ADVERTISEMENT

ಮೇಘನಾ ರಾಜ್‌ ಸಂದರ್ಶನ: ಬದುಕು ಗಟ್ಟಿಗೊಳಿಸುವ ಸಂಕಷ್ಟ

ಶರತ್‌ ಹೆಗ್ಡೆ
Published 17 ಫೆಬ್ರುವರಿ 2022, 19:30 IST
Last Updated 17 ಫೆಬ್ರುವರಿ 2022, 19:30 IST
ಮೇಘನಾ ರಾಜ್‌
ಮೇಘನಾ ರಾಜ್‌   

ಪತಿ, ನಟ ಚಿರಂಜೀವಿ ಸರ್ಜಾ ಅಗಲಿಕೆಯ ನಂತರ ಭರವಸೆಯನ್ನೇ ಕಳೆದುಕೊಂಡಂತಿದ್ದ ಮೇಘನಾ ರಾಜ್‌ ಈಗ ಬದುಕಿನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ವೃತ್ತಿಯಲ್ಲಿ ಪುಟಿದೇಳುವ ಪ್ರಯತ್ನದಲ್ಲಿರುವ ಅವರು ಎರಡು ಸಿನಿಮಾ, ಜಾಹೀರಾತು, ರಿಯಾಲಿಟಿ ಷೋದಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಜವಾಬ್ದಾರಿಯೊಂದಿಗೆ ಮತ್ತೆ ಬಂದಿರುವ ಮೇಘನಾ ಜತೆಗಿನ ಮಾತುಕತೆ ಇಲ್ಲಿದೆ.

ಹೇಗಿದೆ ಜೀವನ?

ಸದ್ಯ ನಡೀತಾ ಇದೆ. ಕೆಲಸ ಶುರುವಾಗಿದೆ. ಒಂದು ಕಡೆ ಮಗುವಿನ ಜವಾಬ್ದಾರಿ ಇದೆ. ಇನ್ನೊಂದು ಕಡೆ ಏಕಕಾಲದಲ್ಲಿ ಎರಡು ಸಿನಿಮಾ, ಒಂದು ರಿಯಾಲಿಟಿ ಶೋ, ಒಂದು ಜಾಹೀರಾತಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ.

ADVERTISEMENT

ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ಹಿಂದಿರುಗಿ ನೋಡಿದಾಗ ಏನನ್ನಿಸುತ್ತದೆ?

ಜೀವನ ಯಾವತ್ತೂ ನಾವಂದುಕೊಂಡ ಹಾಗೆ ಇರುವುದಿಲ್ಲ. ಜೀವನದಲ್ಲಿ ಏನೇ ನಡೆದರೂ ಅದು ನಮ್ಮನ್ನು ಗಟ್ಟಿಗೊಳಿಸುತ್ತಾ ಹೋಗುತ್ತದೆ. ನನ್ನ ವೃತ್ತಿ ಬದುಕೂ ಹೀಗೇ ಇತ್ತು. ನನ್ನ ಮೊದಲ ಸಿನಿಮಾ ತಮಿಳಿನಲ್ಲಿ, ಆ ಬಳಿಕ ಕನ್ನಡಕ್ಕೆ ಬರುತ್ತೇನೆ ಎಂದುಕೊಂಡೇ ಇರಲಿಲ್ಲ. ಆದರೆ, ಹಾಗೆ ಆಯಿತು. ವೃತ್ತಿಬದುಕನ್ನು ಹಿಂದಿರುಗಿ ನೋಡಿದರೆ ಅಲ್ಲಿ ಯಾವುದೇ ವಿಷಾದವಿಲ್ಲ. ಇವತ್ತು ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದೇನೆ. ಇದ್ಯಾವುದೂ ಸುಲಭದ ದಾರಿ ಆಗಿರಲಿಲ್ಲ. ಕಷ್ಟ ಇದ್ದರೂ ಎಲ್ಲವನ್ನೂ ಎದುರಿಸಿ ಒಳ್ಳೆಯ ನಿರ್ದೇಶಕರು, ನಾಯಕರ ಜೊತೆಗೆ ಕೆಲಸ ಮಾಡಿದ್ದೇನೆ. ನನ್ನ ಹೆಸರಿಂದಲೇ ಗುರುತಿಸಿಕೊಂಡು ಹೋಗುವ ಯಶಸ್ವೀ ಚಿತ್ರವೊಂದರಲ್ಲೂ ಅಭಿನಯಿಸಿದ್ದೇನೆ. ಇನ್ನೂ ಸಾಧಿಸಬೇಕಾದ್ದು ಸಾಕಷ್ಟು ಇದೆ.

ಕನ್ನಡಕ್ಕಿಂತಲೂ ತಮಿಳು, ತೆಲುಗು, ಮಲಯಾಳಂನಲ್ಲಿ ಹೆಚ್ಚು ಯಶಸ್ವಿಯಾದಿರಿ. ಏನಿದರ ಗುಟ್ಟು?

