ADVERTISEMENT

ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಖುಲಾಸೆ:ಖಾಕಿ ಕೈವಾಡದ ಬಗ್ಗೆ ದಿಲೀಪ್ ಹೇಳಿದ್ದೇನು?

ಪಿಟಿಐ
Published 8 ಡಿಸೆಂಬರ್ 2025, 9:59 IST
Last Updated 8 ಡಿಸೆಂಬರ್ 2025, 9:59 IST
ಮಲಯಾಳಂ ನಟ ದಿಲೀಪ್
ಮಲಯಾಳಂ ನಟ ದಿಲೀಪ್   

ತಿರುವನಂತಪುರ: ಬಹುಭಾಷಾ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಮಲಯಾಳಂ ನಟ ದಿಲೀಪ್‌ ಅವರನ್ನು ಕೇರಳದ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯವು ಸೋಮವಾರ ಖುಲಾಸೆಗೊಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ದಿಲೀಪ್‌, ‘2017ರಲ್ಲಿ ದಕ್ಷಿಣ ಭಾರತದ ನಟಿಯೊಬ್ಬರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವುದರ ಜತೆಗೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಕೆಲವು ಮಾಧ್ಯಮದವರು ನನ್ನ ವೃತ್ತಿಜೀವನವನ್ನು ಹಾಳು ಮಾಡುವ ಉದ್ದೇಶದಿಂದ ವ್ಯವಸ್ಥಿತ ಪಿತೂರಿ ನಡೆಸಿದ್ದರು’ ಎಂದು ಆರೋಪಿಸಿದ್ದಾರೆ.

‘ಪ್ರಕರಣದ ಪ್ರಮುಖ ಆರೋಪಿ ಮತ್ತು ಜೈಲಿನಲ್ಲಿರುವ ಅವರ ಸಹ ಕೈದಿಯ ಬೆಂಬಲದೊಂದಿಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನನ್ನ ವಿರುದ್ಧ ಸುಳ್ಳು ಕಥೆಯನ್ನು ಹೆಣೆದಿದ್ದರು. ಆ ಅಧಿಕಾರಿ ಸೇರಿದಂತೆ ಕೆಲವು ಮಾಧ್ಯಮದವರು ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿದ್ದರು’ ಎಂದೂ ದಿಲೀಪ್‌ ದೂರಿದ್ದಾರೆ.

ADVERTISEMENT

‘ಪೊಲೀಸರು ಹೆಣೆದ ಸುಳ್ಳು ಕಥೆಗೆ ನ್ಯಾಯಾಲಯ ಕಿವಿಗೊಟ್ಟಿಲ್ಲ. ಕಾನೂನು ಹೋರಾಟದಲ್ಲಿ ನನ್ನ ಬೆಂಬಲಕ್ಕೆ ನಿಂತ ಕುಟುಂಬಸ್ಥರು, ವಕೀಲರು ಮತ್ತು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದಿದ್ದಾರೆ.

‘ನನ್ನ ವಿರುದ್ಧ ದಾಖಲಾಗಿರುವ ಪ್ರಕರಣ ಸಂಭಂಧ ಕೂಲಂಕಷ ತನಿಖೆ ನಡೆಸುವ ಅಗತ್ಯವಿದೆ. ಸಮಾಜದಲ್ಲಿ ನನಗಿರುವ ಘನತೆ ಮತ್ತು ವೃತ್ತಿಜೀವನವನ್ನು ಹಾಳು ಮಾಡಲು ಕ್ರಿಮಿನಲ್ ಪಿತೂರಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ದಿಲೀಪ್‌ ಆಗ್ರಹಿಸಿದ್ದಾರೆ.

ಇಂದು (ಸೋಮವಾರ) ಪ್ರಕರಣದ ವಿಚಾರಣೆ ನಡೆಸಿದ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯವು ಪ್ರಕರಣದಿಂದ ದಿಲೀಪ್ ಅವರನ್ನು ಖುಲಾಸೆಗೊಳಿಸಿದೆ. ಆದಾಗ್ಯೂ, ಪ್ರಮುಖ ಆರೋಪಿಯಾಗಿದ್ದ ಸುನೀಲ್‌ ಎನ್‌.ಎಸ್‌ ಅಲಿಯಾಸ್ ಪಲ್ಸರ್ ಸುನಿ ಸೇರಿದಂತೆ 6 ಜನರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.

2017ರ ಫೆಬ್ರುವರಿ 17ರಂದು ದಿಲೀಪ್‌ ಅವರು ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿತ್ತು. ಪ್ರಕರಣ ಸಂಬಂಧ 2017ರ ಜುಲೈ 10ರಂದು ದಿಲೀಪ್‌ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ದಿಲೀಪ್‌, ಜಾಮೀನಿನ ಮೇಲೆ ಹೊರಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.