯಾ ಥಿಯೇಟರ್‌ನಲ್ಲಿ ಅಲ್ಲು ಅರ್ಜುನ್ ನೋಡಲು ಹೋಗಿ ಮಹಿಳೆ ಮೃತಪಟ್ಟು ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.