ಇದರಲ್ಲಿ ಗುಟ್ಟು ಏನೂ ಇಲ್ಲ. 2009ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಪ್ರವೇಶಿಸಿದೆ. ಆಗನನಗೆ ಮಲಯಾಳಂ ಗೊತ್ತೇ ಇರಲಿಲ್ಲ. ನನ್ನ ಮೊದಲ ಸಿನಿಮಾ ನೋಡಿಯೇ ಅಲ್ಲಿನವರು ನನ್ನನ್ನು ಮಲಯಾಳಿ ಎಂದೇ ತಿಳಿದಿದ್ದರು. ಆ ನಂತರದ ಸಿನಿಮಾಗಳೂ ಯಶಸ್ವಿಯಾದವು. ಇದೆಲ್ಲಾ ಹೇಗೆ ಆಯಿತು ಅನ್ನುವುದು ನನಗೆ ಇನ್ನೂ ಗೊತ್ತಿಲ್ಲ. ಇವೆಲ್ಲಾ ಯಾವುದೇ ಯೋಜನೆ ಇಲ್ಲದ ಪ್ರಯಾಣ. ಅದೇನೇ ಇದ್ದರೂ ನನ್ನ ಮೊದಲ ಆದ್ಯತೆ ಕನ್ನಡಕ್ಕೆ.

ಬದುಕಿನಲ್ಲಿ ಬಂದ ತೀವ್ರ ಸಂಕಷ್ಟವನ್ನು ಎದುರಿಸಿ ಮತ್ತೆ ಪುಟಿದೆದ್ದಿದ್ದೀರಿ. ಇಂಥ ಸನ್ನಿವೇಶ ಎದುರಿಸುತ್ತಿರುವವರಿಗೆ ನಿಮ್ಮ ಕಿವಿಮಾತು ಏನು?

ಸಲಹೆ ಕೊಡುವಷ್ಟರಮಟ್ಟಿಗೆ ನಾನಿನ್ನೂ ಚೇತರಿಸಿ ಕೊಂಡಿಲ್ಲ. ನಾನು ಎದುರಿಸುತ್ತಿರುವ ಎಲ್ಲವನ್ನು ಕೋಟ್ಯಂತರ ಜನ ನೋಡಿದ್ದಾರೆ. ಎಷ್ಟೋ ಹೆಣ್ಣುಮಕ್ಕಳಿಗೆ ಇದೇ ರೀತಿ ಆಗಿದೆ. ನನಗೆ ಅವರೆಲ್ಲರೂ ಸ್ಫೂರ್ತಿಯಾಗಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ತುಂಬಾ ಜನ ಬಂದು ಅವರ ಬದುಕಿನ ಇಂಥ ಘಟನೆಗಳನ್ನು ಉದಾಹರಿಸಿ ಹೇಳಿ, ಧೈರ್ಯ ತುಂಬುತ್ತಿದ್ದರು. ಸಾಕಷ್ಟು ಜನ ಇಮೇಲ್‌, ಸಂದೇಶ ಕಳುಹಿಸಿದ್ದಾರೆ. ಆಗ, ನಾನು ಒಂಟಿಯಲ್ಲ ಎನ್ನುವ ಭಾವನೆ ಮೂಡಿತು. ಏಟು ಪದೇ ಪದೇ ಬೀಳುತ್ತಿದ್ದರೆ ಆಗ ನೋವೇ ಅನಿಸುವುದಿಲ್ಲ ನೋಡಿ.

ಮುಂದೇನು ಮಾಡುವುದು ಎಂದು ಯೋಚನೆಯಲ್ಲಿದ್ದಾಗ ನಿರ್ದೇಶಕರಾದ ಪನ್ನಗ ಅವರು ಬಂದು ‘ಮುಂದೇನು ಮಾಡುತ್ತಿ?’ ಎಂದು ಕೇಳಿ ನನ್ನೊಳಗಿನ ಜವಾಬ್ದಾರಿಯನ್ನು ಬಡಿದೆಬ್ಬಿಸಿದರು. ಹೌದು ನನ್ನ ಮುಂದೆ ರಾಯನ್‌ನ (ಮಗ) ಜವಾಬ್ದಾರಿ ಇದೆ. ಚಿರುಗೆ (ಚಿರಂಜೀವಿ ಸರ್ಜಾ) ನನ್ನ ಮೇಲೆ ತುಂಬಾ ನಂಬಿಕೆ ಇತ್ತು. ಅವರಿಟ್ಟಿದ್ದ ನಂಬಿಕೆ ಹಾಗೂ ಜವಾಬ್ದಾರಿಯನ್ನು ನಿಭಾಯಿಸಲೇಬೇಕಿದೆ.

ಸಂಕಷ್ಟದ ದಿನಗಳ ಒತ್ತಡ ನಿಭಾಯಿಸಿದ್ದು ಹೇಗೆ?

