ADVERTISEMENT

ಟ್ರೋಲಿಗರ ವಿರುದ್ಧ ರಶ್ಮಿಕಾ ಬೇಸರ: ಅಭಿಮಾನಿಗಳಿಗೆ ಬಹಿರಂಗ ಪತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ನವೆಂಬರ್ 2022, 14:01 IST
Last Updated 9 ನವೆಂಬರ್ 2022, 14:01 IST
   

ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುವ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಅವರಿಗೆ ಟ್ರೋಲ್‌ ಹೊಸತಲ್ಲ. ಅವರ ಪ್ರತಿಯೊಂದು ನಡೆಯನ್ನು ದ್ವೇಷಿಸುವ, ಟೀಕಿಸುವ ದೊಡ್ಡ ವರ್ಗವೇ ಅಂತರ್ಜಾಲದಲ್ಲಿದೆ. ರಕ್ಷಿತ್‌ ಶೆಟ್ಟಿ ಜೊತೆಗಿನ ಬ್ರೇಕಪ್‌ ನಂತರವಂತೂ ರಶ್ಮಿಕಾ ಅವರನ್ನು ನಿಂದಿಸುವ ಬಳಗ ದೊಡ್ಡದಾಗಿದೆ. ಈ ಬಗ್ಗೆ ಕೊನೆಗೂ ರಶ್ಮಿಕಾ ಮೌನ ಮುರಿದಿದ್ದು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ.

‘ಕೆಲವು ಸಂಗತಿಗಳು ಕೆಲವು ದಿನಗಳಿಂದ, ತಿಂಗಳುಗಳಿಂದ ಅಥವಾ ವರ್ಷಗಳಿಂದ ನನಗೆ ಕಿರಿಕಿರಿ ಉಂಟುಮಾಡುತ್ತಿವೆ. ಈಗ ಅದನ್ನು ಬಗೆಹರಿಸುವ ಸಮಯ. ಕೇವಲ ನಾನು ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ’ ಎಂದು ಬರಹವನ್ನು ಪ್ರಾರಂಭಿಸುತ್ತಾರೆ.

‘ನನ್ನ ವೃತ್ತಿ ಆರಂಭಿಸಿದ ದಿನದಿಂದ ನಾನು ಸಾಕಷ್ಟು ದ್ವೇಷಿಗಳನ್ನು ಎದುರಿಸುತ್ತಿದ್ದೇನೆ. ಟ್ರೋಲ್ ಹಾಗೂ ನಕರಾತ್ಮಕ ವಿಚಾರಗಳಿಗೆ ನಾನು ಒಂದು ರೀತಿಯಲ್ಲಿ ಆಹಾರವಾಗಿದ್ದೇನೆ. ನಾನು ಆಯ್ದುಕೊಂಡ ಕ್ಷೇತ್ರ ಹಾಗಿರುವುದರಿಂದ ಅದನ್ನೆಲ್ಲ ಸ್ವೀಕರಿಸಲೇಬೇಕು’ ಎಂದು ತಮ್ಮೊಳಗಿನ ನೋವನ್ನು ಹೊರಹಾಕಿಕೊಂಡಿದ್ದಾರೆ.

ADVERTISEMENT

‘ಎಲ್ಲರೂ ನನ್ನನ್ನು ಪ್ರೀತಿ ಮಾಡಲೇಬೇಕು ಎಂದೇನಿಲ್ಲ. ನನ್ನ ಬಗ್ಗೆ ನಿಮಗೆ ಸಹಮತ ಇಲ್ಲ ಎಂದಾಕ್ಷಣ, ನನ್ನ ಕುರಿತು ಅಪಪ್ರಚಾರ ಮಾಡಬಹುದು ಎಂದು ಅರ್ಥವಲ್ಲ..' ಎಂಬುದಾಗಿ ಟ್ರೋಲಿಗರಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ನಾನು ಹೇಳದೇ ಇರುವ ವಿಚಾರಗಳಿಗೆ ನನ್ನನ್ನು ಟ್ರೋಲ್ ಮಾಡುವುದು ನಿಜಕ್ಕೂ ದುಃಖದ ವಿಷಯ. ಅಂತಹ ಸಂದರ್ಭಗಳು ನನ್ನನ್ನು ಘಾಸಿಗೊಳಿಸುತ್ತವೆ ಮತ್ತು ನನಗೆ ಸಾಕಷ್ಟು ಖಿನ್ನತೆಯನ್ನು ಉಂಟುಮಾಡುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುದೀರ್ಘವಾದ ಈ ಪೋಸ್ಟ್‌ಗೆ ಚಿತ್ರರಂಗದ ಸಾಕಷ್ಟು ಗಣ್ಯರು ಪ್ರತಿಕ್ರಿಯಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಹಳಷ್ಟು ಕನ್ನಡಿಗರು ಖಾರವಾಗಿ ನುಡಿದಿದ್ದಾರೆ ಕೂಡ. ಬೆಳೆದು ಬಂದ ಹಾದಿಯನ್ನು ಗೌರವಿಸಿ. ನಿಮ್ಮ ಅಹಂಕಾರ ಬದಿಗಿಟ್ಟು ಕನ್ನಡ ಚಿತ್ರರಂಗವನ್ನು ನೆನಪಿಸಿಕೊಳ್ಳುವುದನ್ನು ಕಲಿಯಿರಿ ಎಂಬಿತ್ಯಾದಿಯಾಗಿ ಬಹಳಷ್ಟು ಜನ ಬುದ್ದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.