ADVERTISEMENT

‘ಛತ್ರಿವಾಲಿ‘: ಕಾಂಡೋಮ್‌ ಪರೀಕ್ಷಕಿಯಾದ ರಾಕುಲ್‌ ಪ್ರೀತ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 12:49 IST
Last Updated 9 ಮಾರ್ಚ್ 2022, 12:49 IST
ರಾಕುಲ್‌ ಪ್ರೀತ್‌ ಸಿಂಗ್‌
ರಾಕುಲ್‌ ಪ್ರೀತ್‌ ಸಿಂಗ್‌   

ಬಾಲಿವುಡ್‌ ಸೇರಿದಂತೆ ಟಾಲಿವುಡ್‌ನಲ್ಲಿ ಬಹುಬೇಡಿಕೆ ನಟಿಯಾಗಿರುವ ರಾಕುಲ್ ಪ್ರೀತ್ ಸಿಂಗ್ ವಿಭಿನ್ನ ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

ಇದೀಗ ಅವರು ‘ಛತ್ರಿವಾಲಿ‘ ಸಿನಿಮಾದಲ್ಲಿ ನಟಿಸುತ್ತಿದ್ದು ಇದರಲ್ಲಿ ’ಕಾಂಡೋಮ್‌’ ಪರೀಕ್ಷೆ ಮಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಛತ್ರಿವಾಲಿ ಸಿನಿಮಾ ತಂಡ ಹೇಳಿದೆ. ಈ ಬಗ್ಗೆ ಚಿತ್ರತಂಡ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದೆ. ಅಭಿಮಾನಿಗಳು ರಾಕುಲ್‌ ಅವರ ವಿಭಿನ್ನ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

32ರ ಈ ಚೆಲುವೆ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದಿರುತ್ತಾರೆ. ಆದರೆ ಎಲ್ಲಿಯೂ ಉದ್ಯೋಗ ಸಿಗದಿದ್ದಾಗ ಸಣ್ಣ ನಗರವೊಂದರಲ್ಲಿ ಕಾಂಡೋಮ್ ಟೆಸ್ಟರ್ ಆಗಿ ಹೇಗೆಲ್ಲಾ ಕೆಲಸ ಮಾಡುತ್ತಾರೆ ಎನ್ನುವ ಕಥೆಯನ್ನು ಛತ್ರಿವಾಲಿ ಹೊಂದಿದೆ.

ADVERTISEMENT

ಈ ಚಿತ್ರವನ್ನು ತೇಜಸ್ ಪ್ರಭಾ ವಿಜಯ್ ಡಿಯೋಸ್ಕರ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ರೋನಿ ಅವರು ಆರ್‌ಎಸ್‌ವಿಪಿ ಫ್ರೊಡಕ್ಸನ್ ಸಂಸ್ಥೆ ಅಡಿ ನಿರ್ಮಾಣ ಮಾಡುತ್ತಿದ್ದಾರೆ.

ಈಗಾಗಲೇ ಬಾಲಿವುಡ್‌ನಲ್ಲಿ ವೀರ್ಯದಾನದ ಕತೆ ಹೊಂದಿದ್ದ 'ವಿಕ್ಕಿ ಡೋನರ್', ಸಲಿಂಗಕಾಮದ 'ಶುಭ ಮಂಗಳ್ ಸಾವಧಾನ್', ಕೃತಕ ಗರ್ಭಧಾರಣೆ ಕತೆ ಇರುವ ’ಗುಡ್ ನ್ಯೂಸ್', ಹಿರಿಯ ದಂಪತಿಗಳ ಲೈಂಗಿಕ ಆಸಕ್ತಿ ಕುರಿತ ಕಥಾ ಹಂದರ ಇರುವ 'ಬದಾಯಿ ಹೋ' ಸಿನಿಮಾದಂತೆ ’ಛತ್ರಿವಾಲಿ’ ಕೂಡ ಯಶಸ್ವಿಯಾಗಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಕನ್ನಡದ 'ಗಿಲ್ಲಿ' ಸಿನಿಮಾ ಮೂಲಕ ಸಿನಿಮಾ ಜಗತ್ತಿಗೆ ರಾಕುಲ್‌ ಪದಾರ್ಪಣೆ ಮಾಡಿದರು. ಇವರು ತೆಲುಗು, ತಮಿಳು ಸಿನಿಮಾಗಳಲ್ಲೂ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಸದ್ಯ ರಾಕುಲ್‌ 'ಅಟ್ಯಾಕ್', 'ರನ್‌ ವೇ 34', 'ಮಿಷನ್ ಸಿಂಡ್ರೆಲಾ', 'ಛತ್ರಿವಾಲಿ', 'ಇಂಡಿಯನ್ 2' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.