ಹೌದು, ಆ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು, ಯುಟ್ಯೂಬರ್‌ಗಳು ಅಂಕೆ ಮೀರಿ ವರ್ತಿಸಿದ್ದು, ನಮ್ಮ ಕುಟುಂಬದ ಖಾಸಗಿ ವಿಷಯಗಳನ್ನೂ ಬಿತ್ತರಿಸಿ ಆ ವೇದಿಕೆಯನ್ನು ದುರುಪಯೋಗ ಮಾಡಿಕೊಂಡ ಬಗ್ಗೆ ತುಂಬಾ ಬೇಸರವಿದೆ. ಅದು ನನ್ನ ಕುಟುಂಬದ ಮೇಲೆ ತುಂಬಾ ಪರಿಣಾಮ ಬೀರಿತು. ನಾನೇ ಮಾನಸಿಕವಾಗಿ ಅವುಗಳನ್ನೆಲ್ಲಾ ನಿರ್ಲಕ್ಷಿಸಿದೆ. ನನ್ನ ದುಃಖ ಮಾರಾಟ ಮಾಡಿದರು. ಇದೆಲ್ಲಾ ಅವರ ಪ್ರಜ್ಞೆಗೆ ಅನಿಸಬೇಕು ಅಷ್ಟೆ.

ತಾಯಿ ಮೇಘನಾ? ರಾಯನ್‌ ಜೊತೆಗಿನ ಬದುಕು?

ನಮ್ಮದೇ ಮಗುವಾದಾಗ ಅದರ ಜವಾಬ್ದಾರಿ ಏನು ಎಂದು ಗೊತ್ತಾಗುತ್ತದೆ. ನಾನು ಮೊದಲಿನ ಮೇಘನಾ ಅಲ್ಲವೇ ಅಲ್ಲ. ತುಂಬಾ ತಾಳ್ಮೆ ಬಂದಿದೆ. ವರ್ತನೆ ಬದಲಾಗಿದೆ. ತುಂಬಾ ಬದಲಾಗಿದ್ದೇನೆ. ಮಗುವಿನ ಆಗಮನ ಗೊತ್ತಾಗುತ್ತಿದ್ದಂತೆಯೇ ಬದುಕಿನ ಲೆಕ್ಕಾಚಾರಗಳು, ಆದ್ಯತೆಗಳು ಬದಲಾಗುತ್ತಲೇ ಇರುತ್ತವೆ. ಈಗ ನನಗೆ ರಾಯನ್‌ ಒಬ್ಬನೇ ಆದ್ಯತೆ. ತಾಯ್ತನ ನಮ್ಮನ್ನು ತುಂಬಾ ಬದಲಾಯಿಸುತ್ತದೆ.

ಟಿವಿ ಷೋಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ?

ಡ್ಯಾನ್ಸಿಂಗ್‌ ಚಾಂಪಿಯನ್‌ ಷೋಗೆ ಒಮ್ಮೆ ಮಾತ್ರ ಸೆಲೆಬ್ರಿಟಿ ಜಡ್ಜ್‌ ಆಗಿ ಅಷ್ಟೇ ಹೋಗಿದ್ದೆ. ಆದರೆ, ನನ್ನನ್ನು ಕಾಯಂ ತೀರ್ಪುಗಾರಳಾಗಿ ಮುಂದುವರಿಸುವಂತೆ ಪ್ರೇಕ್ಷಕರೇ ವಾಹಿನಿಗೆ ಬೇಡಿಕೆ ಇಟ್ಟರು. ಹಾಗಾಗಿ ವಾಹಿನಿಯವರು ಡ್ಯಾನ್ಸಿಂಗ್‌ ಚಾಂಪಿಯನ್‌ಗೆ ತೀರ್ಪುಗಾರಳನ್ನಾಗಿ ಮುಂದುವರಿಸಿದ್ದಾರೆ.

ಮುಂದಿನ ಯೋಜನೆಯೇನು?

ಮುಂದಕ್ಕೆ ಯೋಚನೆ ಮಾಡುವುದಿಲ್ಲ. ಇವತ್ತಿನ ಯೋಚನೆ ಅಷ್ಟೇ. ಚಿರು ನನ್ನ ಬುನಾದಿ ಆಗಿದ್ದರು. ಆ ಬುನಾದಿಯೇ ಅಲ್ಲಾಡಿದ ಮೇಲೆ ಬದುಕಿನ ಮೇಲೆ ಭರವಸೆ ಇರಲಿಲ್ಲ. ನನ್ನ ಮಗನಿಗಾಗಿ ಬದುಕಲು ನನ್ನ ಅಪ್ಪ ಅಮ್ಮ, ಕುಟುಂಬದವರು ಬೆನ್ನೆಲುಬಾಗಿ ನಿಂತಿದ್ದಾರೆ. ಹಾಗಾಗಿ ಬದುಕು ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.